ಸಿಂಗಟಗೆರೆ: ಸುಸಜ್ಜಿತ ವಸತಿ ಶಾಲೆ ಕಟ್ಟಡಕ್ಕೆ ಉದ್ಘಾಟನೆ ಭಾಗ್ಯ ಮರೀಚಿಕೆ
ಚಿಕ್ಕಮಗಳೂರು, ನ.16: ಮೂಲಸೌಕರ್ಯಗಳೇ ಇಲ್ಲದ ವಸತಿ ಶಾಲೆಯೊಂದರ ಮಕ್ಕಳ ಉತ್ತಮ ಶಿಕ್ಷಣಕ್ಕಾಗಿ ರಾಜ್ಯ ಸರಕಾರ 25 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ವಸತಿ ಶಾಲೆಯ ಕಟ್ಟಡ ನಿರ್ಮಿಸಿ ವರ್ಷ ಕಳೆಯುತ್ತಿದ್ದರೂ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ವಸತಿ ಶಾಲೆಯ ಮಕ್ಕಳ ಪಾಲಿಗೆ ಸುಸಜ್ಜಿತ ವಸತಿ ನಿಲಯದ ಕಟ್ಟಡದಲ್ಲಿ ವ್ಯಾಸಂಗ ಮಾಡುವ ಭಾಗ್ಯ ಸಿಗದಂತಾಗಿದೆ.
ಜಿಲ್ಲೆಯ ಕಡೂರು ತಾಲೂಕಿನ ಸಿಂಗಟಗೆರೆ ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆ ವಿಶಾಲವಾದ ಆಟದ ಮೈದಾನ, ಸುಸಜ್ಜಿತವಾದ ಕಟ್ಟಡ ಹಾಗೂ ಕೊಠಡಿಗಳು, ನೀರಿನ ವ್ಯವಸ್ಥೆ, ಉತ್ತಮ ರಸ್ತೆ ಸೇರಿದಂತೆ ಸಕಲ ಸೌಲಭ್ಯಗಳನ್ನು ಹೊಂದಿದ್ದರೂ ಈ ವಸತಿ ಶಾಲೆಯಲ್ಲಿರುವ ಸುಮಾರು 250ಕ್ಕೂ ಹೆಚ್ಚು ಬಡವರ್ಗದ ಮಕ್ಕಳು ಮಾತ್ರ ಶೆಡ್‌ನಂತಹ ಇಕ್ಕಟ್ಟಾದ ಹಾಗೂ ಯಾವ ಮೂಲಭೂತ ಸೌಕರ್ಯಗಳೂ ಇಲ್ಲದ ಕಟ್ಟಡದಲ್ಲಿ ಪಾಠ ಕೇಳಬೇಕಾದ ಮತ್ತು ಅದೇ ಶೆಡ್‌ನಂತಹ ಕಟ್ಟಡದಲ್ಲಿ ವಾಸ ಮಾಡಬೇಕಾದ ನರಕಯಾತನೆಯ ಪರಿಸ್ಥಿತಿಯಲ್ಲಿದ್ದಾರೆ.
