ಎರಡು ದಿನಗಳ ವಿಪಕ್ಷ ಸಭೆಗೆ ಸೆಡ್ಡು ಹೊಡೆಯಲು ಬಿಜೆಪಿ ಕಸರತ್ತು

Update: 2023-07-20 13:52 GMT
Editor : Ismail | Byline : ಆರ್. ಜೀವಿ

ಸಾಂದರ್ಭಿಕ ಚಿತ್ರ | Photo: PTI

- ಆರ್. ಜೀವಿ

ಬಿಜೆಪಿ ನೇತೃತ್ವದ ಎನ್ ಡಿ ಎ ಯನ್ನು ಸೋಲಿಸಲು ಪಣ ತೊಟ್ಟಿರುವ ವಿಪಕ್ಷಗಳು ಇಂದು ಮತ್ತು ನಾಳೆ ಬೆಂಗಳೂರಿನಲ್ಲಿ ಸಭೆ ನಡೆಸುತ್ತಿವೆ. ಜೂನ್ 23ರಂದು ವಿರೋಧ ಪಕ್ಷಗಳ ನಾಯಕರ ಮೊದಲ ಸಭೆ ಬಿಹಾರದ ಪಾಟ್ನಾದಲ್ಲಿ ನಡೆದಿತ್ತು. ಬಿಹಾರ ಸಿಎಂ ನಿತೀಶ್ ಕುಮಾರ್ ಆತಿಥ್ಯ ವಹಿಸಿದ್ದ ಸಭೆಯಲ್ಲಿ 15 ಪಕ್ಷಗಳು ಭಾಗವಹಿಸಿದ್ದವು. ಅದಾದ ಬಳಿಕ ಎರಡನೇ ಸಭೆ ಈಗ ಬೆಂಗಳೂರಿನಲ್ಲಿ ಇಂದು ಮತ್ತು ನಾಳೆ ನಡೆಯುತ್ತಿದೆ. ಈ ಸಭೆಗೆ 26 ವಿಪಕ್ಷಗಳಿಗೆ ಆಹ್ವಾನ ಕಳಿಸಲಾಗಿದೆ. ಬೆಂಗಳೂರು ಸಭೆಯ ನೇತೃತ್ವವನ್ನು ಕಾಂಗ್ರೆಸ್ ವಹಿಸಿಕೊಂಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗು ಕಾಂಗ್ರೆಸ್ ಮುಖಂಡ ರಣದೀಪ್ ಸಿಂಗ್ ಸುರ್ಜೆವಾಲಾ ಇದರ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.

ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಸ್ವತಃ ಭಾಗವಹಿಸುತ್ತಿರುವುದು ಬೆಂಗಳೂರು ಸಭೆಯ ವಿಶೇಷತೆ. ಈ ಹಿಂದೆ ಯುಪಿಎ ಮೈತ್ರಿಕೂಟವನ್ನು ರಚಿಸಿ ಯಶಸ್ವಿಯಾಗಿರುವ ದಾಖಲೆ ಇರುವ ಸೋನಿಯಾ ಗಾಂಧಿ ಅವರೇ ಬೆಂಗಳೂರು ಸಭೆಯ ನೇತೃತ್ವ ವಹಿಸಬೇಕು ಎಂಬ ಆಗ್ರಹ ಕೇಳಿ ಬಂದಿತ್ತು. ಸೋನಿಯಾ ಗಾಂಧಿ ಎರಡೂ ದಿನ ಸಭೆಯಲ್ಲಿರಲಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಎಲ್ಲ 26 ಪಕ್ಷಗಳ ಮುಖಂಡರಿಗೆ ಪತ್ರ ಬರೆದು ಆಹ್ವಾನ ನೀಡಿದ್ದಾರೆ.

