ಎಲ್ಲರನ್ನೂ ಮುಟ್ಟಿಸಿಕೊಂಡವರು
ಲಂಕೇಶ್ ಮೇಷ್ಟ್ರು ಮುಟ್ಟಿಸಿಕೊಂಡವನು ಕಥೆಯನ್ನು ಮಾತ್ರ ಬರೆಯಲಿಲ್ಲ. ಸ್ವತಃ ಅವರೇ ಎಲ್ಲರನ್ನೂ ಮುಟ್ಟಿಸಿಕೊಂಡಿದ್ದರು ಎನ್ನಬಹುದು. ನಾನು ಇರುವವರೆಗೂ ಕೋಮುವಾದಿ ಸರಕಾರ ಅಧಿಕಾರಕ್ಕೆ ಬರುವುದಿಲ್ಲ ಅನ್ನುತ್ತಿದ್ದರು. ಅದು ನಿಜ ಆಯಿತು. ಆ ನಂತರದ ದಿನಮಾನಗಳಲ್ಲಿ ಏನೆಲ್ಲಾ ರಾಜ್ಯದಲ್ಲಿ ಆಗಿದೆ ಎಂಬುದು ತಿಳಿಯದ ವಿಷಯವೇನಲ್ಲ.
ಸೂಕ್ಷ್ಮಮನಸ್ಸಿನ ವ್ಯಕ್ತಿಗಾದ ಸನ್ಮಾನ ಅಥವಾ ಅವಮಾನ ಅವನಾಳದಲ್ಲಿ ಸತ್ಯದ ಕಿಚ್ಚು ಹೊತ್ತಿಸಿ ಸುಡತೊಡಗುತ್ತದೆ
- ನೀಲೂ
ಮೇಲ್ಕಂಡ ಈ ಸಾಲುಗಳನ್ನು ನಾನು, ಅದೆಷ್ಟೋ ಬಾರಿ ನನಗೆ ನಾನೇ ಹೇಳಿಕೊಂಡಿದ್ದೇನೆ. ಸ್ನೇಹಿತರೊಂದಿಗೆ ಹಂಚಿಕೊಂಡಿದ್ದೇನೆ. ಸಭೆ ಸಮಾರಂಭಗಳಲ್ಲಿ ಈ ಕವಿತೆಯ ಸಾಲುಗಳನ್ನು ಹೇಳಿ ನನ್ನ ಮಾತುಗಳನ್ನು ಪ್ರಾರಂಭಿಸಿದ್ದೇನೆ, ಈ ಸಾಲುಗಳು ಮನಸ್ಸಿರುವ ಎಲ್ಲರೂ ಹೇಳಿಕೊಳ್ಳುವ ಸಾಲುಗಳು. ತುಂಬಾ ಸೂಕ್ಷ್ಮವಾಗಿಯೂ ನಮ್ಮನ್ನು ಪ್ರಶ್ನಿಸಿಕೊಳ್ಳುತ್ತಲೇ ಸತ್ಯದ ಅರಿವನ್ನು ಹೆಚ್ಚಿಸುವ ಈ ಸಾಲುಗಳು, ನನ್ನನ್ನು ಮತ್ತೆ ಮತ್ತೆ ಮುತ್ತುತ್ತವೆ. ಲಂಕೇಶ್ ಮೇಷ್ಟ್ರು, ಯಾರ್ಯಾರಿಗೆ ಎಷ್ಟು ಅರ್ಥವಾಗಿದ್ದಾರೋ ಗೊತ್ತಿಲ್ಲ. ನನ್ನಂತಹ ಸಾಮಾನ್ಯ ಓದುಗ ಅವರೊಟ್ಟಿಗೆ ಕಳೆದ ಹತ್ತು ವರ್ಷಗಳ, ಒಂದು ರೀತಿಯ ಗುರು ಶಿಷ್ಯರ ಒಡನಾಟ ಅಪೂರ್ವ ಕ್ಷಣಗಳೆಂದೇ ನಾನು ಭಾವಿಸುತ್ತೇನೆ.
ದಾಖಲಿಸುತ್ತಾ ಹೋದರೆ, ಅದಮ್ಯವಾದ ನೆನಪುಗಳಿವೆ. ನನ್ನಂತಹ ಏನೂ ಅಲ್ಲದವನು ಅವರೊಟ್ಟಿಗೆ ನಡೆಸಿದ ಮಾತು ಕತೆಯೆನ್ನುವುದು ಒಂದು ರೋಮಾಂಚನದ ಅನುಭವಗಳು. ಲಂಕೇಶ್ ಅಂದರೆ ಜೀವ ಚೈತನ್ಯದ ಅನನ್ಯ ಜೀವ ಎನ್ನುವುದಕ್ಕೆ ಇದು ಸಾಕ್ಷಿ.