ಸಿಂಗಟಗೆರೆ ವಸತಿ ಶಾಲೆಯಲ್ಲಿ ಸದ್ಯ 6ರಿಂದ 10ನೇ ತರಗತಿಯ 250ಕ್ಕೂ ಹೆಚ್ಚು ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಕಡೂರು ತಾಲೂಕಿನ ವಿವಿಧ ಗ್ರಾಮಗಳ ಬಹುತೇಕ ಬಡ ವರ್ಗದ ಮಕ್ಕಳು ಉತ್ತಮ ಶಿಕ್ಷಣದ ಕನಸಿನೊಂದಿಗೆ ಈ ಶಾಲೆಗೆ ದಾಖಲಾಗಿದ್ದಾರೆ. ಶಾಲೆಯ ಪ್ರಾಂಶುಪಾಲರು, ಶಿಕ್ಷಕರಿಂದಾಗಿ ಮಕ್ಕಳಿಗೆ ಉತ್ತಮ ಶಿಕ್ಷಣವೇನೋ ಸಿಗುತ್ತಿದೆಯಾದರೂ ಅಧಿಕಾರಿಗಳು, ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಬಡ ಮಕ್ಕಳಿಗೆ ಶೆಡ್ ಮಾದರಿಯ ಬಾಡಿಗೆ ಕಟ್ಟಡದಲ್ಲಿ ಶಿಕ್ಷಣ ಹಾಗೂ ಉಳಿದುಕೊಳ್ಳಬೇಕಾದ ದುರ್ಗತಿ ಬಂದೊದಗಿದೆ ಎಂದು ಪೋಷಕರು ದೂರುತ್ತಿದ್ದಾರೆ.
ಗ್ರಾಮದ ತೋಟವೊಂದರ ಮಧ್ಯೆ ಇರುವ ಬಾಡಿಗೆ ಕಟ್ಟಡದಲ್ಲಿ ಅಂಬೇಡ್ಕರ್ ವಸತಿ ಶಾಲೆಯ ಎಲ್ಲ ಮಕ್ಕಳು ಇಕ್ಕಟ್ಟಾದ ಕೊಠಡಿಯಲ್ಲಿ ಹಗಲು ವೇಳೆ ಪಾಠ ಕೇಳುತ್ತಿದ್ದರೆ, ರಾತ್ರಿ ವೇಳೆ ಕೊಠಡಿಗಳಲ್ಲಿರುವ ಬೆಂಚ್‌ಗಳನ್ನೇ ಹಾಸಿಗೆ ಮಾಡಿಕೊಂಡು ನಿದ್ರಿಸಬೇಕಿದೆ. ಬೆಳಗಾಗುತ್ತಿದ್ದಂತೆ ಮತ್ತೆ ಬೆಂಚ್‌ಗಳನ್ನು ಪಾಠ ಕೇಳಲು ಜೋಡಿಸಿಕೊಳ್ಳಬೇಕಿದೆ. ಪಾಠ ಕಲಿಯುವ ಕೊಠಡಿಯಲ್ಲಿ ಮಕ್ಕಳ ಬ್ಯಾಗ್‌ಗಳು, ಬಟ್ಟೆಗಳನ್ನೂ ಇರಿಸಿಕೊಳ್ಳಬೇಕಿದ್ದು, ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶೌಚಾಲಯ, ನೀರು, ಕೊಠಡಿಗಳ ವ್ಯವಸ್ಥೆ ಈ ಶೆಡ್‌ನಲ್ಲಿಲ್ಲ. ಮಳೆಗಾಲದಲ್ಲಿ ಶೆಡ್‌ನ ಶೀಟುಗಳ ಮೇಲೆ ಮಳೆ ನೀರು ಬೀಳುವ ಸದ್ದಿನಿಂದಾಗಿ ಹಗಲು ವೇಳೆ ಪಾಠ ಕೇಳಲೂ ಆಗುತ್ತಿಲ್ಲ, ರಾತ್ರಿ ವೇಳೆ ಮಕ್ಕಳು ನೆಮ್ಮದಿಯಿಂದ ನಿದ್ರಿಸಲೂ ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. 