ಭಾರತದ ಸೃಜನಶೀಲ ಆರ್ಥಿಕತೆ: ನಾವೀನ್ಯತೆಗೆ ಉತ್ತೇಜನ ನೀಡುತ್ತದೆ ಮತ್ತು ಭವಿಷ್ಯವನ್ನು ರೂಪಿಸುತ್ತದೆ

ಭವಿಷ್ಯವು ನಾವೀನ್ಯತೆ, ಸಹಯೋಗ ಮತ್ತು ಮುಕ್ತ ಕ್ರಿಯೇಟರ್ಸ್‌ಗೆ ಸೇರಿದೆ. ಭಾರತದ ಸೃಜನಶೀಲ ಆರ್ಥಿಕತೆಯು ಸ್ಫೂರ್ತಿಯ ಸಂಕೇತವಾಗಲಿ, ಆರ್ಥಿಕ ಬೆಳವಣಿಗೆ, ಸಾಂಸ್ಕೃತಿಕ ರಾಜತಾಂತ್ರಿಕತೆ ಮತ್ತು ಜಾಗತಿಕ ನಾಯಕತ್ವವನ್ನು ಮುನ್ನಡೆಸಲಿ. ಒಟ್ಟಾಗಿ, ಪ್ರತಿಯೊಬ್ಬ ಭಾರತೀಯ ಕ್ರಿಯೇಟರ್ ಜಾಗತಿಕ ಕಥೆಗಾರನಾಗುವುದನ್ನು ಮತ್ತು ನಾಳೆಯನ್ನು ರೂಪಿಸುವ ಕಥೆಗಳಿಗಾಗಿ ಜಗತ್ತು ಭಾರತದತ್ತ ನೋಡುವುದನ್ನು ಖಚಿತಪಡಿಸಿಕೊಳ್ಳೋಣ.

Update: 2024-11-20 06:27 GMT

‘‘ನೀವು ಪ್ರಪಂಚದಾದ್ಯಂತ ಭಾರತದ ಡಿಜಿಟಲ್ ರಾಯಭಾರಿಗಳು. ನೀವು ವೋಕಲ್ ಫಾರ್ ಲೋಕಲ್‌ನ ಬ್ರಾಂಡ್ ಅಂಬಾಸಿಡರ್‌ಗಳು’’ ಈ ವರ್ಷದ ಆರಂಭದಲ್ಲಿ ಮೊತ್ತಮೊದಲ ರಾಷ್ಟ್ರೀಯ ಕ್ರಿಯೇಟರ್ಸ್ ಪ್ರಶಸ್ತಿ ಪ್ರದಾನದ ಸಂದರ್ಭದಲ್ಲಿ ಮಾತನಾಡಿದ ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿಯವರ ಈ ಸ್ಫೂರ್ತಿದಾಯಕ ಮಾತುಗಳು ಭಾರತದ ಸೃಜನಶೀಲ ಆರ್ಥಿಕತೆಯ ಪರಿವರ್ತಕ ಪಾತ್ರವನ್ನು ಎತ್ತಿ ತೋರಿಸುತ್ತವೆ. ಇಂದು, ನಮ್ಮ ಕಂಟೆಂಟ್ ರಚನೆಕಾರರು (ಕ್ರಿಯೇಟರ್ಸ್) ಕೇವಲ ಕಥೆಗಾರರಲ್ಲ; ಅವರು ರಾಷ್ಟ್ರ ನಿರ್ಮಾತೃಗಳು, ಅವರು ಭಾರತದ ಅಸ್ಮಿತೆಯನ್ನು ರೂಪಿಸುತ್ತಿದ್ದಾರೆ ಮತ್ತು ಜಾಗತಿಕ ವೇದಿಕೆಯಲ್ಲಿ ಅದರ ಕ್ರಿಯಾಶೀಲತೆಯನ್ನು ಪ್ರದರ್ಶಿಸುತ್ತಿದ್ದಾರೆ.

