ಮನೆ, ಕಾರು, ಫರ್ನಿಚರ್ ಆಸೆಗೆ ಬಿದ್ದು ಬೀದಿಗೆ ಬೀಳಬೇಡಿ!

Update: 2024-11-19 17:18 GMT

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬರುತ್ತಿದೆ ದಿನಕ್ಕೊಂದು ಸ್ಕೀಮ್…ಮನೆ, ಕಾರು, ಚಿನ್ನದ ಆಸೆಯಲ್ಲಿ ಸ್ಕೀಂಗಳಿಗೆ ಹಣ ಪಾವತಿಸುತ್ತಿರುವ ಜನ… ಅಬ್ಬರದ ಪ್ರಚಾರ, ಬಂಪರ್ ಆಫರ್…ಬಣ್ಣಬಣ್ಣದ ಜಾಹೀರಾತುಗಳು, ಇನ್ ಫ್ಲೂಯೆನ್ಸರ್ ಗಳಿಂದ ಆಕರ್ಷಕ ವಿಡಿಯೋಗಳು. ಯಾರಿಗುಂಟು ಯಾರಿಗಿಲ್ಲ ಈ ಭಾಗ್ಯ... ಅನ್ನೋ ಪರಿಸ್ಥಿತಿ

ಕೇವಲ ಒಂದು ಸಾವಿರ ಕೊಟ್ಟರೆ ದುಬಾರಿ ಕಾರುಗಳು, ಬೈಕ್ ಗಳು, 2ಬಿಹೆಚ್‌ ಕೆ ಮನೆ ಕೊಡುವ ಸಂಸ್ಥೆಯನ್ನು ನೀವು ಎಲ್ಲಾದ್ರು ನೋಡಿದ್ದೀರಾ? ಯಾವು ಬಿಝಿನೆಸ್ ಮ್ಯಾನ್ ಬರೀ 1,000ಕ್ಕೆ ಮೂರು ಕಾರು ಗೆಲ್ಲುವ ಅವಕಾಶ ಮಾಡಿ ಕೊಡುತ್ತಾರೆ? ನಮ್ಮದು 24 ತಿಂಗಳ ಸೇವಿಂಗ್ಸ್ ಪ್ಲಾನ್, ಗೌರ್ಮೆಂಟ್ ಸರ್ಟಿಪೈಡ್ ಸಂಸ್ಥೆ, 10 ಬಂಪರ್ ಬಹುಮಾನಗಳು, 50+50 ಉಂಗುರಗಳು…ಒಬ್ಬರಿಗೆ 2 ಬಿಹೆಚ್ ಕೆ ಮನೆ, ಮೂರು ಮಂದಿಗೆ ಹೋಂಡಾ ಆಕ್ಟಿವಾ, 3 ಮಂದಿಗೆ 3 ಬೈಕ್, ಮೂರು ಮಂದಿಗೆ ತಲಾ 50,000 ನಗದು. ಒಂದನೇ ಡ್ರಾದಲ್ಲಿ ಆರು ಕಾರು, 20 ಬೈಕ್, 50 ಚಿನ್ನದ ಉಂಗುರಗಳನ್ನು ಕೊಟ್ಟಿದ್ದೇವೆ, ಜೊತೆಗೆ ಸರ್ಪೈಸ್ ಗಿಪ್ಟ್ ಆಗಿ ಚಿನ್ನದ ಉಂಗುರವನ್ನೂ ಕೊಟ್ಟಿದೇವೆ, ಬೇರೆ ಬೇರೆ ತಿಂಗಳಲ್ಲಿ ಬೇರೆ- ಬೇರೆ ಬಂಪರ್‌ ಬಹುಮಾನಗಳು, ಇದಕ್ಕೆಲ್ಲಾ ನೀವು ಕೊಡಬೇಕಿರುವುದು ಬರೀ 1,000 ರೂ.

