ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ : ಮೋದಿ, ಶಾ ಲೆಕ್ಕಾಚಾರಗಳೇನು ?

Update: 2023-08-02 15:15 GMT

ಆರ್. ಜೀವಿ

ಬರುವ ಲೋಕಸಭೆ ಚುನಾವಣೆಗೆ ತಯಾರಿಯಲ್ಲಿರುವ ಬಿಜೆಪಿ ಏನೇನು ಮಾಡುತ್ತಿದೆ? ಮೊದಲ ಹಂತವಾಗಿ ಪಕ್ಷವನ್ನು ಸಂಘಟನಾತ್ಮಕವಾಗಿ ಪುನಾರಚಿಸುವ ಕೆಲಸಕ್ಕೆ ಮುಂದಾಗಿದೆ​. ಪಕ್ಷದ ಸಂಘಟನಾತ್ಮಕ ಹೊಣೆಗಾರಿಕೆಯಲ್ಲಿ ಒಂದಷ್ಟು ಬದಲಾವಣೆ ಮಾಡಿ ಹೊಸ ಪದಾಧಿಕಾರಿಗಳ ಪಟ್ಟಿಯನ್ನು ಪ್ರಕಟಿಸಿದೆ.

ಇದರಲ್ಲಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹೊಣೆಗಾರಿಕೆಯಿಂದ ಕರ್ನಾಟಕದ ಸಿ.ಟಿ.ರವಿ ಅವರಿಗೆ ಕೊಕ್ ಕೊಡಲಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಗೆ ಇನ್ನೂ ಯಾರ ನೇಮಕವೂ ಆಗದ ಹಿನ್ನೆಲೆಯಲ್ಲಿ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಸಿಟಿ ರವಿಯನ್ನು ಕೈಬಿಟ್ಟಿರುವುದು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.

ನಳಿನ್ ಕುಮಾರ್ ಕಟೀಲ್ ಅವಧಿ ಮುಗಿದಿರುವ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಗೆ ​ಹೊಸ ನೇಮಕವಾಗಬೇಕಿದೆ. ಇನ್ನೊಂದೆಡೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದು ಎರಡು ತಿಂಗಳುಗಳೇ ಕಳೆದರೂ ಪ್ರತಿಪಕ್ಷ ನಾಯಕನ ಆಯ್ಕೆಯಾಗಿಲ್ಲ.​

ಲಿಂಗಾಯತರು ಮತ್ತು ಒಕ್ಕಲಿಗ ನಾಯಕರ ಮಧ್ಯೆ ಈ ಎರಡೂ ಹುದ್ದೆಗಳು ಹಂಚಿಕೆಯಾಗಲಿವೆ ಎಂದು ಹೇಳಲಾಗುತ್ತಿರುವುದರ ನಡುವೆಯೇ ಈಗ ಸಿಟಿ ರವಿ ಅವರನ್ನು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಕೈಬಿಟ್ಟಿರುವುದು, ಅವರಿಗೆ ಪಕ್ಷದ ರಾಜ್ಯಾಧ್ಯಕ್ಷ ಹುದ್ದೆ ನೀಡಲಾಗುವುದೆಂಬ ಚರ್ಚೆಗೆ ಪುಷ್ಟಿ ನೀಡಿದೆ.

ಹೀಗೆ ರಾಜ್ಯಾಧ್ಯಕ್ಷ ಹುದ್ದೆ ಒಕ್ಕಲಿಗರ ಪಾಲಾದರೆ, ಪ್ರತಿಪಕ್ಷ ನಾಯಕನ ಹುದ್ದೆ ಲಿಂಗಾಯತರ ಪಾಲಿಗೆ ಒಲಿಯಲಿದೆ ಎಂಬುದು ಈಗಿನ ತರ್ಕ. ತುಂಬಾ ಕುತೂಹಲಕಾರಿ ವಿಚಾರವೆಂದರೆ, ಬಿಜೆಪಿ ರಾಷ್ಟ್ರೀಯ ಪದಾಧಿಕಾರಿಗಳ ಹೊಸ ಪಟ್ಟಿ ಬಿಡುಗಡೆಗೆ ನಾಲ್ಕೇ ದಿನ ಮೊದಲು ಬಿಜೆಪಿಯ ಮಿತ್ರಪಕ್ಷದಂತಿರುವ ಜೆಡಿಎಸ್ ವರಿಷ್ಠ ದೇವೇಗೌಡರು ಇಂಥ ಸಾಧ್ಯತೆಯ ಬಗ್ಗೆ ಸುಳಿವು ನೀಡಿದ್ದರು.

