ಅಕ್ರಮ ದನ ಸಾಗಾಟ ಮಾಡಿ ಸಿಕ್ಕಿ ಬಿದ್ದ ಬಿಜೆಪಿ ಮುಖಂಡ ಪ್ರಮೋದ್ ಸಾಲ್ಯಾನ್

Update: 2023-07-14 16:49 GMT

- ಆರ್. ಜೀವಿ

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಮತ್ತೊಮ್ಮೆ ನಕಲಿ ಗೋ ರಕ್ಷಕರ ಮುಖವಾಡ ಕಳಚಿ ಬಿದ್ದಿದೆ. ಗೋ ರಕ್ಷಣೆಯ ಹೆಸರಲ್ಲಿ ಅಮಾಯಕರನ್ನು ಹಿಡಿದು ಹಲ್ಲೆ, ಲೂಟಿ ಮಾಡುವವರ ಅಸಲಿಯತ್ತು ಬಯಲಾಗಿದೆ. ಬಿಜೆಪಿಯ ಗೋ ರಕ್ಷಣೆ ಘೋಷಣೆಗಳು, ಭಾಷಣಗಳು ಅದೆಷ್ಟು ಪೊಳ್ಳು ಎಂಬುದು ಎಲ್ಲರೆದುರು ಬಹಿರಂಗವಾಗಿದೆ.

ಜುಲೈ12 ಬುಧವಾರದಂದು ಧರ್ಮಸ್ಥಳ ಪೊಲೀಸ್ ಠಾಣಾ ಎಸ್ ಐ ಅನಿಲ್ ಕುಮಾರ್ ಅವರು ತಮಗೆ ಸಿಕ್ಕಿದ ಖಚಿತ ಮಾಹಿತಿಯಂತೆ ಬೆಳ್ತಂಗಡಿ ತಾಲೂಕು ಧರ್ಮಸ್ಥಳ ಗ್ರಾಮದ ಕನ್ಯಾಡಿ ರಾಮ ಮಂದಿರದ ಬಳಿ ಸಿಬ್ಬಂದಿಗಳೊಂದಿಗೆ ವಾಹನ ತಪಾಸಣೆ ಮಾಡುತ್ತಿದ್ದರು. ಆಗ ರಾತ್ರಿ ಸುಮಾರು 08.45 ಗಂಟೆ. ಆಗ ಉಜಿರೆ ಕಡೆಯಿಂದ ಧರ್ಮಸ್ಥಳ ಕಡೆಗೆ ಬರುತ್ತಿದ್ದ ಮೂರು ಪಿಕಪ್‌ ವಾಹನಗಳನ್ನು ನಿಲ್ಲಿಸಿ ತಪಾಸಣೆ ನಡೆಸಿದಾಗ ಆ ವಾಹನಗಳಲ್ಲಿ ಕಪ್ಪು ಮತ್ತು ಕಂದು ಬಣ್ಣದ ಆರು ದನಗಳು , 2 ಗಂಡು ಕರುಗಳು ಹೀಗೆ ಒಟ್ಟು 8 ಜಾನುವಾರುಗಳನ್ನು ಹಿಂಸಾತ್ಮಕವಾಗಿ ತುಂಬಿಸಿ ಸಾಗಾಟ ಮಾಡುತ್ತಿರುವುದು ಕಂಡು ಬಂದಿದೆ. ವಾಹನದಲ್ಲಿದ್ದವರನ್ನು ವಿಚಾರಿಸಿದಾಗ ಇಂದಬೆಟ್ಟು ಮತ್ತು ನಾವೂರು ಪರಿಸರದಿಂದ ಜಾನುವಾರುಗಳನ್ನು ಖರೀದಿಸಿ, ಹಾಸನ ಕಡೆಗೆ ಮಾರಾಟ ಮಾಡಲೆಂದು ಮೂರು ವಾಹನಗಳಲ್ಲಿ ಹಿಂಸಾತ್ಮಕವಾಗಿ ಜಾನುವಾರುಗಳನ್ನು ತುಂಬಿಸಿ ಕೊಂಡು ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ. ವಾಹನಗಳ ಸಹಿತ ಜಾನುವಾರುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಈ ಪ್ರಕರಣದಲ್ಲಿ ಬಂಧಿತರು ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದ ಪ್ರಮೋದ್ ಸಾಲ್ಯಾನ್, ಅದೇ ತಾಲೂಕಿನ ಪುಷ್ಪರಾಜ್, ಹಾಸನದ ಅರಕಲಗೂಡಿನ ಚೆನ್ನಕೇಶವ ಹಾಗು ಹಾಸನದ ಹಳೇಕೋಟೆ ಹೋಬಳಿಯ ಸಂದೀಪ್. ವಿಶೇಷ ಅಂದ್ರೆ ಬಂಧಿತ ಪ್ರಮೋದ್ ಸಾಲ್ಯಾನ್ ನಾವೂರಿನ ಬಿಜೆಪಿ ಬೂತ್ ಮುಖ್ಯಸ್ಥ. ಈತನ ಸೋದರನೂ ಸ್ಥಳೀಯ ಬಿಜೆಪಿ ಮುಖಂಡ.

