ಕರಾವಳಿಯ ರೈತರಿಗೆ 'ಸಹ್ಯಾದ್ರಿ ಬ್ರಹ್ಮ ಭತ್ತʼದ ಬೀಜ ಪೂರೈಕೆ

Update: 2024-11-18 07:34 GMT

ಮಂಗಳೂರು: ದ.ಕ. ಜಿಲ್ಲೆ ಸಹಿತ ಕರಾವಳಿಯ ರೈತರು ಬೆಳೆಸುವ ಎಂಒ-4 ಭತ್ತದ ತಳಿಗೆ ಪರ್ಯಾಯವಾಗಿ ‘ಸಹ್ಯಾದ್ರಿ ಬ್ರಹ್ಮ ಭತ್ತ’ ವನ್ನು ಪರಿಚಯಿಸಲಾಗಿದ್ದು, ಮುಂದಿನ ವರ್ಷ ರೈತರಿಗೆ ಇದರ ಬೀಜ ಪೂರೈಕೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.

ದ.ಕ. ಜಿಲ್ಲೆಯಲ್ಲಿ ಜನಪ್ರಿಯವಾಗಿರುವ ಎಂಒ-4 ಕುಚಲಕ್ಕಿ ತಳಿಯು 1995ರಲ್ಲಿ ಬಿಡುಗಡೆಯಾಗಿತ್ತು. ಆದರೆ ಇದರಲ್ಲಿ ಇತ್ತೀಚೆಗೆ ಇಳುವರಿ ಕಡಿಮೆಯಾಗಿತ್ತು. ಅತ್ತ ಹೊಸ ತಳಿ ಬೇಕು ಎಂಬ ಬೇಡಿಕೆ ರೈತರದ್ದಾಗಿತ್ತು. ಇತ್ತ ಎಂಒ-4 ಬೀಜದ ಕೊರತೆಯಿಂದ ಕಳೆದ ಸಲವೇ ಹಲವರಿಗೆ ಈ ಭತ್ತದ ಬೀಜ ಸಿಕ್ಕಿರಲಿಲ್ಲ.

ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾನಿಲಯದ ಅಧೀನದಲ್ಲಿರುವ ಬ್ರಹ್ಮಾವರ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನೆ ಕೇಂದ್ರದಿಂದ 2021ರಲ್ಲಿ ಸಹ್ಯಾದ್ರಿ ಬ್ರಹ್ಮ ಎಂಬ ಭತ್ತದ ಹೊಸ ತಳಿಯನ್ನು ಸ್ಥಳೀಯ ತಜ್ಞರು ಬಿಡುಗಡೆ ಮಾಡಿದ್ದಾರೆ.

ಸಹ್ಯಾದ್ರಿ ಬ್ರಹ್ಮ ಕೆಂಪು ತಳಿಯನ್ನು ಬಿತ್ತನೆ ಮಾಡಿ 130-135 ದಿನಗಳಲ್ಲಿ ಕಟಾವ್ ಮಾಡಬಹುದಾಗಿದೆ. ಪ್ರತಿ ಹೆಕ್ಟೇರ್‌ಗೆ 50-55 ಕ್ವಿಂಟಾಲ್ ಭತ್ತದ ಬೆಳೆ ತೆಗೆಯಬಹುದು. ಎಂಒ-4 ಸುಮಾರು ಮೂರಡಿ ಎತ್ತರ ಬಂದರೆ, ಅದಕ್ಕಿಂತ ಸ್ವಲ್ಪ ಎತ್ತರ ಸಹ್ಯಾದ್ರಿ ಬ್ರಹ್ಮ ಬರುತ್ತದೆ. ಹುಲ್ಲಿನ ಇಳುವರಿ ಜಾಸ್ತಿ ಇದೆ. ಸುಮಾರು 100-110 ಸೆ.ಮೀ. ಬೆಳೆಯುತ್ತದೆ ಎಂದು ತಜ್ಞರು ಮಾಹಿತಿ ನೀಡಿದ್ದಾರೆ.

ಮಂಗಳೂರಿನ ಕೃಷಿ ವಿಜ್ಞಾನ ಕೇಂದ್ರವು 2023-24ನೇ ಸಾಲಿನಲ್ಲಿ ಬಂಟ್ವಾಳ ತಾಲೂಕಿನ ಕರೋಪಾಡಿಯಲ್ಲಿ ಜಾನ್ ಮೊಂತೇರೊ ಎಂಬವರ ಗದ್ದೆಯಲ್ಲಿ ಸಹ್ಯಾದ್ರಿ ಬ್ರಹ್ಮ ಹೊಸ ಭತ್ತದ ತಳಿ ಬೆಳೆಸಲಾಗಿತ್ತು. ಈ ಬಾರಿ 2024-25ನೇ ಸಾಲಿನಲ್ಲಿ ಕಿಲೆಂಜಾರು ಗ್ರಾಮದ ಮನೋಹರ ಶೆಟ್ಟಿ, ಕುಪ್ಪೆಪದವಿನ ಪ್ರತಿಭಾ ಹೆಗ್ಡೆ, ಅನಿಲ್ ಕುಮಾರ್ ಅಂಬೆಲೊಟ್ಟು, ಮೂಡುಬಿದಿರೆಯ ಧನಕೀರ್ತಿ ಬಲಿಪ, ತೆಂಕಬೆಳ್ಳೂರಿನ ಸಚೀಂದ್ರನಾಥ ರೈ ಸಹಿತ ಒಂಭತ್ತು ಕಡೆಗಳಲ್ಲಿ ಮತ್ತು ಕೃಷಿ ವಿಜ್ಞಾನ ಕೇಂದ್ರ ಸಹಿತ 10 ಕಡೆಗಳಲ್ಲಿ ಪ್ರಾಯೋಗಿಕವಾಗಿ ಮುಂಚೂಣಿ ಪ್ರಾತ್ಯಕ್ಷಿಕೆ ಬೆಳೆ ಬೆಳೆಸಲಾಗಿದ್ದು, ಪ್ರಗತಿಯಲ್ಲಿದೆ ಎಂದು ತಿಳಿದು ಬಂದಿದೆ.