ಸಿಟಿ ರವಿ ಬಿಜೆಪಿ ರಾಜ್ಯಾಧ್ಯಕ್ಷರಾಗುತ್ತಾರೆ ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ಪ್ರತಿಪಕ್ಷ ನಾಯಕರಾಗುವುದು ಬಹುತೇಕ ತೀರ್ಮಾನವಾಗಿದೆ ಎಂದು ಬಿಜೆಪಿಯ ಆಂತರಿಕ ವಿಚಾರದ ಬಗ್ಗೆ ಸ್ಫೋಟಕ ಹೇಳಿಕೆ ನೀಡಿ ರಾಜಕೀಯ ವಲಯವನ್ನು ​ಅಚ್ಚರಿಗೆ ಕೆಡವಿದ್ದರು. ಇದೆಲ್ಲದರ ನಡುವೆಯೇ ಈಗ ಸಿಟಿ ರವಿ ಅವರ​ನ್ನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ​ ಕೈ ಬಿಟ್ಟಿರುವುದು, ಆದರೆ, ಬಿಜೆಪಿ ರಾಜ್ಯಾಧ್ಯಕ್ಷರ ಹುದ್ದೆಗಾಗಲೀ ಪ್ರತಿಪಕ್ಷ ನಾಯಕನ ಹುದ್ದೆಗಾಗಲೀ ಹೆಸರನ್ನು ಇನ್ನೂ ಪ್ರಕಟಿಸದೇ ಇರುವುದು ಕುತೂಹಲವನ್ನು ತೀವ್ರಗೊಳಿಸಿದೆ.

ಕೆಲ ದಿನಗಳ ಹಿಂದಷ್ಟೇ ಸಿಟಿ ರವಿ ಪಕ್ಷದ ಹಿರಿಯ ನಾಯಕ ಯಡಿಯೂರಪ್ಪನವರನ್ನು ಕಂಡು ಆಶೀರ್ವಾದ ಪಡೆದ ವಿಚಾರವೂ ಇದೆಲ್ಲ ಬೆಳವಣಿಗೆಗಳಿಗೆ ಜೊತೆಯಾಗಿ ಸೇರಿಕೊಳ್ಳುತ್ತಿದೆ. ವರಿಷ್ಠರ ಸೂಚನೆಯ ಮೇರೆಗೇ ​ಯಡಿಯೂರಪ್ಪನವರನ್ನು ​ಭೇಟಿಯಾಗಿ ಅವರ ಕಾಲಿಗೆ ಬಿದ್ದು ​ಸಿಟಿ ರವಿ ಆಶೀರ್ವಾದ ಪಡೆದಿದ್ದರು ಎಂಬ ಮಾತುಗಳು ಕೇಳಿಬರುತ್ತಿದ್ದು, ಅವರೇ ರಾಜ್ಯಾಧ್ಯಕ್ಷರಾಗುವ ಸಾಧ್ಯತೆಯನ್ನು ಬಲಗೊಳಿಸುತ್ತಿದೆ.

ಆದರೆ ಸಿಟಿ ರವಿ ಮಾತ್ರ ತಾನು ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ ಎಂದು ಹೇಳಿರುವುದು ವರದಿಯಾಗಿದೆ. ರಾಜ್ಯಾಧ್ಯಕ್ಷ ಹುದ್ದೆಗೆ ನನ್ನ ಆಯ್ಕೆ ಬಗ್ಗೆ ಚರ್ಚೆಯಾಗಿದೆ ಎಂದು ಹೇಳಿದ್ದಾರೆಯೇ ಹೊರತು ಹಾಗೆಂದು ತೀರ್ಮಾನವಾಗಿದೆ ಎಂದೇನೂ ಹೇಳಿಲ್ಲ ಎಂದು, ರಾಷ್ಟ್ರೀಯ ನಾಯಕರು ಬಿಟ್ಟುಕೊಡದಿರುವ ಗುಟ್ಟನ್ನು ಇನ್ನಷ್ಟು ಗುಟ್ಟಾಗಿಡಲು ಸಿಟಿ ರವಿ ಯತ್ನಿಸಿದ್ಧಾರೆ.