ಕ್ರೇಟಾ, ಸ್ವಿಫ್ಟ್ , ಮನೆ, ಬೈಕ್‌, ಚಿನ್ನ ಹೀಗೆ ಹಲವು ಬಹುಮಾನಗಳನ್ನು ಗೆಲ್ಲುವ ಅವಕಾಶ. ಒಂದು ವೇಳೆ ನಿಮ್ಮ ಅದೃಷ್ವ ಸರಿಯೇ ಇಲ್ಲ ಅಂದ್ರೆ ನೀವು ತಲೆ ಕೆಡಿಸಿಕೊಳ್ಳಬೇಡಿ, ನಿಮಗೆ 24 ತಿಂಗಳು ಯಾವುದೇ ಬಹುಮಾನ ಬಂದಿಲ್ಲ ಅಂದ್ರೆ ಯಾವುದೇ ಚಿಂತೆ ಬೇಡ. ನಿಮಗೆ 24 ತಿಂಗಳಲ್ಲೂ ಏನೂ ಸಿಕ್ಕಿಲ್ಲ ಎಂದರೆ ಕೊನೆಗೆ 12,000 ಕ್ಯಾಶ್ ಬ್ಯಾಕ್ ಕೊಡುತ್ತೇವೆ. ಜೊತೆಗೆ 12,000 ರೂ. ಬೆಲೆಬಾಳುವ ವಸ್ತುಗಳನ್ನೂ ಕೊಡುತ್ತೇವೆ.

ನಾವು ಕೂಪನ್ ಬಾಕ್ಸ್ ಕೈಯ್ಯಲ್ಲಿ ತಿರುಗಿಸಲ್ಲ, ಸ್ವಯಂ ಚಾಲಿತವಾಗಿ ಅದೇ ತಿರುತ್ತದೆ. ಮೆಷಿನ್ ಅಳವಡಿಸಿರುವ ಲಕ್ಕಿ ಬಾಕ್ಸ್ ಅರೆಂಜ್ ಮಾಡುತ್ತಿದ್ದೇವೆ. ಅಷ್ಟು ಪಕ್ಕಾ ಸ್ಕೀಂ ನಮ್ಮದು ಎಂದು ಒಂದು ಗುಂಪು ಹೇಳುತ್ತದೆ.

ಇನ್ನೊಂದು ಗುಂಪಿನ ಕಥೆಯೇ ಬೇರೆ. 20 ಸೆಂಟ್ಸ್ ಜಾಗ ನಿಮ್ಮದಾಗಿಸಬೇಕಾ? 2 ಬೆಡ್‌ ರೂಮಿನ 6 ಸುಸಜ್ಜಿತ ಮನೆಗಳನ್ನು ಬಹುಮಾನವಾಗಿ ಗೆಲ್ಲಬೇಕಾ? 4 ಕಾರು, 11 ದ್ವಿಚಕ್ರ ವಾಹನ, ಲಕ್ಷಾಂತರ ಮೌಲ್ಯದ ಚಿನ್ನ, ಡೈಮಂಡ್ ನಿಮಗೆ ಬೇಕಾ, ದುಬೈಗೆ ಟ್ರಿಪ್‌ ಗೆ ಹೋಗಬೇಕಾ? ಹಾಗಾದರೆ ನೀವು ನಮಗೆ ಬರೀ 1000 ರೂ. ಕೊಟ್ಟರೆ ಸಾಕು. ನಾವು ಈ ಬಂಪರ್‌ ಆಫರ್ ಗೆಲ್ಲುವ ಅವಕಾಶ ಮಾಡಿ ಕೊಡುತ್ತಿದ್ದೇವೆ ಎಂದು ಹೇಳುತ್ತಾರೆ.

ಇಷ್ಟೆಲ್ಲಾ ಆಫರ್ ಕೇಳುವಾಗ ಎಂಥವರೂ ಇವರ ಬಲೆಗೆ ಬಿದ್ದೇ ಬೀಳುತ್ತಾರೆ. ತಿಂಗಳಿಗೆ ಸಾವಿರ ರೂಪಾಯಿ, ವರ್ಷಕ್ಕೆ ಹನ್ನೆರಡು ಸಾವಿರ, ಎರಡು ವರ್ಷಕ್ಕೆ 24 ಸಾವಿರ, ಬಂಪರ್ ಬಹುಮಾನ ಬರದೇ ಇದ್ದರೂ ಎರಡು ವರ್ಷ ಆಗುವಾಗ ಕಟ್ಟಿದ ದುಡ್ಡು ವಾಪಸ್ ಸಿಗುತ್ತದೆ. ಹಾಗಾದರೆ ಮತ್ತೆ ಸಮಸ್ಯೆ ಏನು? ಸಿಕ್ಕಿದರೆ ಕಾರು, ಮನೆ, ಬೈಕು, ಇತ್ಯಾದಿ ಇತ್ಯಾದಿ, ಸಿಗದೇ ಇದ್ದರೆ ದುಡ್ಡು ವಾಪಸ್.

ರಾಜಕಾರಣಿಗಳು, ಸಿನಿಮಾ ನಟರು, ಸಾಮಾಜಿಕ ಜಾಲತಾಣಗಳ ಪ್ರಭಾವಿಗಳನ್ನು ಬಳಸಿಕೊಂಡು ಇದನ್ನೇ ಹೇಳಿಸಲಾಗುತ್ತದೆ. ಸ್ಕೀಂ ಬಗ್ಗೆ ದೊಡ್ಡ ಮಟ್ಟದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಪ್ರಚಾರ ನಡೆಯುತ್ತಿದೆ. ಡ್ರಾದಲ್ಲಿ ಕಾರು ಗೆದ್ದುಕೊಂಡ ಫಲಾನುಭವಿಗಳ ಫೋಟೋಗಳು, ವಿಡಿಯೋಗಳನ್ನು ಆನ್‌ ಲೈನ್‌ ನಲ್ಲಿ ಹಂಚಿಕೊಂಡು ಜನರನ್ನು ಸೆಳೆಯಲಾಗುತ್ತಿದೆ. ಫೇಸ್‌ ಬುಕ್, ಇನ್ಸ್ಟಾಗ್ರಾಂ ಬಳಕೆದಾರರನ್ನು ಗುರಿಯಾಗಿಸಿ ಅಬ್ಬರದ ಪ್ರಚಾರವೂ ಜೋರಾಗಿದೆ. ಒಂದಷ್ಟು ಫಾಲೋವರ್ಸ್ ಇರುವ ಇನ್ ಫ್ಲೂಯೆನ್ಸರ್ ಗಳನ್ನು ಇದಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ, ಅವರ ಕಾಮಿಡಿ ಕಂಟೆಂಟ್ ನಲ್ಲೂ ಇದೇ ಸ್ಕೀಮುಗಳ ಪ್ರಚಾರ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನಕ್ಕೊಂದರಂತೆ ಇಂತಹ ಸ್ಕೀಂಗಳು ಹೊರ ಬರುತ್ತಿವೆ. ಕಾರು, ಮನೆ, ಬೈಕ್‌, ಚಿನ್ನ ಗೆಲ್ಲುವ ಆಸೆಯಲ್ಲಿ ಜನ ದುಡಿದ ಹಣ ಕಂತಾಗಿ ಪಾವತಿಸುತ್ತಿದ್ದಾರೆ. ಆದರೆ , ಮಾತಿನ ಮೂಲಕ ಕನಸಿನ ಗೋಪುರ ಕಟ್ಟಿ ವಸೂಲಿ ಮಾಡುವ ಇಂತಹ ಸ್ಕೀಂಗಳ ಭವಿಷ್ಯವೇನು? ಇದಕ್ಕೂ ಮೊದಲ ಬಂದಿದ್ದ ಇಂತಹದ್ದೇ ಸ್ಕೀಂಗಳು ಏನಾಗಿವೆ?