ಅಲ್ಲಿಗೆ ಹೊಸ ಮೈತ್ರಿಕೂಟದಲ್ಲಿ ಕಾಂಗ್ರೆಸ್ ನಿರ್ಣಾಯಕ ಪಾತ್ರ ವಹಿಸುವುದು ಖಚಿತವಾಗಿದೆ. ಬಿಜೆಪಿ ವಿರುದ್ಧ ಪ್ರತಿಪಕ್ಷಗಳು ಒಗ್ಗೂಡುವ ಪ್ರಯತ್ನದಲ್ಲಿರುವಾಗಲೇ ಬಿಜೆಪಿ ಕೂಡ ಎನ್ಡಿಎ ಮೈತ್ರಿಕೂಟ ಬಲಪಡಿಸಲು ಹೊರಟಿರುವುದು ಹೊಸ ರಾಜಕೀಯ ಬೆಳವಣಿಗೆ. ಪ್ರಬಲ ಪ್ರತಿಪಕ್ಷ ಕೂಟವನ್ನು ಕಟ್ಟುವ ಹಾದಿಯಲ್ಲೀಗ ಎಂಥೆಂಥ ಸವಾಲುಗಳು ಎದುರಾಗಲಿವೆ ಎಂಬುದು ಯೋಚಿಸಬೇಕಿರುವ ವಿಚಾರ.

ಲೋಕಸಭೆ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿಯನ್ನು ಸೋಲಿಸಲು ಒಂದಾಗಹೊರಟಿರುವ ಪ್ರತಿಪಕ್ಷಗಳ ಸ್ಥೈರ್ಯವನ್ನು ಅವು ರಣಕಣಕ್ಕಿಳಿಯುವ ಮೊದಲೇ ಮಾನಸಿಕವಾಗಿ ಕುಗ್ಗಿಸುವ ತಂತ್ರವಾಗಿಯೂ ಬಿಜೆಪಿ ತನ್ನ ಶಕ್ತಿಪ್ರದರ್ಶನದ ಇಂಥದೊಂದು ಆಟಕ್ಕೆ ಮುಂದಾಗಿದೆ. ಜೂನ್ 23 ರಂದು ನಡೆದ ಪಾಟ್ನಾದ ಮೊದಲ ಸಭೆಯಲ್ಲಿ ವಿಪಕ್ಷ ಮೈತ್ರಿಕೂಟದ ಕುರಿತ ಪ್ರಾಥಮಿಕ ಚರ್ಚೆ ನಡೆದಿತ್ತು. ಬೆಂಗಳೂರಿನಲ್ಲಿ ಈ ಮೈತ್ರಿಕೂಟಕ್ಕೆ ಒಂದು ಸ್ಪಷ್ಟ ಚಿತ್ರಣ ಸಿಗುವ ಸಾಧ್ಯತೆ ಇದೆ. ಮೈತ್ರಿಕೂಟದ ಹೆಸರೇನು ? ಅದರ ಸ್ವರೂಪ ಹೇಗಿರಲಿದೆ ? ಮೈತ್ರಿ ಪಕ್ಷಗಳ ನಡುವಿನ ರಾಜ್ಯವಾರು ಸೀಟು ಹಂಚಿಕೆ ಯಾವ ರೀತಿ ಇರಲಿದೆ ? ತಮ್ಮೊಳಗೇ ಇರುವ ಸಾಕಷ್ಟು ಭಿನ್ನಾಭಿಪ್ರಾಯಗಳನ್ನು ಹೇಗೆ ನಿಭಾಯಿಸುವುದು ? ಇತ್ಯಾದಿ ಪ್ರಮುಖ ವಿಷಯಗಳು ಈ ಸಭೆಯಲ್ಲಿ ಚರ್ಚೆಯಾಗಲಿವೆ.

2024 ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿ ನೇತೃತ್ವದ ಎನ್ ಡಿ ಎ ಯನ್ನು ಸೋಲಿಸುವ ಗುರಿಯೊಂದಿಗೆ ಏರ್ಪಡುತ್ತಿರುವ ಆ ಮೈತ್ರಿಯ ಮೊದಲ ಪರೀಕ್ಷೆ ನಾಡಿದ್ದು ಜುಲೈ 20 ಕ್ಕೆ ಶುರುವಾಗುವ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ನಡೆಯಲಿದೆ. ಹಾಗಾಗಿ ಬೆಂಗಳೂರು ಸಭೆಯಲ್ಲಿ, ಅಧಿವೇಶನದಲ್ಲಿ ಮೋದಿ ಸರಕಾರವನ್ನು ಹೇಗೆ ಇಕ್ಕಟ್ಟಿಗೆ ಸಿಲುಕಿಸಬೇಕು ಎಂಬುದರ ಬಗ್ಗೆ ಮುಖ್ಯವಾಗಿ ಚರ್ಚೆಯಾಗಲಿದೆ.

