ವಿಕ್ರಂ ಗೌಡ ಎನ್‌ಕೌಂಟರ್ ಪ್ರಕರಣದ ಸುತ್ತ ಅನುಮಾನದ ಹುತ್ತ ; ಉತ್ತರ ಕೇಳುತ್ತಿರುವ ಹತ್ತಾರು ಪ್ರಶ್ನೆಗಳು
ಬೆಂಗಳೂರು : ಹೆಬ್ರಿಯಲ್ಲಿ ನಡೆದ ನಕ್ಸಲ್ ನಾಯಕ ವಿಕ್ರಂಗೌಡ ಎನ್ ಕೌಂಟರ್ ಬಗ್ಗೆ ಸಾಮಾಜಿಕ ಚಿಂತಕರು, ಖ್ಯಾತ ವಕೀಲರು, ಪತ್ರಕರ್ತರು ಅನುಮಾನವನ್ನು ವ್ಯಕ್ತಪಡಿಸಿದ್ದು, ಪೊಲೀಸರು ಏನನ್ನೋ ಮುಚ್ಚಿ ಹಾಕಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ವಿಕ್ರಂಗೌಡ ಹತ್ಯೆ ಬಗ್ಗೆ ಚಿಂತಕ, ಲೇಖಕ ಶಿವ ಸುಂದರ್, ಖ್ಯಾತ ವಕೀಲ ಬಾಲನ್, ಹಿರಿಯ ಪತ್ರಕರ್ತ ನವೀನ್ ಸೂರಿಂಜೆ ಹಲವು ಪ್ರಶ್ನೆಗಳನ್ನು ಮುಂದಿಟ್ಟು ಹಲವು ಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ.
ಹೆಬ್ರಿ ಎನ್ ಕೌಂಟರ್ ಬಗ್ಗೆ ಸಿಎಂ ಸಿದ್ದರಾಮಯ್ಯ ಮತ್ತು ಗೃಹಮಂತ್ರಿ ಪರಮೇಶ್ವರ್ ಅವರ ಹೇಳಿಕೆ ಪೂರ್ವ ಯೋಜಿತ ಪೊಲೀಸ್ ಹತ್ಯೆ ಎಂದು ಸಾಬೀತು ಪಡಿಸುತ್ತದೆ ಸಾಮಾಜಿಕ ಚಿಂತಕ ಶಿವ ಸುಂದರ್ ಆರೋಪಿಸಿದ್ದಾರೆ. ವಿಕ್ರಂ ಗೌಡಗೆ ಶರಣಾಗಲು ಹೇಳಿದ್ದೆವು, ಆತ ಶರಣಾಗಲಿಲ್ಲ, ಆದ್ದರಿಂದ ಎನ್ ಕೌಂಟರ್ ಮಾಡಲಾಗಿದೆ ಎಂದು ಹೇಳಲಾಗಿದೆ, ಪೊಲೀಸರು ವಿಕ್ರಂಗೌಡರನ್ನು ಕೊಂದಿದ್ದು ಪೋಲೀಸರ ಮೇಲೆ ದಾಳಿ ಮಾಡಿದ್ದಕ್ಕಾ? ಅಥವಾ ಪೊಲೀಸರಿಗೆ ಶರಣಾಗಲು ನಿರಾಕರಿಸಿದ್ದಕ್ಕಾ? ಎಂದು ಶಿವಸುಂದರ್ ಪ್ರಶ್ನಿಸಿದ್ದಾರೆ.
