ಜೇನುಕುರುಬರ ಸೋಮಣ್ಣ ಮಾತಾಡುತ್ತಿದ್ದಾರೆ, ಕೇಳಿಸಿಕೊಳ್ಳೋಣ
ತಂದೆ ಕುನ್ನಯ್ಯನಿಗಿದ್ದ ಪಾರಂಪರಿಕ ಜ್ಞಾನವನ್ನು ಜತನದಿಂದ ಕಲಿಯುತ್ತಾ, ಕಾಡುಬದುಕಿನ ಎಲ್ಲಾ ಬಗೆಯ ತಿಳಿವು, ಅರಿವುಗಳನ್ನು ಪಡೆಯುತ್ತಲೇ ಬಾಲ್ಯದಿಂದಲೂ ಪಾರಂಪರಿಕ ಜ್ಞಾನದ ಕಣಜವಾದವರು ಸೋಮಣ್ಣ. ಬಡತನದ ಕಾರಣಕ್ಕೆ ಸ್ಥಳೀಯ ಜಮೀನ್ದಾರರಲ್ಲಿ ಜೀತಕ್ಕಿದ್ದ ಸೋಮಣ್ಣ 1976ರಲ್ಲಿ ಜೀತಕಾರ್ಮಿಕ ವ್ಯವಸ್ಥೆ (ನಿಷೇಧ) ಕಾಯ್ದೆ ಜಾರಿಗೆ ಬಂದಾಗ ಇದರಿಂದ ಮುಕ್ತಿ ಪಡೆದರು. ಆಗ ಸೋಮಣ್ಣಗೆ 19 ವರ್ಷ. ಸೋಮಣ್ಣನಿಗೆ ಸಿಕ್ಕ ಈ ಬಗೆಯ ವೈಯಕ್ತಿಕ ಮುಕ್ತಿಯು ಸಮುದಾಯದ ಮುಕ್ತಿಯೆಡೆಗೆ ಸೆಳೆಯಿತು. ಹೀಗಾಗಿ ತನ್ನ ಒಡನಾಡಿ ಬುಡಕಟ್ಟು ಸಮುದಾಯದ ಅಸಂಖ್ಯಾತ ಜನರ ಸಂಕಷ್ಟಗಳಿಗೆ ದನಿಯಾಗುತ್ತಾರೆ.
‘‘ನಾವು ವಾಸ ಮಾಡೋ ಕಡೆ ಒಂದ್ ಜಮ್ಮ ಇರ್ತಿತ್ತು, ಸತ್ತ ಹಿರಿಯರ ಆತ್ಮಗಳು ಅಲ್ಲಿರ್ತಿತ್ತು. ಕಾಡಲ್ಲಿ ಏನೇ ಸಂಗ್ರಹ ಮಾಡಾಕ ಹೋದರ ಸತ್ತವರು ಇಲ್ಲಿ ಇನ್ನು ವಾಸ ಮಾಡತಾರ ಅಂತಾ ನಂಬಿಕಿಯಿಂದ, ಅವ್ರನ್ನ ಪೂಜಿ ಮಾಡತಿದ್ವಿ, ಜತಿಗೆ ಗಂಧದ ಮರನ ಪೂಜಿಸಿ ‘ದೊಡ್ಡ ದೊಡ್ಡ ಮರ ಹತ್ತತೀವಿ, ಅಪ್ಪಿತಪ್ಪಿ ಏನಾದ್ರೂ ಆದ್ರ ಅದೆಲ್ಲಾ ನೀವಾ ನೋಡ್ ಕಾ ಬೇಕು, ಆನೆಗಳ ಬತ್ತಾವ, ಹುಲಿಗಳು ಬತ್ತಾವ ಅವೇನು ಮಾಡದಂಗ ನೀವು ನಮ್ಮನ್ನ ಕಾಯಬೇಕು’ ಅಂತ ಹಿರೇರ ಆತ್ಮಗಳಿಗೆ ಕೇಳಿಕೊಳ್ತಿದ್ವಿ.