ಅಲ್ಲಿಗೆ ಗೋ ರಕ್ಷಣೆ ಎಂಬುದು ಬಿಜೆಪಿಗೆ ಹಾಗು ಅದರ ಮುಖಂಡರಿಗೆ ಎಷ್ಟು ರಾಜಕೀಯ , ಎಷ್ಟು ನೈಜ ಕಾಳಜಿಯದ್ದು ಎಂಬುದು ಎಲ್ಲರೆದುರು ಬಯಲಾಗಿದೆ. ಇಂತಹ ಪ್ರಕರಣಗಳಲ್ಲಿ ಮುಸ್ಲಿಂ ಹೆಸರಿನ ಆರೋಪಿಗಳಿದ್ದರೆ ಕೂಡಲೇ ಠಾಣೆಗೆ ಮುತ್ತಿಗೆ ಹಾಕಿ, ರೌದ್ರಾವತಾರ ತಾಳುವ ಬಿಜೆಪಿ ಶಾಸಕ ಹರೀಶ್ ಪೂಂಜಾ ಈಗ ಎಲ್ಲಿದ್ದಾರೆ ಎಂದು ಬೆಳ್ತಂಗಡಿಯ ಜನ ಕೇಳ್ತಾ ಇದ್ದಾರೆ.

ನಾವೂರು ಗ್ರಾಮದಿಂದ ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿ ಗಣೇಶ್ ಗೌಡ ನೇತೃತ್ವದಲ್ಲಿ ಅಕ್ರಮವಾಗಿ ಗೋಸಾಗಾಟ ನಿರಂತರವಾಗಿ ನಡೆಯುತ್ತಿದೆ ಎಂದು ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಸ್ಥಾಪಕಾಧ್ಯಕ್ಷ ಮಹೇಶ್ ಶೆಟ್ಟಿ ತಿಮರೋಡಿ ಅವರು ಕಳೆದ ಒಂದು ವರ್ಷಗಳಿಂದ ಆರೋಪಿಸುತ್ತಲೇ ಬಂದಿದ್ದಾರೆ. ದನಗಳನ್ನು ಅಕ್ರಮವಾಗಿ ಗಣೇಶ್ ಗೌಡ ಅವರ ವಾಹನದಲ್ಲಿ ಹಾಗೂ ಇತರರ ವಾಹನದಲ್ಲಿ ಸಾಗಾಟ ಮಾಡುತ್ತಿದ್ದಾರೆ. ತಾಲೂಕಿನಲ್ಲಿ ನಡೆಯುವ ಅಕ್ರಮ ದನ ಸಾಗಾಟದ ಕೇಂದ್ರವೇ ನಾವೂರು ಎಂದು ಮಹೇಶ್ ಶೆಟ್ಟಿ ಆರೋಪಿಸಿದ್ದರು

