ಭೀಮಾ ಕೊರೆಗಾಂವ್ ಪ್ರಕರಣ : ಮತ್ತಿಬ್ಬರಿಗೆ ಸುಪ್ರೀಮ್ ಕೋರ್ಟ್ ಜಾಮೀನು
ಆರ್. ಜೀವಿ
ಭೀಮಾ ಕೋರೆಗಾಂವ್ ಪ್ರಕರಣದ ಬೆನ್ನಿಗೇ ಮಾವೋ ನಂಟಿನ ಆರೋಪದಲ್ಲಿ ಬಂಧಿತ ಸಾಮಾಜಿಕ ಕಾರ್ಯಕರ್ತರಾದ ವರ್ನನ್ ಗೊನ್ಸಾಲ್ವೇಸ್ ಹಾಗು ಅರುಣ್ ಫೆರೆರಾ ಅವರಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ಜಾಮೀನು ನೀಡಿದೆ. ಅವರಿಬ್ಬರಿಗೂ ಭಯೋತ್ಪಾದಕ ಕೃತ್ಯ ಎಸಗುವ ಉದ್ದೇಶ ಇತ್ತು ಎಂಬುದನ್ನು ಸಾಬೀತುಪಡಿಸುವ ಯಾವುದೇ ಸಾಕ್ಷ್ಯಗಳಿಲ್ಲ. ಹಿಂಸಾಚಾರದ ಉಲ್ಲೇಖ ಇರುವ ಪುಸ್ತಕಗಳನ್ನು ಇಟ್ಟುಕೊಳ್ಳುವುದನ್ನು ಯು ಎ ಪಿ ಎ ಕಾಯ್ದೆಯಡಿ ಭಯೋತ್ಪಾದನೆ ಎಂದು ಹೇಳಲಾಗದು ಎಂದು ನ್ಯಾಯಮೂರ್ತಿ ಅನಿರುದ್ಧ ಬೋಸ್ ಹಾಗು ಸುಧಾಂಶು ಧುಲಿಯಾ ಅವರ ಸುಪ್ರೀಂ ಕೋರ್ಟ್ ಪೀಠ ಹೇಳಿದೆ.
ಈ ಇಬ್ಬರನ್ನೂ ರಾಷ್ಟ್ರೀಯ ತನಿಖಾ ಸಂಸ್ಥೆ ಅಂದ್ರೆ ಎನ್ಐಎ ಬಂಧಿಸಿ ಯು ಎ ಪಿ ಎ ಕಾಯ್ದೆ ಹೇರಿತ್ತು. ಈಗ ಐದು ವರ್ಷಗಳ ಬಳಿಕ ಅವರಿಬ್ಬರಿಗೂ ಬಿಡುಗಡೆ ಭಾಗ್ಯ ಸಿಕ್ಕಿದೆ. ದೇಶದ ಬುದ್ಧಿಜೀವಿಗಳನ್ನೂ ಮಾನವ ಹಕ್ಕುಗಳ ಹೋರಾಟಗಾರರನ್ನೂ ಸಂಚಿನ ಆರೋಪ ಹೊರಿಸಿ ಜೈಲಿಗಟ್ಟಿದ ಭೀಮಾ ಕೋರೆಗಾಂವ್ ಪ್ರಕರಣ ಐದು ವರ್ಷಗಳ ಬಳಿಕವೂ ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ ನಿಗೂಢವಾಗುತ್ತಿದೆ.
ಆ ಪ್ರಕರಣದಲ್ಲಿ ಬಂಧನಕ್ಕೆ ಅತ್ಯಂತ ಆತುರ ತೋರಿದ್ದ ಎನ್ಐಎ, ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಭಯೋತ್ಪಾದಕತೆ ಆರೋಪಗಳು ಕೇಳಿಬಂದಿದ್ದರೂ, ಜನ ರಾಜಾರೋಷವಾಗಿ ಶಸ್ತ್ರಾಸ್ತ್ರ ಹಿಡಿದು ಓಡಾಡುತ್ತಿರುವುದು ವರದಿಯಾಗುತ್ತಿದ್ದರೂ ಏಕೆ ಸುಮ್ಮನಿದೆ ಎಂಬುದು ಕೂಡ ನಿಗೂಢ. ಈಗ ಎನ್ಐಎ ಸ್ಥಿತಿಯೂ ಸರ್ಕಾರದ ಕೈಗೊಂಬೆಯಾಗಿರುವ ಇ.ಡಿ. ಹಾಗೆಯೇ ಆಗುತ್ತಿದೆಯೇ ಎಂಬ ಪ್ರಶ್ನೆಯೂ ಏಳುವಂತಾಗಿದೆ.
ಐದು ವರ್ಷಗಳಿಂದ ಬಗೆಹರಿಯದೆ ಉಳಿದಿರುವ ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ದೃಢವಾದ ಸಾಕ್ಷ್ಯಗಳಿಲ್ಲದೆಯೂ ಇಷ್ಟು ಕಾಲ ಹಲವರನ್ನು ಜೈಲಿನಲ್ಲಿಡಲಾಗಿರುವುದು ಭಟ್ಟಂಗಿ ಮಾಧ್ಯಮಗಳಿಗೆ ಒಂದು ಗಂಭೀರ ಚರ್ಚೆಯ ವಿಚಾರವಾಗಿ ಕಾಣಿಸುವುದೇ ಇಲ್ಲ. ಯಾವುದೇ ಪ್ರಜಾಸತ್ತಾತ್ಮಕ ಸಮಾಜವೊಂದು ಬಹಳ ಎಚ್ಚರಿಕೆಯಿಂದ ನೋಡಬೇಕಾಗಿದ್ದ ಈ ಪ್ರಕರಣ ನಮ್ಮನ್ನು ಕಾಡುತ್ತಲೇ ಇಲ್ಲ. ಅದರ ಆಳ-ಅಗಲ, ಅದರ ಭಯಾನಕತೆಯನ್ನು ಅರ್ಥ ಮಾಡಿಕೊಳ್ಳಲು ಯಾರೂ ತಲೆಕೆಡಿಸಿಕೊಳ್ಳುತ್ತಿಲ್ಲ.