ಇದಕ್ಕೂ ಮೊದಲು ಜಿಲ್ಲೆಯಲ್ಲಿ ಸಣ್ಣ ಸಣ್ಣ ಸ್ಕೀಂಗಳು ನಡೆಯುತ್ತಿದ್ದವು, ಜನರಿಂದ ತಿಂಗಳಿಗೆ 100, 200 ಕಟ್ಟಿಸಿಕೊಂಡು ಕೊನೆಗೆ ಕಳಪೆ ಗುಣಮಟ್ಟದ ಚಿನ್ನದ ಉಂಗುರವನ್ನೋ, ಫ್ರಿಡ್ಜ್ ಗಳನ್ನೋ ಕೊಟ್ಟು ಜನರನ್ನು ಸಮಾಧಾನಪಡಿಸುತ್ತಿದ್ದರು. ಆದರೆ ಈಗ ಟ್ರೆಂಡ್ ಬದಲಾಗಿ ದೊಡ್ಡ ಮಟ್ಟದಲ್ಲೇ ನಡೆಯುತ್ತಿದೆ.

ಇದಕ್ಕೆ ಪೊಂಝೀ ಸ್ಕೀಂಗಳು ಎಂದು ಕರೆಯಲಾಗುತ್ತದೆ. ಪೋಂಝೀ ಸ್ಕೀಂಗಳು ನಮ್ಮ ದೇಶಕ್ಕೆ ಹೊಸದೇನಲ್ಲ. ಶಾರದಾ ಚಿಟ್ ಫಂಡ್, ರೋಸ್ ವ್ಯಾಲಿ ದೇಶದಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿದ್ದವು. ಜನರು ಹೆಚ್ಚಿನ ಆದಾಯದ ಭರವಸೆಯಿಂದ ಹೂಡಿಕೆ ಮಾಡಿ ಕೊನೆಗೆ ಬೀದಿ ಪಾಲಾಗಿದ್ದರು.

ಕರ್ನಾಟಕದಲ್ಲಿ ಐಎಂಎ ಎಂಬ ಸಂಸ್ಥೆ ಮುಸ್ಲಿಮರಿಗೆ ಹೂಡಿಕೆಯ ಆಫರ್ ನೀಡಿತ್ತು, ಹಲಾಲ್ ರೀತಿಯಲ್ಲೇ ಹೆಚ್ಚಿನ ಲಾಭವನ್ನು ನೀಡುವ ಭರವಸೆ ನೀಡಿತ್ತು. ರಾಜಕೀಯ, ಧಾರ್ಮಿಕ ಮುಖಂಡರ ಸಂಪೂರ್ಣ ಆಶೀರ್ವಾದ ಹಾಗು ಅಬ್ಬರದ ಪ್ರಚಾರದಿಂದ ಐಎಂಎ ಕಂಪನಿ ಹಲಾಲ್ ವ್ಯಾಪಾರ ಸಂಸ್ಥೆ ಎಂದೇ ಬಿಂಬಿಸಲಾಗಿತ್ತು.

ಇದನ್ನೇ ನಂಬಿ ಸುಮಾರು 6,380 ಮಂದಿ ಕಂಪೆನಿಯಲ್ಲಿ ಹೂಡಿಕೆ ಮಾಡಿದ್ರು, ಈ ಪೈಕಿ ಶೇ.50ರಷ್ಟು ಜನ 50,000 ರೂ.ನಿಂದ 3 ಲಕ್ಷ ರೂ.ವರೆಗೆ ಹೂಡಿಕೆ ಮಾಡಿದವರಾಗಿದ್ದರು. ಹೆಚ್ಚಿನ ಹೂಡಿಕೆದಾರರು ಗೃಹಿಣಿಯರು, ರಿಕ್ಷಾ ಚಾಲಕರು, ಸಣ್ಣ ವ್ಯಾಪಾರಿಗಳು, ಬೀಡಿ ಕಾರ್ಮಿಕರಾಗಿದ್ದರು. ಇವರು ತಮ್ಮ ಜೀವನದಲ್ಲಿ ಸಂಪಾದಿಸಿದ್ದ ಹಣವನ್ನು ಲಾಭದ ಆಸೆಯಿಂದ ಐಎಂಎ ಸಂಸ್ಥೆಯಲ್ಲಿ ಹೂಡಿಕೆ ಮಾಡಿದ್ದರು. ಆದರೆ ಕೊನೆಗೆ ಏನಾಯ್ತು?

