ಶ್ರೀಲಂಕಾದಲ್ಲಿ ಭರವಸೆಯ ಬೆಳಕು?
ಪ್ರಾದೇಶಿಕ ಭೌಗೋಳಿಕ ರಾಜಕೀಯ ಉದ್ವಿಗ್ನತೆ ಹೆಚ್ಚಾಗುತ್ತಿರುವ ಈ ಸಮಯದಲ್ಲಿ ಶ್ರೀಲಂಕಾ ಸರಕಾರವು ಭಾರತ ಮತ್ತು ಚೀನಾದೊಂದಿಗೆ ತನ್ನ ಸಂಬಂಧವನ್ನು ಸಮತೋಲನಗೊಳಿಸಬೇಕಾದ ಮಹತ್ತರ ಸವಾಲು ಎನ್‌ಪಿಪಿ ಎದುರು ಇದೆ. ಚೀನಾವನ್ನು ಸ್ನೇಹಿತನಂತೆ ನೋಡುವ ಮತ್ತು ಚೀನಾದ ಕಮ್ಯುನಿಸ್ಟ್ ಪಕ್ಷದೊಂದಿಗೆ ವ್ಯಾಪಕವಾದ ಸಂಬಂಧವನ್ನು ಹೊಂದಿರುವ ಜೆವಿಪಿ ಕೂಡ ಭಾರತದ ಮಹತ್ವವನ್ನು ಗುರುತಿಸಲೇಬೇಕಾದ ಅಗತ್ಯ ಇದೆ. ಆದ್ದರಿಂದ, ಶ್ರೀಲಂಕಾ ಎರಡೂ ರಾಷ್ಟ್ರಗಳೊಂದಿಗಿನ ತನ್ನ ವ್ಯವಹಾರಗಳಲ್ಲಿ ವಾಸ್ತವತೆಯನ್ನು ಅಳವಡಿಸಿಕೊಳ್ಳುವ ನಿರೀಕ್ಷೆಯಿದೆ. ಲಂಕಾದಲ್ಲಿ ಉಗಮಿಸಿರುವ ಈ ಭರವಸೆಯ ಬೆಳಕು ದ್ವೀಪವನ್ನು ಬೆಳಗುತ್ತದೆಯೇ ಅಥವಾ ಜನರನ್ನು ಮತ್ತಷ್ಟು ಸುಡುತ್ತದೆಯೇ ಎನ್ನುವುದನ್ನು ಕಾಲವೇ ಉತ್ತರಿಸಬೇಕಾಗಿದೆ.
ನವೆಂಬರ್ 15, 2024ರಂದು ಶ್ರೀಲಂಕಾದ ಚುನಾವಣಾ ಆಯೋಗವು ರಾಷ್ಟ್ರದ 17ನೇ ಸಾರ್ವತ್ರಿಕ ಸಂಸತ್ತಿನ ಚುನಾವಣೆಯ ಫಲಿತಾಂಶಗಳನ್ನು ಘೋಷಿಸುತ್ತಿದ್ದಂತೆ ಶ್ರೀಲಂಕಾ ರಾಜಕೀಯ ಮಹತ್ ಬದಲಾವಣೆಗೆ ಸಾಕ್ಷಿಯಾಯಿತು. ಅಭೂತಪೂರ್ವ ವಿಜಯದಲ್ಲಿ, ರಾಷ್ಟ್ರೀಯ ಜನತಾ ಶಕ್ತಿ (ಎನ್‌ಪಿಪಿ) ಪಕ್ಷವು ಅಧ್ಯಕ್ಷ ಅನುರ ಕುಮಾರ ದಿಸ್ಸನಾಯಕೆ ನೇತೃತ್ವದಲ್ಲಿ ಮೂರನೇ ಎರಡರಷ್ಟು ಬಹುಮತವನ್ನು ಪಡೆದುಕೊಂಡಿತು. 225 ಸಂಸದೀಯ ಸ್ಥಾನಗಳಲ್ಲಿ 159 ಸ್ಥಾನಗಳನ್ನು ವಶಪಡಿಸಿಕೊಂಡಿತು. ದಿಸ್ಸ ನಾಯಕೆ ಅವರ ನಿರ್ಣಾಯಕ ಅಧ್ಯಕ್ಷೀಯ ಗೆಲುವಿನ ಕೇವಲ ಎರಡು ತಿಂಗಳ ನಂತರ ಈ ವಿಜಯವು ಒಲಿದಿದೆ. ಸ್ವಾತಂತ್ರ್ಯದ ನಂತರ ಶ್ರೀಲಂಕಾದ ಅತ್ಯಂತ ತೀವ್ರವಾದ ಆರ್ಥಿಕ ಬಿಕ್ಕಟ್ಟಿನ ಸಮಯದಲ್ಲಿ ಭರವಸೆಯ ಬೆಳಕು ಮೂಡಿದೆ.
ಏತನ್ಮಧ್ಯೆ, ಸಜಿತ್ ಪ್ರೇಮದಾಸ ಅವರ ಸಮಗಿ ಜನ ಬಲವೇಗಯಾ ಪಕ್ಷವು 2010ರ ನಂತರದ ಅತ್ಯಂತ ಕಡಿಮೆ ಮತದಾನದ ನಡುವೆ ಕೇವಲ 40 ಸ್ಥಾನಗಳನ್ನು ಉಳಿಸಿಕೊಂಡಿತು. ತಮಿಳರು ಹೆಚ್ಚಿರುವ ಉತ್ತರ ಜಾಫ್ನಾ ಜಿಲ್ಲೆಯಲ್ಲಿ ಎನ್‌ಪಿಪಿ ವಿಜಯವನ್ನು ಸಾಧಿಸಿದೆ, ಇದು ಐತಿಹಾಸಿಕ ಸಾಧನೆಯಾಗಿದೆ.