ಈ ದೇಶದಲ್ಲಿ ಯಾರನ್ನು ಬೇಕಾದರೂ ಸರ್ಕಾರ ತನಗೆ ಬೇಕೆಂದಿದ್ದಲ್ಲಿ ಅತಿ ಸುಲಭವಾಗಿ ಜೈಲಿನಲ್ಲಿ ಇಡಬಹುದು ಎಂಬುದಕ್ಕೆ ನಿದರ್ಶನದ ಆಗಿರುವ ಈ ಪ್ರಕರಣ, ಸುಮ್ಮನೆ ಯಾರನ್ನೋ ಭಯೋತ್ಪಾದಕರೆಂದು ಉದ್ದೇಶಪೂರ್ವಕವಾಗಿ ಬಿಂಬಿಸಲು ನಡೆಯುತ್ತಿರುವ ಯತ್ನವೇ ಎಂಬ ಅನುಮಾನವೂ ಈಗ ಕಾಡುತ್ತಿದೆ.
ನಮ್ಮಲ್ಲಿ ಅಂಥದೊಂದು ಕಾಳಜಿ ಇದ್ದಿದ್ದರೆ, ನಮ್ಮ ಮಾಧ್ಯಮಗಳು ನಿಜವಾಗಿಯೂ ಮಾಧ್ಯಮಗಳೇ ಆಗಿದ್ದಿದ್ದರೆ ಈ ಸುದ್ದಿ ವಾರಗಟ್ಟಲೆ ಚರ್ಚೆಯಾಗುತ್ತಿತ್ತು. ನಮ್ಮ ವ್ಯವಸ್ಥೆಯ ಧೋರಣೆಯಿಂದಾಗಿ ನಾವು ಎಷ್ಟು ಆರಾಮದಾಯಕವಾಗಿದ್ದೇವೆ ಎಂದರೆ ನಮಗದು ಸುದ್ದಿಯೇ ಆಗಿಲ್ಲ . ಭೀಮಾಕೋರೆಗಾಂವ್ ಪ್ರಕರಣ ಸಾಕಷ್ಟು ಸಾಕ್ಷ್ಯಾಧಾರಗಳಿಲ್ಲದೇ ನಿಗೂಢ ಪ್ರಕರಣವಾಗುತ್ತಿದೆ. ಹೀಗಿರುವಾಗ ನ್ಯಾಯಾಲಯದ ಕಮೆಂಟ್ ಓದಿದರೆ ಯಾವ ರೀತಿಯ ಸಾಕ್ಷ್ಯ ಸಂಗ್ರಹಿಸಲಾಗಿದೆ ಎಂಬುದು ಗೊತ್ತಾಗುತ್ತದೆ.
ಖ್ಯಾತ ಪತ್ರಕರ್ತ ರವೀಶ್ ಕುಮಾರ್ ಹೇಳುವಂತೆ ಎನ್‌ಐಎ ಸ್ಥಿತಿಯೂ ಇ ಡಿ ಯಂತೆ ಆಗುತ್ತಿಲ್ಲವೇ ಎನ್ನುವುದನ್ನು ಈ ಪ್ರಕರಣ ಹೇಳುತ್ತಿದೆ. ಪುಣೆ ಪೊಲೀಸರ ಪ್ರಕಾರ, 2017ರ ಡಿಸೆಂಬರ್ 31ರಂದು ಎಲ್ಗಾರ್ ಪರಿಷತ್ನಲ್ಲಿ ಗೋವಿಂದ್ ಗೋಪಾಲ್ ಮಹಾಡ್ ವಿಗ್ರಹ ಧ್ವಂಸಕ್ಕೆ ಸಂಬಂಧಿಸಿದ ಪ್ರಚೋದನಾಕಾರಿ ಭಾಷಣ ಹಿಂಸಾಚಾರಕ್ಕೆ ಕಾರಣವಾಗಿ ಒಬ್ಬನ ಸಾವು ಸಂಭವಿಸಿತು.
ಅನಂತರ 5000 ಪುಟಗಳ ಚಾರ್ಜ್ಶೀಟ್ ಸಲ್ಲಿಸುವಾಗ ಇಡೀ ಪ್ರಕರಣಕ್ಕೆ ಪುಣೆ ಪೊಲೀಸರು ಮತ್ತೊಂದು ಆಯಾಮ ಕೊಟ್ಟರು. ಬಂಧಿತ 19 ಮಂದಿ ಮೋದಿ ಸರ್ಕಾರವನ್ನು ಉರುಳಿಸಲು ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಹತ್ಯೆ ಮಾಡಲು ಸಂಚು ರೂಪಿಸಿದ್ದರು ಎಂಬ ಗಂಭೀರ ಆರೋಪವನ್ನು ದಿಢೀರನೆ ಹೊರಿಸಲಾಯಿತು.
ಖ್ಯಾತ ಪ್ರಾಧ್ಯಾಪಕರು, ವಕೀಲರು ಮತ್ತು ಸಾಮಾಜಿಕ ಹೋರಾಟಗಾರರು ಬಂಧಿತರಾದವರಲ್ಲಿ ಸೇರಿದ್ದರು. ಆದರೆ, ಕೋರ್ಟ್ ಅವಲೋಕನಗಳನ್ನು ಗಮನಿಸಿದರೆ, ಈ ಪ್ರಕರಣದಲ್ಲಿ ಹೇಗೆ ಸಾಕ್ಷ್ಯಗಳನ್ನು ಸೃಷ್ಟಿಸಲಾಗಿದೆ ಎಂಬುದು ಗೊತ್ತಾಗುತ್ತದೆ. ಎನ್ಐಎ ಕೂಡ ಈ ಸರ್ಕಾರದ ಕೈಯಲ್ಲಿನ ಇ.ಡಿ ಹಾಗೆಯೆ ಆಗಿಹೋಗುತ್ತಿದೆ ಎಂಬುದನ್ನು ಈ ಪ್ರಕರಣ ಸೂಚಿಸುತ್ತಿದೆ ಎನ್ನುತ್ತಾರೆ ರವೀಶ್ ಕುಮಾರ್.
ಈ ಪ್ರಕರಣದಲ್ಲಿ ಬಂಧಿತರಾಗಿದ್ದ 80 ವರ್ಷದ ವೃದ್ಧ ಪಾದ್ರಿ ಸ್ಟ್ಯಾನ್ ಸ್ವಾಮಿ ಜೈಲಿನಲ್ಲಿಯೇ ಸಾವನ್ನಪ್ಪಿದ್ದು, ಅವರ ವಿಚಾರದಲ್ಲಿ ಎಷ್ಟು ಅಮಾನವೀಯವಾಗಿ ನಡೆದುಕೊಳ್ಳಲಾಯಿತು ಎಂಬುದು ದೇಶಕ್ಕೇ ಗೊತ್ತಿರುವ ವಿಚಾರ. ಪ್ರಕರಣದ ಇನ್ನಿಬ್ಬರು ಆರೋಪಿಗಳಾದ ವರ್ನಾನ್ ಗೊನ್ಸಾಲ್ವೆಸ್ ಮತ್ತು ಅರುಣ್ ಫೆರೇರಾ ಅವರಿಗೆ ಮೊನ್ನೆ ಜುಲೈ 28ರಂದು ಸುಪ್ರೀಂ ಕೋರ್ಟ್ ಜಾಮೀನು ನೀಡಿದೆ.
ಜಾಮೀನು ಅರ್ಜಿ ವಿಚಾರಣೆ ಮಾರ್ಚ್ನಲ್ಲಿಯೇ ಪೂರ್ಣಗೊಂಡಿತಾದರೂ, ಜಾಮೀನು ಸಿಗಲು ಜುಲೈವರೆಗೂ ಅವರು ಕಾಯಬೇಕಾಯಿತು.ಇಷ್ಟು ದೀರ್ಘ ಸಮಯದ ಮೌನವೇ ಅರ್ಥವಾಗದ್ದು. ಇದು ಒಂದು ಸಾಧಾರಣ ಜಾಮೀನು ಆಗಿದ್ದರೆ ಆ ಪ್ರಶ್ನೆ ಬೇರೆಯಾಗುತ್ತಿತ್ತು. ಆದರೆ, ಇಲ್ಲಿ ಏಳುವ ಪ್ರಶ್ನೆ " ಎಲ್ಲರನ್ನೂ ಜೈಲಿನೊಳಗೆ ತುಂಬುವುದೇ ಉದ್ದೇಶವೆ" ಎಂಬುದು.
ಇವರಿಬ್ಬರ ಜಾಮೀನು ಅರ್ಜಿ ವಿಚಾರಣೆ ವೇಳೆ ನ್ಯಾ.ಅನಿರುದ್ಧ ಬೋಸ್ ಮತ್ತು ನ್ಯಾ.ಸುಧಾಂಶು ಧುಲಿಯಾ ಅವರಿದ್ದ ಸುಪ್ರೀಂ ಕೋರ್ಟ್ ಪೀಠ ಹೇಳಿದ್ದು ಹೀಗೆ: ಹತ್ಯೆಗೆ ಉದ್ದೇಶಿಸಿದ್ದರು ಎಂಬುದನ್ನು ಸಾಬೀತುಪಡಿಸುವ ಯಾವ ಪುರಾವೆಗಳೂ ಇಲ್ಲ ಎಂಬುದು ಮೇಲ್ನೋಟಕ್ಕೇ ಕಾಣಿಸುತ್ತದೆ. ಆರೋಪಗಳು ಗಂಭೀರವಾಗಿದ್ದರೂ, ಜಾಮೀನು ನಿರಾಕರಿಸಲು ಅದೇ ಏಕೈಕ ಕಾರಣವಾಗುವುದಿಲ್ಲ. ಯಾವುದೇ ವ್ಯಕ್ತಿಯನ್ನು ವಿಚಾರಣಾಧೀನ ಕೈದಿಯಾಗಿ ಐದು ವರ್ಷಗಳವರೆಗೆ ಜೈಲಿನಲ್ಲಿರಿಸುವಂತಿಲ್ಲ.”
ಇವರಿಬ್ಬರನ್ನೂ ಭೀಮಾ ಕೋರೆಗಾಂವ್ ಹಿಂಸಾಚಾರ ಪ್ರಕರಣದಲ್ಲಿ, ನಿಷೇಧಿತ ಮಾವೋವಾದಿ ಸಂಘಟನೆ ಜೊತೆ ಸಂಬಂಧ ಹೊಂದಿದ್ದರು ಮತ್ತು ಅದಕ್ಕಾಗಿ ನಿಧಿ ಸಂಗ್ರಹಿಸಿದ್ದರು ಎಂಬ ಆರೋಪದಲ್ಲಿ ಯುಎಪಿಎ ಅಡಿಯಲ್ಲಿ ಬಂಧಿಸಲಾಗಿತ್ತು. 5 ವರ್ಷಗಳಿಗೂ ಹೆಚ್ಚು ಸಮಯದಿಂದ ಅವರು ಜೈಲಿನಲ್ಲಿದ್ದರು. ಅವರ ಬಳಿ ಕೆಲವು ನಿರ್ದಿಷ್ಟ ಪ್ರಕಾರದ ಸಾಹಿತ್ಯವಿತ್ತು ಎಂಬುದು ಹಿಂಸಾಚಾರದಲ್ಲಿ ಅವರನ್ನು ಆರೋಪಿಗಳನ್ನಾಗಿಸಲು ಕಾರಣವಲ್ಲ; ಯುಎಪಿಎ ಆರೋಪಕ್ಕೆ ಇದು ಸರಿಯಾದ ಆಧಾರವಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಇಬ್ಬರೂ ಮಾವೋವಾದಿ ಗುಂಪಿನ ಸದಸ್ಯರೆಂಬುದನ್ನು ಸಾಬೀತುಪಡಿಸುವ ಯಾವುದೇ ದಾಖಲೆಗಳನ್ನು ಎನ್ಐಎ ಒದಗಿಸಿಲ್ಲ ಎಂಬುದನ್ನೂ ಕೋರ್ಟ್ ಗಮನಿಸಿದೆ. ಅರುಣ್ ಫೆರೇರಾ ಇಂಡಿಯನ್ ಅಸೋಸಿಯೇಷನ್ ಆಫ್ ಪೀಪಲ್ಸ್ ಲಾಯರ್ಸ್ (ಐಎಪಿಎಲ್) ಜೊತೆ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಲಾಗಿತ್ತು. ಅದು ನಿಷೇಧಿತ ಮಾವೋವಾದಿ ಸಂಘಟನೆಯ ಭಾಗ ಎನ್ನಲಾಗಿತ್ತು.
ಆದರೆ ಇವೆರಡರ ನಡುವೆ ಸಂಬಂಧವಿದೆ ಎಂಬುದನ್ನು ಸಾಬೀತುಪಡಿಸುವ ಪುರಾವೆಗಳನ್ನೂ ಒದಗಿಸಿಲ್ಲ. ಎನ್ಐಎ ಸಲ್ಲಿಸಿದ ಪತ್ರಗಳು ಮತ್ತು ಸಾಹಿತ್ಯ ಬರೀ ಅಲ್ಲಿಲ್ಲಿ ಕೇಳಿದ ಗಾಳಿಮಾತು ಮತ್ತು ಗಾಸಿಪ್ ಗಳನ್ನು ಆಧರಿಸಿದ್ದು.