ಲಂಕೇಶ್ ಮೇಷ್ಟ್ರು ಬರೆದ ‘ಅವ್ವ’ ಕವಿತೆ ಓದಿದ ಯಾರಿಗಾದರೂ, ಅವ್ವ ಕವಿತೆ ಬರೆಯುತ್ತಲೇ ಕವಿ ತಾನೇ ಅವ್ವನಾಗಿಬಿಡುವ ಸಾರ್ಥಕತೆಯ ಒಂದು ಅನುಭೂತಿ ಗಮನಕ್ಕೆ ಬರುತ್ತದೆ. ಲಂಕೇಶ್ ಮುಗ್ಧರೂ ಹೌದು, ಪ್ರಬುದ್ಧರೂ ಹೌದು. ಇವರ ಎಲ್ಲಾ ಸೃಜನಶೀಲ ಬರವಣಿಗೆಗಳು ಅದು ಕವಿತೆಯಾಗಿರಲಿ, ಕಥೆಯಾಗಿರಲಿ, ನಾಟಕವಾಗಿರಲಿ, ಲಂಕೇಶ್ ಪತ್ರಿಕೆಯ ಟೀಕೆ-ಟಿಪ್ಪಣಿಯೇ ಆಗಿರಲಿ ಅದಕ್ಕೆ ಬೆಸೆದುಕೊಂಡಂತಿದ್ದ ‘ಮರೆಯುವ ಮುನ್ನ’ ಕೂಡಾ ಸಹಜ ಮನುಷ್ಯ ಪ್ರೀತಿಯ ಸಹಜ ರೂಪಕಗಳೇ ಆಗಿವೆ. ಅವರನ್ನು ಓದುತ್ತಿದ್ದರೆ ಅದೊಂದು ಮುಗಿಯದ ಅನುಭವ. ಇಷ್ಟನ್ನು ಹೇಳಲು ಕಾರಣ ಮೇಷ್ಟ್ರು ನಮ್ಮನ್ನು ಅಗಲಿ ಎರಡು ದಶಕಗಳೇ ಆಗಿವೆ. ಪ್ರಚಲಿತ ವಿದ್ಯಮಾನಗಳ ಕುರಿತು ಮತ್ತು ಮನುಷ್ಯನ ವ್ಯಾಪಾರ ಮನಸ್ಥಿತಿಯೂ, ಭಾವುಕತೆಯನ್ನೂ ಮೀರಿದ ಸಹಜ ಗುಣಗಳ ಬಗ್ಗೆ ಅವರಿಗಿದ್ದ ಗ್ರಹಿಕೆ ಬಹಳ ದೊಡ್ಡದಾಗಿತ್ತು. ನಾವು ಆ ವಾರದಲ್ಲಿ ನಡೆದ ವಿದ್ಯಮಾನಗಳ ಕುರಿತು ನಮಗೆ ನಾವೇ ಯೋಚಿಸುತ್ತಾ ಪ್ರತಿಕ್ರಿಯಿಸಿಕೊಳ್ಳುತ್ತಿದ್ದೆವೋ ಅಂತಹದ್ದೇ ಚಿಂತನೆಯನ್ನು ಮೇಷ್ಟ್ರು ಟೀಕೆ ಟಿಪ್ಪಣಿಯಲ್ಲಿ ದಾಖಲಿಸುತ್ತಿದ್ದರು. ಆಗ ನನ್ನಂತಹವರಿಗೆ ಒಂದು ರೀತಿಯ ವಿಸ್ಮಯವಾಗುತ್ತಿತ್ತು.