ಇದೇ ವೇಳೆ, ಎನ್ಡಿಎ ಮೈತ್ರಿಕೂಟ ಬಲಪಡಿಸುವ ಉದ್ದೇಶದ ಬಿಜೆಪಿ ಸಭೆ ನಾಳೆ ಅಂದರೆ ಜುಲೈ 18ರಂದು ನವದೆಹಲಿಯಲ್ಲಿ ಪಂಚತಾರಾ ಹೊಟೇಲ್ನಲ್ಲಿ ನಡೆಯಲಿದೆ. ಈ ಸಭೆಯ ಮೂಲಕ ಬಿಜೆಪಿ ಹೂಡಿರೋ ತಂತ್ರಗಳ ಬಗ್ಗೆ ನೋಡುವ ಮೊದಲು, ಪ್ರತಿಪಕ್ಷಗಳ ಮೊದಲ ಸಭೆಯ ಬಳಿಕ ನಡೆದ ಕೆಲವು ರಾಜಕೀಯ ಬೆಳವಣಿಗೆಗಳ ಬಗ್ಗೆ ಗಮನ ಹರಿಸಬೇಕು.

ಪಾಟ್ನಾದಲ್ಲಿ ನಡೆದ ಪ್ರತಿಪಕ್ಷಗಳ ಸಭೆಯ ಬೆನ್ನಲ್ಲೇ ಮಹಾರಾಷ್ಟ್ರ ರಾಜಕೀಯದಲ್ಲಿ ಭಾರಿ ತಿರುವು ಉಂಟಾಗಿತ್ತು. ಪಾಟ್ನಾ ಸಭೆಯಲ್ಲಿ ಭಾಗವಹಿಸಿ, ಇಂಥದೊಂದು ಒಗ್ಗೂಡುವಿಕೆಯ ಅಗತ್ಯವಿದೆ ಎಂದಿದ್ದ ಶರದ್ ಪವಾರ್ ನೇತೃತ್ವದ ಎನ್ಸಿಪಿ ಒಡೆದುಹೋಯಿತು. ಶರದ್ ಪವಾರ್ ಸೋದರ ಸಂಬಂಧಿ ಹಾಗೂ ಎನ್‌ಸಿಪಿ ಹಿರಿಯ ನಾಯಕ ಅಜಿತ್ ಪವಾರ್, ಪಕ್ಷದ ಎಂಟು ಮುಖಂಡರ ಜೊತೆಗೆ ಬಿಜೆಪಿ-ಶಿವಸೇನಾ ಮೈತ್ರಿಕೂಟದ ಸರ್ಕಾರವನ್ನು ಸೇರಿದರು. ಎನ್ಸಿಪಿಯ ಬಹುತೇಕ ನಾಯಕರು ಅಜಿತ್ ಜೊತೆ ಗುರುತಿಸಿಕೊಳ್ಳುವುದರೊಂದಿಗೆ ಶರದ್ ಪವಾರ್ ಅವರಿಗೆ ಪಕ್ಷವೇ ಇಲ್ಲದಂತಾಯಿತು. ಈಗ ಸೀನಿಯರ್ ಪವಾರ್ ಹಾಗು ಜೂನಿಯರ್ ಪವಾರ್ ನಡುವೆ ಪಕ್ಷದ ಹೆಸರು, ಚಿಹ್ನೆಗಳ ಮೇಲೆ ಹಿಡಿತ ಸಾಧಿಸಲು ಮೇಲಾಟ ನಡೆಯುತ್ತಿದೆ.