ಪ್ರತ್ಯಕ್ಷವಾಗಿ ಇಲ್ಲವೆ ಪರೋಕ್ಷವಾಗಿ ಭಯೋತ್ಪಾದಕ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದರು ಎಂಬುದನ್ನು ಈ ಯಾವ ಪತ್ರಗಳೂ ಸಾಬೀತುಪಡಿಸುವುದಿಲ್ಲ. ನಿಧಿ ಸಂಗ್ರಹಣೆ ಆರೋಪದಲ್ಲಿಯೂ ಜಾಮೀನು ನಿರಾಕರಿಸುವಂಥ ಗಂಭೀರ ಪುರಾವೆಗಳಿಲ್ಲ ಎಂದು ಕೋರ್ಟ್ ಹೇಳಿದೆ.
ಇಷ್ಟೆಲ್ಲದರ ಹೊರತಾಗಿಯೂ ಅವರು ಐದು ವರ್ಷಗಳಿಂದ ಜೈಲಿನಲ್ಲಿದ್ದಾರೆ. 2019ರ ಆಗಸ್ಟ್ನಲ್ಲಿ ಬಾಂಬೇ ಹೈಕೋರ್ಟ್ ಅವರ ಬಳಿ ಇತ್ತೆನ್ನಲಾದ ಈ ಸಾಹಿತ್ಯದ ದೃಷ್ಟಿಯಿಂದ ಬೇರೇನಾದರೂ ಇರಬಹುದು ಎಂದಿತ್ತು. ಆದರೆ ಸುಪ್ರೀಂ ಕೋರ್ಟ್ ಅದನ್ನು ಆರೋಪ ಹೊರಿಸುವುದಕ್ಕೆ ಸಾಕಾಗುವ ಆಧಾರವೆಂದು ಪರಿಗಣಿಸಿಲ್ಲ. ಯಾಕೆ ವೆರ್ನೋನ್ ಗೋನ್ಸಾಲ್ವೆಸ್ , ಲಿಯೋ ಟಾಲ್ಸ್ಟಾಯ್ ಅವರ ವಾರ್ ಅಂಡ ಪೀಸ್ ಅಂಥ ಆಕ್ಷೇಪಾರ್ಹ ಸಾಹಿತ್ಯವನ್ನು ಹೊಂದಿದ್ದರು ಎಂದು ಬಾಂಬೇ ಹೈಕೋರ್ಟ್ ಪ್ರಶ್ನಿಸಿತ್ತು. ಅಂಥ ಸಾಹಿತ್ಯ ಮತ್ತು ಸಿಡಿಗಳು ಸರ್ಕಾರದ ವಿರುದ್ಧದ ಅಂಶಗಳೆಂಬುದು ಮೇಲ್ನೋಟಕ್ಕೆ ತಿಳಿಯುತ್ತದೆ ಎಂದು ನ್ಯಾ.ಸಾರಂಗ್ ಕೊತ್ವಾಲ್ ಅವತ್ತು ಹೇಳಿದ್ದರು.
ವಾರ್ ಅಂಡ್ ಪೀಸ್ ಕೃತಿಯನ್ನು ಓದುವುದು ಅಪರಾಧ ಎನ್ನುವ ಹಾಗಿದ್ದ ಇಂಥ ತರ್ಕಗಳನ್ನು ಸುಪ್ರೀಂ ಕೋರ್ಟ್ ಗಾಳಿಸುದ್ದಿ ಆಧರಿತ ಎಂದು ತಳ್ಳಿಹಾಕಿದೆ. ಸುಪ್ರೀಂ ಕೋರ್ಟ್ನ ಒಂದೊಂದು ಟಿಪ್ಪಣಿಯೂ, ಪುಸ್ತಕದ ಮುಖಪುಟವನ್ನು, ಪತ್ರಗಳನ್ನು ಸಂಚಿನ ಭಾಗವೆಂದು ವ್ಯಾಖ್ಯಾನಿಸುವುದು ಮತ್ತು ಸಾಕ್ಷ್ಯಗಳನ್ನು ಸೃಷ್ಟಿಸಿ ಯಾರನ್ನಾದರೂ ಜೈಲಿಗೆ ಹಾಕುವುದು ಈ ಸರ್ಕಾರಕ್ಕೆ ಎಷ್ಟು ಸುಲಭವಾಗಿಬಿಟ್ಟಿದೆಯಲ್ಲವೆ ಎಂಬುದನ್ನೇ ಬಯಲು ಮಾಡಿದೆ.
ಕಡೇ ಪಕ್ಷ ಸಾಕ್ಷಿ ಹೇಳಿಕೆಗಳು ಕೂಡ ಭಯೋತ್ಪಾದಕ ಚಟುವಟಿಕೆಯಲ್ಲಿ ಇವರು ತೊಡಗಿದ್ದರು ಎಂಬುದನ್ನು ಹೇಳಿಲ್ಲ ಎಂಬುದನ್ನೂ ಸುಪ್ರೀಂ ಕೋರ್ಟ್ ಗಮನಿಸಿದೆ. ಸಾಕ್ಷ್ಯಗಳೆಂದು ಒದಗಿಸಲಾಗಿರುವ ಪತ್ರಗಳಂತೂ ಹಾಗೆ ಪರಿಗಣಿಸಲು ಆಗದಷ್ಟು ಮಟ್ಟಿಗೆ ಅತ್ಯಂತ ದುರ್ಬಲವಾಗಿವೆ ಎಂದಿದೆ. ಸಹ ಆರೋಪಿ ಸುಧಾ ಭಾರದ್ವಾಜ್ ಅವರಿಗೆ ಜಾಮೀನು ನೀಡಿದ್ದರೂ, ಪ್ರಕರಣದಲ್ಲಿ ಆರೋಪಿಗಳಾಗಿರುವ ಎಂಟು ಮಂದಿಗೆ ಡಿಫಾಲ್ಟ್ ಜಾಮೀನು ಅಂದರೆ ಕಡ್ಡಾಯ ಜಾಮೀನು ನೀಡಲು ನಿರಾಕರಿಸಿದ ಬಾಂಬೇ ಹೈಕೋರ್ಟ್ನ 2021ರ ಡಿಸೆಂಬರ್ ನ ಆದೇಶ ಪ್ರಶ್ನಿಸಿ ಗೋನ್ಸಾಲ್ವೆಸ್ ಮತ್ತು ಫೆರೆರಾ ಸುಪ್ರೀಂ ಕೋರ್ಟ್ ಮೊರೆಹೋಗಿದ್ದರು.