ನಕ್ಸಲರು ಜನರಿಂದ ಆಹಾರ ಪಡೆದುಕೊಳ್ಳಲು ಬಂದಿದ್ದಾರೆಂದು ಹೇಳಲಾಗಿದೆ. ಹಾಗಿದ್ದರೂ ಅವರನ್ನು ಬಂಧಿಸದೇ ಸರ್ಕಾರದ ಆದೇಶದಂತೆ ಶರಣಾಗಲಿಲ್ಲ ಎಂಬ ಕಾರಣಕ್ಕಾಗಿ ಗುಂಡಿಟ್ಟು ಸಾಯಿಸಲಾಗಿದೆಯೇ? ನಕ್ಸಲ್ ಚಟುವಟಿಕೆಗಳನ್ನು ನಿಗ್ರಹಿಸಲು ವಿಕ್ರಂ ಗೌಡರನ್ನು ಎನ್ ಕೌಂಟರ್ ಮಾಡಲಾಗಿದೆ ಎಂದು ಹೇಳಿದ್ದೀರಿ. ಇದು ಎನ್ ಕೌಂಟರ್ ನಡೆದಿರುವುದು ಸರ್ಕಾರದ ಪೂರ್ವ ಯೋಜನೆಯ ಭಾಗವಾಗಿಯೇ ವಿನಾ: ಪೋಲೀಸರ ಆತ್ಮರಕ್ಷಣೆಯ ಅಗತ್ಯದಿಂದ ಉದ್ಭವಿಸದ್ದಲ್ಲ ಎಂಬುದನ್ನು ಸ್ಪಷ್ಟವಾಗುತ್ತದೆ ಎಂದು ಶಿವಸುಂದರ್ ಸಂಶಯ ವ್ಯಕ್ತಪಡಿಸಿದ್ದಾರೆ.
ವಿಕ್ರಂ ಗೌಡರ ಬಳಿ ಅತ್ಯಾಧುನಿಕ ಮೆಷಿನ್ ಗನ್ ಇತ್ತೆಂದು ಪೊಲೀಸರು ಹೇಳಿದ್ದಾರೆ. ಯಾವ ಪೊಲೀಸರಿಗೂ ಗಾಯಗಳೂ ಆಗದೆ ಇರುವುದು ಇದನ್ನು ಆತ ಬಳಸಿಲ್ಲ ಎನ್ನುವುದಕ್ಕೆ ಸಾಕ್ಷಿಯಾಗಿದೆ. ಪೊಲೀಸರು ದಾಳಿ ಮಾಡುತ್ತಿದ್ದರೂ, ಮೆಷಿನ್ ಗನ್ ಇದ್ದರೂ ಆತ ಏಕೆ ಬಳಸಲಿಲ್ಲ? ಈ ಪ್ರಶ್ನೆಗೂ ಪೊಲೀಸರ ಬಳಿ ಹಾಗೂ ನಿಮ್ಮ ಬಳಿ ಉತ್ತರವಿಲ್ಲ. ಹೀಗಾಗಿ ಪೋಲೀಸರ ಈ ಕಥೆ ಎಷ್ಟು ನಂಬಲಾರ್ಹವಾಗಿದೆ ಎಂದೂ ಅವರು ಪ್ರಶ್ನಿಸಿದ್ದಾರೆ.
ಈ ಎಲ್ಲಾ ಪ್ರಾಥಮಿಕ ಪುರಾವೆಗಳು ಮತ್ತು ತಮ್ಮ ಹೇಳಿಕೆಗಳು ಇದು ನಕಲಿ ಎನ್ ಕೌಂಟರ್ ಎಂಬ ಅನುಮಾನವನ್ನು ಮತ್ತಷ್ಟು ಗಟ್ಟಿಗೊಳಿಸುತ್ತಿದೆ. ಇದು ಒಂದು ನಾಗರಿಕ ಹಾಗೂ ಪ್ರಜಾತಾಂತ್ರಿಕ ಸರ್ಕಾರ ನಡೆದುಕೊಳ್ಳುವ ರೀತಿಯಲ್ಲ. ಆದ್ದರಿಂದ ನಿಮ್ಮ ಹಾಗೂ ಗೃಹಮತ್ರಿಗಳ ಹೇಳಿಕೆ ಅತ್ಯಂತ ಖಂಡನೀಯ. ಶರಣಾಗದ ನಕ್ಸಲರನ್ನು ಪೊಲೀಸರು ಬಂಧಿಸಬೇಕು. ಕೋರ್ಟಿಗೆ ಹಾಜರುಪಡಿಸಿ ಅವರ ಅಪರಾಧ ಸಾಬೀತು ಪಡಿಸಬೇಕು. ಕೋರ್ಟು ಅದರ ಸತ್ಯಾಸತ್ಯತೆಗಳನ್ನು ವಿಚಾರಣೆ ಮಾಡಿ ಶಿಕ್ಷೆ ವಿಧಿಸಬೇಕು. ತಮ್ಮ ಮೇಲೆ ದಾಳಿ ಮಾಡಿದರೆ ಮಾತ್ರ ಆತ್ಮರಕ್ಷಣೆಗೆ ಗುಂಡುಹಾರಿಸಬೇಕು ಎಂದು ಶಿವಸುಂದರ್ ಅವರು ಅಭಿಪ್ರಾಯಪಟ್ಟಿದ್ದಾರೆ.