ಇದಕ್ಕೂ ಮೊದಲೇ ಮಹಾ ವಿಕಾಸ್ ಅಘಾಡಿ ಮೈತ್ರಿಕೂಟದ ಸರ್ಕಾರವನ್ನು ಶಿವಸೇನೆಯ ಶಿಂಧೆ ಬಣದವರ ಬಲದ ಮೂಲಕ ಉರುಳಿಸಿ, ಉದ್ಧವ್ ಠಾಕ್ರೆಗೆ ಪಕ್ಷವೇ ಇರದಂತೆ ಮಾಡಿದ್ದ ತಂತ್ರವನ್ನೇ ಇಲ್ಲಿಯೂ ಬಿಜೆಪಿ ಪರೋಕ್ಷವಾಗಿ ಪ್ರಯೋಗಿಸಿತು ಮತ್ತು ಯಶಸ್ವಿಯೂ ಆಯಿತು. ಇದರೊಂದಿಗೆ ಮಹಾರಾಷ್ಟ್ರದಲ್ಲಿ ಎರಡು ಪ್ರಮುಖ ಪ್ರಾದೇಶಿಕ ಪಕ್ಷಗಳ ಅಸ್ತಿತ್ವವನ್ನೇ ಬುಡಮೇಲು ಮಾಡಿದ ಬಿಜೆಪಿ, ತನ್ನ ಪ್ರಾಬಲ್ಯದ ಹಾದಿಯಲ್ಲಿ ಎದುರಾಗಬಹುದಾದ ಅಡ್ಡಿಗಳನ್ನು ನಿವಾರಿಸಿಕೊಂಡ ನಿರಾಳತೆಯಲ್ಲಿದೆ. ಈಗ ಅಜಿತ್ ಪವಾರ್ ಅವರನ್ನು ಅಸ್ತ್ರವನ್ನಾಗಿ ಬಳಸಿ ಏಕನಾಥ್ ಶಿಂಧೆಯನ್ನು ಹೊರದಬ್ಬುವ ಹುನ್ನಾರ ಬಿಜೆಪಿಯದ್ದು ಎಂಬ ಮಾತುಗಳಿವೆ. ಅದು ಬಿಜೆಪಿಗೆ ಕಷ್ಟವೂ ಅಲ್ಲ.

ಸ್ವಲ್ಪ ಹಿಂದೆ ನೋಡಿದರೆ, ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ಬಿಜೆಪಿ ಹೇಗೆ ಬೀಳಿಸಿತು ಎಂಬುದು ಗೊತ್ತಿರುವ ವಿಚಾರವೇ. ಆಗ ಮೈತ್ರಿ ಸರ್ಕಾರದ ಎರಡೂ ಪಕ್ಷಗಳ ಕೆಲ ಶಾಸಕರನ್ನು ಸೆಳೆದು ತನ್ನ ಆಟವಾಡಿದ್ದ ಬಿಜೆಪಿ, ಈಗ ಬಹುಮತದೊಂದಿಗೆ ಸರ್ಕಾರ ರಚಿಸಿರುವ ಕಾಂಗ್ರೆಸ್ ವಿರುದ್ದ ನಿಲ್ಲಲು ಇಲ್ಲಿನ ಪ್ರಾದೇಶಿಕ ಪಕ್ಷ ಜೆಡಿಎಸ್ ಅನ್ನು ತನ್ನ ತೆಕ್ಕೆಗೆ ಸೆಳೆಯುವ ಯತ್ನದಲ್ಲಿದೆ.

ಇನ್ನೊಂದೆಡೆ, ಪಾಟ್ನಾದಲ್ಲಿಯೂ ಈಗಾಗಲೇ ಬಿಜೆಪಿ ತನ್ನ ಆಟ ಆರಂಭಿಸಿದೆ. ಎನ್ಡಿಎ ಮೈತ್ರಿಕೂಟದಿಂದ ದೂರವಾಗಿರುವ ಎಲ್‌ಜೆಪಿ ನಾಯಕ ಚಿರಾಗ್ ಪಾಸ್ವಾನ್ ಅವರನ್ನು ಮತ್ತೆ ಎನ್ಡಿಎ ತೆಕ್ಕೆಗೆ ತೆಗೆದುಕೊಳ್ಳುವ ಹಾಗೂ ಅವರ ಚಿಕ್ಕಪ್ಪ, ಆರ್‌ಎಲ್‌ಜೆಪಿ ನಾಯಕ ಪಶುಪತಿ ಕುಮಾರ್ ಪರಸ್ ಜೊತೆಗಿನ ಚಿರಾಗ್ ವೈಮನಸ್ಯವನ್ನು ನಿವಾರಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಸಿದೆ.

ಎನ್ಡಿಎ ಕೂಟ ಬಲಪಡಿಸುವ ನಿಟ್ಟಿನ ತಯಾರಿ ಹೇಗೆ ನಡೆದಿದೆ ಎಂಬುದಕ್ಕೆ ಈ ಎಲ್ಲ ಬೆಳವಣಿಗೆಗಳು ಸಾಕ್ಷಿಗಳಂತಿವೆ. ನಾಳಿನ ಎನ್ಡಿಎ ಸಭೆಯಲ್ಲಿ ಬಹುತೇಕ ಎನ್ಡಿಎ ಪಾಲುದಾರ ಪಕ್ಷಗಳು ಭಾಗವಹಿಸುತ್ತಿವೆ. ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ನೇತೃತ್ವದ ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್‌ಪಿಪಿ), ನಾಗಾಲ್ಯಾಂಡ್ ಮುಖ್ಯಮಂತ್ರಿ ನೆಫಿಯು ರಿಯೊ ನೇತೃತ್ವದ ನ್ಯಾಶನಲಿಸ್ಟ್ ಡೆಮಾಕ್ರಟಿಕ್ ಪ್ರೋಗ್ರೆಸಿವ್ ಪಾರ್ಟಿ (ಎನ್‌ಡಿಪಿಪಿ), ಅಪ್ನಾ ದಳದ ಕೇಂದ್ರ ಸಚಿವೆ ಅನುಪ್ರಿಯಾ ಪಟೇಲ್, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ರಾಮದಾಸ್ ಅಠವಳೆ, ಮಹಾರಾಷ್ಟ್ರ ಮುಖ್ಯಮಂತ್ರಿ ಮತ್ತು ಶಿವಸೇನೆ ಮುಖ್ಯಸ್ಥ ಏಕನಾಥ್ ಶಿಂಧೆ, ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಎನ್ಸಿಪಿ ಬಣ, ಜನಸೇನಾ ಪಕ್ಷದ ಪವನ್ ಕಲ್ಯಾಣ್ ಮತ್ತು ಹಿಂದೂಸ್ತಾನಿ ಅವಾಮ್ ಮೋರ್ಚಾ (HAM) ನಾಯಕ ಜಿತನ್ ರಾಮ್ ಮಾಂಝಿ ನಾಳಿನ ಸಭೆಯಲ್ಲಿ ಪಾಲ್ಗೊಳ್ಳುವುದು ಖಚಿತವಾಗಿದೆ. ಈ ನಡುವೆ ಎನ್ಡಿಎ ಬಿಟ್ಟು ವಿಪಕ್ಷಗಳ ಜೊತೆಗಿದ್ದ ಸುಹೇಲ್ ದೇವ್ ಭಾರತೀಯ ಸಮಾಜ್ ಪಾರ್ಟಿಯ ನಾಯಕ ಓಂ ಪ್ರಕಾಶ್ ರಾಜ್ ಭರ್ ಕೂಡ ಮತ್ತೆ ಎನ್ಡಿಎ ತೆಕ್ಕೆಗೆ ಮರಳಿದ್ದಾರೆ.

ಇನ್ನು ಮುಖ್ಯವಾಗಿ,​ ನಿತೀಶ್ ಗೆ ಠಕ್ಕರ್ ಕೊಡಲು ​ ಬಿಹಾರ ರಾಜಕೀಯದಲ್ಲಿ ಬಲಗೊಳ್ಳುವ ಕಡೆಗೆ ಗಮನ ವಹಿಸಿರುವ ಬಿಜೆಪಿ, ಅಲ್ಲಿನ ಎನ್ಡಿಎ ಮೈತ್ರಿಕೂಟದ ಸಡಿಲಗೊಂಡಿರುವ ಎಳೆಗಳನ್ನು ಗಟ್ಟಿಗೊಳಿಸಲು ಮುಂದಾಗಿದೆ. ಲೋಕ ಜನಶಕ್ತಿ ಪಕ್ಷದ ಚಿರಾಗ್ ಪಾಸ್ವಾನ್ ಅವರನ್ನೂ ಬಿಜೆಪಿ ರಾಷ್ಟ್ರೀಯ ಅಧಕ್ಷ ನಡ್ಡಾ ನಾಳಿನ ಸಭೆಗೆ ಆಹ್ವಾನಿಸಿರುವುದು ವಿಶೇಷ. ಆಹ್ವಾನ ಬಂದಿರೋದನ್ನು ಖಚಿತಪಡಿಸಿರುವ ಚಿರಾಗ್ ಪಾಸ್ವಾನ್, ಸಭೆಗೆ ಹಾಜರಾಗಬೇಕೇ ಅಥವಾ ಬೇಡವೇ ಎಂಬುದನ್ನು ಪಕ್ಷದ ನಾಯಕರೊಂದಿಗೆ ಚರ್ಚಿಸಿದ ನಂತರ ನಿರ್ಧರಿಸುವುದಾಗಿ ಹೇಳಿದ್ದಾರೆ.​ ​ಆದರೆ, ಅವರ ನಡೆ ಬಿಜೆಪಿಗೆ ವಿರುದ್ಧವಾಗಿರಲಾರದು ಎಂಬುದಕ್ಕೂ ಹಲವು ಸುಳಿವುಗಳು ಇವೆ.

ಈಗಾಗಲೇ ಕೇಂದ್ರ ಸಚಿವ ನಿತ್ಯಾನಂದ ರೈ ಒಂದೇ ವಾರದಲ್ಲಿ ಎರಡು ಬಾರಿ ಚಿರಾಗ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಎನ್ಡಿಎಗೆ ಮರಳುವಂತೆ ಅವರ ಮನವೊಲಿಸುವುದು ಈ ಮಾತುಕತೆಯ ಮುಖ್ಯ ಉದ್ದೇಶವಾಗಿತ್ತು ಎಂಬುದು ನಿಜ. ಇದಾದ ಬೆನ್ನಲ್ಲೇ ಎನ್ಡಿಎ ಸಭೆಯಲ್ಲಿ ಪಾಲ್ಗೊಳ್ಳುವಂತೆ ಆಹ್ವಾನಿಸಿ ನಡ್ಡಾ ಅವರಿಂದ ಚಿರಾಗ್ ಗೆ ಪತ್ರ ಬಂದಿದೆ.

2020ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ವಿರೋಧಿಸಿ ಬಿಹಾರದಲ್ಲಿ ಎನ್ಡಿಎ ಮೈತ್ರಿ ಮುರಿದುಕೊಂಡಿದ್ದ, ದಿವಂಗತ ರಾಮ್ ವಿಲಾಸ್ ಪಾಸ್ವಾನ್ ಅವರ ಪುತ್ರ ಚಿರಾಗ್ ಪಾಸ್ವಾನ್ ಅವರನ್ನು ಮತ್ತೆ ಎನ್ಡಿಎ ತೆಕ್ಕೆಗೆ ತರಲು ಬಿಜೆಪಿಯ ತೀವ್ರ ಪ್ರಯತ್ನದ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ.

ಇನ್ನೊಂದೆಡೆ, ಚಿರಾಗ್ ಚಿಕ್ಕಪ್ಪ, ಕೇಂದ್ರ ಸಚಿವ ಪಶುಪತಿ ಕುಮಾರ್ ಪರಾಸ್ ಅವರಿಗೂ ಎನ್ಡಿಎ ಸಭೆಯ ಆಮಂತ್ರಣ ಹೋಗಿದೆ. ರಾಜಕೀಯವಾಗಿ ಕಚ್ಚಾಡುತ್ತಿರುವ ಚಿರಾಗ್ ಮತ್ತು ಪರಸ್ ಮಧ್ಯೆ ಸಮನ್ವಯ ಮೂಡಿಸುವುದರಿಂದ ಆಗಬಹುದಾದ ಲಾಭವನ್ನು ಲೆಕ್ಕಹಾಕಿರುವ ಬಿಜೆಪಿ, ಆ ನಿಟ್ಟಿನಲ್ಲಿಯೂ ಮಹತ್ವದ ಮುನ್ನಡೆ ಸಾಧಿಸುವ ಉದ್ದೇಶ ಹೊಂದಿದೆ. ಪರಸ್ ಅವರನ್ನು ಶೀಘ್ರದಲ್ಲೇ ನಿತ್ಯಾನಂದ ರೈ ಭೇಟಿಯಾಗಲಿದ್ದು, ಈ ರಾಜಿ ಸೂತ್ರ ಮುಂದಿಡುವ ಸಾಧ್ಯತೆಗಳಿವೆ ಎನ್ನಲಾಗಿದೆ. ಎಲ್ ಜೆ ಪಿ ಸಂಸ್ಥಾಪಕ ರಾಮ್ ವಿಲಾಸ್ ಪಾಸ್ವಾನ್ ಮರಣದ ನಂತರ ಅವರ ಪಕ್ಷ ಎರಡು ಹೋಳಾಯಿತು. ಪರಸ್ ಅವರ ಆರ್ ಎಲ್ ಜೆ ಪಿ ಪ್ರಸ್ತುತ ಐದು ಸಂಸದರನ್ನು ಹೊಂದಿದ್ದರೆ, ಎಲ್ ಜೆ ಪಿ ಯಿಂದ ಚಿರಾಗ್ ಸಂಸದರಾಗಿದ್ದಾರೆ.

ಇದೀಗ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಇವರಿಬ್ಬರನ್ನೂ ಒಟ್ಟಿಗೇ ಎನ್‌ಡಿಎ ತೆಕ್ಕೆಗೆ ತೆಗೆದುಕೊಳ್ಳುವ ಯತ್ನ ನಡೆದಿದೆ. ಬಿಹಾರದ ಶೇ.6ಕ್ಕಿಂತ ಹೆಚ್ಚು ಮತದಾರರು ಪಾಸ್ವಾನ್ ಜೊತೆಗಿದ್ದಾರೆ. ಇನ್ನೊಂದೆಡೆ ಚಿರಾಗ್ ಬಿಜೆಪಿ ಪರವಾಗಿ ಆಗಾಗ ಧ್ವನಿಯೆತ್ತುವುದೂ ಇದೆ. ಇದೆಲ್ಲದರ ಲಾಭ ಪಡೆಯುವ ಉದ್ದೇಶವಿರುವ ಬಿಜೆಪಿ, ಚಿರಾಗ್ ಅವರನ್ನು ಸೆಳೆದುಕೊಂಡು, ಕೇಂದ್ರ ಸಂಪುಟದಲ್ಲಿ ಸೇರಿಸಿಕೊಳ್ಳುವ ಸಾಧ್ಯತೆಗಳ ಬಗ್ಗೆಯೂ ಹೇಳಲಾಗುತ್ತಿದೆ.

ಚಿರಾಗ್ ಜೊತೆ ಸಮನ್ವಯದ ಸಾಧ್ಯತೆಯನ್ನು ಸದ್ಯಕ್ಕೆ ಪರಸ್ ತಳ್ಳಿಹಾಕಿದ್ದರೂ, ಪ್ರಸ್ತುತ ಪರಸ್ ಪ್ರತಿನಿಧಿಸುತ್ತಿರೋ ಹಾಜಿಪುರ ಲೋಕಸಭಾ ಕ್ಷೇತ್ರದಿಂದ ಮುಂದಿನ ಚುನಾವಣೆಯಲ್ಲಿ ಚಿರಾಗ್ ಅವರ ತಾಯಿ ರೀನಾ ಪಾಸ್ವಾನ್ ಸ್ಪರ್ಧಿಸುವ ಬಗ್ಗೆ ವದಂತಿಗಳಿದ್ದರೂ, ಮುಂದಿನ ದಿನಗಳಲ್ಲಿನ ರಾಜಕೀಯ ನಡೆಗಳು ಹೇಗಿರುತ್ತವೆಂದು ಹೇಳಲಾಗದು.

ಇದೆಲ್ಲದರ ನಡುವೆಯೆ ವಿಪಕ್ಷಗಳ ಮೈತ್ರಿಕೂಟ ರಚಿಸಲು ಹೊರಟಿರುವ ನಿತೀಶ್ ಕುಮಾರ್ ಅವರ ಜೆಡಿಯು ಕೂಡ ಇಬ್ಭಾಗವಾದರೆ ಅಚ್ಚರಿಯಿಲ್ಲ ಎಂಬ ಮಾತುಗಳೂ ಇವೆ. ಬಿಜೆಪಿಯ ಆಟ ಗೊತ್ತೇ ಇರುವುದರಿಂದ ಇಂಥ ಸಾಧ್ಯತೆಯೂ ಅನಿರೀಕ್ಷಿತವಲ್ಲ. ಬಿಹಾರದಲ್ಲಿನ ರಾಜಕೀಯ, ಮಹಾರಾಷ್ಟ್ರದಲ್ಲಿನ ರಾಜಕೀಯ ಮತ್ತು ಕರ್ನಾಟಕದಲ್ಲಿನ ರಾಜಕೀಯ ಇವಿಷ್ಟನ್ನೂ ಪ್ರತಿಪಕ್ಷಗಳ ಒಗ್ಗೂಡುವಿಕೆಗೆ ಎದುರಾಗಬಹುದಾದ ಸವಾಲುಗಳು ಹೇಗಿರಬಹುದು ಎಂಬ ಹಿನ್ನೆಲೆಯಲ್ಲಿ ನೋಡಬೇಕಾಗಿದೆ.

ತನ್ನ ವಿರೋಧಿ ಶಕ್ತಿಗಳನ್ನು ಒಡೆದು ಲಾಭ ಮಾಡಿಕೊಳ್ಳುವುದನ್ನು ಆಪರೇಷನ್ ಕಮಲ ಸೇರಿದಂತೆ ಎಲ್ಲ ಅಡ್ಡದಾರಿಗಳ ಮೂಲಕ ಮಾಡಬಲ್ಲ ಬಿಜೆಪಿ, ಈಗ ಆ ತಂತ್ರಗಾರಿಕೆ ತೀವ್ರಗೊಳಿಸಿರುವುದನ್ನು ಪ್ರತಿಪಕ್ಷಗಳು ಬಹಳ ಎಚ್ಚರಿಕೆಯಿಂದ ಗಮನಿಸಬೇಕಿದೆ. ಯಾಕೆಂದರೆ, ಬಿಜೆಪಿಯ ವಿರುದ್ಧ ಎಂಬ ಕಾರಣಕ್ಕೆ ಒಂದಾಗಬೇಕೆಂದು ಹೊರಟಿರುವ ಪ್ರತಿಪಕ್ಷಗಳಲ್ಲಿ ಮೂಲತಃ ಯಾವ ಸಮನ್ವಯವೂ ಇಲ್ಲ ಎನ್ನುವುದೇ ಅವುಗಳೆದುರಿನ ಬಹಳ ದೊಡ್ಡ ಸವಾಲು.

ಬಿಜೆಪಿಯಂಥ ತಂತ್ರಗಾರ ಪಕ್ಷದ ಎದುರು ನಿಲ್ಲಬೇಕೆನ್ನುವಾಗ, ನಾವೆಲ್ಲ ಜೊತೆಗಿದ್ದೇವೆ ಎಂಬ ಬರೀ ಭಾವುಕ ಮಾತುಗಳ ನೆಲೆಯಲ್ಲಿನ ಒಗ್ಗೂಡುವಿಕೆಯಿಂದ ಏನನ್ನೂ ಸಾಧಿಸಲಿಕ್ಕಾಗದು ಎಂಬುದು ಆ ಪಕ್ಷಗಳು ಮೊದಲು ಗ್ರಹಿಸಬೇಕಾದ ರಿಯಾಲಿಟಿ. ಪಾಟ್ನಾದಲ್ಲಿನ ಮೊದಲ ಸಭೆಯಲ್ಲಿಯೇ ನೋಡಿದ್ದೇವೆ, ಕಾಂಗ್ರೆಸ್ ