ಬಿಸಿಯೂಟ ಕಾರ್ಯಕರ್ತರಿಗೆ ಬಳೆ ತೊಡಲು ನಿರ್ಬಂಧ ಅಂತ ಬಿಜೆಪಿ ಪುಕಾರು
- ಆರ್. ಜೀವಿ
ಜನಪರವಾಗಿ ಸರಕಾರವನ್ನು ಪ್ರಶ್ನಿಸಲು, ಅಧಿಕಾರದಲ್ಲಿರುವ ನಡೆಯ ಬಗ್ಗೆ ರಚನಾತ್ಮಕ ಟೀಕೆ ಮಾಡಲು, ರಾಜ್ಯದ ಜನರ ಪರವಾಗಿ ಆಡಳಿತ ಪಕ್ಷವನ್ನು ಎಚ್ಚರಿಸಲು ಸಾಧ್ಯವಿಲ್ಲದ ಹತಾಶ ವಿಪಕ್ಷ ಏನು ಮಾಡುತ್ತದೆ ? ಅದನ್ನೇ ರಾಜ್ಯ ಬಿಜೆಪಿ ಮಾಡುತ್ತಿದೆ. ರಾಜ್ಯದಲ್ಲಿ ಹೇಗಾದರೂ ಕೋಮುವಾದಿ ವಾತಾವರಣ ಸೃಷ್ಟಿಸಲು ಒಂದಾದ ಮೇಲೊಂದು ಹತಾಶ ಪ್ರಯತ್ನ ಮಾಡ್ತಾ ಇದೆ. ಕೋಮು ಧ್ರುವೀಕರಣ ಮಾಡಲು ಇನ್ನಿಲ್ಲದಂತೆ ಬಿಜೆಪಿ ಹೆಣಗಾಡುತ್ತಿದೆ. ಅದಕ್ಕಾಗಿ ಆ ಪಕ್ಷದ ಅತ್ಯಂತ ಹಿರಿಯ ನಾಯಕರೇ ಹಸಿ ಹಸಿ ಸುಳ್ಳು ಹೇಳಿ ಜನರೆದುರು ನಗೆಪಾಟಲಿಗೀಡಾಗುತ್ತಿದ್ದಾರೆ. ಈ ಸುಳ್ಳು ಹರಡುವ ಅಭಿಯಾನದ ಹೊಸ ಉದಾಹರಣೆ ಬಿಸಿಯೂಟ ತಯಾರಿಸುವ ಸಿಬ್ಬಂದಿಗಳ ಕುರಿತು ಬಿಜೆಪಿ ಮಾಡಿದ ಸುಳ್ಳಾರೋಪ.
ಬಿಜೆಪಿ ಮತ್ತು ಸಂಘ ಪರಿವಾರದ ಈ ಹಿಂದಿನ ಪ್ಯಾಟರ್ನ್ ಗಳಂತೆಯೇ ಈ ಇಲ್ಲದ ಬಿಸಿಯೂಟ ಕಾರ್ಯಕರ್ತೆಯರ ಕುರಿತ ವಿವಾದವನ್ನು ಸೃಷ್ಟಿಸಲಾಯಿತು. ಮೊದಲು ರಾಜ್ಯದ ಸರ್ಕಾರಿ ಶಾಲೆಗಳಲ್ಲಿನ ಬಿಸಿಯೂಟ ತಯಾರಿ ಸಿಬ್ಬಂದಿಗಳು ಕೈಗೆ ಬಳೆತೊಡದಂತೆ ಶಿಕ್ಷಣ ಇಲಾಖೆ ಹೊಸ ಮಾರ್ಗಸೂಚಿ ಪ್ರಕಟಿಸಿದೆ ಎಂಬುದು ದಿಢೀರನೆ ರಾಜ್ಯಾದ್ಯಂತ ಸುದ್ದಿಯಾಯಿತು. ಇದರ ಹಿಂದಿದ್ದದ್ದು ರಾಜ್ಯ ಬಿಜೆಪಿ ನಾಯಕರು ಹಾಗು ಅದರ ಐಟಿ ಸೆಲ್.