ಇನ್ನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ಕೈಬಿಟ್ಟಿರುವುದಕ್ಕೂ ಪ್ರತಿಕ್ರಿಯಿಸಿರುವ ಅವರು, ಪಕ್ಷದ ಯಾವುದೇ ಹುದ್ದೆ ಶಾಶ್ವತವಲ್ಲ ಎಂದು ತತ್ವ ನುಡಿದಿರುವುದನ್ನು ಭಾನುವಾರದ ವರದಿಗಳು ಹೇಳಿವೆ. ಪಕ್ಷದ ಕಾರ್ಯಕರ್ತನಾಗಿ ನನ್ನ ಕೆಲಸ ಮುಂದುವರಿಯಲಿದೆ ಎಂದು, ಪಕ್ಷ ಮುಂದೆ ಯಾವ ಜವಾಬ್ದಾರಿ ನೀಡಲಿದೆ ಎಂಬುದರ ಬಗ್ಗೆ ಏನೂ ಗೊತ್ತಿಲ್ಲದಿರುವವರಂತೆ ಹೇಳಿಕೆ ನೀಡಿದ್ದಾರೆ.

ಇದರ ಮಧ್ಯೆ ಸೋಮವಾರ ಅವರು ದೆಹಲಿಗೆ ಹೋಗುತ್ತಿರುವ ವಿಚಾರವೂ ವರದಿಯಾಗಿದ್ದು, ಅದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ, ಪಕ್ಷದ ಕೆಲಸ ಎಂದಷ್ಟೇ ಹೇಳಿದ್ದಾರೆ ಎನ್ನಲಾಗಿದೆ. ಇದಿಷ್ಟು ವಿಚಾರವನ್ನು ಒಂದೆಡೆಗಿಟ್ಟು ಇನ್ನೂ ಎರಡು ವಿಚಾರಗಳನ್ನು ಸ್ವಲ್ಪ ಗಮನಿಸಬೇಕು.

ಮೊದಲನೆಯದು, ಪಕ್ಷದ ರಾಷ್ಟ್ರೀಯ ಪದಾಧಿಕಾರಿಗಳ ಪಟ್ಟಿಯಲ್ಲಿ ಸಿಟಿ ರವಿಗೆ ಕೊಕ್ ಕೊಟ್ಟ ಜಾಗದಲ್ಲಿ ಕರ್ನಾಟಕದ ಇನ್ಯಾರಿಗೂ ಅವಕಾಶ ಕೊಟ್ಟಿಲ್ಲವಾದರೂ, ರಾಷ್ಟ್ರೀಯ ಸಂಘಟನಾ ​ಪ್ರಧಾನ ಕಾರ್ಯದರ್ಶಿಯಾಗಿ ಬಿಎಲ್ ಸಂತೋಷ್ ಅವರನ್ನೇ ಮುಂದುವರಿಸಲಾಗಿದೆ ಎಂಬುದು.​

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಹೀನಾಯ ಸೋಲು ಕಂಡ ಹಿನ್ನೆಲೆಯಲ್ಲಿ, ಅಭ್ಯರ್ಥಿಗಳ ಆಯ್ಕೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ಸಂತೋಷ್ ಪಾಲಿಗೆ ಹಿನ್ನಡೆಯಾಗಲಿದೆ ಎಂದೇ ಹೇಳಲಾಗಿತ್ತು. ಆದರೆ ಇದೇನೂ ಅಂಥ ಪರಿಣಾಮ ಬೀರಿಲ್ಲ ಎಂಬುದನ್ನು ಈಗಿನ ಈ ಬೆಳವಣಿಗೆ ತೋರಿಸುತ್ತಿದೆ.