6.8 ಮಿಲಿಯನ್ ಮತಗಳನ್ನು ಗಳಿಸಿ (ಇದು ಒಟ್ಟು ಮತಗಳ ಶೇ. 61) ಎನ್‌ಪಿಪಿ ತನ್ನ ಪ್ರತಿಸ್ಪರ್ಧಿಗಳಿಗಿಂತ ಮುನ್ನಡೆ ಸಾಧಿಸಿದೆ. ಈ ವ್ಯಾಪಕ ಗೆಲುವು ಶ್ರೀಲಂಕಾದ ರಾಜಕೀಯ ಭೂದೃಶ್ಯದಲ್ಲಿ ಪ್ರಮುಖ ಕ್ರಾಂತಿಯನ್ನು ಎಬ್ಬಿಸಿದೆ. ಇದು ನಾಯಕತ್ವ ಮತ್ತು ಭರವಸೆಯ ಹೊಸ ಯುಗವನ್ನು ಸೂಚಿಸುತ್ತದೆ.
ಹಿನ್ನೆಲೆ:
ಸೆಪ್ಟಂಬರ್ 23, 2024ರಂದು ಅಧಿಕಾರ ವಹಿಸಿಕೊಂಡ ನಂತರ, ಅಧ್ಯಕ್ಷ ಅನುರ ಕುಮಾರ ದಿಸ್ಸನಾಯಕೆ ಅವರು ಮರುದಿನ ಸಂಸತ್ತನ್ನು ವಿಸರ್ಜಿಸಿದರು. ಆನಂತರದಲ್ಲಿ ಹೊರಡಿಸಲಾದ ಗೆಜೆಟ್ ಸಂಖ್ಯೆ 2403/13 ಚುನಾವಣಾ ದಿನಾಂಕವನ್ನು ನಿಗದಿಪಡಿಸಿತು ಮತ್ತು ನಾಮನಿರ್ದೇಶನದ ಅವಧಿಯನ್ನು ಸೂಚಿಸಿತು. ಹೊಸ ಸಂಸತ್ತು ನವೆಂಬರ್ 21, 2024ರಂದು ಸಭೆ ಸೇರುವುದೆಂದು ನಿಗದಿ ಪಡಿಸಲಾಯಿತು. ಚುನಾಯಿತ ಸಂಸತ್ತಿನ ಪ್ರತಿನಿಧಿಗಳ ಅವಧಿ ಐದು ವರ್ಷಗಳಾಗಿದ್ದರೂ, ಶ್ರೀಲಂಕಾದ ಸಂವಿಧಾನದ 70(1)ನೇ ವಿಧಿಯು ಸಂಸತ್ತನ್ನು ವಿಸರ್ಜಿಸಲು ಮತ್ತು ಎರಡು ವರ್ಷ ಆರು ತಿಂಗಳ ಬಳಿಕ ಸಂಸತ್ತಿಗೆ ಮರು ಚುನಾವಣೆ ಮಾಡುವ ಆದೇಶವನ್ನು ಕೊಡುವ ಅಧಿಕಾರವನ್ನು ಅಧ್ಯಕ್ಷರಿಗೆ ನೀಡಿದೆ. ಇದಲ್ಲದೆ, 1981ರ ಸಂಸತ್ತಿನ ಚುನಾವಣಾ ಕಾಯ್ದೆ ಸಂಖ್ಯೆ ಒಂದರ ತಿದ್ದುಪಡಿಯಂತೆ ಸೆಕ್ಷನ್ 10 ನಾಮನಿರ್ದೇಶನದ ಅವಧಿ ಮತ್ತು ಚುನಾವಣಾ ದಿನಾಂಕವನ್ನು ನಿರ್ಧರಿಸಲು ಅಧ್ಯಕ್ಷರಿಗೆ ಅವಕಾಶ ಕಲ್ಪಿಸಲಾಗಿದೆ.
ಶ್ರೀಲಂಕಾದ ರಾಜಕೀಯವನ್ನು ಸುಧಾರಿಸಲು, ದಿಟ್ಟ ಆರ್ಥಿಕ ಕ್ರಮಗಳನ್ನು ಕೈಗೊಳ್ಳಲು ಹೊಸ ಸರಕಾರದ ಅಗತ್ಯವನ್ನು ಒತ್ತಿಹೇಳಿದ ದಿಸ್ಸನಾಯಕೆ ತಮ್ಮ ಚುನಾವಣೆಯ ಪ್ರಚಾರದ ಭರವಸೆಯಂತೆ, ತಮ್ಮ ಪಕ್ಷದ (ಎನ್‌ಪಿಪಿ) ಕೇವಲ ಮೂರು ಪ್ರತಿನಿಧಿಗಳನ್ನು ಹೊಂದಿದ ಸಂಸತ್ತನ್ನು ವಿಸರ್ಜಿಸಿದರು. 2022ರಲ್ಲಿ ಸ್ಥಾಪಿತ ರಾಜಕೀಯ ಕ್ರಮಕ್ಕೆ ಸವಾಲು ಹಾಕಿ, ಪ್ರಮುಖ ಪ್ರತಿಭಟನೆಗಳ ನೇತೃತ್ವವನ್ನು ವಹಿಸಿ, ಆ ಮೂಲಕ ಜನರ ಬೆಂಬಲ, ವಿಶ್ವಾಸವನ್ನು ಗಳಿಸಿ, ಭ್ರಷ್ಟಾಚಾರ-ವಿರೋಧಿ ಮತ್ತು ಸರಕಾರದಲ್ಲಿ ಹೆಚ್ಚಿನ ಪಾರದರ್ಶಕತೆ ಮತ್ತು ಹೊಣೆಗಾರಿಕೆಯ ಭರವಸೆಗಳ ಮೇಲೆ ಕೇಂದ್ರೀಕರಿಸಿದ ಅಭಿಯಾನದೊಂದಿಗೆ ದಿಸ್ಸನಾಯಕೆ ಅಧ್ಯಕ್ಷ ಸ್ಥಾನವನ್ನು ಸೆಪ್ಟಂಬರ್ 2024ರಲ್ಲಿ ಪಡೆದರು.