ಭಾರತದ 55ನೇ ಅಂತರ್‌ರಾಷ್ಟ್ರೀಯ ಚಲನಚಿತ್ರೋತ್ಸವ (ಐಎಫ್‌ಎಫ್‌ಐ) ಇಂದು ಗೋವಾದಲ್ಲಿ ಪ್ರಾರಂಭವಾಗುತ್ತಿದೆ, ಇದು ‘ಯುವ ಚಲನಚಿತ್ರ ನಿರ್ಮಾತೃಗಳು-ಭವಿಷ್ಯವು ಈಗ’ ಎಂಬ ವಿಷಯದ ಮೇಲೆ ಗಮನಸೆಳೆಯುತ್ತಿದೆ. ಮುಂದಿನ ಎಂಟು ದಿನಗಳಲ್ಲಿ, ಐಎಫ್‌ಎಫ್‌ಐ ನೂರಾರು ಚಲನಚಿತ್ರ ಗಳನ್ನು ಪ್ರದರ್ಶಿಸುತ್ತದೆ, ಉದ್ಯಮದ ದಿಗ್ಗಜರೊಂದಿಗೆ ಮಾಸ್ಟರ್-ಕ್ಲಾಸ್‌ಗಳನ್ನು ಆಯೋಜಿಸುತ್ತದೆ ಮತ್ತು ಜಾಗತಿಕ ಸಿನೆಮಾದ ಅತ್ಯುತ್ತಮರನ್ನು ಗೌರವಿಸುತ್ತದೆ. ಜಾಗತಿಕ ಮತ್ತು ಭಾರತೀಯ ಸಿನಿಮೀಯ ಶ್ರೇಷ್ಠತೆಯ ಈ ಸಮ್ಮಿಲನವು ಭಾರತದ ಸೃಜನಶೀಲ ಆರ್ಥಿಕತೆಯನ್ನು ನಾವೀನ್ಯತೆ, ಉದ್ಯೋಗ ಮತ್ತು ಸಾಂಸ್ಕೃತಿಕ ರಾಜತಾಂತ್ರಿಕತೆಯ ಶಕ್ತಿ ಕೇಂದ್ರವಾಗಿ ಒತ್ತಿಹೇಳುತ್ತದೆ.

ವಿಸ್ತರಿಸುತ್ತಿರುವ ಭಾರತದ ಸೃಜನಾತ್ಮಕ ಆರ್ಥಿಕತೆಯ ದಿಗಂತ

ಭಾರತದ ಸೃಜನಶೀಲ ಆರ್ಥಿಕತೆಯು 30 ಶತಕೋಟಿ ಉದ್ಯಮವಾಗಿ ಹೊರಹೊಮ್ಮಿದೆ. ಜಿಡಿಪಿಗೆ ಸುಮಾರು ಶೇ.2.5ರಷ್ಟು ಕೊಡುಗೆ ನೀಡುತ್ತಿದೆ ಮತ್ತು ಶೇ.8ರಷ್ಟು ಉದ್ಯೋಗಿಗಳಿಗೆ ಜೀವನೋಪಾಯವನ್ನು ಒದಗಿಸಿದೆ. ಸಿನೆಮಾ, ಗೇಮಿಂಗ್, ಅನಿಮೇಷನ್, ಸಂಗೀತ, ಇನ್‌ಫ್ಲುಯೆನ್ಸರ್ ಮಾರ್ಕೆಟಿಂಗ್ ಮತ್ತು ಇನ್ನೂ ಹೆಚ್ಚಿನವುಗಳಲ್ಲಿ ವ್ಯಾಪಿಸಿರುವ ಈ ವಲಯವು ಭಾರತದ ಸಾಂಸ್ಕೃತಿಕತೆಯ ಚೈತನ್ಯವನ್ನು ಪ್ರತಿಬಿಂಬಿಸುತ್ತದೆ.