ಐಎಂಎ ನಿರ್ದೇಶಕ ಮನ್ಸೂರ್ ಅಲಿ ಖಾನ್ ನಿಂದ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ. ಐಎಂಎ ಹಗರಣದಿಂದ ಹಣ ಕಳೆದುಕೊಂಡು ಬೀದಿಗೆ ಬಂದವರು ಸಾವಿರಾರು ಸಣ್ಣ, ಸಣ್ಣ ಹೂಡಿಕೆದಾರರು. ಇಡೀ ರಾಜ್ಯದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದ ಈ ಹಗರಣದಲ್ಲಿ 4,000 ಕೋಟಿ ರೂ. ಗಿಂತ ಹೆಚ್ಚು ವಂಚನೆ ನಡೆದಿತ್ತು. ಈ ಪ್ರಕರಣದಲ್ಲಿ ರಾಜಕಾರಣಿಗಳು, ಹಿರಿಯ ಐಪಿಎಸ್ ಅಧಿಕಾರಿಗಳು ವಿಚಾರಣೆಯನ್ನು ಎದುರಿಸಿದ್ದರು.

ಪಶ್ಚಿಮ ಬಂಗಾಳದಲ್ಲಿ ಶಾರದಾ ಸಮೂಹ ಅತಿ ಹೆಚ್ಚಿನ ಬಡ್ಡಿ ಆಮಿಷವೊಡ್ಡಿ ಶಾರದಾ ಗ್ರೂಪ್ ಪೋಂಝೀ ಸ್ಕೀಮ್ ನಡೆಸುತ್ತಿತ್ತು. ಸಾವಿರಾರು ಜನರು ಹೆಚ್ಚಿನ ಬಡ್ಡಿ ಆಸೆಗೆ ಕಂಪೆನಿಯಲ್ಲಿ ಹೂಡಿಕೆ ಮಾಡಿದ್ದರು. 2013ರ ವೇಳೆಗೆ ಠೇವಣಿದಾರರಿಂದ ಸಂಸ್ಥೆಯು ಸಾವಿರಾರು ಕೋಟಿ ರೂ. ಸಂಗ್ರಹಿಸಿತ್ತು. ಆದರೆ ಕೊನೆಗೆ ಈ ಕಂಪನಿ ಹೂಡಿಕೆದಾರರಿಗೆ ವಂಚನೆ ನಡೆಸಿತ್ತು. ಶಾರದಾ ಸಮೂಹ ಹಗರಣದಲ್ಲಿ ದೊಡ್ಡ ದೊಡ್ಡ ಉದ್ಯಮೀಗಳು ಹಾಗೂ ರಾಜಕಾರಣಿಗಳು ಶಾಮೀಲಾಗಿದ್ದರು. ಸುಪ್ರೀಂ ಕೋರ್ಟ್ ಪ್ರಕರಣವನ್ನು 2014ರಲ್ಲಿ ಸಿಬಿಐಗೆ ವಹಿಸಿತ್ತು. ಅನೇಕ ಪ್ರಭಾವಿ ರಾಜಕಾರಣಿಗಳು ಬಂಧನಕ್ಕೊಳಗಾಗಿದ್ದರು. ಶಾರದಾ ಗ್ರೂಪ್ 2013ರವರೆಗೆ ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ಒರಿಸ್ಸಾ ರಾಜ್ಯಗಳಲ್ಲಿ ಜನರಿಗೆ ಆಮಿಷವೊಡ್ಡಿ 2,459 ಕೋಟಿ ರೂಪಾಯಿಗಳಷ್ಟು ಹಣ ಸಂಗ್ರಹಿಸಿತ್ತು. ಆದರೆ ಸುಮಾರು 1,983 ಕೋಟಿ ರೂ. ಮರು ಪಾವತಿ ಮಾಡಿಲ್ಲ.