ಅಧ್ಯಕ್ಷ ದಿಸ್ಸನಾಯಕೆ ಅವರು ವಾಗ್ದಾನ ಮಾಡಿದ ರಚನಾತ್ಮಕ ಮತ್ತು ನೀತಿ ಬದಲಾವಣೆಗಳನ್ನು ಕಾರ್ಯಗತಗೊಳಿಸಲು ಸಂಸತ್ತಿನ ಬಹುಮತವನ್ನು ಭದ್ರ ಪಡಿಸಿಕೊಳ್ಳುವುದು ನಿರ್ಣಾಯಕವಾಗಿತ್ತು. ದಿಸ್ಸನಾಯಕೆ ಅವರು ಕಾರ್ಯಕಾರಿ ಆದೇಶಗಳನ್ನು ಅಂಗೀಕರಿಸಬಹುದಾದರೂ, ಕಾನೂನುಗಳನ್ನು ಅಂಗೀಕರಿಸಲು ಅವರಿಗೆ ಸಂಸತ್ತಿನ ಬೆಂಬಲ ಬೇಕಾಗಿತ್ತು. ಅವರ ಮಹತ್ವಾಕಾಂಕ್ಷೆಯ ಬದಲಾವಣೆಗಳಿಗೆ ಸಂವಿಧಾನದ ತಿದ್ದುಪಡಿಯ ಅಗತ್ಯವಿದೆ ಮತ್ತು ಅದಕ್ಕಾಗಿ ಅವರಿಗೆ 2/3 ಬಹುಮತದ ಅಗತ್ಯವಿದೆ. ಈ ಬಹುಮತವಿಲ್ಲದಿದ್ದರೆ, ಮಹತ್ವದ ಸುಧಾರಣೆಗಳನ್ನು ಜಾರಿಗೊಳಿಸುವುದು ಕಷ್ಟಕರವಾಗಿತ್ತು. ಹಳೇ ಸಂಸತ್ತಿನಲ್ಲಿ ಕೇವಲ ಮೂರು ಪ್ರತಿನಿಧಿಗಳಿದ್ದುದರಿಂದ ಅವರಿಗೆ ಸಂಪೂರ್ಣವಾದ ಕ್ಯಾಬಿನೆಟ್ ರಚಿಸಲು ಸಾಧ್ಯವಾಗಿರಲಿಲ್ಲ. ಶ್ರೀಲಂಕಾದ ಕಾನೂನಿನ ಪ್ರಕಾರ ಶಾಸಕಾಂಗ ಅಭ್ಯರ್ಥಿಗಳು ಮಾತ್ರ ಮಂತ್ರಿಗಳಾಗಲು ಸಾಧ್ಯ. ಆದುದರಿಂದ ಸಂಪೂರ್ಣ ಕ್ಯಾಬಿನೆಟ್ ಅನ್ನು ರಚಿಸಲು ಮತ್ತು ಅದರ ಕಾರ್ಯಸೂಚಿಯನ್ನು ಮುಂದಕ್ಕೆ ತಳ್ಳಲು ಅನುವು ಮಾಡುವ ಸಲುವಾಗಿ ಚುನಾವಣೆಗೆ ಕರೆ ನೀಡಿದರು.
ಶ್ರೀಲಂಕಾದ ಸಂಸತ್ತಿನ ಚುನಾವಣೆಯ ಪ್ರಚಾರ ಹೇಗಿತ್ತು?
ಶ್ರೀಲಂಕಾದ ಸಂಸತ್ತಿನ ಚುನಾವಣೆಯು ಹಲವಾರು ಪ್ರಮುಖ ಕಾರಣಗಳಿಗಾಗಿ ಗಮನಾರ್ಹವಾಗಿದೆ. ಬಹು ಮುಖ್ಯವಾಗಿ, ಶ್ರೀಲಂಕಾದ ರಾಜಕೀಯ ಚಿತ್ರಣವು ದೇಶವು ಸ್ವಾತಂತ್ರ್ಯವನ್ನು ಗಳಿಸಿದ ನಂತರ ಗಮನಾರ್ಹವಾದ ರೂಪಾಂತರವನ್ನು ಕಂಡಿದೆ. ಮೊದಲ ಬಾರಿಗೆ ಸ್ವಾತಂತ್ರ್ಯದ ನಂತರ ಅಸ್ತಿತ್ವದಲ್ಲಿದ್ದ ಪ್ರಬಲ ಪಕ್ಷಗಳು ತಮ್ಮ ಪ್ರಸ್ತುತತೆಯನ್ನು ಕಳೆದುಕೊಂಡಿದೆ. ಹೆಚ್ಚುವರಿಯಾಗಿ, ಇದು ಮೂವತ್ತು ವರ್ಷಗಳಲ್ಲಿ ರಾಜಪಕ್ಸೆ ಕುಟುಂಬದ ಸದಸ್ಯರಿಲ್ಲದ ಮೊದಲ ಚುನಾವಣೆಯಾಗಿದೆ.