ಮಂಗಳೂರಿನ ಕೃಷಿ ವಿಜ್ಞಾನ ಕೇಂದ್ರದ ಆವರಣದ ತಾಕಿನ ಒಂದು ಎಕರೆ ಪ್ರದೇಶದಲ್ಲಿ ಸಹ್ಯಾದ್ರಿ ಬ್ರಹ್ಮ ತಳಿ ಬೆಳೆಯಲಾಗುತ್ತಿದೆ. ಇದನ್ನು ಮಾದರಿ ಪ್ರಾತ್ಯಕ್ಷಿಕ ತಾಕು ಹಾಗೂ ಬೀಜೋತ್ಪಾದನೆ ತಾಕು ಎಂದು ವೈಜ್ಞಾನಿಕವಾಗಿ ನಿರ್ವಹಿಸಲಾಗುತ್ತಿದೆ. ರೈತರಿಗೆ 2025ರ ಮುಂಗಾರು ಹಂಗಾಮಿಗೆ ಈ ತಳಿಯ ಬೀಜ ಲಭ್ಯವಾಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಜುಲೈ 9ರಂದು ಸಹ್ಯಾದ್ರಿ ಬ್ರಹ್ಮ ಬೀಜವನ್ನು ಬಿತ್ತನೆ ಮಾಡಿದ್ದೆವು. ತೆನೆ ಬಿಡುವ ಸಂದರ್ಭ ಭಾರೀ ಮಳೆಯಿದ್ದುದರಿಂದ ಇಳುವರಿ ಸ್ವಲ್ಪ ಕಡಿಮೆಯಾಗಬಹುದು. ಉಳಿದಂತೆ ಬೆಳೆ ತುಂಬಾ ಚೆನ್ನಾಗಿದೆ. ಕೀಟ ಬಾಧೆಯೂ ಬಂದಿಲ್ಲ, ಕೀಟನಾಟಕ ಸ್ಪ್ರೇ ಕೂಡಾ ಮಾಡಿಲ್ಲ. ವಿಜ್ಞಾನಿಗಳು ಪರಿಶಿಲಿಸಿದ್ದಾರೆ.

-ಪ್ರತಿಭಾ ಹೆಗ್ಡೆ, ಕೃಷಿಕರು, ಕುಪ್ಪೆಪದವು.

ರೈತರ ಬೇಡಿಕೆಯಂತೆ ಕೃಷಿ ವಿಜ್ಞಾನ ಕೇಂದ್ರದಿಂದ ಹೊಸ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಕಳೆದ ವರ್ಷದಿಂದ ಸಹ್ಯಾದ್ರಿ ಬ್ರಹ್ಮ ತಳಿಯ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ. ಗದ್ದೆಗೆ ಕರೆದುಕೊಂಡು ಹೋಗಿ ಕ್ಷೇತ್ರೋತ್ಸವ ಮಾಡಿಸುತ್ತಿದ್ದೇವೆ

-ಡಾ.ಟಿ.ಜೆ.ರಮೇಶ್, ಕೇಂದ್ರದ ಮುಖ್ಯಸ್ಥರು

ದ.ಕ. ಜಿಲ್ಲೆ ಸಹಿತ ಕರಾವಳಿಯ ರೈತರು ಕಜೆ, ಜಯ ಭತ್ತ ಬಿಟ್ಟರೆ, ಶೇ.60ರಷ್ಟು ರೈತರು ಎಂಒ-4 ಭತ್ತ ಬೆಳೆಸುತ್ತಾರೆ. ಬೀಜ ಉತ್ಪಾದನೆಯು ಶಿವಮೊಗ್ಗದಲ್ಲಿ ಆಗುತ್ತದೆ. ಕಳೆದ ಬಾರಿ ರೈತರ ಬೇಡಿಕೆಯಷ್ಟು ಎಂಒ-4 ಪೂರೈಕೆಯಾಗಿರಲಿಲ್ಲ. ಈ ಬಾರಿ ಅದಕ್ಕೆ ಪರ್ಯಾಯವಾಗಿ ಸಹ್ಯಾದ್ರಿ ಬ್ರಹ್ಮ ಹೊಸ ಭತ್ತವನ್ನು ಪ್ರಾಯೋಗಿಕ ಹಾಗೂ ಬೀಜೋತ್ಪಾದನೆಗಾಗಿ ಬೆಳೆಸಲಾಗುತ್ತಿದೆ. ಮುಂದಿನ ವರ್ಷ ಇದರ ಬೀಜ ರೈತರಿಗೆ ಲಭ್ಯವಾಗಲಿದೆ.

-ಡಾ.ಹರೀಶ್ ಶೆಣೈ, ಬೇಸಾಯ ವಿಜ್ಞಾನಿ, ಕೃಷಿ ವಿಜ್ಞಾನ ಕೇಂದ್ರ, ಮಂಗಳೂರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News