ಸತ್ತ ಆತ್ಮಗಳು ಕನಸೊಳಗ ಬಂದು ಇಂತ ಕಡೆ ಹೋಗು ನಿಂಗೆ ಇಂಥದ್ದು ಸಿಗತಾತಿ ಅಂತ ಸೂಚನೆ ಕೊಡ್ತಾ ಇದ್ವು. ಅಂತ ಆತ್ಮಗಳ ಹೇಳಿದ್ದನ್ ನೆಪ್ ಇಟಕೊಂಡ್ ಬೆಳಗ್ಗ ನಾವ್ ಕಾಡಿಗೆ ಹೋಯ್ತಿದ್ವಿ. ಆಗ್ ನಾವು ಬದಕಿಗೆ ಏನು ಬೇಕೋ ಅದನ್ನ ಮಾತ್ರ ಸಂಗ್ರಹ ಮಾಡೋರು. ಸಣ್ಣ ಮೆಣಸಿನಕಾಯಿ, ನೂರಾರು ತರದ ಸೊಪ್ಪನ್ನು ಸಂಗ್ರಹಿಸ್ತಿದ್ವಿ. ಬೆಂಡ ಮರ ಅಂತ ಇರ್ತಾತಿ, ಇದರ ನಾರು ಹಚ್ಚಕಂಡ್ ಸ್ನಾನ ಮಾಡಿದ್ರ, ಅರವತ್ತ ಎಪ್ಪತ್ತ ವರ್ಷನಾದ್ರೂ ಕೂದಲು ಬೆಳ್ಳಗ ಆಗಲ್ಲ. ಕಣ್ಣ ದೃಷ್ಟಿನೂ ಮಂಜಾಗಲ್ಲ. ಕೆಲವು ಮರಗಳವ, ಮತ್ತಿ ಮರ ಅಂತಾದ. ಆ ಮರದಲ್ಲಿ ನೀರು ಕುಡದರ ಹೊಟ್ಟೆಯೊಳಗಿನ್ ಕಲ್ಲುಕಸಾನ ಕಿಲೀನ್ ಮಾಡತದ. ಈಗ ಇಂಥವನ್ನೆಲ್ಲಾ ಸಂಗ್ರಹ ಮಾಡಾಕ ಬಿಡಾಕಿಲ್ಲ. ಹಿಂಗಾಗಿ ಹಿಂದಿನದನ್ನು ಬಿಡಕಾಗ್ದನಾ, ಇಲ್ಲಿನೂ ಹೊಂದಿಕೊಳ್ಳಕಾಗ್ದನಾ ನಮ್ಮ ಬದುಕು ಒದ್ದಾಟ. ಕಾಡಿನೊಳಗ ನಮಗ ಇದ್ದ ಖುಷಿ ಇಲ್ಲಿಲ್ಲ.
ಯಾರಾದ್ರೂ ಸತ್ತಾಗ, ಜಗತ್ತಲ್ಲಿ ಎಷ್ಟು ದೇವ್ರ ಪರಿಚಯ ಇದಾವೋ ಅಷ್ಟೂ ದೇವರನ್ನ ಕರೆದು, ನೋಡ್ರಿ ನಮ್ಮಾವರ್ರು ಸತ್ತೋಗಿಬಿಟ್ಟಾರ. ದೇವರುಗಳೇ ನೀವೆಲ್ಲಾ ನಿಂತ್ ಕಂಡು ಅವರನ್ನ ಕರಕಂಡ್ ಬರೋಕೆ ಸಹಕರಿಸ್ಬೇಕು ಅಂತ ಕೇಳತಾರ. ಸತ್ತವ್ರ ಆಯುಷ್ಯ ತೀರಿ ಸತ್ರೋ, ರೋಗ ಬಂದ್ ಸತ್ರೋ ಗೊತ್ತಿಲ್ಲ. ಆದ್ರ ಅವ್ರನ್ನ ವಾಪಸ್ ಕರೆಸಿ, ಅವನು ಏನೇನ್ ಆಸೆ ಪಡ್ತಾನೋ ಅದನ್ನ ಕೊಡಿಸಿ, ಅವನ ಕಡೆಯಿಂದ ಉಳಿದವರಿಗೆ ಬುದ್ಧಿವಾದ ಹೇಳಸಬೇಕು. ಇದು ಎಲ್ಲಾ ದೇವರಿಗೂ ಇರುವ ಜವಾಬ್ದಾರಿ. ಯಮಧರ್ಮನ ಪಟ್ನಕ್ಕ ಹೋಗೋವಾಗ ಏಳು ಜನ ಈರಮಾಸ್ತಿ ಅಕ್ಕತಂಗೇರು ಇರ್ತಾರೆ, ಅವರೆ ಸತ್ತವರನ್ನ ಕರಕೊಂಡೋಗಿ ಕಳಿಸಿ ಬರ್ತಾರ. ಈಗಲೂ ಇಂತಾ ನಂಬಿಕೆ ಆಚರಣೆ ರೂಪ್ದಾಗ ಉಳದಾದ. ರೋಗರುಜಿನಿ ಬಂದ್ರ ನಾವ್ ಈಗ್ಲೂವಾ ಸಡನ್ನಾಗಿ ಆಸ್ಪತ್ರೆಗೆ ಹೋಗಲ್ಲ. ಬುಂಡಾ ಕಡದು ಗಿಡಮೂಲಿಕೆಗಳನ್ನ ಕೊಟ್ಟು, ಇದಕ್ಕೂ ರೋಗ ವಾಸಿ ಆಗದಿದ್ದಾಗ ದೇವರನ್ನ ಕರದು ಏನು ಎತ್ತ ಅಂತ ತಿಳಕಂಡು ಆಮ್ಯಾಲೆ ಆಸ್ಪತ್ರೆಗೆ ನಾವ್ ಹೋಗೋದು.