8ವರ್ಷಗಳಿಂದ ಯಾವುದೇ ಮೂಲ ಸೌಕರ್ಯಗಳಿಲ್ಲದ ಕಟ್ಟಡದಲ್ಲಿ ವಸತಿ ಶಾಲೆ ನಡೆಯುತ್ತಿದ್ದು, ಶೆಡ್‌ನಂತಹ ಕಟ್ಟಡದಲ್ಲಿರುವ ಅಂಬೇಡ್ಕರ್ ವಸತಿ ಶಾಲೆಯ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಮರೀಚಿಕೆಯಾಗಿದ್ದರೂ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಇದಕ್ಕೂ ತಮಗೂ ಸಂಬಂಧವೇ ಇಲ್ಲ ಎಂಬಂತಹ ವರ್ತನೆ ತೋರುತ್ತಿದ್ದಾರೆಂದು ಮಕ್ಕಳ ಪೋಷಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ವಸತಿ ಶಾಲೆಯ ಈ ಸ್ಥಿತಿಯನ್ನು ಮನಗಂಡ ಸರಕಾರ ಗ್ರಾಮದಲ್ಲಿ ಸುಮಾರು 5ಎಕರೆ ಪ್ರದೇಶದಲ್ಲಿ 25ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ವಸತಿ ಶಾಲೆಯ ಕಟ್ಟಡ ನಿರ್ಮಿಸಿದ್ದು, ಎಲ್ಲ ಸೌಲಭ್ಯಗಳನ್ನು ಹೊಂದಿರುವ, ಮಕ್ಕಳ ಕಲಿಕೆಗೆ ಪೂರಕವಾಗಿರುವ ಈ ಕಟ್ಟಡ ನಿರ್ಮಿಸಿ ವರ್ಷ ಸಮೀಪಿಸುತ್ತಿದ್ದರೂ ಹಾಲಿ ಇರುವ ವಸತಿ ಶಾಲೆಯ ಕಟ್ಟಡದಿಂದ ಮಕ್ಕಳನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರ ಮಾಡಲು ನಿರ್ಲಕ್ಷ್ಯವಹಿಸಿದ್ದಾರೆ. ಕಟ್ಟಡದ ಉದ್ಘಾಟನಾ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವರೂ ಸೇರಿದಂತೆ ಸಂಬಂಧಿಸಿದ ಇಲಾಖೆ ಸಚಿವರ ದಿನಾಂಕ ಸಿಗುತ್ತಿಲ್ಲ ಎಂಬ ಕುಂಟು ನೆಪವೊಡ್ಡಿ ಅಧಿಕಾರಿಗಳು ಕಟ್ಟಡದ ಉದ್ಘಾಟನೆ ಹಾಗೂ ಮಕ್ಕಳ ಸ್ಥಳಾಂತರಕ್ಕೆ ಮೀನ ಮೇಷ ಎಣಿಸುತ್ತಿದ್ದಾರೆಂದು ಮಕ್ಕಳ ಪೋಷಕರು ದೂರುತ್ತಿದ್ದಾರೆ. ಅಲ್ಲದೇ ಶೆಡ್‌ನಂತಹ ವಸತಿ ಶಾಲೆಯ ಕಟ್ಟಡಕ್ಕೆ ಅಧಿಕಾರಿಗಳು ದುಬಾರಿ ಬಾಡಿಗೆ ನೀಡುತ್ತಿದ್ದು, ಹೊಸ ಕಟ್ಟಡ ನಿರ್ಮಾಣವಾಗಿದ್ದರೂ ಅಧಿಕಾರಿಗಳು ವಸತಿ ಶಾಲೆಯನ್ನು ಸ್ಥಳಾಂತರ ಮಾಡದೇ ಇನ್ನೂ ದುಬಾರಿ ಬಾಡಿಗೆಯ ಕಟ್ಟಡದಲ್ಲೇ ನಡೆಸುತ್ತಿರುವುದೇಕೆ? ಎಂಬ ಪ್ರಶ್ನೆ ಮಕ್ಕಳ ಪೋಷಕರದ್ದಾಗಿದೆ.