ನಾನು ಯೋಚನೆ ಮಾಡಿದಂತೆಯೇ ಮೇಷ್ಟ್ರು ಬರೆದಿದ್ದಾರಲ್ಲಾ ಅನ್ನಿಸಿಬಿಡುತ್ತಿತ್ತು. ಒಮ್ಮೊಮ್ಮೆ ಆ ಲೇಖನಗಳನ್ನು ಓದಿದ ಮೇಲೆ ನನಗೆ ಆ ಆಲೋಚನೆ ಬಂತಾ ಎನ್ನುವ ಅನುಮಾನವೂ ಕಾಡುತ್ತಿತ್ತು. ಆದರೆ ಮೇಷ್ಟ್ರು ಕನ್ನಡ ನಾಡಿನ ಜನರ ನಾಡಿಮಿಡಿತವನ್ನು ತುಂಬಾ ಸೂಕ್ಷ್ಮವಾಗಿ ಗ್ರಹಿಸುತ್ತಿದ್ದರು. ಇವರ ಇನ್ನೊಂದು ನೀಲೂ ಪದ್ಯ ನನ್ನನ್ನು ತುಂಬಾ ಕಾಡಿಸುತ್ತದೆ. ಅದರ ವಿಷಯ ಹೀಗಿದೆ. ‘ಕಾಡಿನ ಮಧ್ಯೆ ಒಂದು ಎತ್ತಿನ ಗಾಡಿ ಚಲಿಸುತ್ತಿರುತ್ತದೆ, ಎತ್ತುಗಳ
ಕೊರಳಿಗೆ ಕಟ್ಟಿದ ಗಂಟೆಯ ಸದ್ದೂ ಸಹ ಇಡೀ ಕಾಡಿಗೇ ಕೇಳಿಸುತ್ತಿರುತ್ತದೆ. ಆದರೆ ಕಾಡಿನಲ್ಲಿರುವ ಹಕ್ಕಿಪಕ್ಷಿಗಳು ಇದಾವುದಕ್ಕೂ ಹೆದರದೆ ಬೆದರದೇ ತಮ್ಮ ಚೀವ್ಗಡುವ ಸದ್ದನ್ನು ಸಹಜವಾಗಿ ಕಲರವ ಮಾಡುತ್ತಿರುತ್ತವೆೆ. ಈ ನಾಲ್ಕು ಸಾಲುಗಳ ರಚನೆ ಮತ್ತು ಗ್ರಹಿಕೆ ತುಂಬಾ ಅನನ್ಯವಾದದ್ದು. ಈ ಸದ್ದನ್ನು ಮೇಷ್ಟ್ರು ಬಾಲ್ಯದಲ್ಲಿ ಕೇಳಿಸಿಕೊಂಡಿರಬೇಕು. ಅದನ್ನು ಎಷ್ಟೋ ವರ್ಷಗಳ ನಂತರ ಹೀಗೆ ಹೇಳುವ ಪರಿ ಇದೆಯಲ್ಲಾ ಅದ್ಭುತವೆನಿಸುತ್ತದೆ.
ಲಂಕೇಶ್ ಅರ್ಥವಾದವರಿಗೆ ಈ ಸೂಕ್ಷ್ಮಗಳೆಲ್ಲಾ ತಿಳಿಯುತ್ತದೆ. ಲಂಕೇಶ್ ಮೇಷ್ಟ್ರು ಯಾವತ್ತೂ ಒಬ್ಬ ಲೇಖಕನಿಗೆ ಸಾಮಾಜಿಕ ಬದ್ಧತೆ ಇರಬೇಕೆಂದು ಭಾಷಣಮಾಡಿದ್ದು ಕೇಳಿಲ್ಲ. ಆದರೆ ಅವರ ಒಟ್ಟೂ ಬರವಣಿಗೆಯಲ್ಲಿ ಸಾಮಾಜಿಕ ಕಳಕಳಿ ಬಹಳ ದೊಡ್ಡ ರೀತಿಯಲ್ಲಿ ಪ್ರಕಟಿತವಾಗಿದೆ. ಒಮ್ಮೆ ನಾನು ಮತ್ತು ಮೇಷ್ಟ್ರು ಟೆನಿಸ್ ಆಟ ನೋಡುತ್ತಿದ್ದೆವು. ಟೆನಿಸ್ ಅಂದ್ರೆ ತುಂಬ ಇಷ್ಟಪಡುತ್ತಿದ್ದರು. ಅವರ ನೆಚ್ಚಿನ ಟೆನಿಸ್ ತಾರೆ ಸ್ಟಫಿಗ್ರಫಿ. ನನಗೆ ಟೆನಿಸ್ ಗಂಧ ಗಾಳಿ ತಿಳಿದಿರಲಿಲ್ಲ. ಆದರೆ ಪತ್ರಿಕೆಯ ವರದಿಗಳನ್ನು ಓದಿ ಅಲ್ಪ ಸ್ವಲ್ಪ ತಿಳಿದುಕೊಂಡಿದ್ದೆ. ‘ಇವತ್ತು ಒಳ್ಳೆ ಮ್ಯಾಚ್ ಇದೆ ಕಣಯ್ಯ’ ಎಂದು ಹೇಳಿದರು. ಇಬ್ಬರೂ ಟೆನಿಸ್ ನೋಡುತ್ತಿದ್ದೆವು. ಒಬ್ಬರು ದಷ್ಟಪುಷ್ಟವಾಗಿ ಒಳ್ಳೆ ಎತ್ತರದ ನಿಲುವಿರುವ ಆಟಗಾರ್ತಿ. ಇನ್ನೊಬ್ಬರು ಸಾಧಾರಣ ಮೈಕಟ್ಟಿನ ಅಷ್ಟೇನೂ ಎತ್ತರವಿಲ್ಲದ ಆಟಗಾರ್ತಿ. ಇಬ್ಬರ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ನಡೆಯುತ್ತಿತ್ತು. ಮೇಷ್ಟ್ರು ಆಗಾಗ ಉದ್ಗಾರಗಳನ್ನು ತೆಗೆಯುತ್ತಿದ್ದರು. ನಾನು ಸುಮ್ಮನೆ ನೋಡುತ್ತಿದ್ದೆ. ಸಾಧಾರಣ ಮೈಕಟ್ಟಿನ ಹೆಣ್ಣುಮಗಳು ಬಾಲ್ ಹೊಡೆದಿದ್ದು, ಗೆರೆಯ ಅರ್ಧಕ್ಕೂ ಹಾಗೂ ಗೆರೆಯ ಅಂಚಿಗೂ ಬಿದ್ದು ಹೋಯಿತು. ಇದೆಲ್ಲಾ ಕ್ಷಣಮಾತ್ರದಲ್ಲಿ ಆಗಿರುವುದು.