ಕಳೆದ ವರ್ಷ ವರವರರಾವ್ ಅವರಿಗೆ ಆರೋಗ್ಯ ಸ್ಥಿತಿ ಆಧಾರದಲ್ಲಿ ಜಾಮೀನು ನೀಡಲಾಗಿತ್ತು. ಹಳೆಯ ಕೆಲವು ವರದಿಗಳನ್ನು ಗಮನಿಸಿದರೆ, ಈ ಪ್ರಕರಣ ವಿಲಕ್ಷಣ ತಿರುವುಗಳನ್ನು ಪಡೆದುದು ಗೊತ್ತಾಗುತ್ತದೆ. ಜುಲೈ 2021ರಲ್ಲಿ ಸುಧಾ ಭಾರದ್ವಾಜ್, ಗೌತಮ್ ನವ್ಲಾಖಾ, ರೋನಾ ವಿಲ್ಸನ್, ಹ್ಯಾನಿ ಬಾಬು, ವರವರರಾವ್ ಪರ ವಕೀಲರಾದ ಯುಗ್ ಚೌಧರಿ, ನಾಮಕರಣಗೊಂಡಿರದ ನ್ಯಾಯಾಧೀಶರು ಈ ಪ್ರಕರಣದ ವಿಚಾರಣೆ ನಡೆಸಿದ್ದನ್ನು ಪ್ರಶ್ನಿಸಿದ್ದರು. ವಿಚಾರಣೆಗೆ ನಾಮಕರಣಗೊಂಡಿರದವರ ಆದೇಶದ ಕಾರಣಕ್ಕಾಗಿ ಆರೋಪಿಗಳು ಜೈಲಿನಲ್ಲಿ ಕಳೆಯಬೇಕಾಗಿದೆ ಎಂದು ಹೇಳಿದ್ದರು.
ಪುಣೆ ಪೊಲೀಸರಿಗೆ ಚಾರ್ಜ್ಶೀಟ್ ಸಲ್ಲಿಸಲು ಹೆಚ್ಚುವರಿ ಸಮಯ ನೀಡಿದ್ದ ಆ ನ್ಯಾಯಾಧೀಶರು ಅಧಿಕೃತವಾಗಿ ವಿಶೇಷ ನ್ಯಾಯಾಧೀಶರೆ ಅಲ್ಲವೆ ಎಂದು ಮಹಾರಾಷ್ಟ್ರ ಸರ್ಕಾರವನ್ನು ಬಾಂಬೇ ಹೈಕೋರ್ಟ್ ಕೇಳಿತ್ತು. ಮಾಧ್ಯಮ ವರದಿಗಳು, ಕೋರ್ಟ್ನಲ್ಲಿ ಸಲ್ಲಿಸಲಾದ ದಾಖಲೆಗಳ ಆಧಾರದಲ್ಲಿ ಯುಗ್ ಚೌಧರಿ ಆರೋಪವನ್ನು ಖಚಿತಪಡಿಸಿದ್ದವು. ಇದಾದ ಬಳಿಕ ಮಾಧ್ಯಮ ವರದಿಗಳಲ್ಲಿ ಈ ಕುರಿತು ಹೆಚ್ಚಿನ ಮಾಹಿತಿಗಳಿಲ್ಲ
ಈ ಪ್ರಕರಣವನ್ನು ಗಮನಿಸುತ್ತಿದ್ದರೆ, ಇದೆಲ್ಲವೂ ಭಯಾನಕವಾಗಿದೆ ಎನ್ನಿಸುವುದಿಲ್ಲವೆ?. ದೇಶದ ತನಿಖೆ ಮತ್ತು ನ್ಯಾಯಾಂಗ ವ್ಯವಸ್ಥೆ ಕಾರ್ಯನಿರ್ವಹಿಸುವ ರೀತಿ ಈ ಬಗೆಯದ್ದಾಗಿರುವುದನ್ನು ಯಾರಾದರೂ ಬಯಸುತ್ತಾರೆಯೆ?. ಒಮ್ಮೆ ಯೋಚಿಸಿ, ಇಂಥದೇ ಅಸ್ತ್ರವನ್ನು ಮಣಿಪುರದಲ್ಲಿಯೂ ಅನಾಯಾಸವಾಗಿ ಬಳಸಲಾಗುತ್ತಿದೆ.
ಗಡಿಯಿಂದ ಉಗ್ರರು ನುಸುಳಿದ್ದಾರೆಂದು ಮಣಿಪುರ ಮುಖ್ಯಮಂತ್ರಿ ಆರೋಪಿಸುತ್ತಾರೆ. ಶಸ್ತ್ರಾಸ್ತ್ರ ಹೊಂದಿರುವ ಎಷ್ಟೋ ಜನರ ಚಿತ್ರಗಳು ಮಾಧ್ಯಮ ವರದಿಗಳಲ್ಲಿ ಕಾಣಿಸುತ್ತಿದ್ದರೂ ಅಲ್ಲೇಕೆ ಎನ್ಐಎ ಇಲ್ಲ ಎಂಬುದು ಸಹಜವಾಗಿ ಕಾಡುವ ಪ್ರಶ್ನೆಯಾಗಿದೆ. ಇದೇ ಎನ್ಐಎ, ವಕೀಲರು, ಪ್ರಾಧ್ಯಾಪಕರು ಮತ್ತು ಸಾಮಾಜಿಕ ಹೋರಾಟಗಾರರನ್ನು ಭಯೋತ್ಪಾದಕರು ಎಂದು ಬಿಂಬಿಸಲು ಭೀಮಾ ಕೋರೆಗಾವ್ ಕೇಸ್ನಲ್ಲಿ ಐದು ವರ್ಷಗಳಿಂದ ಯತ್ನಿಸುತ್ತಿದೆ. ಅಷ್ಟಾಗಿಯೂ ಯುಎಪಿಎ ಆರೋಪಗಳನ್ನು ಸಾಬೀತುಪಡಿಸುವ ಸೂಕ್ತ ಪುರಾವೆಗಳನ್ನು ಒದಗಿಸಲಾಗದ್ದಕ್ಕೆ ಛೀಮಾರಿ ಹಾಕಿಸಿಕೊಳ್ಳುತ್ತಿದೆ.