ಇಂತಹದೊಂದು ಸುದ್ದಿ ಹರಡುತ್ತಿದ್ದಂತೆ ಮೊದಲು ಹಿಂದುತ್ವ ಸಂಘಟನೆಗಳಿಂದ ವ್ಯಾಪಕ ಟೀಕೆ ವ್ಯಕ್ತವಾಯಿತು. ಎಂದಿನಂತೆ ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ ಆರೋಪ ಮಾಡಿ ಹರಿಹಾಯ್ದಿದ್ದೂ ಆಯ್ತು. ಅದರ ಹಿಂದೆಯೇ ಸೋಷಿಯಲ್ ಮೀಡಿಯಾದ ಬಲಪಂಥೀಯ ಪಡೆ ಕಾಂಗ್ರೆಸ್ ಸರಕಾರ ಹಿಂದೂ ವಿರೋಧಿ ಎಂಬ ತಮ್ಮ ಹಳೆ ಸವಕಲು ಆರೋಪವನ್ನು ಹರಿಬಿಟ್ಟರು. ಎಂದಿನಂತೆ ಬಿಜೆಪಿ ಐಟಿ ಸೆಲ್ ಹೇಳಿದ್ದೇ ಪರಮ ಸತ್ಯ ಎಂದು ಪ್ರಸಾರ ಮಾಡುವ ಕೆಲವು ಮಾಧ್ಯಮಗಳು ಸಿಕ್ಕ ಅವಕಾಶವನ್ನು ಬಳಸಿಕೊಂಡು ರಾಜ್ಯ ಸರಕಾರದ ಮೇಲೆ ಗೂಬೆ ಕೂರಿಸಲು ಪ್ರಯತ್ನಪಟ್ಟವು. ಬಿಸಿಯೂಟದ ಕಾರ್ಯಕರ್ತೆಯರು ಬಳೆ ಧರಿಸುವಂತಿಲ್ಲ ಎಂದು ಶಿಕ್ಷಣ ಇಲಾಖೆ ಹೇಳಿದೆ ಎಂದು ವರದಿ ಪ್ರಕಟಿಸಿದವು. ಇದರಿಂದಾಗಿ ಇಲಾಖೆ ಹಿಂದೂಗಳ ಕೆಂಗಣ್ಣಿಗೆ ಗುರಿಯಾಗಿದೆ ಎಂದೂ ಬರೆದವು.
ಆದ್ರೆ, ಇದಕ್ಕೆ ಸಂಬಂಧಿಸಿದಂತೆ ಸ್ವತಃ ಸಿಎಂ ಸಿದ್ದರಾಮಯ್ಯ ಅವರೇ ಸ್ಪಷ್ಟನೆ ನೀಡಿ, ವಿವಾದಗಳಿಗೆ ತೆರೆ ಎಳೆದಿದ್ದಾರೆ. "ಬಿಸಿಯೂಟದ ಕಾರ್ಯಕರ್ತೆಯರು ಬಳೆ ತೊಡುವುದನ್ನು ನಿಷೇಧಿಸಿ ರಾಜ್ಯ ಸರ್ಕಾರ ಮಾರ್ಗಸೂಚಿಯನ್ನು ಪ್ರಕಟಿಸಿದೆ ಎನ್ನುವ ಸುಳ್ಳು ಸುದ್ದಿಯನ್ನು ವ್ಯಾಪಕವಾಗಿ ಹರಡಲಾಗುತ್ತಿದೆ. ವಾಸ್ತವದಲ್ಲಿ ಕೇಂದ್ರ ಸರ್ಕಾರ ಪೋಷಣ್ ಯೋಜನೆಗೆ ಸಂಬಂಧಿಸಿದಂತೆ ಮಾರ್ಗಸೂಚಿ ಹೊರಡಿಸಿ, ಬಿಸಿಯೂಟದ ಕಾರ್ಯಕರ್ತೆಯರು ಬಳೆ ತೊಡುವುದನ್ನು ನಿಷೇಧಿಸಿದೆ" ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ಈ ಬಗ್ಗೆ ಮೊದಲು ಹೇಳಿಕೆ ಕೊಟ್ಟಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ " ಹಿಂದೂಗಳ ವಿರುದ್ಧ ಸದಾ ವಿಷಕಾರುವ ಕಾಂಗ್ರೆಸ್ ಸರಕಾರದಿಂದ ಮತ್ತೊಂದು ದ್ವೇಷದ ಆದೇಶ ಹೊರಬಿದ್ದಿದೆ. ‘ಬಿಸಿಯೂಟ ಅಡುಗೆದಾರರು’ ಕೈಗೆ ಬಳೆ ಧರಿಸಬಾರದು ಎಂದಿರುವ ಕಾಂಗ್ರೆಸಿಗರು ಆ ಬಳೆಗಳನ್ನು ತಾವು ಧರಿಸಿಕೊಳ್ಳಬೇಕೆಂದಿದ್ದಾರೆಯೇ? ಎಂಬುದೇ ತಿಳಿಯುತ್ತಿಲ್ಲ" ಎಂದು ಟ್ವೀಟ್ ಮಾಡಿದ್ದರು.