ವಿಧಾನಸಭೆ ಚುನಾವಣೆಯಲ್ಲಿನ ಸೋಲಿನ ಬಳಿಕ ಬಿಜೆಪಿ ರಾಷ್ಟ್ರೀಯ ನಾಯಕರು ರಾಜ್ಯ ನಾಯಕರ ಬಗ್ಗೆ ಅಸಮಾಧಾನಗೊಂಡಿದ್ದಾರೆಯೆ ಮತ್ತು ಒಂದು ಬಗೆಯ ನಿರ್ಲಕ್ಷ್ಯ ತೋರಿಸುತ್ತಿದ್ದಾರೆಯೆ ಎಂಬ ಅನುಮಾನಗಳನ್ನೂ ವ್ಯಕ್ತಪಡಿಸಲಾಗುತ್ತಿದೆ. ರಾಜ್ಯದ ಬಹುತೇಕ ನಾಯಕರಿಗೆ ಬೇಡವಾಗಿರುವ ಸಂತೋಷ್ ಅವರನ್ನು ಹೊರತುಪಡಿಸಿದರೆ ರಾಜ್ಯದ ಇನ್ನಾವ ನಾಯಕರಿಗೂ ರಾಷ್ಟ್ರೀಯ ಪದಾಧಿಕಾರಿಗಳ ಪಟ್ಟಿಯಲ್ಲಿ ಸ್ಥಾನ ಕೊಡಲಾಗಿಲ್ಲ ಎಂಬುದು ಗಮನ ಸೆಳೆಯುವ ಸಂಗತಿಯಾಗಿದೆ.​ ಈಗ ನಡ್ಡಾ ಟೀಮ್ ನಲ್ಲಿರುವ ಏಕೈಕ ಕನ್ನಡಿಗ ಬಿ ಎಲ್ ಸಂತೋಷ್.

ರಾಜ್ಯ ಬಿಜೆಪಿಯಲ್ಲಿ ಆರೆಸ್ಸೆಸ್ ಹಿಡಿತ ಮುಂದುವರಿಯಲಿದೆ ಎಂಬುದು ಸಂತೋಷ್ ಮುಂದುವರಿಕೆಯೊಂದಿಗೆ ಖಚಿತವಾಗಿದೆ. ಇದಲ್ಲದೆ, ಯಡಿಯೂರಪ್ಪ ಅವರಿಗೆ ಹೆಚ್ಚು ಮನ್ನಣೆ ಕೊಡುತ್ತಿರುವಂತೆ ತೋರಿಸಿಕೊಳ್ಳಲಾಗುತ್ತಿದ್ದರೂ, ವಾಸ್ತವದಲ್ಲಿ ಅವರ ವಿರೋಧಿಯಾಗಿರುವ ಸಂತೋಷ್ ಸ್ಥಾನ ಭದ್ರವಾಗಿಯೇ ಇರುವ ಹಿನ್ನೆಲೆಯಲ್ಲಿ, ಎಲ್ಲವೂ ಮೇಲ್ನೋಟಕ್ಕೆ ಕಾಣಿಸುತ್ತಿರುವಂತೆ ಇಲ್ಲ ಎಂಬುದೂ ಸ್ಪಷ್ಟ.

ಸಿಟಿ ರವಿಗೇ ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆ ನೀಡುವುದು ಖಚಿತವಾಗಿದ್ದು, ಅದಕ್ಕಾಗಿಯೇ ಅವರು ಯಡಿಯೂರಪ್ಪನವರ ಆಶೀರ್ವಾದ ಪಡೆದಿದ್ದಾರೆ ಎಂದು ಹೇಳಲಾಗುತ್ತಿರುವುದು ಕೂಡ ಇದೆಲ್ಲ ತಂತ್ರದ ಒಂದು ಭಾಗವೆ ಆಗಿರಬಹುದೆ ಎಂಬ ಅನುಮಾನವೂ ಏಳುತ್ತದೆ. ಕಟೀಲ್ ಕೂಡ ಇದೇ ಸಂತೋಷ್ ಬೆಂಬಲದಿಂದಲೇ ಆ ಹುದ್ದೆಯಲ್ಲಿದ್ದವರು. ಪಕ್ಷದ ಹಲವಾರು ಆಯಕಟ್ಟಿನ ಜಾಗದಲ್ಲಿ ಸಂತೋಷ್ ಬೆಂಬಲಿಗರೇ ಇದ್ದಾರೆ. ಈಗ ಸಿಟಿ ರವಿ ರಾಜ್ಯಾಧ್ಯಕ್ಷ ಹುದ್ದೆಗೆ ಬಂದರೂ, ರಾಜ್ಯ ಘಟಕದಲ್ಲಿ ಮತ್ತೊಮ್ಮೆ ಯಡಿಯೂರಪ್ಪ ವಿರೋಧಿ ಬಣವೇ ಬಲಗೊಳ್ಳಲಿದೆ.