ಅಂಪೈರ್ ಔಟ್ ಎಂದು ಹೇಳಿದ. ಇದರಿಂದ ಸಿಟ್ಟಿಗೆದ್ದ ಲಂಕೇಶ್ ‘ಅದು ಗುಡ್ ಬಾಲ್ ಕಣಯ್ಯ ಅವಳಿಗೆ ಸರಿಯಾದ ನ್ಯಾಯ ಸಿಗಲಿಲ್ಲ’ ಎಂದು ಅಂಪೈರ್ ಅನ್ನು ಕೆಟ್ಟದಾಗಿ ಬೈದು ಟೀವಿ ಆಫ್ ಮಾಡಿದರು. ನಾನು ಪ್ರತಿಕ್ರಿಯಿಸಲೋ ಬೇಡವೋ ಎಂಬ ಆತಂಕದಲ್ಲಿದ್ದೆ. ಮೇಷ್ಟ್ರು ನಿಜವಾಗಿಯೂ ಬೇಸರದಲ್ಲಿದ್ದರು. ಕೊನೆಗೂ ನಾನು ಅದು ಔಟ್ ಬಾಲ್ ಇರಬಹುದು ಸರ್ ಅಂದೆ. ಸುಮ್ಮನೆ ಇರಯ್ಯ ಅಂದರು. ಇಡೀ ವಾತಾವರಣ ನಿಶ್ಯಬ್ದವಾಗಿತ್ತು. ಸ್ವಲ್ಪಹೊತ್ತಾದ ನಂತರ ಮತ್ತೆ ಮಾತಿಗಿಳಿದ ಲಂಕೇಶರು, ಅದು ಗುಡ್ ಬಾಲ್ ಕಣಯ್ಯ ಅಂದರು. ನಾನು ಮರುಮಾತಾಡದೆ ಒಪ್ಪಿಕೊಂಡೆ. ಅವರು ಯಾವಾಗಲೂ ದುರ್ಬಲರ, ಶೋಷಿತ ಸಮಾಜ ಅಥವಾ ಇತರ ಯಾವುದೇ ಸಮುದಾಯದ ನೊಂದವರ ಪರವಾಗಿ ಇರುತ್ತಿದ್ದರು. ಇದನ್ನು ಬಹಿರಂಗವಾಗಿ ಹೇಳುತ್ತಿರಲಿಲ್ಲ. ಯಾರಿಗೂ ತಿಳಿಯದಂತೆ ನೊಂದವರಿಗೆ ಸಹಾಯ ಮಾಡುತ್ತಿದ್ದರು ಮತ್ತು ಅಂತಹವರ ಬಗ್ಗೆ ಒಳ್ಳೆಯ ಅಭಿಪ್ರಾಯಗಳನ್ನು ದಾಖಲಿಸುತ್ತಿದ್ದರು. ನನಗೆ ಅವರು ಬರೆದ ಎಲ್ಲಾ ಕಥೆಗಳಲ್ಲೂ ಮಾನವೀಯ ಜೀವ ಸ್ಪರ್ಷ ಎದ್ದುಕಾಣುತ್ತದೆ. ಇವರು ಬರೆದ ಕಥೆಗಳಲ್ಲಿ ನನಗೆ ವೈಯಕ್ತಿಕವಾಗಿ ಇಷ್ಟ ಮುಟ್ಟಿಸಿಕೊಂಡವನು, ಕಲ್ಲುಕರಗುವ ಸಮಯ, ಸಹಪಾಠಿ. ಮುಟ್ಟಿಸಿಕೊಂಡವನು ಕಥೆ, ಬಹುತೇಕ ಎಲ್ಲರೂ ಓದಿರುವ ಕಥೆ. ದಲಿತರೊಳಗಿರುವ ಪ್ರತಿಭೆ, ಜೀವಪ್ರೀತಿ, ಸಹನೆಯನ್ನು ಇದು ಎತ್ತಿ ಹಿಡಿಯುತ್ತದೆ. ಡಾ.ತಿಪ್ಪೇಸ್ವಾಮಿಯವರು ಜಾತಿಯನ್ನು ಮೀರಿ ತನ್ನನ್ನು ನಂಬಿ ಬಂದ ರೋಗಿಯನ್ನು ರಕ್ಷಿಸುವ ಜವಾಬ್ದಾರಿಯನ್ನು ನಿಭಾಯಿಸಿದ ರೀತಿ ಇಡೀ ಸಮಾಜಕ್ಕೆ ಕಣ್ಣ ಬೆಳಕಾಗುತ್ತದೆ. ಈ ದೇಶದಲ್ಲಿ ಡಾ.ತಿಪ್ಪೇಸ್ವಾಮಿಯಂತಹ ವೈದ್ಯರು ಇಡೀ ಸಮಾಜದ ಕಣ್ಣು, ಮನಸ್ಸಿನ ಶಸ್ತ್ರ ಚಿಕಿತ್ಸೆ ಮಾಡಿ ಕಣ್ಣು ತೆರೆಸುವ ಕತೆ ಸಮಾಜಕ್ಕೆ ದೊಡ್ಡ ಸಂದೇಶವನ್ನು ನೀಡಿದೆ.