ಪೂರ್ವಯೋಜಿತವಾಗಿ ಎನ್ ಕೌಂಟರ್ ಮಾಡಿ ಸಾಯಿಸಬೇಕು ಎಂದು ನಡೆಸುವ ಕಾರ್ಯಾಚರಣೆ ಕಾನೂನು ಬಾಹಿರ ಮತ್ತು ಅದು ಸರ್ಕಾರಿ ಕೊಲೆಯಾಗುತ್ತದೆ. ಮಾನವ ಹಕ್ಕುಗಳ ಉಲ್ಲಂಘನೆಯ ವಿಷಯದಲ್ಲಿ ತಮಗೂ ಬಿಜೆಪಿ ಸರ್ಕಾರಕ್ಕೂ ಯಾವುದೇ ವ್ಯತ್ಯಾಸವಿಲ್ಲವೆಂದು ಸ್ಪಷ್ಟವಾಗುತ್ತದೆ. ಮುಖ್ಯಮಂತ್ರಿಯಾಗಲೀ, ಪೊಲೀಸರಾಗಲೀ ನ್ಯಾಯಾಯಾಧೀಶರಲ್ಲ. ನಿಮಗೆ ಪ್ರಾಣ ತೆಗೆಯುವ ಅಧಿಕಾರವಿಲ್ಲ. ಆದ್ದರಿಂದ ಕೂಡಲೇ ಈ ಪೂರ್ವಯೋಜಿತ ಎನ್ಕೌಂಟರ್ ಬಗ್ಗೆ ನಿಷ್ಪಕ್ಷಪಾತ ನ್ಯಾಯಾಂಗ ತನಿಖೆಯಾಗಬೇಕಿದೆ. ಕರ್ನಾಟಕದ ನಾಗರಿಕ ಸಮಾಜ ಸರ್ಕಾರದ ಈ ಅನಾಗರಿಕ ಎನ್ ಕೌಂಟರ್ ಸಂಸ್ಕೃತಿಯನ್ನು ತಡೆಗಟ್ಟಬೇಕಿದೆ ಎಂದು ಶಿವಸುಂದರ್ ಅವರು ಆಗ್ರಹಿಸಿದ್ದಾರೆ.