3,375 ಕೋಟಿ ರೂ. ಮೌಲ್ಯದ ಇನ್‌ಫ್ಲುಯೆನ್ಸರ್‌ಮಾರ್ಕೆಟಿಂಗ್ ವಲಯ ಮತ್ತು 2 ಲಕ್ಷ ಪೂರ್ಣ ಸಮಯದ ಕಂಟೆಂಟ್ ರಚನೆಕಾರರೊಂದಿಗೆ, ಉದ್ಯಮವು ಭಾರತದ ಜಾಗತಿಕ ಆಕಾಂಕ್ಷೆಗಳನ್ನು ಚಾಲನೆ ಮಾಡುವ ಕ್ರಿಯಾತ್ಮಕ ಶಕ್ತಿಯಾಗಿದೆ. ಗಮನಾರ್ಹವಾಗಿ, ಗುವಾಹಟಿ, ಕೊಚ್ಚಿ ಮತ್ತು ಇಂದೋರ್‌ನಂತಹ ನಗರಗಳು ಸೃಜನಶೀಲ ಕೇಂದ್ರಗಳಾಗುತ್ತಿವೆ. ವಿಕೇಂದ್ರೀಕೃತ ಸೃಜನಶೀಲ ಕ್ರಾಂತಿಯನ್ನು ಉತ್ತೇಜಿಸುತ್ತಿವೆ.

ಭಾರತದ 110 ಕೋಟಿ ಇಂಟರ್ನೆಟ್ ಬಳಕೆದಾರರು ಮತ್ತು 70 ಕೋಟಿ ಸಾಮಾಜಿಕ ಮಾಧ್ಯಮ ಬಳಕೆದಾರರು ಸೃಜನಶೀಲತೆಯ ಪ್ರಜಾಪ್ರಭುತ್ವೀಕರಣವನ್ನು ಮುನ್ನಡೆಸುತ್ತಿದ್ದಾರೆ. ಸಾಮಾಜಿಕ ಮಾಧ್ಯಮ ವೇದಿಕೆಗಳು ಮತ್ತು ಒಟಿಟಿ ಸೇವೆಗಳು ಕಂಟೆಂಟ್ ರಚನೆಕಾರರನ್ನು ಜಾಗತಿಕ ಪ್ರೇಕ್ಷಕರೊಂದಿಗೆ ನೇರವಾಗಿ ಸಂಪರ್ಕಿಸಲು ಸಕ್ರಿಯಗೊಳಿಸುತ್ತವೆ. ಪ್ರಾದೇಶಿಕ ವಿಷಯ ಮತ್ತು ಆಡುಭಾಷೆಯ ಕಥೆ ಹೇಳುವ ಪ್ರವೃತ್ತಿಯು ನಿರೂಪಣೆಯನ್ನು ಮತ್ತಷ್ಟು ವೈವಿಧ್ಯಗೊಳಿಸಿದೆ, ಭಾರತದ ಸೃಜನಶೀಲ ಆರ್ಥಿಕತೆಯನ್ನು ನಿಜವಾಗಿಯೂ ಒಳಗೊಳ್ಳುವಂತೆ ಮಾಡಿದೆ.

ಕಂಟೆಂಟ್ ರಚನೆಕಾರರು ಅಭೂತಪೂರ್ವ ಆರ್ಥಿಕ ಯಶಸ್ಸನ್ನು ಸಾಧಿಸುತ್ತಿದ್ದಾರೆ, ಒಂದು ಮಿಲಿಯನ್‌ಗಿಂತಲೂ ಹೆಚ್ಚು ಫಾಲೋವರ್ಸ್ ಹೊಂದಿರುವವರು ತಿಂಗಳಿಗೆ 20,000ದಿಂದ 2.5 ಲಕ್ಷ ರೂ.ವರೆಗೆ ಗಳಿಸುತ್ತಿದ್ದಾರೆ. ಈ ಪೂರಕ ವ್ಯವಸ್ಥೆಯು ಆರ್ಥಿಕವಾಗಿ ಲಾಭದಾಯಕವಾಗಿದೆ ಮತ್ತು ಸಾಂಸ್ಕೃತಿಕ ಅಭಿವ್ಯಕ್ತಿ ಮತ್ತು ಸಾಮಾಜಿಕ ಪ್ರಭಾವಕ್ಕೆ ವೇದಿಕೆಯಾಗಿದೆ.

