ಮೂಲ ಸೌಕರ್ಯಗಳಿಲ್ಲದೆ ನರಳುತ್ತಿದೆ ಜಾಮಿಯಾ ಮಸ್ಜಿದ್

Update: 2024-11-18 06:36 GMT

ಕಲಬುರಗಿ: ಐತಿಹಾಸಿಕ ಕಟ್ಟಡಗಳು ನಮಗೆ ಹಿಂದಿನ ಇತಿಹಾಸಗಳನ್ನು ನೆನಪಿಸುತ್ತವೆ. ಆದರೆ ಅವುಗಳನ್ನೇ ಇಂದಿನ ದಿನಗಳಲ್ಲಿ ಅಭಿವೃದ್ಧಿಗೊಳಿಸದೇ ಇದ್ದರೆ ಅವುಗಳ ಬಗ್ಗೆ ಗೊತ್ತಾಗುವುದು ವಿರಳ. ಅದರ ಸಾಲಿಗೆ ಕಲಬುರಗಿಯ ಹಲವು ಐತಿಹಾಸಿಕ ಕಟ್ಟಡಗಳು ಸೇರುತ್ತವೆ.

ಕಲಬುರಗಿಯಲ್ಲಿ ಅನೇಕ ಪ್ರೇಕ್ಷಣಿಯ ಸ್ಥಳಗಳು ಅಭಿವೃದ್ಧಿ ಕಾಣದೇ ಮುಚ್ಚಿ ಹೋಗುತ್ತಿವೆ. ಅದರಲ್ಲಿ ಕಲಬುರಗಿ ನಗರದ ಹೃದಯ ಭಾಗದಲ್ಲಿರುವ ಬಹಮನಿ ಕೋಟೆಯು ಸಹ ಒಂದು. ಬಹಮನಿ ಸಾಮ್ರಾಜ್ಯದ 1,347 ರಿಂದ 1,424ರ ಅವಧಿಯಲ್ಲಿ

ನಿರ್ಮಾಣವಾಗಿದ್ದ ಕಲಬುರಗಿ ಕೋಟೆ ಇದೀಗ ಪ್ರವಾಸಿಗರನ್ನು ಸೆಳೆಯುವಲ್ಲಿ ವಿಫಲವಾಗುತ್ತಿದೆ. ಅದಕ್ಕೆ ಪ್ರಮುಖ ಕಾರಣವೇ ಅಲ್ಲಿನ ಮೂಲ ಸೌಕರ್ಯಗಳ ಕೊರತೆ ಎನ್ನುವುದು ಸ್ಪಷ್ಟವಾಗುತ್ತಿದೆ.

ಮೂಲ ಸೌಕರ್ಯಗಳೇ ಇಲ್ಲ: ಕೋಟೆ ಒಳಗಿನ ಪ್ರಮುಖ ಐತಿಹಾಸಿಕ ಕಟ್ಟಡವಾಗಿರುವ ಜಾಮಿಯಾ ಮಸ್ಜಿದ್ ಅನ್ನು ನೋಡಲು ದಿನನಿತ್ಯ ದೇಶ - ವಿದೇಶಗಳಿಂದ ನೂರಾರು ಪ್ರವಾಸಿಗರು ಆಗಮಿಸುತ್ತಲೇ ಇರುತ್ತಾರೆ. ಆದರೆ ಅವರಿಗೆ ಶುದ್ಧ ಕುಡಿಯುವ ನೀರು, ಶೌಚಾಲಯ ಸೇರಿದಂತೆ ಇತರ ಪ್ರಮುಖ ಸೌಕರ್ಯಗಳು ಇಲ್ಲದಂತಾಗಿದೆ. ಕುಡಿಯುವ ನೀರು, ಶೌಚಾಲಯ ಇಲ್ಲದೆ ಇರುವುದರಿಂದ ಪ್ರವಾಸಿಗರು ಮೂತ್ರ ಮಾಡಲು ಅಲ್ಲಿನ ಆವರಣವನ್ನೇ ಬಳಸುತ್ತಿದ್ದಾರೆ, ಅವರಿಗೆ ಸೂಕ್ತ ಸೌಲಭ್ಯಗಳನ್ನು ದೊರಕಿಸಿಕೊಡಬೇಕು ಎನ್ನುತ್ತಾರೆ ಅಲ್ಲಿನ ಸ್ಥಳೀಯರು.