ಆದ್ರೆ, ಅದಕ್ಕೆ ತಿರುಗೇಟು ನೀಡಿ ಕಾಂಗ್ರೆಸ್, "ತಮ್ಮದೇ ಸರ್ಕಾರ ರೂಪಿಸುವ ನೀತಿ ನಿಯಮಗಳ ಬಗ್ಗೆ ಅರಿವಿಲ್ಲದ ನಳಿನ್ ಕುಮಾರ್ ಅವರು ಸಂಸದ ಸ್ಥಾನಕ್ಕೆ ಅಪಚಾರವಿದ್ದಂತೆ. ಆರೋಗ್ಯ ಸುರಕ್ಷತೆಯ ದೃಷ್ಟಿಯಿಂದ ಬಿಸಿಯೂಟದ ಕಾರ್ಯಕರ್ತೆಯರು ಅಡುಗೆ ಮಾಡುವ ಸಂದರ್ಭದಲ್ಲಿ ಕೈಗೆ ಉಗುರುಬಣ್ಣ ಹಚ್ಚಬಾರದು, ಬಳೆ ತೊಟ್ಟಿರಬಾರದು ಎಂದು ಕೇಂದ್ರ ಸರ್ಕಾರ 2020ರಲ್ಲೇ ಆದೇಶ ಹೊರಡಿಸಿದೆ. ನಳಿನ್ ಕುಮಾರ್ ಕಟೀಲ್ ಅವರೇ, ಆ ಬಳೆಯನ್ನು ತಾವು ಧರಿಸಿಕೊಳ್ಳಲೆಂದು ಮೋದಿಯವರು ಈ ಆದೇಶ ಹೊರಡಿಸಿದ್ದೇ ? ಹಿಂದೂ ಆಚರಣೆಗಳನ್ನು ಹತ್ತಿಕ್ಕಲು ಈ ಕ್ರಮ ಕೈಗೊಂಡರೇ ? ಕಟೀಲ್ ಕೈಗೆ ಬಳೆ ತೊಟ್ಟು ಇದನ್ನು ಪ್ರತಿಭಟಿಸಲಿ" ಎಂದು ಲೇವಡಿ ಮಾಡಿದೆ.
ಬಿಸಿಯೂಟ ಕಾರ್ಯಕರ್ತೆಯರ ಬಗ್ಗೆ ಮೋದಿ ಸರಕಾರ ಏನು ಹೇಳಿತ್ತು ? ಅಂತ ನೋಡಿದ್ರೆ , ಕೇಂದ್ರ ಸರ್ಕಾರ ಈ ಹಿಂದೆ ಪೋಷಣ್ ಯೋಜನೆಗೆ ಸಂಬಂಧಿಸಿದಂತೆ ಮಾರ್ಗಸೂಚಿ ಹೊರಡಿಸಿ, ಬಿಸಿಯೂಟದ ಕಾರ್ಯಕರ್ತೆಯರು ಬಳೆ ತೊಡುವುದನ್ನು ನಿಷೇಧಿಸಲಾಗಿದೆ ಎಂದು ಹೇಳಿತ್ತು.
"ನೇಲ್ ಪಾಲಿಷ್ ಅಥವಾ ಕೃತಕ ಉಗುರುಗಳನ್ನು ಧರಿಸಬಾರದು ಏಕೆಂದರೆ ಬಾಹ್ಯ ವಸ್ತುಗಳಾಗಿ ಆಹಾರಕ್ಕೆ ಸೇರಿ ಅದರಿಂದ ಆಹಾರದ ಸುರಕ್ಷತೆಗೆ ಧಕ್ಕೆಯಾಗಬಹುದು. ಅಡುಗೆ ಮಾಡುವಾಗ, ಬಡಿಸುವಾಗ ಮತ್ತು ವಿತರಿಸುವಾಗ ಆಹಾರ ಮಾಲಿನ್ಯವಾಗುವ ಅಪಾಯವಿರುವಲ್ಲಿ ಯಾವುದೇ ಕೈಗಡಿಯಾರಗಳು, ಉಂಗುರಗಳು, ಆಭರಣಗಳು ಮತ್ತು ಬಳೆಗಳನ್ನು ಧರಿಸಬಾರದು. ಹಾಗೆಯೆ ಆಹಾರದ ಬಳಿ ಇರುವಾಗ ಜಗಿಯುವುದು, ಉಗುಳುವುದು, ಧೂಮಪಾನ ಹಾಗು ಸಿಂಬಳ ತೆಗೆಯುವುದನ್ನೂ ನಿಷೇಧಿಸಿದೆ " ಎಂದು ಹೇಳುತ್ತದೆ ಮೋದಿ ಸರಕಾರ ಹೊರಡಿಸಿರುವ ಆ ಮಾರ್ಗಸೂಚಿ. ಅದು ಬಹಳ ಸರಿಯಾಗಿಯೇ ಇದೆ. ಯಾರಾದರೂ ಸಾಮಾನ್ಯ ಜ್ಞಾನ ಇರುವವರು ಒಪ್ಪಲೇಬೇಕಾದ ವಿಚಾರ ಅದು.