ಆದರೆ ಆಯುಧ ಝಳಪಿಸುತ್ತ ಯಾರ್ಯಾರೋ ಓಡಾಡಿಕೊಂಡಿರುವ ಮಣಿಪುರದಲ್ಲಿ ಏಕೆ ಎನ್ಐಎ ಏನನ್ನೂ ಮಾಡುತ್ತಿಲ್ಲ? ಅಲ್ಲಿ ಅದು ಇರಬೇಕಿತ್ತಲ್ಲವೆ ? ಹೋಗಲಿ, ಬಿಜೆಪಿ, ಎನ್ಡಿಎ ಅಥವಾ ಪ್ರಧಾನಿಯಾದರೂ ಅಲ್ಲಿನ ಸ್ಥಿತಿಯನ್ನು ನೋಡಬೇಕಿತ್ತವೆ? ಪ್ರತಿಪಕ್ಷ ಅಲ್ಲಿಗೆ ಮತ್ತೆ ಮತ್ತೆ ಹೋಗುತ್ತಿದೆ. ಈ ಬಾರಿ 21 ಮಂದಿಯ ಪ್ರತಿಪಕ್ಷ ನಿಯೋಗ ಮಣಿಪುರಕ್ಕೆ ಹೋಗಿದೆ. 16 ಪ್ರತಿಪಕ್ಷಗಳ ಸಂಸದರು ಹಿಂಸಾಚಾರ ಪೀಡಿತ ಮಣಿಪುರಕ್ಕೆ ಹೋದ ನಿಯೋಗದಲ್ಲಿದ್ಧಾರೆ. ಕಾಂಗ್ರೆಸ್ ನಾಯಕ ಗೌರವ್ ಗೊಗೋಯ್, ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶರೊಬ್ಬರು ಈ ಪ್ರಕರಣಗಳ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.
ಆದರೆ, ವಿಪರ್ಯಾಸವೆಂದರೆ ಪ್ರತಿಪಕ್ಷಗಳ ಭೇಟಿಯನ್ನು ಪ್ರಹಸನ, ತೋರಿಕೆ ಎಂದು ಬಿಜೆಪಿ ಆಡಿಕೊಳ್ಳುತ್ತಿದೆ.
ಬಂಗಾಳದಲ್ಲಿ ಮಹಿಳೆಯರ ವಿರುದ್ಧದ ಹಿಂಸಾಚಾರವನ್ನು ಬೆಂಬಲಿಸುತ್ತಾರೆಯೆ ಎಂದು ಅಧೀರ್ ರಂಜನ್ ಚೌಧರಿಯನ್ನು ಪ್ರಶ್ನಿಸುವುದಾಗಿ ಅದು ಹೇಳಿದೆ. ರಾಯ್ಟರ್ಸ್ ವರದಿಯ ಪ್ರಕಾರ ಮಣಿಪುರ ಹಿಂಸಾಚಾರಕ್ಕೆ ಈವರೆಗೆ 181 ಮಂದಿ ಬಲಿಯಾಗಿದ್ದಾರೆ. ಅವರಲ್ಲಿ 113 ಕುಕಿಗಳು ಮತ್ತು 62 ಮಂದಿ ಮೈತೇಯಿಗಳು. ಹಿಂಸಾಚಾರ ಶುರುವಾದ ಮೊದಲ ವಾರದಲ್ಲೇ 70ಕ್ಕೂ ಹೆಚ್ಚು ಕುಕಿಗಳು ಮತ್ತು 10 ಮೈತೇಯಿಗಳು ಸಾವನ್ನಪ್ಪಿದರು ಎಂದು ರಾಯ್ಟರ್ಸ್ ವರದಿ ಉಲ್ಲೇಖಿಸಿದೆ.
ಕೃಷ್ಣ ಕೌಶಿಕ್ ಅವರ ಈ ವರದಿ ಸಂಘರ್ಷ ಇಷ್ಟೊಂದು ತೀವ್ರ ಮಟ್ಟಕ್ಕೆ ಹೋಗಿರುವುದಕ್ಕೆ ಎರಡೂ ಬಣಗಳು ಶಸ್ತ್ರಸಜ್ಜಿತ ದಾಳಿ ಮಾಡುತ್ತಿರುವುದೇ ಕಾರಣ ಎಂದಿದೆ. ಇವೆಲ್ಲ ಶಸ್ತ್ರಾಸ್ತ್ರಗಳು ಎಲ್ಲಿಂದ ಬಂದವು?.ಇಷ್ಟೊಂದು ತೀವ್ರ ಹಿಂಸಾಚಾರ ರಾಜಾರೋಷವಾಗಿ ಹೇಗೆ ನಡೆಯುತ್ತಿದೆ?. ಆಡಳಿತ ಪಕ್ಷದ ಸಚಿವರು, ಶಾಸಕರು, ನಿವೃತ್ತ ಸೇನಾಧಿಕಾರಿಗಳ ಮೇಲೆಯೇ ಅಲ್ಲಿ ದಾಳಿಗಳಾಗುತ್ತಿವೆ. ಇಷ್ಟೆಲ್ಲ ಅನಾಹುತ ಅಲ್ಲಿ ನಡೆಯುತ್ತಿದ್ದರೂ ಭಟ್ಟಂಗಿ ಮೀಡಿಯಾಗಳು ಮೌನವಾಗಿವೆ?
ಅಲ್ಲಿ 6 ಪ್ರಕರಣಗಳ ತನಿಖೆಯನ್ನು ಸಿಬಿಐ ನಡೆಸುತ್ತಿದೆಯಾದರೂ ದಿ ಹಿಂದೂ ವರದಿಯ ಪ್ರಕಾರ ಈವರೆಗೆ ಯಾರನ್ನೂ ಬಂಧಿಸಲಾಗಿಲ್ಲ. ವೀಡಿಯೊ ಪ್ರಕರಣದಲ್ಲಿ ಬಂಧನವಾಗಿದೆ. ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಬಂಧಿಸುವುದಕ್ಕೆ ತೋರಿಸಲಾಗಿದ್ದ ಆತುರ, ಭಯಾನಕ ಮಣಿಪುರ ಹಿಂಸಾಚಾರ ವಿಚಾರದಲ್ಲಿ ಏಕೆ ಇಲ್ಲ? ಅಲ್ಲೇಕೆ ಇಂಥ ಅಸಹಾಯಕತೆ? ಡಬಲ್ ಇಂಜಿನ್ ಸರಕಾರ ಇರೋದು ಯಾಕೆ ಅಲ್ಲಿ ?
