ತೋಟಗಾರಿಕೆ ಕೃಷಿಯಲ್ಲಿ ಮಾದರಿಯಾದ ನಿವೃತ್ತ ಪ್ರೊಫೆಸರ್ ಬೋರೇಗೌಡ
ಮಂಡ್ಯ: ತೋಟಗಾರಿಕೆ ಇಲಾಖೆ ಪಿತಾಮಹ ಡಾ.ಎಂ.ಎಚ್.ಮರೀಗೌಡರ ಜತೆ ಒಡನಾಟದಿಂದ ಪ್ರಭಾವಿತರಾದ ಪ್ರೊಫೆಸರೊಬ್ಬರು, ಸೇವೆಯಿಂದ ನಿವೃತ್ತಿ ನಂತರ ಮೂರು ಎಕರೆ ಭೂಮಿ ಖರೀದಿಸಿ ತೋಟಗಾರಿಕೆ ಬೇಸಾಯ ಮಾಡಿ ಇತರರಿಗೆ ಮಾದರಿಯಾಗಿದ್ದಾರೆ.
ಮದ್ದೂರು ತಾಲೂಕು ಮಾಲಗಾರನಹಳ್ಳಿಯ ನಿವೃತ್ತ ಪ್ರೊ.ಎಂ.ಸಿ.ಬೋರೇಗೌಡರು ಚಾಮನಹಳ್ಳಿ ಬಳಿ ಮಾಡಿರುವ ತೋಟ ತೆಂಗು, ಜಂಬೂ ನೇರಳೆ, ಸಪೋಟ, ಮಾವು ಮುಂತಾದ ಹತ್ತಾರು ಬಗೆಯ ಹಣ್ಣಿನ ಮರಗಳಿಂದ ಕಂಗೊಳಿಸುತ್ತಿದೆ.
ಬೆಂಗಳೂರಿನ ವಿ.ವಿ.ಪುರ ವಿಜ್ಞಾನ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಮೂರು ವರ್ಷಗಳ ಹಿಂದೆ ನಿವೃತ್ತಿಯಾದ ಬಳಿಕ ಪ್ರೊ.ಬೋರೇಗೌಡರು ಸ್ವಗ್ರಾಮ ಮಾಲಗಾರನಹಳ್ಳಿಗೆ ಮರಳಿದರು. ತಾವು ಕಂಡಿದ್ದ ಕನಸನ್ನು ನನಸು ಮಾಡುವ ಉದ್ದೇಶದಿಂದ ಚಾಮನಹಳ್ಳಿ ಬಳಿ ಮೂರು ಎಕರೆ ಒಣಭೂಮಿಯನ್ನು ಖರೀದಿಸಿ ಕೊಳವೆ ಬಾವಿ ತೋಡಿಸಿ, 40 ವಿದ್ಯುತ್ ಕಂಬಗಳನ್ನು ಹಾಕಿಸಿ ವಿದ್ಯುತ್ ಸಂಪರ್ಕ ಪಡೆದು ಭೂಮಿಯನ್ನು ಬೇಸಾಯಕ್ಕೆ ಹದಗೊಳಿಸಿದರು. ತನ್ನ ಕನಸಿನ ವಿವಿಧ ಬಗೆಯ ತೋಟಗಾರಿಕೆ ಗಿಡಗಳನ್ನು ನಾಟಿ ಮಾಡಿಸಿದರು. ಪ್ರಸ್ತುತ ಹಲವು ಮರಗಳು ಫಲ ನೀಡುತ್ತಿದ್ದು ವಾರ್ಷಿಕ ಸುಮಾರು 2 ಲಕ್ಷ ರೂ. ಸಂಪಾದಿಸುತ್ತಿದ್ದಾರೆ. ಇನ್ನು ಮೂರು ವರ್ಷ ಕಳೆದರೆ ವರಮಾನ ಸುಮಾರು 6 ಲಕ್ಷ ರೂ.ಸಿಗಲಿದೆ ಎಂಬ ವಿಶ್ವಾಸ ಹೊಂದಿದ್ದಾರೆ.
ಬೋರೇಗೌಡರ ಕೃಷಿ ಪ್ರೀತಿಗೆ ಅವರ ಕುಟುಂಬ ಸಾಥ್ ನೀಡುತ್ತಿದೆ. ಪತ್ನಿ ಶಾರದಮ್ಮ, ಪುತ್ರಿ ಸೋಮಿಕಾ ಹಾಗೂ ಅಳಿಯ ವರುಣ್ ಪ್ರಭಾಕರ್ ಅವರು ಬೇಸಾಯಕ್ಕೆ ಕೈಜೋಡಿಸುತ್ತಿದ್ದಾರೆ. ಬೋರೇಗೌಡರು ತೋಟಗಾರಿಕೆ ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳ ಸಲಹೆಯನ್ನು ಪಡೆದುಕೊಳ್ಳುತ್ತಾ ವೈಜ್ಞಾನಿಕ ಮಾದರಿಯನ್ನು ಅನುಸರಿಸುತ್ತಿದ್ದಾರೆ. ರಾಸಾಯನಿಕ ಗೊಬ್ಬರ ಅವಲಂಬಿಸದೆ ಕೊಟ್ಟಿಗೆ ಗೊಬ್ಬರ ಮತ್ತು ಸಾವಯವ ಗೊಬ್ಬರ ಬಳಸುತ್ತಿದ್ದಾರೆ. ಇದರಿಂದ ಬೆಳೆ ಸಮೃದ್ಧವಾಗಿದೆ.