ಲಂಕೇಶ್ ಮೇಷ್ಟ್ರು ಸಾಹಿತ್ಯದ ಮೂಲಕ ಎಚ್ಚರವನ್ನು ಮೂಡಿಸುವ ಕೆಲಸವನ್ನು ಬಹಳ ದೊಡ್ಡದಾಗಿ ಮಾಡಿದ್ದಾರೆ. ಮೇಷ್ಟ್ರ ಒಡನಾಟದಲ್ಲಿ ಅನೇಕಬಾರಿ ಹೌದು, ಇಲ್ಲ ಇಷ್ಟಕ್ಕೆ ಸೀಮಿತನಾಗುತ್ತಿದ್ದೆನಾದರೂ, ಕೆಲವೊಮ್ಮೆ ನೇರವಾಗಿ ಪ್ರಶ್ನೆ ಕೇಳಿದ್ದೇನೆ. ಕೆಲವು ಬಾರಿ ಸಂತೈಸಿದ್ದಾರೆ, ಉತ್ತರಿಸಿದ್ದಾರೆ. ನಿನಗೆ ನಿಧಾನವಾಗಿ ಗೊತ್ತಾಗುತ್ತದೆ ಬಿಡು ಎಂದು ಹೇಳಿದ್ದೂ ಉಂಟು. ಮೇಷ್ಟು ಪ್ರತೀ ವರ್ಷ ವಿಶೇಷ ಸಂಚಿಕೆಗಳನ್ನು ರೂಪಿಸುತ್ತಿದ್ದರು. ಆ ವಿಶೇಷ ಸಂಚಿಕೆಗಳು ಕರ್ನಾಟಕದ ಯುವ ಮನಸ್ಸುಗಳ ಹೊಸ ಆಲೋಚನೆಗೆ ತೆರೆದುಕೊಳ್ಳುವಂತಿರುತ್ತಿತ್ತು.
ಆ ಸಂಚಿಕೆಗಳಲ್ಲಿ ಎಲ್ಲಾ ಜಾತಿ ಧರ್ಮ ಸಣ್ಣಪುಟ್ಟ ಸಮುದಾಯಗಳ ಲೇಖಕರ ಕವಿಗಳ, ವಿಚಾರವಂತರ ಬರಹಗಳಿರುತ್ತಿದ್ದವು.