ವಿವಿಧ ಆಯಾಮಗಳ ಮೇಲೆ ಪರಿಣಾಮ

ಸೃಜನಶೀಲ ಆರ್ಥಿಕತೆಯು ಜಿಡಿಪಿ ಬೆಳವಣಿಗೆಯ ಆಚೆಗೂ ಆಳವಾದ ಪರಿಣಾಮಗಳನ್ನು ಹೊಂದಿದೆ. ಇದು ಪೂರಕ ಉದ್ಯಮಗಳನ್ನು ಬೆಂಬಲಿಸುವ ಮೂಲಕ ಪ್ರವಾಸೋದ್ಯಮ, ಆತಿಥ್ಯ ಮತ್ತು ತಂತ್ರಜ್ಞಾನ ಸೇರಿದಂತೆ ವಿವಿಧ ಕ್ಷೇತ್ರಗಳ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುತ್ತದೆ. ಹೆಚ್ಚುವರಿಯಾಗಿ, ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು ನಿರ್ಲಕ್ಷಿತ ಧ್ವನಿಗಳನ್ನು ಸಶಕ್ತಗೊಳಿಸುತ್ತವೆ, ಸಾಮಾಜಿಕ ಸೇರ್ಪಡೆ, ವೈವಿಧ್ಯತೆ ಮತ್ತು ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆಯನ್ನು ಉತ್ತೇಜಿಸುತ್ತವೆ. ತನ್ನ ಕಥೆ ಹೇಳುವ ಕಲೆಯ ಮೂಲಕ, ಭಾರತವು ತನ್ನ ಜಾಗತಿಕ ಸಾಂಸ್ಕೃತಿಕ ಶಕ್ತಿಯನ್ನು ಬಾಲಿವುಡ್‌ನಿಂದ ಪ್ರಾದೇಶಿಕ ಸಿನೆಮಾದವರೆಗೆ ವಿಸ್ತರಿಸಿದೆ, ವಿಶ್ವ ವೇದಿಕೆಯಲ್ಲಿ ತನ್ನ ಶ್ರೀಮಂತ ಸಾಂಸ್ಕೃತಿಕ ನಿರೂಪಣೆಯನ್ನು ಪ್ರದರ್ಶಿಸುತ್ತಿದೆ. ಪರಿಸರ ಸ್ನೇಹಿ ನಿರ್ಮಾಣ ಅಭ್ಯಾಸಗಳು ಮತ್ತು ಸುಸ್ಥಿರ ಫ್ಯಾಷನ್‌ಗಳ ಏರಿಕೆಯಲ್ಲಿ ಕಂಡುಬರುವಂತೆ, ಪರಿಸರ ಪ್ರಜ್ಞೆಯ ಅಭಿವೃದ್ಧಿಗೆ ತನ್ನ ಬದ್ಧತೆಯನ್ನು ಪ್ರದರ್ಶಿಸುವ ಮೂಲಕ ಈ ವಲಯವು ಜಾಗತಿಕ ಸುಸ್ಥಿರತೆಯ ಗುರಿಗಳಿಗೆ ಅನುಗುಣವಾಗಿದೆ.