ಸ್ವಾತಂತ್ರ್ಯದ ನಂತರ ಪ್ರಬಲ ಪಕ್ಷಗಳಾಗಿದ್ದ ಯುನೈಟೆಡ್ ನ್ಯಾಶನಲ್ ಪಾರ್ಟಿ (ಯುಎನ್‌ಪಿ) ಮತ್ತು ಶ್ರೀಲಂಕಾ ಫ್ರೀಡಂ ಪಾರ್ಟಿ ಈ ಬಾರಿಯ ಚುನಾವಣೆಯಲ್ಲಿ ಅಸ್ತಿತ್ವದಲ್ಲಿರಲಿಲ್ಲ. ಈ ಚುನಾವಣೆಯು ಮೊದಲ ಬಾರಿಗೆ ಈ ಎರಡು ಪಕ್ಷಗಳನ್ನು ಸಂಪೂರ್ಣವಾಗಿ ಬದಿಗೊತ್ತಿ ಅಪ್ರಸ್ತುತಗೊಳಿಸಿದೆ.
1972ರಲ್ಲಿ ಸ್ಥಾಪಿಸಲಾದ ಅತಿದೊಡ್ಡ ತಮಿಳು ರಾಜಕೀಯ ಪಕ್ಷವಾದ ತಮಿಳು ಯುನೈಟೆಡ್ ಲಿಬರೇಶನ್ ಫ್ರಂಟ್ (ಟಿಯುಎಲ್‌ಎಫ್) ಕೂಡ ಅಸ್ಪಷ್ಟವಾಗಿ ಕಣ್ಮರೆಯಾಯಿತು. ಈ ಹಿಂದೆ ಇದರ ಸ್ಥಾನವನ್ನು ತಮಿಳು ರಾಷ್ಟ್ರೀಯ ಒಕ್ಕೂಟವು (ಟಿಎನ್‌ಎ) ಪಡೆದುಕೊಂಡಿತ್ತು. ಆದರೂ, ಈ ಚುನಾವಣೆಯಲ್ಲಿ, ಟಿಎನ್‌ಎ ಒಡೆದುಹೋಗಿರುವ ಕಾರಣದಿಂದಾಗಿ ವಿವಿಧ ರಾಜಕೀಯ ಪಕ್ಷಗಳು ಮತ್ತು ನಾಗರಿಕ ಸಮಾಜ ಸಂಘಟನೆಗಳು ಅಂತರವನ್ನು ತುಂಬಲು ಮುಂದಾಗಿವೆ.
2019ರಲ್ಲಿ ರಚನೆಯಾದ ನ್ಯಾಷನಲ್ ಪೀಪಲ್ಸ್ ಪವರ್ (ಎನ್‌ಪಿಪಿ) ಮೈತ್ರಿಯು 21 ಸದಸ್ಯ ಗುಂಪುಗಳನ್ನು ಒಳಗೊಂಡಿದೆ. ಇದರ ಮುಂದಾಳತ್ವವನ್ನು ಪೀಪಲ್ಸ್ ಲಿಬರೇಶನ್ ಫ್ರಂಟ್ (ಜನತಾ ವಿಮುಕ್ತಿ ಪೆರಮುನ, ಜೆವಿಪಿ)ಪಕ್ಷವು ವಹಿಸಿಕೊಂಡಿದೆ. ಎನ್‌ಪಿಪಿ ರಾಜಕೀಯ ಪಕ್ಷಗಳು, ಯುವ ಮತ್ತು ಮಹಿಳಾ ಸಂಘಟನೆಗಳು, ಕಾರ್ಮಿಕ ಸಂಘಗಳು, ನಾಗರಿಕ ಸಮಾಜದ ಗುಂಪುಗಳ ಮಿಶ್ರಣವನ್ನು ಒಳಗೊಂಡಿದೆ. ಜೆವಿಪಿ ಪಕ್ಷದ ಮಾರ್ಕ್ಸ್‌ವಾದಿ-ಲೆನಿನಿಸ್ಟ್ ಚಳವಳಿಯು, 1971 ಮತ್ತು 1989ರ ಎರಡು ದಂಗೆಗಳಿಗೆ ಕಾರಣವಾಯಿತು ಮತ್ತು ಅಧ್ಯಕ್ಷ ದಿಸ್ಸ ನಾಯಕೆಯವರು ವಿದ್ಯಾರ್ಥಿ ಕಾರ್ಯಕರ್ತನಾಗಿ ಸೇರಿಕೊಂಡು ದೀರ್ಘಕಾಲ ಇದರ ಸದಸ್ಯರಾಗಿದ್ದರು.
ಮತ್ತೊಂದು ಪ್ರಮುಖ ಗುಂಪು ಮಾಜಿ ವಿರೋಧ ಪಕ್ಷದ ನಾಯಕ ಮತ್ತು ಅಧ್ಯಕ್ಷೀಯ ಅಭ್ಯರ್ಥಿ ಸಜಿತ್ ಪ್ರೇಮದಾಸ ನೇತೃತ್ವದ ಸಮಗಿ ಜನ ಬಲವೇಗಯ (ಎಸ್‌ಜೆಬಿ), ಹಾಗೆಯೇ ಪ್ರಮುಖ ಮುಸ್ಲಿಮ್ ರಾಜಕೀಯ ಪಕ್ಷವಾದ ಶ್ರೀಲಂಕಾ ಮುಸ್ಲಿಮ್ ಕಾಂಗ್ರೆಸ್‌ನ ಕೆಲವು ಅಭ್ಯರ್ಥಿಗಳು ಸಹ ಎಸ್‌ಜೆಬಿಗೆ ಸೇರಿದ್ದರು.