ಅದನ್ನೇ ಹಿಡಿದುಕೊಂಡು ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಮೇಲೆ ಹಿಂದೂ ಮಹಿಳೆಯರು ಬಳೆ ತೊಡುವುದನ್ನು ನಿಷೇಧಿಸಲಾಗುತ್ತಿದೆ ಎಂಬಂತೆ ಬಿಜೆಪಿ, ಅದರ ಐಟಿ ಸೆಲ್ ಹಾಗು ಆ ಐಟಿ ಸೆಲ್ ನ ಭಾಗವೇ ಆಗಿಬಿಟ್ಟಿರುವ ಕೆಲವು ಮಾಧ್ಯಮಗಳು ಸುಖಾಸುಮ್ಮನೆ ಪುಕಾರು ಹಬ್ಬಿಸಿದವು. ಈಗ ಸತ್ಯ ಬಯಲಾದ ಮೇಲೆ ಬಾಲ ಮುದುಡಿಕೊಂಡು ಅಡಗಿ ಕುಳಿತು ಮುಂದಿನ ಸುಳ್ಳು ಅಭಿಯಾನಕ್ಕೆ ಸಜ್ಜಾಗುತ್ತಿದ್ದಾರೆ.
ಇದರಲ್ಲಿ ಕಾಂಗ್ರೆಸ್ ಸರಕಾರಕ್ಕೂ ದೊಡ್ಡ ಜವಾಬ್ದಾರಿಯಿದೆ. ಈ ರೀತಿ ಹಸಿ ಹಸಿ ಸುಳ್ಳು ಹರಡಿದಾಗ ಅದು ಸುಳ್ಳು ಎಂದು ಫ್ಯಾಕ್ಟ್ ಚೆಕ್ ಮಾಡಿದ್ರೆ ಸಾಕಾಗದು. ಹೀಗೆ ಸೋಶಿಯಲ್ ಮೀಡಿಯಾದಲ್ಲಿ ಸುಳ್ಳು ಹರಡುವ ಫ್ಯಾಕ್ಟರಿಗಳನ್ನು ಪತ್ತೆ ಹಚ್ಚಿ ಅವುಗಳನ್ನು ಬಂದ್ ಮಾಡಿದರೆ ಮಾತ್ರ ಈ ಸುಳ್ಳಾರೋಪ ಅಭಿಯಾನ ನಿಲ್ಲುತ್ತದೆ. ಇಲ್ಲದಿದ್ದರೆ ಲೋಕಸಭಾ ಚುನಾವಣೆವರೆಗೆ ಈ ಸುಳ್ಳು ಫ್ಯಾಕ್ಟರಿಗಳ ಕಾಟ ಇನ್ನಷ್ಟು ಹೆಚ್ಚಾಗಿ ಕರುನಾಡಿನ ನೆಮ್ಮದಿ ಕೆಡಿಸೋದು ಖಚಿತ.
ಸುಳ್ಳು , ದ್ವೇಷ ಹರಡೋದು ಸಮಾಜದಲ್ಲಿ ಹಿಂಸೆಗೆ, ಅವ್ಯವಸ್ಥೆಗೆ ಕರೆ ಕೊಟ್ಟಂತೆ. ಹಾಗಾಗಿ ಮುಖ್ಯಮಂತ್ರಿಗಳು ಹಾಗು ಗೃಹ ಸಚಿವರು ಕೂಡಲೇ ರಾಜ್ಯ ಪೋಲೀಸರಿಗೆ ಸೂಚನೆ ನೀಡಿ ಈ ಸುಳ್ಳು ಫ್ಯಾಕ್ಟರಿಗಳನ್ನು ಮೊದಲು ಬಂದ್ ಮಾಡಿಸಬೇಕು. ಅದರ ಹಿಂದಿರುವವರ ಹೆಡೆಮುರಿ ಕಟ್ಟಬೇಕು. ಇಲ್ಲದಿದ್ದರೆ ಈ ಸುಳ್ಳಿನ ಫ್ಯಾಕ್ಟರಿಗಳ ಆಟಾಟೋಪಕ್ಕೆ ರಾಜ್ಯದ ಜನರು ಹಾಗು ರಾಜಕೀಯವಾಗಿ ಕಾಂಗ್ರೆಸ್ ಕೂಡ ಬೆಲೆ ತೆರಬೇಕಾಗುತ್ತದೆ.