ವಿಕ್ರಂ ಗೌಡ ಎನ್ ಕೌಂಟರ್ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಖ್ಯಾತ ವಕೀಲ ಬಾಲನ್ ಪೊಲೀಸರು ನೂರು ಜನ ಇದ್ದರು ಎಂದು ಹೇಳುತ್ತಾರೆ, ನೂರು ಜನರಿಗೆ ಐದು ಜನರನ್ನು ಹಿಡಿಯಲಿಕ್ಕೆ ಆಗಲಿಲ್ವ? ಎಂದು ಪ್ರಶ್ನಿಸಿದ್ದಾರೆ. ವಿಕ್ರಂ ಗೌಡ ಮೇಲೆ 61 ಕೇಸ್ ಇದೆ ಎಂದು ಹೇಳಲಾಗುತ್ತದೆ. ಅವರೇ ಮಾಡಿದ್ದಾರೆ ಎಂಬುವುದಕ್ಕೆ ಸಾಕ್ಷಿಗಳೇನು? ಇದು ಎನ್ ಕೌಂಟರಾ? ಕೊಲೆಯಾ? ಕೊಲ್ಲುವ ಅಧಿಕಾರ ನಿಮಗೆ ಕೊಟ್ಟಿದ್ಯಾರು? ಮೂರು ಜನರನ್ನು ಬಂಧಿಸಿದ್ದಾರೆ ಎಂದು ಪೊಲೀಸರು ಹೇಳುತ್ತಾರೆ, ಬಂಧಿಸಿದ ವ್ಯಕ್ತಿಗಳು ಯಾರು? ಅವರು ಎಲ್ಲಿದ್ದಾರೆ ಎಂದು ಬಾಲನ್ ಪ್ರಶ್ನಿಸಿದ್ದಾರೆ.
ವಿಕ್ರಂ ಗೌಡ ಎನ್ ಕೌಂಟರ್ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಹಿರಿಯ ಪತ್ರಕರ್ತ ನವೀನ್ ಸೂರಿಂಜೆ ಅವರು, “ಒಂದು ವಾರದ ಹಿಂದೆ ಪೊಲೀಸರು ಆಫ್ ದಿ ರೆಕಾರ್ಡ್ ಮಾಹಿತಿ ಕೊಟ್ಟಿದ್ದು, ಕೊಪ್ಪ, ಚಿಕ್ಕಮಗಳೂರಿನಲ್ಲಿ ಸಕ್ರಿಯರಾಗಿರುವ ಮೂವರು ನಕ್ಸಲರನ್ನು ಧರ್ಮಸ್ಥಳದಲ್ಲಿ ಬಂಧಿಸಿದ್ದಾರೆ ಎಂದು ಹೇಳಿದ್ದಾರೆ. ಅವರು ಈಗ ಎಲ್ಲಿದ್ದಾರೆ?” ಎಂದು ಪ್ರಶ್ನಿಸಿದ್ದಾರೆ.
ಪೊಲೀಸರು ಬಂಧಿಸಿದ ಮೂವರು ನಕ್ಸಲರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರಾ? ಪೊಲೀಸ್ ಕಸ್ಟಡಿಗೆ ತೆಗೆದುಕೊಂಡಿದ್ದಾರಾ? ಅವರು ಈಗ ಎಲ್ಲಿದ್ದಾರೆ? ಬಂಧನ, ಶೂಟೌಟ್ ಬಗ್ಗೆ ಸರಿಯಾಗಿ ಮಾಹಿತಿ ಯಾಕೆ ಕೊಟ್ಟಿಲ್ಲ? ಶೂಟೌಟ್ ನಡೆದ ಸ್ಥಳಕ್ಕೆ ಪತ್ರಕರ್ತರನ್ನು ಯಾಕೆ ಬಿಟ್ಟಿಲ್ಲ? ಅಲ್ಲಿನ ಪೋಟೋಗಳು, ದೃಶ್ಯಗಳು ಅನುಮಾನ ಸೃಷ್ಟಿಸುವ ಭಯದಿಂದ ಪೊಲೀಸರು ಪತ್ರಕರ್ತರನ್ನು ಬಿಟ್ಟಿಲ್ಲವೇ? ಪೊಲೀಸರು ಏನನ್ನು ಮುಚ್ಚಿ ಹಾಕಲು ಪ್ರಯತ್ನಿಸುತ್ತಿದ್ದಾರೆ ಎಂದು ನವೀನ್ ಸೂರಿಂಜೆ ಪ್ರಶ್ನಿಸಿದ್ದಾರೆ.