ಯುನೈಟೆಡ್ ನ್ಯಾಶನಲ್ ಪಾರ್ಟಿ (ಯುಎನ್‌ಪಿ)ಯಿಂದ ಬೇರ್ಪಟ್ಟಿದ್ದ ಎಸ್‌ಜೆಬಿಯಿಂದ ಪ್ರತ್ಯೇಕವಾದ ಕೆಲವು ಯುಎನ್‌ಪಿ ಸದಸ್ಯರು ನ್ಯೂ ಡೆಮಾಕ್ರಟಿಕ್ ಫ್ರಂಟ್ ಮೈತ್ರಿಯ ಅಡಿಯಲ್ಲಿ ಚುನಾವಣೆಗೆ ಸ್ಪರ್ಧಿಸಿದರು. ಇದು ಅಧ್ಯಕ್ಷೀಯ ಕಣದಲ್ಲಿ ಮಾಜಿ ಅಧ್ಯಕ್ಷ ವಿಕ್ರಮಸಿಂಘೆ ಬಳಸಿದ ವೇದಿಕೆಯಾಗಿದ್ದು ಈ ಬಾರಿಯ ಚುನಾವಣೆಯಲ್ಲಿ ಅವರು ಈ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಿದರು. ಮಾಜಿ ಅಧ್ಯಕ್ಷರಾದ ಮಹಿಂದಾ ರಾಜಪಕ್ಸೆ ಮತ್ತು ಗೊತಬಯ ರಾಜಪಕ್ಸೆ ಅವರ ಪಕ್ಷವಾದ ಶ್ರೀಲಂಕಾ ಪೊದುಜನ ಪೆರಮುನಾ ಕೂಡ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.
ಆಡಳಿತಾರೂಢ ಎನ್‌ಪಿಪಿ ಸರಕಾರವನ್ನು ಸುಗಮವಾಗಿ ನಡೆಸಲು ಅಧ್ಯಕ್ಷ ಆನುರ ಕುಮಾರ ಬಹುಮತವನ್ನು ನೀಡುವಂತೆ ಜನರನ್ನು ವಿನಂತಿಸಿದರು, ಆದರೆ ವಿರೋಧ ಪಕ್ಷಗಳು ಸಂಸತ್ತಿನ ಪ್ರಕ್ರಿಯೆಯಲ್ಲಿ ತಮ್ಮ ಅಭ್ಯರ್ಥಿಗಳ ಸಾಮರ್ಥ್ಯ ಮತ್ತು ಅನುಭವವನ್ನು ಎತ್ತಿ ತೋರಿಸಿದವು. ಎನ್‌ಪಿಪಿಯ ನಾಯಕರಾದ ಅನುರ ಕುಮಾರ ದಿಸ್ಸ ನಾಯಕೆ ಅವರು ಭ್ರಷ್ಟಾಚಾರ ತಡೆ, ಉತ್ತಮ ಆಡಳಿತ, ವ್ಯವಸ್ಥೆಯ ಬದಲಾವಣೆ, ಆಡಳಿತ ಮತ್ತು ನಿರ್ಧಾರ ತೆಗೆದುಕೊಳ್ಳುವಲ್ಲಿ ಪಾರದರ್ಶಕತೆಯ ವಿಷಯಗಳ ಮೇಲೆ ತಮ್ಮ ಗಮನವನ್ನು ಕೇಂದ್ರೀಕರಿಸಿದರು. ತಮಿಳರು ಮತ್ತು ಮುಸ್ಲಿಮರ ಬೆಂಬಲವನ್ನು ಗಳಿಸಲು ಉತ್ತರ ಮತ್ತು ಪೂರ್ವದಲ್ಲಿ ತಮ್ಮ ಅಭಿಯಾನದಲ್ಲಿ ಅವರು ಏಕತೆ ಮತ್ತು ಅಭಿವೃದ್ಧಿಗೆ ಒತ್ತು ನೀಡಿದರು. ಶ್ರೀಲಂಕಾ ಸೇನೆಯು ಈ ಹಿಂದೆ ಆಕ್ರಮಿಸಿಕೊಂಡಿದ್ದ ತಮಿಳು ಭೂಮಿಯನ್ನು ಹಿಂದಿರುಗಿಸುವುದಾಗಿ ದಿಸ್ಸನಾಯಕೆ ಆಶ್ವಾಸನೆ ನೀಡಿದರು ಮತ್ತು ಮೀನುಗಾರರಿಗೆ ಉತ್ತಮ ಜೀವನೋಪಾಯದ ಭರವಸೆ ನೀಡಿದರು. ‘ಶ್ರೀಮಂತ ದೇಶ, ಸುಂದರ ಜೀವನ’ ಎಂಬ ಶೀರ್ಷಿಕೆಯ ಅವರ ಪ್ರಣಾಳಿಕೆಯು ತೆರಿಗೆಗಳನ್ನು ಕಡಿಮೆ ಮಾಡುವುದು, ಸರಕಾರಿ ನೌಕರರ ಸಂಬಳವನ್ನು ಹೆಚ್ಚಿಸುವುದು ಮತ್ತು ಕೈಗಾರೀಕರಣ ಮತ್ತು ದೇಶೀಯ ಉತ್ಪಾದನೆಗೆ ಆದ್ಯತೆ ನೀಡುವುದನ್ನು ಪ್ರಸ್ತಾವಿಸಿತು. ಪಕ್ಷವು ಪ್ರಸ್ತುತ ಐಎಂಎಫ್ ಕಾರ್ಯಕ್ರಮವನ್ನು ಅನುಮೋದಿಸುವ ಮೂಲಕ ಪ್ರಾಯೋಗಿಕ ಬದಲಾವಣೆಯ ಸೂಚನೆಯನ್ನು ನೀಡಿದರು. ಆದರೂ ರಾಷ್ಟ್ರೀಯ ಹಿತಾಸಕ್ತಿಗಳಿಗೆ ಉತ್ತಮವಾದ ಮರುಸಂಧಾನದ ಯೋಜನೆಗಳನ್ನು ಕಾರ್ಯ ರೂಪಕ್ಕೆ ತರುವುದರ ಮೂಲಕ ದೇಶದ ಅಭಿವೃದ್ಧಿಯ ಭರವಸೆಯನ್ನು ನೀಡಿದರು.
ಸಮಗಿ ಜನ ಬಲವೇಗಯ (ಎಸ್‌ಜೆಬಿ) ನಾಯಕ ಸಜಿತ್ ಪ್ರೇಮದಾಸ ಅವರು ತಮ್ಮ ಆರ್ಥಿಕ ಚೇತರಿಕೆಯ ಸಂದೇಶವನ್ನು ಪ್ರಚಾರ ಮಾಡುವಲ್ಲಿ ಅಚಲರಾಗಿದ್ದರು. ಮುಂದಿನ ಹತ್ತು ವರ್ಷಗಳಲ್ಲಿ ಗಣನೀಯ ಆರ್ಥಿಕ ಬೆಳವಣಿಗೆಗೆ ತಮ್ಮ ಪಕ್ಷವು ಕಾರ್ಯಸಾಧ್ಯವಾದ ಯೋಜನೆಯನ್ನು ಹೊಂದಿದೆ ಎಂದು ಅವರು ತಮ್ಮ ಚುನಾವಣಾ ಪ್ರಚಾರದಲ್ಲಿ ಸತತವಾಗಿ ಹೇಳಿದರು. ಶ್ರೀಲಂಕಾ ಸಹಿ ಮಾಡಿದ ಐಎಂಎಫ್ ಒಪ್ಪಂದವನ್ನು ಅವರು ಟೀಕಿಸಿದರು, ಅದನ್ನು ದೇಶಕ್ಕೆ ಹಾನಿಕಾರಕ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು ಮತ್ತು ಅವರ ಸರಕಾರವು ಒಪ್ಪಂದವನ್ನು ಮರುಸಂಧಾನ ಮಾಡುವುದಾಗಿ ವಾಗ್ದಾನ ಮಾಡಿದರು. ಇದಲ್ಲದೆ, ಅವರ ಪಕ್ಷವು ಅಧಿಕಾರಕ್ಕೆ ಬಂದಲ್ಲಿ, ಅಧ್ಯಕ್ಷೀಯ ಚುನಾವಣಾ ಪ್ರಚಾರದ ಸಮಯದಲ್ಲಿ ನೀಡಿದ್ದ ಆಶ್ವಾಸನೆಯನ್ನು ಕಾರ್ಯಗತಗೊಳಿಸುತ್ತೇವೆ ಎಂದು ದಿಟ್ಟವಾಗಿ ಘೋಷಿಸಿದರು.
ಎಲ್ಲಾ ಪ್ರಮುಖ ಪಕ್ಷಗಳ ಚುನಾವಣಾ ಪ್ರಚಾರಗಳು ಆರ್ಥಿಕ ಸಮಸ್ಯೆಗಳ ಬಗ್ಗೆ ಗಮನಾರ್ಹವಾದ ಸಾರ್ವಜನಿಕ ಭಾವನೆಯಿಂದ ನಿರೂಪಿಸಲ್ಪಟ್ಟವು. ಹೆಚ್ಚುತ್ತಿರುವ ಹಣದುಬ್ಬರ, ನಿರುದ್ಯೋಗ ಮತ್ತು ಜೀವನ ವೆಚ್ಚವು ಮತದಾರರ ಕಾಳಜಿಯ ಮುಂಚೂಣಿಯಲ್ಲಿದ್ದು, ಈ ಮೇಲಿನ ಎಲ್ಲವೂ ಪಕ್ಷಗಳು ಮಾಡಿದ ಪ್ರತಿಪಾದನೆಗಳ ಮೇಲೆ ಪ್ರಭಾವ ಬೀರಿತು. ಅವರ ಪ್ರಣಾಳಿಕೆಗಳು ಎರಡು ತಿಂಗಳ ಹಿಂದೆ ಅಧ್ಯಕ್ಷೀಯ ಚುನಾವಣೆಯ ಸಮಯದಲ್ಲಿ ನೀಡಿದ ಭರವಸೆಗಳನ್ನು ಹೆಚ್ಚಾಗಿ ಪ್ರತಿಧ್ವನಿಸಿದವು.