ಇದೀಗ ಧರ್ಮಸ್ಥಳ ಪೊಲೀಸರು ಪತ್ತೆ ಹಚ್ಚಿದ ಪ್ರಕರಣದಲ್ಲಿ ದನಗಳನ್ನು ನಾವೂರಿನಿಂದಲೇ ತರಲಾಗಿದೆ. ನಾವೂರು ಗ್ರಾ‌.ಪಂ ಅಧ್ಯಕ್ಷನೂ ಆಗಿರುವ ಗಣೇಶ್ ಗೌಡ ಅವರೊಂದಿಗೆ ಉತ್ತಮ ಸಂಬಂಧ ಹೊಂದಿರುವ ಇಬ್ಬರ ಪಿಕಪ್ ವಾಹನಗಳನ್ನು ದನ ಸಾಗಾಟಕ್ಕೆ ಉಪಯೋಗಿಸಲಾಗಿದೆ. ಎಲ್ಲ ದನಗಳನ್ನೂ ನಾವೂರಿನಿಂದಲೇ ವಾಹನದಲ್ಲಿ ತುಂಬಿ ತರಲಾಗಿದೆ ಎಂದು ಪೊಲೀಸ್ ತನಿಖೆಯ ವೇಳೆ ಬಹಿರಂಗ ಗೊಂಡಿದೆ. ಶಾಸಕ ಹರೀಶ್ ಪೂಂಜ ಅವರಿಗೆ ಅತ್ಯಂತ ಆಪ್ತನಾಗಿರುವ ಗಣೇಶ್ ಗೌಡ ಈ ಅಕ್ರಮ ಗೋಸಾಗಾಟದ ಹಿಂದಿದ್ದಾರೆ ಎಂಬುದು ಸಾಮಾಜಿಕ ಜಾಲತಾಣಗಳಲ್ಲಿ ಈಗ ಹರಿದಾಡುತ್ತಿರುವ ಮಾಹಿತಿ.

ಈಗ ಬೆಳ್ತಂಗಡಿಯಲ್ಲಿ ದನ ಸಾಗಾಟ ಮಾಡುತ್ತಾ ಸಿಕ್ಕಿ ಬಿದ್ದಿರುವ ಆರೋಪಿಗಳ ಹೆಸರು ಬಯಲಾದ ಮೇಲೆ ಯಾವುದೇ ಬಿಜೆಪಿ ನಾಯಕರ, ಸಂಘ ಪರಿವಾರದ ಪ್ರಚೋದನಕಾರಿ ಭಾಷಣಕಾರರ ಹೇಳಿಕೆಗಳಿಲ್ಲ, ಪ್ರತಿಭಟನೆಗಳಿಲ್ಲ. ಸರಕಾರದ ವಿರುದ್ಧ ಆರ್ಭಟವಿಲ್ಲ. ಎಲ್ಲ ಗಪ್ ಚುಪ್. ಅಲ್ಪಸಂಖ್ಯಾತರು ಕಾನೂನು ಪ್ರಕಾರವೇ ಜಾನುವಾರು ಸಾಗಾಟ ಮಾಡಿದರೂ ಅವರನ್ನು ತಡೆದು ಹಲ್ಲೆ ಮಾಡುವ, ಅವರನ್ನು ಲೂಟಿ ಮಾಡುವ, ಅಮಾನವೀಯವಾಗಿ ಥಳಿಸುವ ಸಂಘ ಪರಿವಾರದ ಗೂಂಡಾಗಳ ಗೋ ಪ್ರೇಮ ಹಾಗು ಬಿಜೆಪಿಯ ಸೋಗಲಾಡಿತನ ಎರಡೂ ಪ್ರಮೋದ್ ಸಾಲ್ಯಾನ್ ಬಂಧನದಲ್ಲಿ ಬಯಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News

ಮನದರಿವು