ಬಡ ಮಕ್ಕಳು ಮೂಲಸೌಕರ್ಯಗಳಿಲ್ಲ ಶೆಡ್‌ನಂತಹ ಕಟ್ಟಡದಲ್ಲಿ ನರಕಯಾತನೆ ಅನುಭವಿಸುತ್ತಲೇ ಶಿಕ್ಷಣ ಪಡೆಯುತ್ತಿದ್ದಾರೆ. ಇಂತಹ ಪರಿಸ್ಥಿತಿಯನ್ನು ಈ ಶಾಲೆಯ ಬಡ ಮಕ್ಕಳು ಇನ್ನೆಷ್ಟು ದಿನ ಅನುಭವಿಸಬೇಕೆಂದು ಮಕ್ಕಳ ಪೋಷಕರು ಆಕ್ರೋಶ ಹೊರಹಾಕುತ್ತಿದ್ದು, ಶೀಘ್ರ ಹೊಸ ಕಟ್ಟಡಕ್ಕೆ ಮಕ್ಕಳನ್ನು ಸ್ಥಳಾಂತರ ಮಾಡಬೇಕೆಂದು ಒತ್ತಾಯಿಸುತ್ತಿದ್ದಾರೆ.
ಸಿಂಗಟಗೆರೆ ಅಂಬೇಡ್ಕರ್ ವಸತಿ ಶಾಲೆ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದೆ. ಹಾಲಿ ಕಟ್ಟಡದಲ್ಲಿ ಮಕ್ಕಳ ಕಲಿಕೆಗೆ ಸ್ವಲ್ಪ ತೊಂದರೆ ಇದೆ. ಸುಸಜ್ಜಿತ ಹೊಸ ಕಟ್ಟಡವನ್ನು 25 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ವಸತಿ ಶಾಲೆಯನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರ ಮಾಡುವಂತೆ ಸಂಬಂಧಿಸಿದ ಇಲಾಖಾಧಿಕಾರಿಗಳು, ಜನಪ್ರತಿನಿಧಿಗಳಿಗೆ ಮನವಿ ಮಾಡಲಾಗಿದೆ. ಶೀಘ್ರ ಸ್ಥಳಾಂತರ ಮಾಡುವ ಭರವಸೆ ನೀಡಿದ್ದಾರೆ.
-ರಮೇಶ್, ಸಿಂಗಟಗೆರೆ ಅಂಬೇಡ್ಕರ್ ವಸತಿ ಶಾಲೆ ಪ್ರಾಂಶುಪಾಲ
ಸಿಂಗಟಗೆರೆ ವಸತಿ ನಿಲಯದ ಹಾಲಿ ಕಟ್ಟಡದಲ್ಲಿ ವ್ಯಾಸಂಗ ಮಾಡಲು ಕಷ್ಟವಾಗುತ್ತಿದೆ. ಮೂಲಭೂತ ಸೌಕರ್ಯಗಳು ಈ ಕಟ್ಟಡದಲ್ಲಿಲ್ಲ. ಪಾಠ ಕೇಳಲು, ರಾತ್ರಿ ನಿದ್ರೆ ಮಾಡಲೂ ಕಷ್ಟವಾಗುತ್ತಿದೆ. ಇಕ್ಕಟ್ಟಿನ ಕೊಠಡಿಗಳಲ್ಲಿ ಪಾಠ ಕೇಳಬೇಕು. ವಸತಿ ಶಾಲೆಯ ಹೊಸ ಕಟ್ಟಡ ನಿರ್ಮಾಣವಾಗಿದ್ದು, ನಮ್ಮನ್ನು ಅಲ್ಲಿಗೆ ಏಕೆ ಸ್ಥಳಾಂತರ ಮಾಡುತ್ತಿಲ್ಲ ಎಂಬುದು ಅರ್ಥವಾಗುತ್ತಿಲ್ಲ. ಉತ್ತಮ ಶಿಕ್ಷಣಕ್ಕಾಗಿ ಶೀಘ್ರ ಹೊಸ ಕಟ್ಟಡಕ್ಕೆ ನಮ್ಮನ್ನು ಸ್ಥಳಾಂತರ ಮಾಡಬೇಕು.
-ಭುವನ, ವಸತಿ ಶಾಲೆ ವಿದ್ಯಾರ್ಥಿ