ಉತ್ತರ ಮತ್ತು ಪೂರ್ವದ ಐತಿಹಾಸಿಕ ಗೆಲುವು:
ದ್ವೀಪದಾದ್ಯಂತ ತನ್ನ ಮತಗಳ ಹಂಚಿಕೆಯಲ್ಲಿ ಎನ್‌ಪಿಪಿ ಗಮನಾರ್ಹ ಏರಿಕೆಯನ್ನು ಕಂಡಿದೆ. ಅದರಲ್ಲೂ ಮುಖ್ಯವಾಗಿ ತಮಿಳರು ಮತ್ತು ಮುಸ್ಲಿಮರು ವಾಸಿಸುವ ಉತ್ತರ ಮತ್ತು ಪೂರ್ವ ಪ್ರದೇಶಗಳಲ್ಲಿ ಪ್ರಭಾವಶಾಲಿ ಜನಾದೇಶವನ್ನು ಸಾಧಿಸಿದೆ. ಉತ್ತರದ ಜಾಫ್ನಾ ಜಿಲ್ಲೆಯಲ್ಲೂ ಮೂರು ಸ್ಥಾನಗಳನ್ನು ಗೆಲ್ಲುವ ಮೂಲಕ ಯಾವುದೇ ಸಿಂಹಳಿ ಪಕ್ಷ ಈವರೆಗೂ ಮಾಡದ ಸಾಧನೆಯನ್ನು ಮಾಡಿದೆ. ತಮಿಳರ ಪಕ್ಷವಾದ ಇಲಾಂಕೈ ತಮಿಳು ಅರಸು ಕಾಚಿ(ಐಟಿಎಕೆ) ಶೇ.5ರಷ್ಟು ಮತವನ್ನು ಪಡೆಯಲಿಲ್ಲ.
ಈ ಹಿಂದೆ ಅಧ್ಯಕ್ಷೀಯ ಚುನಾವಣೆಯಲ್ಲಿ ಡಿಸ್ಸನಾಯಕೆ ಅವರ ರಾಜಕೀಯ ಪ್ರತಿಸ್ಪರ್ಧಿಗಳಿಗೆ, ವಿಶೇಷವಾಗಿ ಮಾಜಿ ವಿರೋಧ ಪಕ್ಷದ ನಾಯಕ ಸಜಿತ್ ಪ್ರೇಮದಾಸ ಅವರಿಗೆ ಮತ ಹಾಕಿದ್ದ ತಮಿಳರು ಮತ್ತು ಮುಸ್ಲಿಮರು ಎನ್‌ಪಿಪಿಯನ್ನು ಈ ಬಾರಿ ಬೆಂಬಲಿಸಿದ್ದಾರೆ. ಜನಾಂಗೀಯ ಅಲ್ಪಸಂಖ್ಯಾತರೊಂದಿಗೆ ತೊಡಗಿಸಿಕೊಳ್ಳುವಲ್ಲಿ ಪಕ್ಷದ ಇತ್ತೀಚಿನ ಯಶಸ್ಸನ್ನು ಇದು ಸೂಚಿಸುತ್ತದೆ. ಪೂರ್ವದಲ್ಲಿ ಬ್ಯಾಟಿಕಲೋವನ್ನು ಹೊರತುಪಡಿಸಿ ಎಲ್ಲಾ ಜಿಲ್ಲೆಗಳಲ್ಲಿ, ಎನ್‌ಪಿಪಿ ತಮಿಳು ಮತ್ತು ಮುಸ್ಲಿಮರನ್ನು ಪ್ರತಿನಿಧಿಸುವ ಪ್ರಮುಖ ಪ್ರಾದೇಶಿಕ ಪಕ್ಷಗಳನ್ನು ಸೋಲಿಸಿದೆ. ಭಾರತೀಯ ತಮಿಳು ಸಮುದಾಯದವರ ಮತವನ್ನು ಸೆಳೆಯುವುದರಲ್ಲಿ ಯಶಸ್ವಿಯಾಗಿದೆ.
ಮುಂದೇನು?:
ಶ್ರೀಲಂಕಾದ ಸಂಸತ್ತಿನಲ್ಲಿ ಪ್ರಮಾಣಾನುಗುಣ ಪ್ರಾತಿನಿಧ್ಯ ವ್ಯವಸ್ಥೆಯಡಿಯಲ್ಲಿ ರಾಜಕೀಯ ಪಕ್ಷವೊಂದು ಮೂರನೇ ಎರಡರಷ್ಟು ಬಹುಮತವನ್ನು ಸಾಧಿಸಿದ್ದು ಇದೇ ಮೊದಲು. ಬದಲಾವಣೆಯ ಘೋಷ ವಾಕ್ಯದೊಂದಿಗೆ ಮತದಾರರ ತೀವ್ರ ನಿರೀಕ್ಷೆ, ಭರವಸೆಯೊಂದಿಗೆ ಬಹುಮತ ಪಡೆದ ಎನ್‌ಪಿಪಿಯು ರಾಜಕೀಯ ಮತ್ತು ಆರ್ಥಿಕ ಸಮಸ್ಯೆಗಳನ್ನು ಪರಿಹರಿಸಬೇಕಾದ ಗುರುತರ ಜವಾಬ್ದಾರಿಯನ್ನು ಹೊಂದಿದೆ. ಪ್ರಜಾಸತ್ತಾತ್ಮಕ ಹಕ್ಕುಗಳು ಮತ್ತು ಸ್ವಾತಂತ್ರ್ಯಗಳನ್ನು ಹಾಳುಮಾಡುವ ಕಾನೂನುಗಳನ್ನು ಅಂಗೀಕರಿಸುವುದಿಲ್ಲ ಎಂದು ಖಚಿತಪಡಿಸಿಕೊಳ್ಳಬೇಕಾದ ಅಗತ್ಯವೂ ಇದೆ.