ಒಂದ್ಸಲ ನಂಜತೆ ಬನ್ನಿ ಫಾರೆಸ್ಟ್ ಒಳಗ ಗುಡಿಸಲು ಕಟ್ಟಿಕೊಂಡ ಕೆಲವರು ಹಾಡಿಗಳಲ್ಲವ್ರ. ಅವ್ರನ್ನ ನೋಡಿದ್ರ ನಿಮಗ ಇಲ್ಯಾಕ ಗುಡಿಸಲು ಕಟ್ಟಿಕೊಂಡ್ ಅವ್ರ, ಹೊರಾಗ್ ಬಂದ್ ಬಿಡ್ಲಿ, ಹೊರಾಗ್ ಬಂದು ನಮ್ಮಂಗೆ ಮುಖ್ಯವಾಹಿನಿಗೆ ಬರ್ಲಿ ಅಂತ ಅನ್ನಿಸುತ್ತೆ. ಒಂದ್ ಸೀಜನ್ನದಾದ ಸುವರ‌್ಣ ಗಡ್ಡೆಗಳನ್ನ ಲೋಡ್ ಲೋಡ್ ಗಟ್ಲೆ ಕಿತ್ ಬಿಡ್ತಾರ. ಅಲ್ಲೇನ್ ಉತ್ತೀರಲ್ಲ ಮರ ಕಡದಿರಲ್ಲ. ಆಗ ಒಂದ್ ಕೇಜಿಗ ಮುವತ್ತರಿಂದ ನಲವತ್ತು ರೂಪಾಯಿಗ ಮಾರತಾರ. ಒಂದ್ ಕೇಜಿ ಅವರಕಾಯಿ ಮೂವತ್ ನಲವತ್ ರೂಪಾಯಿಗ ಮಾರತಾರ. ಚೊಟ್ಟು (ಹಲಸಂದೆ ತರ ದೊಡ್ಡ ಗಾತ್ರದ್ದು) ಅಂತ ಬೆಳಿತದ ಇದೂ ಒಂದ್ ಕೇಜಿಗೆ ಐವತ್ತರಿಂದ ಅರವತ್ತಕ್ಕ ಮಾರತಾರ. ಇದನ್ನ ತಿಂದ್ರ ಯಾವ್ ರೋಗನೂ ಬರಾಕಿಲ್ಲ. ಇಂಗೆ ವರ್ಷಪೂರ್ತಿ ಜೀವನಕ್ಕ ಬೇಕಾದದ್ದು ಸಿಗ್ತದ. ಇದಕ್ಕ ಹೊಂದಿಕೊಂಡವರನ್ನ ಹೊರಾಕ್ ಕರಕಂಡ್ ಬಂದ್ರ ಮೀನನ್ನು ನೀರಿನಿಂದ ಹೊರಾಗ್ ಹಾಕಿದಂಗ್ ಆಗ್ತಾತಿ. ಒದ್ದಾಡಿ ಸಾಯೋಕಾಗ್ದೆ ಬದಕ್ ಬೇಕು.