ಮಣಿಪುರದಲ್ಲಿ ಈ ಮಟ್ಟಕ್ಕೆ ಪರಿಸ್ಥಿತಿ ಏಕೆ ಹದಗೆಟ್ಟಿದೆ ಎಂದು ಯಾರೂ ಕೇಳುತ್ತಿಲ್ಲ? ಹಿಂಸಾಚಾರ ಶುರುವಾಗಿ ಮೂರು ತಿಂಗಳುಗಳೇ ಕಳೆದರೂ, 32 ಲಕ್ಷ ಜನಸಂಖ್ಯೆಯ ಮಣಿಪುರದಲ್ಲಿ ಪರಿಸ್ಥಿತಿ ಸರ್ಕಾರದ ನಿಯಂತ್ರಣ ಸಂಪೂರ್ಣ ಮೀರಿ ಹೋಗಿದೆ. ನಾವೂ ಕೂಡ ಭಾರತೀಯರು, ನಮ್ಮ ಪರಿಸ್ಥಿತಿಯ ಕಡೆಗೆ ಸ್ವಲ್ಪ ನೋಡಿ ಎಂದು ಮಣಿಪುರಿಗಳು ದೆಹಲಿಯಲ್ಲಿ ಪ್ರತಿಭಟಿಸಿ ಪ್ರಧಾನಿಯನ್ನು ಕೇಳಿಕೊಳ್ಳುತ್ತಲೇ ಇದ್ದಾರೆ. ನಮ್ಮನ್ನು ಬೇರೆಯೆಂದು ಏಕೆ ನೋಡಲಾಗುತ್ತಿದೆ, ನಾವು ನ್ಯಾಯಕ್ಕೆ ಅರ್ಹರಲ್ಲವೆ ಎಂದು ಅವರು ಕೇಳುತ್ತಿದ್ದಾರೆ. ಯಾರೂ ನಮ್ಮೆಡೆಗೆ ನೋಡುತ್ತಿಲ್ಲ, ನಮ್ಮ ಅಹವಾಲು ಕೇಳಿಸಿಕೊಳ್ಳುತ್ತಿಲ್ಲ ಎಂದೆ ಅನ್ನಿಸುತ್ತಿದೆ ಎಂಬ ನೋವು ಅವರದು.
ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಎನ್ಐಎ ಭಾರೀ ಕಷ್ಟಪಡುತ್ತಿದೆ. ಆದರೂ ಈವರೆಗೆ ದೃಢವಾದ ಸಾಕ್ಷ್ಯಗಳನ್ನು ಒದಗಿಸಲು ಅದಕ್ಕೆ ಆಗಿಲ್ಲ. ನಿಜವಾದ ಸಾಕ್ಷ್ಯಗಳು ಅದರ ಬಳಿ ಇಲ್ಲ ಎಂಬುದು ವಿಚಾರಣೆ ವೇಳೆ ಕೋರ್ಟ್ ಎತ್ತಿರುವ ಪ್ರಶ್ನೆಗಳಿಂದಲೇ ಗೊತ್ತಾಗುವಂತಿದೆ. ಈ ನಡುವೆ ಆರೋಪಿಗಳು ಎಂದು ಬಂಧಿತರ ಲ್ಯಾಪ್ ಟಾಪ್ ಗಳಲ್ಲಿ ಸುಳ್ಳು ಸಾಕ್ಷ್ಯವನ್ನು ಹ್ಯಾಕ್ ಮಾಡಿ ತುರುಕಿಸಲಾಗಿದೆ ಎಂಬ ವರದಿಗಳೂ ಬಂದವು. ಪ್ರತಿಷ್ಠಿತ ಸಂಸ್ಥೆಗಳ ವಿಧಿವಿಜ್ಞಾನ ವರದಿಗಳೇ ಇದನ್ನು ಹೇಳಿವೆ. ಇದು ಹೌದು ಎಂದಾದರೆ ಎಂತಹ ನಾಚಿಕೆಗೇಡು ಪರಿಸ್ಥಿತಿ ಅಲ್ಲವೇ ?
ಭಯೋತ್ಪಾದಕರು ಎಂದು ಸಾಬೀತುಪಡಿಸಲು ವ್ಯಕ್ತಿಗಳನ್ನು ಜೈಲಿನಲ್ಲಿಟ್ಟು ಯತ್ನಿಸುತ್ತಿರುವ ಹಾಗೆ ಕಾಣಿಸುತ್ತಿದೆ.
ಆದರೆ, ಮೂರ್ನಾಲ್ಕು ಸಾವಿರದಷ್ಟು ಶಸ್ತ್ರಾಸ್ತ್ರಗಳು ಲೂಟಿಯಾಗಿರುವ ಮಣಿಪುರದಲ್ಲಿ ತನ್ನ ತಾಕತ್ತು ತೋರಿಸಬೇಕಿದ್ದ ಎನ್ಐಎ ಸುಮ್ಮನಿದೆ. ನವೆಂಬರ್ 2022ರಲ್ಲಿ ಆನಂದ್ ತೇಲ್ತುಂಬ್ಡೆ ಜಾಮೀನು ಅರ್ಜಿ ವಿಚಾರಣೆ ವೇಳೆ ಸಿಜೆಐ ಡಿವೈ ಚಂದ್ರಚೂಡ್ ಹಲವಾರು ಪ್ರಶ್ನೆಗಳನ್ನು ಎತ್ತಿದ್ದರು. ತೇಲ್ತುಂಬ್ಡೆ ವಿರುದ್ಧ ಯಾವ ಸಾಕ್ಷ್ಯ ಇತ್ತು ಎಂದು ಪ್ರಶ್ನಿಸಿದ್ದರು. ಯುಎಪಿಎ ಅಡಿಯಲ್ಲಿ ಅವರ ವಿರುದ್ಧ ಆರೋಪ ಹೊರಿಸುವುದಕ್ಕೆ ಅವರು ಮಾಡಿದ್ದೇನು ಎಂದು ಕೇಳಿದ್ದರು. ದಲಿತ ಸಮಾವೇಶ ಹೇಗೆ ಭಯೋತ್ಪಾದಕ ಕೃತ್ಯದ ತಯಾರಿಯಾಗುತ್ತದೆ ಎಂದು ಸಿಜೆಐ ಪ್ರಶ್ನಿಸಿದ್ದರು.
ಅದಾಗಿ 8 ತಿಂಗಳ ಬಳಿಕವಾದರೂ ಎನ್ಐಎ ಬಳಿ ಅವಕ್ಕೆ ಉತ್ತರ ಇರಬೇಕಿತ್ತು. ಆದರೆ ಮತ್ತೆ ಸುಪ್ರೀಂ ಕೋರ್ಟ್ನಲ್ಲಿ ಅವೇ ದುರ್ಬಲ ದಾಖಲೆಗಳು ಮತ್ತು ಸಾಕ್ಷ್ಯಗಳನ್ನು ಹಿಡಿದುಕೊಂಡು ನಿಂತಿದ್ದ ಅದು, ಅವೇ ಪ್ರಶ್ನೆಗಳನ್ನು ಎದುರಿಸಬೇಕಾಯಿತು. ವರ್ನಾನ್ ಗೋನ್ಸಾಲ್ವೆಸ್ ಮತ್ತು ಅರುಣ ಫೆರೇರಾ ಜಾಮೀನು ಅರ್ಜಿ ವಿಚಾರಣೆಯಲ್ಲಿಯೂ ಅವೇ ಪ್ರಶ್ನೆಗಳನ್ನು ಕೇಳಲಾಯಿತು.