ಈ ಫಲಿತಾಂಶವು ಎನ್‌ಪಿಪಿ ಸರಕಾರವು ಕಾರ್ಯಕಾರಿ ಅಧ್ಯಕ್ಷ ಸ್ಥಾನವನ್ನು ರದ್ದುಗೊಳಿಸುವ ತನ್ನ ಆಶ್ವಾಸನೆಯನ್ನು ತ್ವರಿತವಾಗಿ ಪೂರೈಸಲು ಅನುವು ಮಾಡಿಕೊಡುತ್ತದೆ. ಹೆಚ್ಚುವರಿಯಾಗಿ, ನಿಕಟ ಪರಿಶೀಲನೆಯಲ್ಲಿರುವ 2.9 ಶತಕೋಟಿ ಐಎಮ್‌ಎಫ್ ಬೇಲ್‌ಔಟ್ ಅನ್ನು ನಿರ್ವಹಿಸುವ ಅವರ ಯೋಜನೆಗೆ ಪುಷ್ಟಿ ನೀಡುತ್ತದೆ.
ಪ್ರಾದೇಶಿಕ ಭೌಗೋಳಿಕ ರಾಜಕೀಯ ಉದ್ವಿಗ್ನತೆ ಹೆಚ್ಚಾಗುತ್ತಿರುವ ಈ ಸಮಯದಲ್ಲಿ ಶ್ರೀಲಂಕಾ ಸರಕಾರವು ಭಾರತ ಮತ್ತು ಚೀನಾದೊಂದಿಗೆ ತನ್ನ ಸಂಬಂಧವನ್ನು ಸಮತೋಲನಗೊಳಿಸಬೇಕಾದ ಮಹತ್ತರ ಸವಾಲು ಎನ್‌ಪಿಪಿ ಎದುರು ಇದೆ. ಚೀನಾವನ್ನು ಸ್ನೇಹಿತನಂತೆ ನೋಡುವ ಮತ್ತು ಚೀನಾದ ಕಮ್ಯುನಿಸ್ಟ್ ಪಕ್ಷದೊಂದಿಗೆ ವ್ಯಾಪಕವಾದ ಸಂಬಂಧವನ್ನು ಹೊಂದಿರುವ ಜೆವಿಪಿ ಕೂಡ ಭಾರತದ ಮಹತ್ವವನ್ನು ಗುರುತಿಸಲೇಬೇಕಾದ ಅಗತ್ಯ ಇದೆ. ಆದ್ದರಿಂದ, ಶ್ರೀಲಂಕಾ ಎರಡೂ ರಾಷ್ಟ್ರಗಳೊಂದಿಗಿನ ತನ್ನ ವ್ಯವಹಾರಗಳಲ್ಲಿ ವಾಸ್ತವತೆಯನ್ನು ಅಳವಡಿಸಿಕೊಳ್ಳುವ ನಿರೀಕ್ಷೆಯಿದೆ. ಲಂಕಾದಲ್ಲಿ ಉಗಮಿಸಿರುವ ಈ ಭರವಸೆಯ ಬೆಳಕು ದ್ವೀಪವನ್ನು ಬೆಳಗುತ್ತದೆಯೇ ಅಥವಾ ಜನರನ್ನು ಮತ್ತಷ್ಟು ಸುಡುತ್ತದೆಯೇ ಎನ್ನುವುದನ್ನು ಕಾಲವೇ ಉತ್ತರಿಸಬೇಕಾಗಿದೆ. ಪ್ರಾದೇಶಿಕ ಭೌಗೋಳಿಕ ರಾಜಕೀಯ ಉದ್ವಿಗ್ನತೆ ಹೆಚ್ಚಾಗುತ್ತಿರುವ ಈ ಸಮಯದಲ್ಲಿ ಶ್ರೀಲಂಕಾ ಸರಕಾರವು ಭಾರತ ಮತ್ತು ಚೀನಾದೊಂದಿಗೆ ತನ್ನ ಸಂಬಂಧವನ್ನು ಸಮತೋಲನಗೊಳಿಸಬೇಕಾದ ಮಹತ್ತರ ಸವಾಲು ಎನ್‌ಪಿಪಿ ಎದುರು ಇದೆ. ಚೀನಾವನ್ನು ಸ್ನೇಹಿತನಂತೆ ನೋಡುವ ಮತ್ತು ಚೀನಾದ ಕಮ್ಯುನಿಸ್ಟ್ ಪಕ್ಷದೊಂದಿಗೆ ವ್ಯಾಪಕವಾದ ಸಂಬಂಧವನ್ನು ಹೊಂದಿರುವ ಜೆವಿಪಿ ಕೂಡ ಭಾರತದ ಮಹತ್ವವನ್ನು ಗುರುತಿಸಲೇಬೇಕಾದ ಅಗತ್ಯ ಇದೆ. ಆದ್ದರಿಂದ, ಶ್ರೀಲಂಕಾ ಎರಡೂ ರಾಷ್ಟ್ರಗಳೊಂದಿಗಿನ ತನ್ನ ವ್ಯವಹಾರಗಳಲ್ಲಿ ವಾಸ್ತವತೆಯನ್ನು ಅಳವಡಿಸಿಕೊಳ್ಳುವ ನಿರೀಕ್ಷೆಯಿದೆ. ಲಂಕಾದಲ್ಲಿ ಉಗಮಿಸಿರುವ ಈ ಭರವಸೆಯ ಬೆಳಕು ದ್ವೀಪವನ್ನು ಬೆಳಗುತ್ತದೆಯೇ ಅಥವಾ ಜನರನ್ನು ಮತ್ತಷ್ಟು ಸುಡುತ್ತದೆಯೇ ಎನ್ನುವುದನ್ನು ಕಾಲವೇ ಉತ್ತರಿಸಬೇಕಾಗಿದೆ.