ಒಂದು ವಿಶೇಷ ಸಂಚಿಕೆಯನ್ನು ಓದಿ ಮುಗಿಸಿದ ಮೇಲೆ ಆ ಸಂಚಿಕೆ ಕುರಿತು ಮೇಷ್ಟ್ರು ಜೊತೆ ಮಾತನಾಡುತ್ತಿದ್ದೆ. ‘‘ಏನ್ ಸರ್ ಈ ವಿಶೇಷ ಸಂಚಿಕೆಯಲ್ಲಿ ಬ್ರಾಹ್ಮಣ ಲೇಖಕರೇ ಜಾಸ್ತಿ ಇದ್ದಾರೆ ಅಂತ ಕಾಣಿಸುತ್ತೆ’’ ಅಂದೆ. ನನ್ನ ಕಡೆ ನೋಡಿ ಮುಗುಳು ನಗುತ್ತಾ ‘‘ಹೌದಾ!’’ ಎಂದು ಒಂದು ಘಳಿಗೆಯ ನಂತರ ‘‘ಅಲ್ಲಾ ಕಣಯ್ಯ ಅವರೆಲ್ಲಾ ಕನ್ನಡಿಗರಲ್ಲವೇನಯ್ಯ?’’ ಅಂದರು. ಅವರು ಹೇಳಿದ್ದು ಸರಿ ಅನ್ನಿಸಿ ನನ್ನ ಮನಸ್ಸಿಗೆ ಪಿಚ್ ಅನ್ನಿಸಿತು. ಹೀಗೆ ಇನ್ನೊಮ್ಮೆ ಮಾತನಾಡುತ್ತಿದ್ದಾಗ
‘ನಿನಗೆ ಯಾವ ಯಾವ ಜಾತಿಯ ಗೆಳೆಯರು ಇದ್ದಾರಯ್ಯ?’’ ಎಂದು ಕೇಳಿದರು. ಅದಕ್ಕೆ ನಾನು ‘ಗೌಡರು, ಲಿಂಗಾಯತರು, ಬ್ರಾಹ್ಮಣರೂ ಎಲ್ಲಾ ಜಾತಿಯ ಫ್ರೆಂಡ್ಸ್ ಇದ್ದಾರೆ ಸರ್’ ಅಂದೆ. ‘‘ನೀನು ಹೇಳಿದ್ದು ಅಪಾಯಕಾರಿ ಶಸ್ತ್ರಾಸ್ತ್ರಗಳ ತರ ಕೇಳಿಸುತ್ತೆ ಕಣಯ್ಯ. ನಿನಗೆ ಯಾರೂ ಅಗಸರು ಸ್ನೇಹಿತರಿಲ್ಲವಾ?’’ ಅಂದರು, ನಿಜವಾಗಿಯೂ ನನಗೆ ಅಗಸರು ಸ್ನೇಹಿತರಿರಲಿಲ್ಲ.
ನಾನು ಮೌನವಾದೆ. ಸಣ್ನಪುಟ್ಟ ಸಮುದಾಯಗಳು ಹಾಗೂ ಅಸಹಾಯಕರು ಮತ್ತು ದುರರ್ಬಲರ ಜೊತೆ ಇರಬೇಕು ಕಣಯ್ಯ ಎನ್ನುವ ಅಂತಃಕರಣದ ಮಾತನ್ನು ಕೇಳಿ ಮೇಷ್ಟ್ರುಬಗ್ಗೆ ಗೌರವ ಮತ್ತಷ್ಟು ಹೆಚ್ಚಾಯಿತು. ಭಾರತದ ಜಾತೀಯತೆಯ ವಿರುದ್ಧ ಲಂಕೇಶ್ ಮೇಷ್ಟ್ರುಗೆ ಬಹಳ ಅಸಹನೆಯಿತ್ತು. ಅದರ ವಿರುದ್ಧ ನಿರಂತರ ಬರೆದು ಬದುಕಿದವರು. ಪತ್ರಿಕಾ ಕಚೇರಿಯ ಅವರ ಕೊಠಡಿಯಲ್ಲಿ ಯಾವುದೇ ಒಂದು ಸಮುದಾಯದವರು ಒಬ್ಬರಿಗಿಂತ ಹೆಚ್ಚು ಇರುತ್ತಿರಲಿಲ್ಲ. ಲಂಕೇಶ್ ಮೇಷ್ಟ್ರು ಮುಟ್ಟಿಸಿಕೊಂಡವನು ಕಥೆಯನ್ನು ಮಾತ್ರ ಬರೆಯಲಿಲ್ಲ. ಸ್ವತಃ ಅವರೇ ಎಲ್ಲರನ್ನೂ ಮುಟ್ಟಿಸಿಕೊಂಡಿದ್ದರು ಎನ್ನಬಹುದು. ನಾನು ಇರುವವರೆಗೂ ಕೋಮುವಾದಿ ಸರಕಾರ ಅಧಿಕಾರಕ್ಕೆ ಬರುವುದಿಲ್ಲ ಅನ್ನುತ್ತಿದ್ದರು. ಅದು ನಿಜ ಆಯ್ತು. ಆ ನಂತರದ ದಿನಮಾನಗಳಲ್ಲಿ ರಾಜ್ಯದಲ್ಲಿ ಏನೆಲ್ಲಾ ಆಗಿದೆ ಎಂಬುದು ತಿಳಿಯದ ವಿಷಯವೇನಲ್ಲ.
ಮೇಷ್ಟ್ರು ಬದುಕಿದ್ದಾಗ ಗಂಗಾಧರ ಕುಷ್ಟಗಿಯವರು ಲಂಕೇಶರ ಎಲ್ಲಾ ಬಳಗದಿಂದ ಲೇಖನವನ್ನು ಬರೆಸಿದರು. ನನಗೂ ಕೂಡಾ ಹೇಳಿದ್ದರು ಮತ್ತು ಅದಕ್ಕಾಗಿ ಒಂದು ಕಾರ್ಡನ್ನು ಕೂಡಾ ಬರೆದಿದ್ದರು. ಪ್ರತಿವಾರ ಮೇಷ್ಟ್ರಿಗೆ ಪತ್ರ ಬರೆಯುತ್ತಿದ್ದ ನಾನು ಅವರ ಬಗ್ಗೆ ಬರೆಯಲು ಕುಳಿತಾಗ ಒಂದು ವಾಕ್ಯವನ್ನೂ ಬರೆಯಲು ಸಾಧ್ಯವಾಗಲಿಲ್ಲ .