ಅಂದ ಕಳೆದುಕೊಳ್ಳುತ್ತಿರುವ ಮಸ್ಜಿದ್: 1,367ರಲ್ಲಿ ಒಂದನೆಯ ಮುಹಮ್ಮದ್ ಷಾ ಅವಧಿಯಲ್ಲಿ ನಿರ್ಮಿಸಿದ್ದ ಜಾಮಿಯಾ ಮಸ್ಜಿದ್ ಅನ್ನು ವಾಸ್ತು ಶಿಲ್ಪಿರಫಿ ಖಾಜವಿನ್ ಅವರು ಕೆತ್ತಿದ್ದಾರೆ ಎಂದು ಇತಿಹಾಸದ ಮೂಲಗಳು ಹೇಳುತ್ತವೆ. ದಕ್ಷಿಣ ಭಾರತದ ಮೊದಲ ದೊಡ್ಡ ಮಸ್ಜಿದ್ ಎಂಬ ಹೆಗ್ಗಳಿಕೆಯೂ ಇದರದ್ದಾಗಿದೆ. 13ನೇ ಶತಮಾನದಿಂದಲೂ ಹೊಳೆಯುತ್ತಿದ್ದ ಈ ಕಟ್ಟಡ ಇದೀಗ ತನ್ನ ಬಣ್ಣವನ್ನೇ ಬದಲಿಸುತ್ತಿದೆ. ಮಳೆಯಿಂದ ಸೋರುತ್ತಿರುವುದ್ದಲ್ಲದೆ, ಪ್ಲಾಸ್ಟರ್ ಸಹ ಕಳಚಿ ಬೀಳುತ್ತಿದೆ. ಸುತ್ತಮುತ್ತಲೂ ನವೀಕರಣ ಮಾಡದಿರುವುದರಿಂದ ಅದರ ಅಂದವನ್ನು ಕಳೆೆದುಕೊಳ್ಳುತ್ತಿದೆ.

ದೊಡ್ಡ ತೋಪು, ಆದರೆ ನೋಡಕ್ಕಾಗಲ್ಲ: ಮಧ್ಯಕಾಲೀನ ಭಾರತದಲ್ಲಿ ಮೊದಲು ತೋಪು ಬಳಸಿದ ಖ್ಯಾತಿ ಬಹಮನಿ ಸುಲ್ತಾನರಿಗೆ ಸಲ್ಲುತ್ತದೆ. ಕೋಟೆಯಲ್ಲಿ 26 ತೋಪುಗಳಿದ್ದು, ಕಾಣಿಸುವುದು ಮಾತ್ರ 17 ಗೇಟ್ ಮುಚ್ಚಿರುವುದರಿಂದ ಇದೀಗ ಆ ತೋಪುಗಳನ್ನು ಪ್ರವಾಸಿಗರಿಗೆ ನೋಡಲೂ ಆಗುತ್ತಿಲ್ಲ. ಹಾಗಾಗಿ ಪ್ರವಾಸಿಗರು ಅದರತ್ತ ಸುಳಿಯುತ್ತಿಲ್ಲ. 7.6 ಅಡಿ ಸುತ್ತಳತೆ, 2 ಅಡಿ ವ್ಯಾಸ ಹೊಂದಿರುವ ದೊಡ್ಡ ತೋಪು 17 ಟನ್ ತೂಕ ಹೊಂದಿದೆ. ಇದು ಗಿನ್ನಿಸ್ ದಾಖಲೆಯ ಪಟ್ಟಿಗೆ ಸೇರಿರುವುದು ಗಮನಾರ್ಹ.

ಶಿಥಿಲಗೊಳ್ಳುತ್ತಿರುವ ಕೋಟೆ; ಆವರಣದಲ್ಲೇ ಮದ್ಯಪಾನ!