ಸರಕಾರದ ಪರಿವರ್ತಕ ಕ್ರಮಗಳು

ಭಾರತದ ಸೃಜನಶೀಲ ಆರ್ಥಿಕತೆಯನ್ನು ಜಾಗತಿಕ ಮಟ್ಟಕ್ಕೆ ಏರಿಸಲು, ಸರಕಾರವು ಮೂರು ಪ್ರಮುಖ ಸ್ತಂಭಗಳಿಗೆ ಆದ್ಯತೆ ನೀಡುತ್ತಿದೆ: ಬಲವಾದ ಪ್ರತಿಭೆಯನ್ನು ಪೋಷಿಸುವುದು, ರಚನೆಕಾರರಿಗೆ ಮೂಲಸೌಕರ್ಯವನ್ನು ಬಲಪಡಿಸುವುದು ಮತ್ತು ಕಥೆಗಾರರನ್ನು ಸಶಕ್ತಗೊಳಿಸಲು ಪ್ರಕ್ರಿಯೆಗಳನ್ನು ಸುಗಮಗೊಳಿಸುವುದು. ಈ ದೃಷ್ಟಿಯ ಭಾಗವಾಗಿ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಕ್ರಿಯೇಟಿವ್ ಟೆಕ್ನಾಲಜಿ (ಐಐಸಿಟಿ) ಸ್ಥಾಪನೆಯು ನಾವೀನ್ಯತೆ ಮತ್ತು ಸೃಜನಶೀಲತೆಯನ್ನು ಪ್ರೋತ್ಸಾಹಿಸುವ ಸರಕಾರದ ಬದ್ಧತೆಯನ್ನು ಒತ್ತಿಹೇಳುತ್ತದೆ. ಐಐಸಿಟಿ ಭಾರತೀಯ ಕ್ರಿಯೇಟರ್ಸ್- ಸಿನೆಮಾ, ಅನಿಮೇಷನ್, ಗೇಮಿಂಗ್ ಅಥವಾ ಡಿಜಿಟಲ್ ಕಲೆಗಳಲ್ಲಿ-ದೇಶೀಯವಾಗಿ ಐಕ್ಯತೆಯ ಸಾಂಸ್ಕೃತಿಕ ಶಕ್ತಿಯಾಗಲು ಮತ್ತು ಜಾಗತಿಕ ಮನರಂಜನೆಯಲ್ಲಿ ಪ್ರಮುಖ ಪ್ರಭಾವ ಬೀರುವುದನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಹೊಂದಿದೆ. ಚಲನಚಿತ್ರ ನಿರ್ಮಾಣ, ತಲ್ಲೀನಗೊಳಿಸುವ ಅನುಭವಗಳು ಮತ್ತು ಸಂವಾದಾತ್ಮಕ ಮನರಂಜನೆಯಲ್ಲಿ ಇತ್ತೀಚಿನ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಮೂಲಕ, ಭಾರತವು ಕಂಟೆಂಟ್ ರಚನೆಯ ಭವಿಷ್ಯವನ್ನು ಮರುವ್ಯಾಖ್ಯಾನಿಸಲು ಸಿದ್ಧವಾಗಿದೆ.

ವಿಶ್ವ ಧ್ವನಿ-ದೃಶ್ಯ ಮತ್ತು ಮನರಂಜನಾ ಶೃಂಗಸಭೆ (ವೇವ್ಸ್) ದೇಶವನ್ನು ಕಂಟೆಂಟ್ ರಚನೆ ಮತ್ತು ನಾವೀನ್ಯತೆಯಲ್ಲಿ ಜಾಗತಿಕ ಶಕ್ತಿಯಾಗಿಸಲು ಒಂದು ಹೆಗ್ಗುರುತು ಉಪಕ್ರಮವಾಗಿದೆ. ಧ್ವನಿ-ದೃಶ್ಯ ಮತ್ತು ಮನರಂಜನಾ ಕ್ಷೇತ್ರಗಳ ಭವಿಷ್ಯವನ್ನು ರೂಪಿಸಲು ರಚನೆಕಾರರು, ಉದ್ಯಮದ ನಾಯಕರು ಮತ್ತು ನೀತಿ ನಿರೂಪಕರು ಒಟ್ಟುಗೂಡುವ ಕ್ರಿಯಾತ್ಮಕ ವೇದಿಕೆಯಾಗಿ ವೇವ್ಸ್ ಕಾರ್ಯನಿರ್ವಹಿಸುತ್ತದೆ. ಪ್ರಧಾನಮಂತ್ರಿಯವರ ಕ್ರಿಯೇಟ್ ಇನ್ ಇಂಡಿಯಾ ದೃಷ್ಟಿಗೆ ಅನುಗುಣವಾಗಿ, ಶೃಂಗಸಭೆಯು ಸಹಯೋಗವನ್ನು ಉತ್ತೇಜಿಸುತ್ತದೆ, ಭಾರತದ ಸೃಜನಶೀಲ ಸಾಮರ್ಥ್ಯವನ್ನು ಪ್ರದರ್ಶಿಸುತ್ತದೆ ಮತ್ತು ಜಾಗತಿಕ ಪಾಲುದಾರಿಕೆಗಳನ್ನು ಉತ್ತೇಜಿಸುತ್ತದೆ.

ಕ್ರಿಯೇಟ್ ಇನ್ ಇಂಡಿಯಾ ಚಾಲೆಂಜ್ ಎಂಬುದು ಭಾರತದ ಕ್ರಿಯೇಟರ್ ಆರ್ಥಿಕತೆಯ ಅಪಾರ ಸಾಮರ್ಥ್ಯವನ್ನು ಹೊರ ತೆಗೆಯಲು ವಿನ್ಯಾಸಗೊಳಿಸಲಾದ ಪ್ರವರ್ತಕ ಉಪಕ್ರಮವಾಗಿದೆ. ವಿಶ್ವ ಧ್ವನಿ-ದೃಶ್ಯ ಮತ್ತು ಮನರಂಜನಾ ಶೃಂಗಸಭೆಯ (ವೇವ್ಸ್) ಭಾಗವಾಗಿ ಇದನ್ನು ಪ್ರಾರಂಭಿಸಲಾಗಿದೆ, ಈ ಚಾಲೆಂಜ್ ಅನಿಮೇಷನ್, ಗೇಮಿಂಗ್, ಸಂಗೀತ, ಒಟಿಟಿ ಕಂಟೆಂಟ್ ಮತ್ತು ತಲ್ಲೀನಗೊಳಿಸುವ ಕಥೆ ಹೇಳುವಿಕೆಯಂತಹ ಪ್ರಮುಖ ಕ್ಷೇತ್ರಗಳಲ್ಲಿ ಪ್ರತಿಭೆಯನ್ನು ಪ್ರೇರೇಪಿಸುವ ಮತ್ತು ಸಬಲಗೊಳಿಸುವ ಗುರಿಯನ್ನು ಹೊಂದಿದೆ. 14,000ಕ್ಕೂ ಹೆಚ್ಚು ನೋಂದಣಿಗಳು ಮತ್ತು ಸ್ಟಾರ್ಟ್ ಅಪ್‌ಗಳು, ಸ್ವತಂತ್ರ ಕ್ರಿಯೇಟರ್ಸ್ ಮತ್ತು ಉದ್ಯಮ ವೃತ್ತಿಪರರ ಸಕ್ರಿಯ ಭಾಗವಹಿಸುವಿಕೆಯೊಂದಿಗೆ, ಈ ಉಪಕ್ರಮವು ಭಾರತದ ನಾವೀನ್ಯ ಮನೋಭಾವವನ್ನು ಪ್ರದರ್ಶಿಸುತ್ತದೆ.

ಮುಂದಿನ ಹಾದಿ ಭಾರತವನ್ನು ಜಗತ್ತಿಗೆ ಕೊಂಡೊಯ್ಯುವುದು

ಈ ಎಂಟು ದಿನಗಳ ಸಿನಿಮೀಯ ಪ್ರತಿಭೆಗಳ ಆಚರಣೆಗಾಗಿ ಐಎಫ್‌ಎಫ್‌ಐ ಆರಂಭವಾಗುತ್ತಿರುವಾಗ, ಸಂದೇಶವು ಸ್ಪಷ್ಟವಾಗಿದೆ: ಭಾರತದ ಕ್ರಿಯೇಟರ್ಸ್ ಜಾಗತಿಕ ಸೃಜನಶೀಲ ಆರ್ಥಿಕತೆಯನ್ನು ಮುನ್ನಡೆಸಲು ಸಿದ್ಧರಾಗಿದ್ದಾರೆ. ನೀತಿ ಸುಧಾರಣೆಗಳು, ಮೂಲಸೌಕರ್ಯ ಅಭಿವೃದ್ಧಿ ಮತ್ತು ನಾವೀನ್ಯತೆಗೆ ಪ್ರೋತ್ಸಾಹಗಳ ಮೂಲಕ ಈ ಪರಿಸರ ವ್ಯವಸ್ಥೆಯನ್ನು ಬೆಂಬಲಿಸಲು ಭಾರತ ಸರಕಾರವು ಸಂಪೂರ್ಣವಾಗಿ ಬದ್ಧವಾಗಿದೆ.

ನಮ್ಮ ರಚನೆಕಾರರಿಗೆ ಕರೆಯು ಸರಳವಾಗಿದೆ ಮತ್ತು ಆಳವಾಗಿದೆ: 5ಜಿ, ವರ್ಚುವಲ್ ನಿರ್ಮಾಣ ಮತ್ತು ಕೃತಕ ಬುದ್ಧಿಮತ್ತೆಯಂತಹ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಿ. ಭೌಗೋಳಿಕ ಅಡೆತಡೆಗಳನ್ನು ಮೀರಿದ ವೇದಿಕೆಗಳ ಲಾಭವನ್ನು ಪಡೆದುಕೊಳ್ಳಿ ಮತ್ತು ಭಾರತದ ಅನನ್ಯ ಗುರುತನ್ನು ಪ್ರತಿಬಿಂಬಿಸುವಾಗ ಜಾಗತಿಕವಾಗಿ ಪ್ರತಿಧ್ವನಿಸುವ ಕಥೆಗಳನ್ನು ಹೇಳಿ.

ಭವಿಷ್ಯವು ನಾವೀನ್ಯತೆ, ಸಹಯೋಗ ಮತ್ತು ಮುಕ್ತ ಕ್ರಿಯೇಟರ್ಸ್‌ಗೆ ಸೇರಿದೆ. ಭಾರತದ ಸೃಜನಶೀಲ ಆರ್ಥಿಕತೆಯು ಸ್ಫೂರ್ತಿಯ ಸಂಕೇತವಾಗಲಿ, ಆರ್ಥಿಕ ಬೆಳವಣಿಗೆ, ಸಾಂಸ್ಕೃತಿಕ ರಾಜತಾಂತ್ರಿಕತೆ ಮತ್ತು ಜಾಗತಿಕ ನಾಯಕತ್ವವನ್ನು ಮುನ್ನಡೆಸಲಿ. ಒಟ್ಟಾಗಿ, ಪ್ರತಿಯೊಬ್ಬ ಭಾರತೀಯ ಕ್ರಿಯೇಟರ್ ಜಾಗತಿಕ ಕಥೆಗಾರನಾಗುವುದನ್ನು ಮತ್ತು ನಾಳೆಯನ್ನು ರೂಪಿಸುವ ಕಥೆಗಳಿಗಾಗಿ ಜಗತ್ತು ಭಾರತದತ್ತ ನೋಡುವುದನ್ನು ಖಚಿತಪಡಿಸಿಕೊಳ್ಳೋಣ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Contributor - ಅಶ್ವಿನಿ ವೈಷ್ಣವ್

contributor

ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವರು

Similar News