ಕುಷ್ಟಗಿಯವರು ಮತ್ತೆ ಮತ್ತೆ ಕೇಳ ತೊಡಗಿದರು. ನಾನು ಅವರಿಂದ ತಪ್ಪಿಸಿಕೊಳ್ಳುತ್ತಿದ್ದೆ. ಎಲ್ಲಿ ಈ ವಿಷಯ ಮೇಷ್ಟ್ರುಗೆ ತಿಳಿದುಬಿಡುತ್ತೋ ಎಂದು ಆತಂಕದಲ್ಲಿದ್ದೆ. ಒಂದು ದಿನ ಸ್ವತಃ ಮೇಷ್ಟ್ರೇ ‘ಪರವಾಗಿಲ್ಲ ಬಿಡಯ್ಯಾ ಬರೀಲೇ
ಬೇಕು ಅನ್ನುವುದು ಆಜ್ಞೆ. ಒತ್ತಾಯಕ್ಕೆ ಬರೆಯೋ ಅಗತ್ಯ ಇಲ್ಲ ಪರವಾಗಿಲ್ಲ ಬಿಡು’’ ಎಂದಿದ್ದು ನನಗೆ ಸಮಾಧಾನವಾಯಿತು. ಸದ್ಯ ಮೇಷ್ಟ್ರು ನನ್ನ ಅರ್ಥ ಮಾಡಿಕೊಂಡಿದ್ದಾರಲ್ಲ ಅನ್ನಿಸಿತು.
ಇದೆಲ್ಲ ನೆನಪಿಸಿಕೊಳ್ಳುವಾಗ ನನ್ನ ಪ್ರೀತಿಯ ಗೆಳೆಯ ‘ಗರ್ಭ’ ಕಥೆಯ ಖ್ಯಾತ ಕವಿ, ಕಥೆಗಾರ, ಪತ್ರಕರ್ತ ದಿವಂಗತ ಬಿ. ಎಂ. ರಶೀದ್ ನೆನಪಾದರು. ಮೇಷ್ಟ್ರನ್ನು ನಾವಿಬ್ಬರು ಭೇಟಿಯಾಗಿದ್ದು ನೆನಪಾಗುತ್ತದೆ. ಬೆಂಗಳೂರಿಗೆ ಬಂದಿದ್ದ
ಬಿ. ಎಂ. ರಶೀದ್‌ರನ್ನು ಮೈಸೂರು ಬ್ಯಾಂಕ್ ಹತ್ತಿರ ಭೇಟಿಯಾಗಿ ‘ಶಿವಾಜಿ ನಗರದಲ್ಲಿ ಒಳ್ಳೆಯ ಬಿರಿಯಾನಿ ತಿನ್ನೋಣ’ ಅಂದೆ. ಅದಕ್ಕೆ ‘‘ಬೇಡ, 1942 ಲವ್ ಸ್ಟೋರಿ ಸಿನೆಮಾ ನೋಡೋಣ’ ಅಂದರು. ನನಗೆ ಇಷ್ಟವಾದ ನಟಿ ಮನಿಷಾ ಕೊಯಿರಾಲಾ ನಟಿಸಿದ್ದಾರೆ ಎಂದು ಹೇಳಿ ನನ್ನನ್ನು ಆ ಸಿನೆಮಾಕ್ಕೆ
ಕರೆದೊಯ್ದರು. ಅಲ್ಲಿಂದ ಮೇಷ್ಟ್ರ ಆಫೀಸ್‌ಗೆ ಬಂದೆವು. ಮೇಷ್ಟ್ರು ನಮ್ಮನ್ನು ನೋಡಿ ‘ಏನು ಜೋಡಿ ಹಕ್ಕಿಗಳು?’ ಅಂದರು. ಇಬ್ಬರನ್ನು ಕೂರಿಸಿ ನಿಧಾನಕ್ಕೆ ಮಾತಿಗಿಳಿದ
ಮೇಷ್ಟ್ರು ಎಷ್ಟು ನಗಿಸಿದರು ಅಂದರೆ ನನ್ನ ಜೀವಮಾನದಲ್ಲಿ ಅಷ್ಟು ನಕ್ಕಿರಲಿಲ್ಲ. ಮಾತೇ ಆಡದೆ ಇದ್ದಂತಹ ರಶೀದ್
ಕೂಡ ಬಾಯಿ ತುಂಬಾ ನಕ್ಕರು. ನಾವು ಎಷ್ಟು ಹಗುರವಾದೆವು ಎಂದರೆ ಹೊರಗೆ ಬರುವಷ್ಟರಲ್ಲಿ ನಿಜ ಹಕ್ಕಿಯಾಗಿದ್ದೆವು.