ಇನ್ನೊಂದೆಡೆಯಿಂದ ಪಕ್ಷದ ಹಿಂದುತ್ವ ಸಿದ್ಧಾಂತವನ್ನು ಇನ್ನಷ್ಟು ಪ್ರಖರವಾಗಿ ರಾಜ್ಯದಲ್ಲಿ ಪ್ರಚುರಪಡಿಸುವುದು ಮತ್ತು ಅದನ್ನು ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರದ ವಿರುದ್ಧ ಅಸ್ತ್ರವಾಗಿ ಬಳಸುವುದು ಕೂಡ ಇದರ ಹಿನ್ನೆಲೆಯಲ್ಲಿರುವ ಸಾಧ್ಯತೆ ಕಾಣಿಸುತ್ತಿದೆ. ಇದೆಲ್ಲದರ ನಡುವೆಯೂ, ಹಲವು ಹಿರಿಯರು ಕಣ್ಣಿಟ್ಟಿರುವ ರಾಜ್ಯ ಬಿಜೆಪಿ ಅಧ್ಯಕ್ಷ ಹುದ್ದೆಯನ್ನು, ಚುನಾವಣೆಯಲ್ಲಿ ಸ್ವತಃ ಸೋತಿರುವ ಸಿಟಿ ರವಿಗೆ ಅಷ್ಟು ಸುಲಭವಾಗಿ ಕೊಡುವರೆ ಎಂಬ ಅನುಮಾನವೂ ಇದೆ.

ಇನ್ನೊಂದು ವಿಚಾರವೆಂದರೆ, ಪ್ರತಿಪಕ್ಷ ನಾಯಕನ ಹುದ್ದೆ ಮತ್ತು ರಾಜ್ಯಾಧ್ಯಕ್ಷ ಹುದ್ದೆಗೆ ನೇಮಕವನ್ನು ರಾಷ್ಟ್ರ ನಾಯಕರು ಯಾಕೆ ಇಷ್ಟು ಕುತೂಹಲಕಾರಿಯಾಗಿ ಬೆಳೆಸುತ್ತಿದ್ದಾರೆ, ಎಳೆದಾಡುತ್ತಿದ್ಧಾರೆ ಎಂಬುದು. ಸಿದ್ದರಾಮಯ್ಯನವರೇ ಹೇಳುವಂತೆ ರಾಜ್ಯದ ಇತಿಹಾಸದಲ್ಲಿಯೇ ಪ್ರತಿಪಕ್ಷ ನಾಯಕನಿಲ್ಲದೆ ರಾಜ್ಯ ವಿಧಾನಸಭೆ ಕಲಾಪ ನಡೆದದ್ದೇ ಇರಲಿಲ್ಲ. ಆದರೆ ಈ ಸಲ ಹಾಗಾಯಿತು.

ಕಾಂಗ್ರೆಸ್ ಸರ್ಕಾರ ರಚಿಸುವುದು ಖಾತ್ರಿಯಾಗಿ ಸಿಎಂ ಆಯ್ಕೆ ಗೊಂದಲ ವಾರದವರೆಗೆ ಮುಂದುವರಿದಾಗ ಆಕಾಶವೇ ಕಳಚಿಬಿತ್ತು ಎನ್ನುವ ಹಾಗೆ ಬೊಬ್ಬೆ ಹೊಡೆದಿದ್ದ ಬಿಜೆಪಿ, ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕನನ್ನೂ ಆರಿಸಿಕೊಳ್ಳದೆ ದಿನಕ್ಕೊಂದು ಸಬೂಬು ಹೇಳುವುದು ಮುಂದುವರಿದೇ ಇದೆ. ಒಂದು ಹಂತದಲ್ಲಿ ಜೆಡಿಎಸ್ ಅನ್ನು ಬಿಜೆಪಿಯೊಳಗೆ ವಿಲೀನಗೊಳಿಸಿ ಕುಮಾರಸ್ವಾಮಿಯವರಿಗೇ ವಿರೋಧ ಪಕ್ಷ ನಾಯಕನ ಹೊಣೆ ವಹಿಸಲಾಗುತ್ತದೆ ಎನ್ನುವಲ್ಲಿಯವರೆಗೂ ವದಂತಿ ಹಬ್ಬಿಸಲಾಯಿತು. ಕಡೆಗೆ ವಿಲೀನ ಸಾಧ್ಯತೆಯನ್ನು ಕುಮಾರಸ್ವಾಮಿಯವರೇ ತಳ್ಳಿಹಾಕುವುದರೊಂದಿಗೆ ಅದು ಹಿಂದಕ್ಕೆ ಸರಿದಿತ್ತು.

ಈಗ ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷರು ಮತ್ತು ಪ್ರತಿಪಕ್ಷ ನಾಯಕ ಯಾರಾಗಲಿದ್ದಾರೆ ಎಂಬುದನ್ನೂ ಜೆಡಿಎಸ್ ವರಿಷ್ಠ ದೇವೇಗೌಡರೇ ಬಿಜೆಪಿಗಿಂತ ಮೊದಲು ಘೋಷಿಸಿದಂತೆ ಹೇಳಿಕೆ ಕೊಟ್ಟಿದ್ದೂ ಆಗಿದೆ. ಇದೆಲ್ಲವೂ ಆಕಸ್ಮಿಕವೊ ಅಥವಾ ​ಈಗ ಬಿಜೆಪಿಯ ಮಿತ್ರನಾಗಿರುವ ಜೆಡಿಎಸ್ ಕಡೆಯಿಂದಲೇ ಇಂಥದೊಂದು ಹೇಳಿಕೆ ಹೊರಬೀಳುವಂತೆ ಮಾಡಲಾಯಿತೊ ಎಂಬ ಪ್ರಶ್ನೆಯೂ ಏಳದೆ ಇರುವುದಿಲ್ಲ.

ಬಿಜೆಪಿ, ಜೆಡಿಎಸ್ ಜೋಡಾಟಕ್ಕೆ ಈಗಾಗಲೇ ಹಲವು ಉದಾಹರಣೆಗಳು ಇರುವ ಹಿನ್ನೆಲೆಯಲ್ಲಿ ಈ ಅನುಮಾನ ಮೂಡುತ್ತಿರುವುದು ಸಹಜ. ಮುಂದಿನ ಚುನಾವಣೆಗೂ ಕಾಂಗ್ರೆಸ್ ವಿರುದ್ಧ ಬಿಜೆಪಿ ಮತ್ತು ಜೆಡಿಎಸ್ ಜೊತೆಯಾಗಿಯೇ ಹೋಗಲಿರುವುದು, ಅಥವಾ ಸ್ವತಂತ್ರವಾಗಿಯೇ ಸ್ಪರ್ಧಿಸಿದರೂ ಬಿಜೆಪಿಗೆ ಅನುಕೂಲಕರವಾಗಿಯೇ ನಿರ್ಧಾರ ತೆಗೆದುಕೊಳ್ಳಲಿರುವುದು ಬಹುತೇಕ ಖಚಿತವಾಗಿರುವ ಹಿನ್ನೆಲೆಯಲ್ಲಿ ಈ ಜೋಡಾಟದ ಮುಂದುವರಿಕೆ ಆಗಲಿದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ.

ಬಹುಶಃ ಬಿಜೆಪಿಯ ಮುಂದಿನ ತೀರ್ಮಾನಗಳು, ಈಗ ಎದ್ದಿರುವ ಅನುಮಾನ, ಕುತೂಹಲ ಮತ್ತು ವ್ಯಕ್ತವಾಗುತ್ತಿರುವ ಅಭಿಪ್ರಾಯಗಳನ್ನು ಆಧರಿಸಿಯೇ ಇರಲಿವೆಯೆ? ಮತ್ತು ಅದಕ್ಕೆ ಪೂರ್ವಭಾವಿಯಾಗಿ, ಸಿಟಿ ರವಿಗೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ​ಕೊಕ್ ಕೊಟ್ಟು, ಆದರೆ ರಾಜ್ಯದಲ್ಲಿ ಪಕ್ಷದ ಎರಡು ಪ್ರಮುಖ ಹುದ್ದೆಗಳಿಗೆ ಆಯ್ಕೆಯನ್ನು ಇನ್ನೂ ಊಹೆಯ ಹಂತದಲ್ಲಿಯೇ ಇಡಲಾಗಿರುವುದು, ಆಟ ಹೇಗಿರಲಿದೆ ಎಂಬುದನ್ನು ಪೂರ್ತಿ ನೋಡಿ ತೀರ್ಮಾನಿಸುವ ಉದ್ದೇಶದ್ದೇ? ಮುಂದಿನ ಬೆಳವಣಿಗೆಗಳಲ್ಲಿ ದೇವೇಗೌಡರ ಹೇಳಿಕೆಯೇ ನಿಜವಾಗಲಿದೆಯೊ ಅಥವಾ ಬಿಜೆಪಿ ತೀರ್ಮಾನ ಬೇರೆ ಇರಲಿದೆಯೊ ನೋಡಬೇಕಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News