ಆದ್ರೂ ಏನೇನೋ ಆಸೆ ತೋರ್ಸಿ ಹಾಡಿನಲ್ಲಿರೋರ‌್ನ ಸರಕಾರ ಫಾರೆಸ್ಟ್‌ನಿಂದ ಹೊರಾಗ್ ಕರಕಂಡ್ ಬರತಾರ. ಇಂತದ್ದಕ್ಕೆ ನಮ್ ಜನರನ್ನೆ ಮಧ್ಯವರ್ತಿಗಳ ಹಾಗೆ ಬಳಸ್ತಾರ. ಅವ್ರ ಹಾಡಿಯೊಳಗ ಒಂದಷ್ಟ್ ದಿವ್ಸ ಇದ್ದು ನೋಡರಿ ನಾವ್ ಹೊರಾಗ್ ಹೋಗಿ ಚೆನ್ನಾಗೈದಿವಿ. ಟಿವಿ ತಕ್ಕಂಡಿವಿ, ಒಳ್ಳೊಳ್ಳೆ ಬಟ್ಟಿ ಅಕ್ಕಂಡೀವಿ, ನೀವ್ ಇಲ್ಲಿದ್ದು ಏನ್ ಮಾಡತೀರಿ ನಮ್ಮಂಗ್ ಬಂದ್ ಬಿಡ್ರಿ ಅಂತ ಮನ ಒಲಿಸ್ತಾರ. ಹಿಂಗೆ ಒಂದ್ ಕುಟುಂಬಾನ ಮನ ವಲ್ಸಿ ಹೊರಾಗ ಕರಕಂಡ್ ಬಂದ್ರ ಹತ್ತು ಸಾವ್ರ ಕೋಡತೀವಿ ಅಂತ ಹೇಳಿರ್ತಿದ್ರು. ಕಾಕನಕೋಟೆ ಕಾಡಲ್ಲಿ ನಮ್ಮವರನ್ನ ಹಿಂಗಾ ಹೊರಾಗ ಕರಕಂಡು ಬಂದ್ರು, ಹೀಗೆ ಬಂದವರು ಅಂತರ್ ಪಿಶಾಚಿಗಳ ತರ ಆಗ್ಯಾರ.
ಈಗಿನ್ ಅರಣ್ಯ ಕಾಯ್ದೆಗಳು ಹಾಡಿಜನ್ರಿಗೆ ಹಿಂಸೆ ಕೊಡ್ತದೆ. ಹಾಡಿನಲ್ಲಿರೋರು ಅವರು ಮನಿ ಕಟ್ಟಿಕೊಂಡ ಜಾಗ (ಇಪ್ಪತ್ತಡಿ ಮುವತ್ತಡಿ ಜಾಗ) ಎಷ್ಟು ಇರತ್ತೋ ಅಷ್ಟರಲ್ಲೇ ಇರಬೇಕು. ಮಕ್ಳು ಮರಿ ಹೆಚ್ಚಾದ್ರೂ ಅಂತ ಜಾಗನ ಹಿಗ್ಗಿಸಂಗಿಲ್ಲ. ಅಷ್ಟಕ್ಕ ಮಾತ್ರ ಹಕ್ಕುಪತ್ರ ಕೊಡತಾರ. ಆ ಜಾಗ ಇಬ್ರನ್ನು ಊಳುವಷ್ಟು ಮಾತ್ರ ಇರತದ. ಹಿಂಗ್ ಮಾಡಿ ಅವರನ್ನು ಉಸಿರುಕಟ್ಟಿಸಿ ಅವರಾಗೇ ಕಾಡಿನೊಳಗಿಂದ ಹೊರಾಗ್ ಹೋಗೋಹಂಗ್ ಮಾಡ್ತಾರ. ಅರಣ್ಯ ಹಕ್ಕು ನೋಡಾಕ ಚೆನ್ನಾಗ್ ಐತೆ. ಆದ್ರೆ ಅದ್ರಲ್ಲೂ ಮೋಸ ಆಗುತ್ತೆ.