ಮನುಷ್ಯರನ್ನು ಹಕ್ಕಿಯನ್ನಾಗಿಸುವ ಲಂಕೇಶ್ ಮೇಷ್ಟ್ರ
ಬೆಚ್ಚಗಿನ ಪ್ರೀತಿಯನ್ನು ಯಾವ ಶಬ್ದಗಳಲ್ಲೂ ಹೇಳ
ಲಾಗುವುದಿಲ್ಲ. ಆ ಗಳಿಗೆಯನ್ನು ನಾನು ಯಾವತ್ತೂ ಮರೆಯುವುದಿಲ್ಲ.
ಈ ನೆನಪುಗಳು ಯಾಕೆ ಬಿಚ್ಚಿಕೊಂಡವು ಎಂದರೆ, ಮೊನ್ನೆ ಅಂದರೆ ನವೆಂಬರ್ 11, 12, 13 ರಂದು ಕರ್ನಾಟಕ ಸಾಹಿತ್ಯ ಅಕಾಡಮಿಯವರು ‘ಲಂಕೇಶ್ ಬಹುತ್ವಗಳ ಶೋಧ’ ಎನ್ನುವ ಒಂದು ಅಪರೂಪದ ಅಧ್ಯಯನ ಶಿಬಿರ ಏರ್ಪಡಿಸಿದ್ದರು.
ಕಳೆದ 24 ವರ್ಷಗಳಿಂದ ಲಂಕೇಶರ ಕುರಿತು ಈ ರೀತಿಯ ಕಾರ್ಯಕ್ರಮವನ್ನು ನಡೆಸಲಾಗಿರಲಿಲ್ಲ. ನಾನು ಕೆಲವು ಅಕಾಡಮಿಗಳ ಅಧ್ಯಕ್ಷರಿಗೆ ಮೇಷ್ಟ್ರು ಬಗ್ಗೆ ಒಂದು ಕಾರ್ಯಕ್ರಮ ಮಾಡಿ ಅಂತ ಒತ್ತಾಯಿಸಿದ್ದೆ . ಯಾಕೋ ಅವರಿಗೆ ಲಂಕೇಶ್ ಅವರ ಬಗ್ಗೆ ಕಾರ್ಯಕ್ರಮ ಮಾಡುವ ಮನಸ್ಸಿರಲಿಲ್ಲ ಅನ್ನಿಸುತ್ತದೆ.
ನನಗೆ ತಿಳಿದಿರುವಂತೆ ನಾನು ಅನೇಕ ಸಾಹಿತ್ಯದ ಕಾರ್ಯಕ್ರಮಗಳಲ್ಲಿ ಹಾಗೂ ಸಾಹಿತ್ಯಕ ಚಟುವಟಿಕೆಗಳಲ್ಲಿ ಭಾಗವಹಿಸಿದ್ದೇನೆ. ಅಲ್ಲಿ ಬೇರೆ ಲೇಖಕರ, ಕವಿಗಳ ಹೆಸರುಗಳು ಬಂದು ಹೋಗುತ್ತಿದ್ದವು. ಆದರೆ ಯಾರೂ ಕನ್ನಡದ ಮಹತ್ವದ ಲೇಖಕರಾದ ಲಂಕೇಶರ ಹೆಸರನ್ನು ಹೇಳುತ್ತಿರಲಿಲ್ಲ. ಇರಲಿ ಈಗ ಬಂದಿರುವ ಅಕಾಡಮಿ ಅಧ್ಯಕ್ಷರಾದ ಕವಿ ಎಲ್.ಎನ್. ಮುಕುಂದರಾಜು ನನ್ನಂತಹ ಅನೇಕರ ಕನಸನ್ನು ನನಸು ಮಾಡಿದ್ದಾರೆ.
ಅಕಾಡಮಿಯ ಸದಸ್ಯರು ಹಾಗೂ ಅಧಿಕಾರಿಗಳಿಗೆ ಲಂಕೇಶರನ್ನ ಇಂತಹ ಕಾರ್ಯಕ್ರಮಗಳ ಮೂಲಕ ಹೊಸತಲೆಮಾರಿಗೆ ದಾಟಿಸುತ್ತಿರುವುದಕ್ಕೆ ಅವರಿಗೆಲ್ಲಾ ನನ್ನ ಅಭಿನಂದನೆಗಳು. ಲಂಕೇಶ್ ಎಲ್ಲರನ್ನೂ ಮುಟ್ಟುವ ಲೇಖಕರಾಗಿರುವುದನ್ನು ಕಾಲ ಮರೆಯುವುದಿಲ್ಲ.