ರೋಸ್ ವ್ಯಾಲಿ ಹಗರಣವು 2013ರಲ್ಲಿ ಪಶ್ಚಿಮ ಬಂಗಾಳ ರಾಜ್ಯವನ್ನು ಬೆಚ್ಚಿಬೀಳಿಸಿದ ಅತಿದೊಡ್ಡ ಹಣಕಾಸು ವಂಚನೆಗಳಲ್ಲಿ ಒಂದಾಗಿದೆ. ಈ ಹಗರಣವು ಶಾರದಾ ಹಗರಣಕ್ಕಿಂತಲೂ ದೊಡ್ಡದಾಗಿತ್ತು ಮತ್ತು ಜಾರಿ ನಿರ್ದೇಶನಾಲಯದ ಅಂದಾಜಿನ ಪ್ರಕಾರ ಭಾರತದಾದ್ಯಂತ ಹೂಡಿಕೆದಾರರಿಂದ 17,520 ಕೋಟಿ ರೂ. ಸಂಗ್ರಹಿಸಲಾಗಿತ್ತು.

1990ರ ದಶಕದಲ್ಲಿ ಕಾಜಲ್ ಕುಂಡು ಎಂಬ ಎಲ್ಐಎಸಿ ಏಜೆಂಟ್ ರೋಸ್ ವ್ಯಾಲಿ ಹೆಸರಿನ ಕಂಪನಿ ಹುಟ್ಟುಹಾಕಿದ್ದ. ಆತನ ಬಳಿಕ ಆತನ ಸಹೋದರ ಗೌತಮ್ ಈ ಕಂಪನಿ ಬೆಳೆಸಿದ್ದ. ಜನರ ಮುಂದೆ ದೊಡ್ಡ ದೊಡ್ಡ ಕನಸಿನ ಗೋಪುರವನ್ನೇ ನಿರ್ಮಿಸಿದ್ದ ಈ ಸಂಸ್ಥೆ ಜನರಿಂದ ಹಣ ವಸೂಲಿ ಮಾಡಿ ವಂಚನೆ ನಡೆಸಿತ್ತು. ರೋಸ್‌ ವ್ಯಾಲಿ ಹಾಲಿಡೇ ಮೆಂಬರ್ ಶಿಪ್ ಪ್ಲಾನ್ ಅಡಿ ಪ್ರತಿ ತಿಂಗಳು ಹಣ ಪಾವತಿಸಬೇಕಿತ್ತು, ಜನರಿಗೆ ಪ್ರವಾಸ, ಫೈವ್ ಸ್ಟಾರ್ ಹೊಟೇಲ್ ಗಳಲ್ಲಿ ತಂಗಲು ಅವಕಾಶ ಸೇರಿದಂತೆ ವಿಶೇಷ ಆಫರ್ ಗಳನ್ನೂ ನೀಡಲಾಗಿತ್ತು.

ಆದರೆ ಕೊನೆಗೆ ಬಡ್ಡಿ, ಟೂರು ಏನೂ ಇಲ್ಲದೆ ಜನ ಹೂಡಿಕೆ ಮಾಡಿದ ಹಣವನ್ನು ಕೂಡ ಕಳೆದುಕೊಂಡಿದ್ದಾರೆ. ಜಾರಿ ನಿರ್ದೇಶನಾಲಯದ ಪ್ರಕಾರ ರೋಸ್ ವ್ಯಾಲಿ ವಂಚನೆ ಶಾರದಾಗಿಂತ ದೊಡ್ಡದಾಗಿದೆ.ರೋಸ್‌ ವ್ಯಾಲಿ ಹಗರಣದ ಹಣದ ಒಂದು ಭಾಗವನ್ನು ರಾಜಕಾರಣಿಗಳಿಗೆ ಲಂಚ ನೀಡಲು ಬಳಸಲಾಗುತ್ತಿತ್ತು, ಇದರಿಂದ ಹಗರಣವು ಸುಗಮವಾಗಿ ನಡೆಯುತ್ತಿತ್ತು. ಹೀಗೆ ಒಂದಲ್ಲ, ಎರಡಲ್ಲಾ.. ಹೇಳಿದರೆ ಮುಗಿಯದಷ್ಟು ಸ್ಕೀಂಗಳು ಬಂದಿದೆ, ವಂಚನೆಗಳು ಕೂಡ ನಡೆದಿದೆ. ನಡೆಯುತ್ತಲೂ ಇವೆ.