ಮೊದ್ಲೆಲ್ಲಾ ಕಾಡು ವರ್ಷ ವರ್ಷ ಒಂದ್ ತರಗನ ಮಟ್ಟಕ್ಕ ಬೇಯತಿತ್ತು (ಸುಡತ್ತಿತ್ತು). ಹಿಂಗ್ ಬೆಂದ್ರ ಕಾಡು ಆರೋಗ್ಯವಾಗಿ ಇರ‌್ತದೆ, ಕೆಲವು ಬೀಜಗಳು ಕಾಡಿನ ಶಾಖ ತಗಂಡ್ರ ಹುಟ್ತದೆ, ಕೆಲವು ಹುಟ್ಟಲ್ಲ. ಈಗಿನಂಗೆ ಅಗಾಧವಾಗಿ ಬೆಳಸಿ ಬೆಂಕಿ ಬಿದ್ರೆ ಕಾಡೆಲ್ಲಾ ಸೊಟ್ಟೋಗ್ತದ. ಆದ್ರ ವರ್ಷ ವರ್ಷ ತರಗನ ಮಟ್ಟಕ್ಕ ಬೆಂದ್ರ ಕಾಡು ಸಮತಟ್ಟಾಗಿರ‌್ತದ. ಆಗ ಕಾಡು ಸುಡಲ್ಲ, ಬದ್ಲಾಗಿ ಮರಗಳು ಶಾಖ ತಕ್ಕಾತಾವ. ತರಗಿನ ಮಟ್ಟಕ್ಕ ಅಂದ್ರ ಪ್ರತೀ ವರ್ಷ ಮರದಿಂದ ಒಣಗಿದ ಎಲೆಗಳೆಲ್ಲಾ ಉದುರಿ ನೆಲದಿಂದ ಒಂದ್‌ಡಿಯಷ್ಟು ಬಿದ್ದಿರ‌್ತದ. ಇಂತ ಎಲೆಗಳಿಗೆ ಬೆಂಕಿ ಹಾಕಿ ಕಾಡನ್ನ ಬೇಯಿಸಬೇಕು. ಕೆಲವು ಹುಳಗಳು ಮರಕ್ಕ, ಪ್ರಾಣಿಗಳಿಗೆ ಕಾಟ ಕೊಡತಾವ, ಡಿಸೆಂಬರ್ ಹೊತ್ತಿಗೆ ಕಾಡಲ್ಲಿ ಒಂಥರ ಉಣ್ಣೆಗಳು ಬರ್ತಾವ. ಅವು ಎಲ್ಲಿ ಇರ್ತಾವೋ ಅದರ ಬಣ್ಣಾನೆ ತಾಳತಾವೆ. ಮನುಷ್ಯನಿಗೆ ಹತ್ತಿದ್ರೆ ಮನಷ್ಯನ ಬಣ್ಣ, ಆನೆಗೆ ಹತ್ತಿದ್ರೆ ಆನೆ ಬಣ್ಣ ತಾಳತಾವ. ಇಂಥ ಉಣ್ಣೆಗಳು ಪ್ರಾಣಿಗಳನ್ನು ಮೆತ್ತಿಕೊಂಡ್ ರಕ್ತ ಹೀರತಾವ. ಹೀಗೆ ವರ್ಷ ವರ್ಷ ಕಾಡು ಬೇಯ್ತಾ ಇದ್ರೆ ಇಂಥ ಉಣ್ಣೆಗಳು ಸಾಯ್ತಾವ. ಆಗ ಪ್ರಾಣಿಗಳು ಈ ಹಿಂಸೆಯಿಂದ ತಪ್ಪಿಸಿಕೊಳ್ತಾವ.
ಈಗ ಕಾಡಿನ ಪ್ರಾಣಿಗಳು ನಗರದ ಕಡೀಗೆ ಯಾಕ್ ಬರ್ತಾವ ಅಂದ್ರ ಅದಕ್ಕೂ ತರಗಿನ್ ಮಟ್ಟ ಕಾಡು ಬೇಯದೇ ಇರೋದೆ ಕಾರಣ. ಕಾಡು ಬೆಂದ್ರ ತರಾವರಿ ಬೇರೆ ಬೇರೆ ಹುಲ್ಲುಗಳು ಹುಟ್ಟುತ್ತ. ಈ ತರಾವರಿ ಹುಲ್ಲು ಒಂದೊಂದ್ ರುಚಿ ಇರುತ್ತ. ಒಂದ್ ಹುಲ್ಲು ಕಾರ ಇರುತ್ತ, ಒಂದ್ ಹುಲ್ಲು ಹುಳಿ ಇರುತ್ತ. ಒಂದ್ ಹುಲ್ಲು ಕಬ್ಬಿನ ತರ ಸೀ ಇರತ್ತದ. ಹಿಂಗಾಗಿ ಕಾಡು ಬೆಂದ್ರ ಈ ತರ ಬೇರೆ ಬೇರೆ ರುಚಿಯ ಹುಲ್ಲುಗಳು ಹುಟ್ಟಿಕಾತಾವ. ಆಗ ಪ್ರಾಣಿಗಳು ದಿನಾಲು ಬೇರೆ ಬೇರೆ ರುಚಿಯ ಹುಲ್ಲನ್ನ ತಿನ್ತಾವ. ಅವಕ್ಕೂ ದಿನಾಲು ರುಚಿ ಚೇಂಜ್ ಆಗತಾದ. ಒಂದ್ ಪ್ರಾಣಿ ಒಮ್ಮೆ ಒಂದು ತರದ ಹುಲ್ಲು ತಿಂದ್ರ ಮತ್ತೊಂದ್ ದಿನ ಆ ಹುಲ್ಲನ್ನ ತಿನ್ನಲ್ಲ. ಬೇರೆತರದ್ದನ್ನು ತಿನ್‌ತಾವೆ. ಮನ್ಸರು ಒಂದಿನ ಇಡ್ಲಿ, ಒಂದಿನ ಉಪ್ಪಿಟ್ಟು ಅಂತ ಬ್ಯಾರೆ ಬ್ಯಾರೆ ತಿಂದಂಗೆ. ಕಾಡು ಬೇಯದೆ ಇದ್ರ ಒಂದೇ ತರದ ಹುಲ್ಲು ಹುಟ್ಟಿಬಿಡ್ತಾದ. ಆಗ ಒಂದೇ ತರನಾದ ಹುಲ್ಲು ತಿಂದೂ ತಿಂದೂ ಬೇಸರ ಬಂದು ಈ ಪ್ರಾಣಿಗಳು ಕಾಡು ಬಿಟ್ಟು ಊರಿನ್ ಕಡೀಗೆ ಬರ್ತಾವ’’.
ಹೀಗೆ ಹೆಗ್ಗಡದೇವನಕೋಟೆ ಕಸಬಾ ಹೋಬಳಿ ಸಮೀಪದ ಮೊತ್ತಹಾಡಿಯ ಜೇನು ಕುರುಬರ ಸೋಮಣ್ಣ ಮಾತನಾಡುತ್ತಾ ಹೋಗುವುದನ್ನು ಸುಮ್ಮನೆ ಕುಳಿತು ಕೇಳಬೇಕು. ಕಾಡೇ ಸೋಮಣ್ಣನ ದನಿ ಮೂಲಕ ಪಿಸುನುಡಿದಂತಾಗುತ್ತದೆ. ಬುಡಕಟ್ಟುಗಳ ನೆಲದ ಚರಿತೆ ಪೊರೆ ಪೊರೆಯಾಗಿ ಬಿಚ್ಚಿಕೊಳ್ಳುತ್ತದೆ. ತಂದೆ ಕುನ್ನಯ್ಯನಿಗಿದ್ದ ಪಾರಂಪರಿಕ ಜ್ಞಾನವನ್ನು ಜತನದಿಂದ ಕಲಿಯುತ್ತಾ, ಕಾಡುಬದುಕಿನ ಎಲ್ಲಾ ಬಗೆಯ ತಿಳಿವು, ಅರಿವುಗಳನ್ನು ಪಡೆಯುತ್ತಲೇ ಬಾಲ್ಯದಿಂದಲೂ ಪಾರಂಪರಿಕ ಜ್ಞಾನದ ಕಣಜವಾದವರು ಸೋಮಣ್ಣ. ಬಡತನದ ಕಾರಣಕ್ಕೆ ಸ್ಥಳೀಯ ಜಮೀನ್ದಾರರಲ್ಲಿ ಜೀತಕ್ಕಿದ್ದ ಸೋಮಣ್ಣ 1976ರಲ್ಲಿ ಜೀತಕಾರ್ಮಿಕ ವ್ಯವಸ್ಥೆ (ನಿಷೇಧ) ಕಾಯ್ದೆ ಜಾರಿಗೆ ಬಂದಾಗ ಇದರಿಂದ ಮುಕ್ತಿ ಪಡೆದರು. ಆಗ ಸೋಮಣ್ಣಗೆ 19 ವರ್ಷ. ಸೋಮಣ್ಣನಿಗೆ ಸಿಕ್ಕ ಈ ಬಗೆಯ ವೈಯಕ್ತಿಕ ಮುಕ್ತಿಯು ಸಮುದಾಯದ ಮುಕ್ತಿಯೆಡೆಗೆ ಸೆಳೆಯಿತು. ಹೀಗಾಗಿ ತನ್ನ ಒಡನಾಡಿ ಬುಡಕಟ್ಟು ಸಮುದಾಯದ ಅಸಂಖ್ಯಾತ ಜನರ ಸಂಕಷ್ಟಗಳಿಗೆ ದನಿಯಾಗುತ್ತಾರೆ.