ಈ ಪ್ರಕರಣವನ್ನು ಹೇಗೆ ಸೃಷ್ಟಿಸಲಾಗಿದೆ ಎಂಬುದೇ ಸ್ಪಷ್ಟವಿಲ್ಲ. ಆನಂದ್ ತೇಲ್ತುಂಬ್ಡೆ, ಸುಧಾ ಭಾರದ್ವಾಜ್, ವೆರ್ನಾನ್ ಗೋನ್ಸಾಲ್ವೆಸ್ ಮತ್ತು ಅರುಣ್ ಫೆರೇರಾ ಅವರಿಗೆ ಜಾಮೀನು ಸಿಕ್ಕಿದೆ. ಆದರೆ ಅದಕ್ಕಾಗಿ ಅವರೆಷ್ಟು ಹೋರಾಡಬೇಕಾಯಿತು, ಕಷ್ಟಪಡಬೇಕಾಯಿತು? ಅದೆಷ್ಟು ವರ್ಷ ಜೈಲಿನಲ್ಲಿ ಅನ್ಯಾಯವಾಗಿ ಕೊಳೆಯಬೇಕಾಯಿತು ?
ಕಳೆದ ಜೂನ್ನಲ್ಲಿ ಗೌತಮ್ ನವ್ಲಾಖಾ ಬಾಂಬೇ ಹೈಕೋರ್ಟ್ನಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದರು. ಅದು ವಿಚಾರಣೆಗೆ ಬಂದು, ವಿಚಾರಣೆ ಪೂರ್ತಿಯಾಗಿ ಆದೇಶ ಹೊರಬೀಳಲು, ಬಳಿಕ ಸುಪ್ರೀಂ ಕೋರ್ಟ್ ವಿಚಾರಣೆ ನಡೆದು ಅದರ ಆದೇಶ ಹೊರಬೀಳಲು ಎಷ್ಟು ಸಮಯ ತೆಗೆದುಕೊಂಡಿತು ಎಂಬುದನ್ನು ಗಮನಿಸಿ. ಅಷ್ಟೊಂದು ದುರ್ಬಲ ಸಾಕ್ಷ್ಯಗಳನ್ನು ಇಟ್ಟುಕೊಂಡು ಆರೋಪಿಗಳನ್ನು ದೀರ್ಘ ಸಮಯದವರೆಗೆ ಜೈಲಿನಲ್ಲಿರಿಸಲು ಬಯಸಿ ಹೇಗೆ ಎನ್ಐಎ ಸುಪ್ರೀಂ ಕೋರ್ಟ್ ಮುಂದೆ ಹೋಗುತ್ತದೆ ಎಂಬುದೇ ವಿಚಿತ್ರವಾಗಿದೆ.
ನಿಜವಾಗಿಯೂ ಪ್ರಕರಣದಲ್ಲಿ ಏನಾಗುತ್ತಿದೆ ?
ಗೌತಮ್ ನವ್ಲಾಖಾ ಪ್ರಕರಣದಲ್ಲಿ, ಎನ್ಐಎ ವಿಶೇಷ ಕೋರ್ಟ್ ಜಾಮೀನು ನಿರಾಕರಿಸಿದಾಗ ಮತ್ತು ನವ್ಲಾಖಾ ಅಪರಾಧ ಎಸಗಿದ್ದಾರೆ ಎಂದು ಸಾಬೀತುಪಡಿಸಲು ಸಾಕಷ್ಟು ಅಂಶಗಳು ಚಾರ್ಜ್ ಶೀಟ್ನಲ್ಲಿದೆ ಎಂದಾಗ, ಬಾಂಬೇ ಹೈಕೋರ್ಟ್ ನ್ಯಾಯಮೂರ್ತಿಗಳಾದ ಎಎಸ್ ಗಡ್ಕರಿ ಮತ್ತು ಪಿಡಿ ನಾಯ್ಕ್ ಅವರಿದ್ದ ಪೀಠ ವಿಶೇಷ ಕೋರ್ಟ್ನ ಆದೇಶ ರದ್ದುಗೊಳಿಸಿತ್ತು. ಮತ್ತು ಸಮರ್ಪಕ ವಾದವಿವಾದ ಆಗಿಲ್ಲ ಎಂದು ಟಿಪ್ಪಣಿ ಮಾಡಿತ್ತು. ವಾದಗಳು ನಿಗೂಢ, ಅಸ್ಪಷ್ಟವಾಗಿವೆ ಮತ್ತು ಏನನ್ನೂ ವಿಶ್ಲೇಷಿಸುವುದಿಲ್ಲ ಎಂದಿತ್ತು.
ಇದೆಲ್ಲವೂ ಪ್ರಕರಣ ಹೇಗೆ ನಿಗೂಢವಾಗುತ್ತಿದೆ ಎಂಬುದನ್ನೇ ಹೇಳುತ್ತಿವೆ. ಈ ಇಡೀ ಪ್ರಕರಣ ಸುಮ್ಮನೆ ಅಲಕ್ಷಿಸುವಂಥದ್ದಲ್ಲ. ಐದು ವರ್ಷಗಳ ಬಳಿಕವೂ ಬಂಧಿತರ ವಿರುದ್ಧ ಎನ್ಐಎ ಬಳಿ ದೃಢವಾದ ಸಾಕ್ಷ್ಯಗಳಿಲ್ಲ ಎಂಬುದು ಜಾಮೀನು ಅರ್ಜಿಗಳ ವಿಚಾರಣೆ ವೇಳೆ ಸ್ಪಷ್ಟವಾಗಿದೆ. ದೇಶದ ಅತ್ಯಂತ ಉನ್ನತ ವೃತ್ತಿಪರ ತನಿಖಾ ಸಂಸ್ಥೆಯೊಂದರ ಪರಿಸ್ಥಿತಿ ಇದು. ನಮ್ಮ ದೇಶದಲ್ಲಿ ಯಾರನ್ನಾದರೂ ಜೈಲಿನಲ್ಲಿಡುವುದು ಎಷ್ಟು ಸುಲಭವಾಗಿದೆ ಎಂಬುದಕ್ಕೆ ಈ ಪ್ರಕರಣ ಒಂದು ನಿದರ್ಶನ. ಮತ್ತು ಇದು ದೇಶದಲ್ಲಿ ಈಗ ಅತಿ ಅಪಾಯಕಾರಿ ಸನ್ನಿವೇಶವಿದೆ ಎಂಬುದನ್ನೂ ತೋರಿಸುತ್ತಿದೆ.