ಆದ್ದರಿಂದ ಜನ ಇಂತಹ ಆಮಿಷಕ್ಕೆ ಒಳಗಾಗಿ ಹಣಕಳೆದುಕೊಳ್ಳುವುದಕ್ಕಿಂತ ಮೊದಲೇ ಎಚ್ಚೆತ್ತುಕೊಳ್ಳುವುದು ಒಳಿತು. ಯಾವುದೇ ಸ್ಕೀಮ್ ಗೆ ಹಣ ಹೂಡುವ ಮೊದಲು ನೀವು ಇಷ್ಟು ಯೋಚನೆ ಮಾಡಿದರೆ ಸಾಕು. ಆ ಸ್ಕೀಮ್ ನವರು ನಿಮಗೆ ಯಾಕಾಗಿ ಕಾರು, ಬೈಕು, ಮನೆ ಇತ್ಯಾದಿ ಬಹುಮಾನ ಕೊಡುತ್ತಾರೆ? ಅವರೇನು ಅಲ್ಲಿ ಸಮಾಜಸೇವೆ ಮಾಡಲು ಬಂದು ಕೂತಿದ್ದಾರಾ? ಲಾಭದಿಂದ ಕೊಡುತ್ತಾರೆ ಅಂತಾದ್ರೆ ಅಷ್ಟೊಂದು ಲಾಭ ಅವರಿಗೆ ಹೇಗೆ ಬರುತ್ತೆ? ಎಲ್ಲಿಂದ ಬರುತ್ತೆ?

ಇಲ್ಲಿ ವರ್ಷಗಟ್ಟಲೆಯಿಂದ ನಡೆಯುತ್ತಿರುವ ಉದ್ಯಮಗಳೇ ಪ್ರತಿ ವರ್ಷ ಲಾಭ ಪಡೆಯುವುದು ಕಷ್ಟವಾಗಿರುವಾಗ ಈ ಸ್ಕೀಮುಗಳು ಇಷ್ಟೊಂದು ಲಾಭ ಎಲ್ಲಿಂದ ಪಡೆಯುತ್ತವೆ? ಇದೇ ರೀತಿ ಎಷ್ಟು ಮಂದಿಗೆ, ಎಷ್ಟು ಸಮಯ ಈ ಸ್ಕೀಮ್ ನವರು ಬಹುಮಾನಗಳನ್ನು ಕೊಡಲು ಸಾಧ್ಯ? ನಿಮ್ಮನ್ನು ಉದ್ದಾರ ಮಾಡಲು, ನಿಮಗೆ ಮನೆ, ಕಾರು ಕೊಡಿಸಲು ಅವರು ಬಂದು ಸ್ಕೀಮ್ ಶುರು ಮಾಡಿದ್ದಾರಾ?

ಈ ಪ್ರಶ್ನೆಗಳ ಬಗ್ಗೆ ಗಂಭೀರವಾಗಿ ಯೋಚಿಸಿ. ಇನ್ಸ್ಟಾಗ್ರಾಮ್ ನಲ್ಲಿ ಕಾಮಿಡಿ ಮಾಡುವವರ ಕಾಮಿಡಿ ನೋಡಿ ಆನಂದಿಸಿ. ಅವರಿಗೆ ಲೈಕ್, ಕಮೆಂಟ್ ಕೊಟ್ಟು ಪ್ರೋತ್ಸಾಹಿಸಿ. ಅವರು ದುಡ್ಡಿನ ಬಗ್ಗೆ, ಹೂಡಿಕೆ ಬಗ್ಗೆ , ಲಾಭದ ಬಗ್ಗೆ ಹೇಳಿದರೆ ಅವರನ್ನು ಅನ್ ಫಾಲೋ ಮಾಡಿಬಿಡಿ. ನೀವು ಕಷ್ಟಪಟ್ಟು ದುಡಿದು ಅದರಿಂದ ಬರುವ ಸಂಪಾದನೆಯಿಂದ ಏನು ಸಿಗುತ್ತೋ ಅದರಲ್ಲಿ ನೆಮ್ಮದಿಯಾಗಿರಿ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News