ಕೋಟೆಯ ಮುಖ್ಯದ್ವಾರ, ತಡೆಗೋಡೆಗಳು, ಒಳಗಿನ ಕಟ್ಟಡಗಳು ಕ್ರಮೇಣ ನೆಲಕಚ್ಚುತ್ತಿವೆ. ಮಳೆಯಿಂದಾಗಿ ಮಸ್ಜಿದ್ ಸೋರುತ್ತಿದ್ದು, ಕಮಾನ್‌ಗಳು ಉರುಳಿ ಬಿದ್ದಿವೆ. ಇದರಿಂದ ಕೋಟೆ ತನ್ನ ಸೌಂದರ್ಯ ಕಳೆದುಕೊಳ್ಳುತ್ತಿದೆ. ಸೂಕ್ತ ಭದ್ರತೆ ಇಲ್ಲದೆ ಇರುವುದರಿಂದ ಆವರಣದಲ್ಲೇ ಧೂಮಪಾನ, ಮದ್ಯಪಾನ ನಡೆಯುತ್ತಿರುವುದೂ ಬೆಳಕಿಗೆ ಬಂದಿದೆ.

ಪ್ರವಾಸೋದ್ಯಮ, ಪುರಾತತ್ವ ಇಲಾಖೆ ಸೇರಿದಂತೆ ಜಿಲ್ಲಾಡಳಿತ ನಿರ್ಲಕ್ಷ್ಯದಿಂದಲೇ ಕೋಟೆ ಅಧೋಗತಿಯತ್ತ ಸಾಗುತ್ತಿದೆ. ಐತಿಹಾಸಿಕ ಸ್ಥಳ ರಕ್ಷಣೆ ಮಾಡದಿದ್ದರೆ ಬರುವ ಕೆಲ ಪ್ರವಾಸಿಗರು ಇತ್ತ ಸುಳಿಯುವುದಿಲ್ಲ. ಆದ್ದರಿಂದ ಜನಪ್ರತಿನಿಧಿಗಳು, ಅಧಿಕಾರಿಗಳು ಕೂಡಿ ಇದರ ಅಭಿವೃದ್ಧಿಗೆ ಪಣ ತೊಡಬೇಕು ಎಂದು ಪ್ರವಾಸ ಪ್ರಿಯರು ಒತ್ತಾಯಿಸಿದ್ದಾರೆ.

ಕಲುಬುರಗಿ ಪಾಲಿಕೆಯಿಂದ ಕುಡಿಯುವ ನೀರಿನ ಘಟಕ ಸ್ಥಾಪಿಸಿದ್ದು, ಶೀಘ್ರವೇ ಅದನ್ನು ಬಳಕೆಗೆ ತರಲಾಗುತ್ತದೆ, ಇನ್ನುಳಿದ ಸೌಲಭ್ಯಗಳ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ನಿರ್ಣಯಿಸಲಾಗುವುದು.

-ಫೌಝಿಯಾ ತರನ್ನುಮ್, ಜಿಲ್ಲಾಧಿಕಾರಿ, ಕಲಬುರಗಿ

ಕುಡಿಯುವ ನೀರಿಲ್ಲ. ಶೌಚಾಲಯ ಇಲ್ಲವೇ ಇಲ್ಲ, ಕೋಟೆಯ ಸುತ್ತಮುತ್ತಲಿನ ಕೊಳಚೆ ನೀರು ಗಬ್ಬು ನಾರುತ್ತಿದೆ. ಅದನ್ನು ಶುದ್ಧಿಕರಿಸಬೇಕು, ಒಳಗೆ ಇತರ ಸೌಲಭ್ಯಗಳನ್ನು ಒದಗಿಸಿ ಕೊಡಬೇಕು.

-ವಿಶ್ವನಾಥ್ ಮಠಪತಿ, ಸ್ಥಳೀಯ ನಿವಾಸಿ



 


Writer - ವಾರ್ತಾಭಾರತಿ

contributor

Editor - jafar sadik

contributor

Byline - ದಸ್ತಗೀರ ನದಾಫ್ ಯಳಸಂಗಿ

contributor

Similar News