ತೆಂಗು, ಜಂಬೂ ನೇರಳೆ, ಕಿತ್ತಳೆ, ಸಪೋಟ, ಪನ್ನೀರು, ಮಾವು, ಬೆಟ್ಟದನಲ್ಲಿಕಾಯಿ, ಪರಂಗಿ, ದಾಳಿಂಬೆ, ಕೃಷ್ಣ ಫಲ, ಅಡಿಕೆ, ಬಾಳೆ, ಮಹಾಗನಿ ಮರ, ಟೀಕ್ ವುಡ್, ಸೇಬು, ರಾಮಫಲ, ಲಕ್ಷ್ಮಣ ಫಲ, ಜಾಯಿಕಾಯಿ, ಸೀಬೆ, ನಿಂಬೆ, ನುಗ್ಗೆ, ರಕ್ತ ಚಂದನ ಮರಗಳ ಜತೆಗೆ ಅವರೇಕಾಯಿ, ತೊಗರಿ ಕಾಯಿ, ಮಲ್ಲಿಗೆ, ಗುಲಾಬಿ ಸೇರಿದಂತೆ ವಿವಿಧ ಹೂವಿನ ಗಿಡಗಳನ್ನು ಬೆಳೆಸಿದ್ದಾರೆ. 20 ನಾಟಿಕೋಳಿಗಳು, 4 ಕುರಿಗಳನ್ನು ಸಾಕುತ್ತಿದ್ದಾರೆ.
ಕೃಷಿಯಿಂದ ರೈತರು ವಿಮುಖರಾದರೆ ಜಗತ್ತಿನಲ್ಲಿ ಯಾವುದೇ ಜೀವರಾಶಿ ಬದುಕುಳಿಯಲು ಸಾಧ್ಯವೇ ಇಲ್ಲ. ಹಾಗಾಗಿ ಸೇವೆಯ ನಿವೃತ್ತಿ ನಂತರ ಕೃಷಿ ಮಾಡಬೇಕೆಂಬ ಹಂಬಲ ಹೊಂದಿದ್ದೆ. ಜತೆಗೆ ತೋಟಗಾರಿಕೆ ಪಿತಾಮಹ ಎಂ.ಎಚ್.ಮರೀಗೌಡರ ಒಡನಾಟ ಇತ್ತು. ಅವರಿಂದ ಪ್ರೇರಿತನಾಗಿ ಕೃಷಿ ಕಾಯಕಕ್ಕೆ ಇಳಿದಿದ್ದೇನೆ. ಕುಟುಂಬದ ಸಹಕಾರ ಚೆನ್ನಾಗಿದೆ. ಉತ್ತಮ ಫಸಲು ಬರುತ್ತಿರುವುದು ಖುಷಿ ತಂದಿದೆ. ಉದ್ಯೋಗಕ್ಕೆ ಅಲೆದಾಡುವ ಬದಲು ಗ್ರಾಮೀಣ ಯುವಜನರು ಆಸಕ್ತಿಯಿಂದ ಕೃಷಿಯಲ್ಲಿ ತೊಡಗಿಕೊಂಡರೆ ಉತ್ತಮ ಜೀವನ ಮಾಡಬಹುದು.
-ಪ್ರೊ.ಎಂ.ಸಿ.ಬೋರೇಗೌಡ, ಯಶಸ್ವಿ ಕೃಷಿಕರು.
ಸೇವೆಯಿಂದ ನಿವೃತ್ತಿಯಾದ ಬಹುತೇಕರು ವಿಶ್ರಾಂತಿ ಜೀವನ ಸಾಗಿಸುತ್ತಾರೆ. ಆದರೆ, ಪ್ರೊ.ಬೋರೇಗೌಡರು ವಿಶ್ರಾಂತಿ ಜೀವನ ನಡೆಸದೆ ಕೃಷಿಯಲ್ಲಿ ಏನಾದರೂ ಸಾಧಿಸಬೇಕೆಂದು ಪಣತೊಟ್ಟು ಕಷ್ಟಪಟ್ಟು ಸಮಗ್ರ ಕೃಷಿ ಮಾಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಇವರಿಗೆ ತೋಟಗಾರಿಕೆ ಇಲಾಖೆಯಿಂದ ಎಲ್ಲ ರೀತಿಯ ಸಹಕಾರ ನೀಡಲಾಗುತ್ತಿದೆ.
-ಕೆ.ಎಂ.ರೇಖಾ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ, ಮದ್ದೂರು