1972ರ ವನ್ಯಜೀವಿ ಸಂರಕ್ಷಣಾ ಕಾಯ್ದೆ ಜಾರಿಗೆ ಬಂದಾಗ, ತಮ್ಮ ಸುತ್ತಮುತ್ತಲಿನ ನೂರಾರು ಬುಡಕಟ್ಟು ಕಾಲನಿಗಳು ಸ್ಥಳಾಂತರಗೊಂಡು ಅನಾಥ ಪ್ರಜ್ಞೆಯಲ್ಲಿ ಬದುಕಿದ್ದನ್ನೂ, 1974ರಲ್ಲಿ ಕಬಿನಿ ಅಣೆಕಟ್ಟು ನಿರ್ಮಾಣ ಆರಂಭವಾದಾಗ, ದೊಡ್ಡ ಪ್ರಮಾಣದಲ್ಲಿ ಅರಣ್ಯಭೂಮಿ ನಾಶವಾದದ್ದನ್ನೂ ಸೋಮಣ್ಣ ಸ್ವತಃ ನೋಡಿದ್ದರು. ಇದರಿಂದ ಕೇವಲ ನೈಸರ್ಗಿಕ ಅರಣ್ಯ ಮಾತ್ರ ನಾಶವಾಗುವುದಲ್ಲ; ಬದಲಾಗಿ ಬುಡಕಟ್ಟು ಜನರ ಜೀವನ, ಸಂಸ್ಕೃತಿ ಹಾಗೂ ಜ್ಞಾನವೂ ನಾಶವಾಗುತ್ತದೆ ಎನ್ನುವುದನ್ನು ತನ್ನ ಸಮುದಾಯಕ್ಕೆ ಸೋಮಣ್ಣ ಮನವರಿಕೆ ಮಾಡಿಕೊಡತೊಡಗಿದರು.
ಇಂತಹ ಹಾದಿಯಲ್ಲಿ ಸೋಮಣ್ಣನಿಗೆ ತನ್ನವರಿಗೆ ಭೂಮಿ ಸಿಕ್ಕರೆ ಇನ್ನೊಬ್ಬರ ಆಶ್ರಯವಿಲ್ಲದೆ ಬದುಕುತ್ತಾರೆ ಎಂಬ ಕನಸು ಚಿಗುರೊಡೆಯಿತು. ಈ ಕನಸಿನ ಜಾಡುಹಿಡಿದು ಕಳೆದ ಮೂರ್ನಾಲ್ಕು ದಶಕಗಳಿಂದ ಸೋಮಣ್ಣ ಭೂರಹಿತ ಆದಿವಾಸಿಗಳನ್ನು ಒಗ್ಗೂಡಿಸಿದ್ದಾರೆ. ಅಂತೆಯೇ ಸ್ಥಳೀಯ ಚಳವಳಿಗಳ ಸಂಗಾತಿಗಳ ಜೊತೆಗೂಡಿ ಕೂಡುಹೋರಾಟ ಕಟ್ಟಿದ್ದಾರೆ. ಇದರ ಫಲವಾಗಿ ಕಟ್ಟಿದ ರಾಜ್ಯ ಮೂಲನಿವಾಸಿ ವೇದಿಕೆಯ ಅಧ್ಯಕ್ಷನಾಗಿ ಜನಪರ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾರೆ. ಇಂತಹ ನಿರಂತರ ಸಾಂಘಿಕ ಪ್ರಯತ್ನದಿಂದಾಗಿ ಆದಿವಾಸಿಗಳಿಗೆ ಸರಿಸುಮಾರು ಆರು ಸಾವಿರ ಎಕರೆ ಕೃಷಿ ಭೂಮಿ ಸಿಗುವಂತೆ ಮಾಡಿದ್ದಾರೆ. ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ನಾಗರಹೊಳೆ ಮತ್ತು ಕಾಕನಕೋಟೆ ಅರಣ್ಯ ಪ್ರದೇಶದಿಂದ ಒಕ್ಕಲೆದ್ದ ಆದಿವಾಸಿಗಳನ್ನು ಸೋಮಣ್ಣ ಸಂಘಟಿಸಿ, ಪುನರ್ವಸತಿಗಾಗಿ ಅನೇಕ ಚಳವಳಿಗಳನ್ನು ರೂಪಿಸಿದ್ದಾರೆ. ಹೀಗಾಗಿ ಆದಿವಾಸಿಗಳು ಆತಂಕಕ್ಕೆ ಒಳಗಾದಾಗಲೆಲ್ಲಾ, ಅವರುಗಳು ಎದೆಗುಂದಿ ತತ್ತರಿಸಿದಾಗಲೆಲ್ಲಾ ಸೋಮಣ್ಣ ಆದಿವಾಸಿಗಳ ಜತೆಗಾರನಾಗಿ ಸದಾ ಶಕ್ತಿ ತುಂಬಿದ್ದಾರೆ.
ನಾಗರಹೊಳೆ ದಟ್ಟ ಕಾಡಿನ ಮಧ್ಯೆ ಕಾರ್ಪೊರೇಟ್ ಕುಳಗಳು ಕಟ್ಟಲು ಯೋಜಿಸಿದ್ದ ತಾಜ್ ಹೋಟೆಲ್ ಕಟ್ಟದಂತೆ ತಡೆದ ಹೋರಾಟದಲ್ಲಿ ಮುಂದಾಳಾಗಿದ್ದರು. ನರ್ಮದಾ ಬಚಾವ್ ಆಂದೋಲನದಲ್ಲಿ ಮೇಧಾ ಪಾಟ್ಕರ್ ಜತೆ ಹೆಜ್ಜೆ ಹಾಕಿದ್ದರು. 1991 ರಲ್ಲಿ ಪಿಲಿಪ್ಪೀನ್ಸ್ ದೇಶದಲ್ಲಿ ನಡೆದ ಆದಿವಾಸಿಗಳ ಮೇಳದಲ್ಲೂ ಸೋಮಣ್ಣ ಮೇಲಿನಂತೆಯೇ ಮಾತನಾಡಿದ್ದರು. 2024ರಲ್ಲಿ ಕೇಂದ್ರ ಸರಕಾರ ಪದ್ಮಶ್ರೀ ಪ್ರಶಸ್ತ್ನಿ, ಕರ್ನಾಟಕ ಸರಕಾರ 2023 ರಲ್ಲಿ ‘ವಾಲ್ಮೀಕಿ ಶ್ರೀ’ ಪ್ರಶಸ್ತಿ ನೀಡಿದ್ದರೂ, ‘‘ನಮ್ಮ ಕಾಡು ನಮಗೆ ಬಿಟ್ಟುಬಿಟ್ಟರ ನಾವು ನೆಮ್ಮದಿಯಾಗಿರ್ತೀವಿ ಯಾವ ಪ್ರಶಸ್ತಿಯೂ ಬೇಡ’’ ಅನ್ನುವುದೇ ಸೋಮಣ್ಣನ ಒಳದನಿಯಾಗಿದೆ. ಕಳೆದ ಜನವರಿಯಲ್ಲಿ ತೀರಿಹೋದ ಮಡದಿ ರತ್ನಮ್ಮನ ಅಗಲಿಕೆಯ ನೋವಿನಿಂದ ಇನ್ನೂ ಸೋಮಣ್ಣ ಹೊರಬಂದಿಲ್ಲ. ಸದ್ಯಕ್ಕೆ ಮೊತ್ತಹಾಡಿಯಲ್ಲಿ ಹಿರಿಮಗನ ಬಳಿಯೂ, ಎಚ್.ಡಿ. ಕೋಟೆಯ ಮಗಳ ಮನೆಯಲ್ಲಿಯೂ ಓಡಾಡಿಕೊಂಡಿರುವ ಸೋಮಣ್ಣ ‘‘ಕಾಡಿನ ಜೇನಿನ ರುಚಿ ಗೊತ್ತು, ಗೆಣಸಿನ ರುಚಿ ಗೊತ್ತು, ಪದ್ಮಶ್ರೀ ಪ್ರಶಸ್ತಿಯ ರುಚಿ ಗೊತ್ತಿಲ್ಲ’’ ಎಂದು ಮುಗ್ಧವಾಗಿ ನಗುತ್ತಾರೆ.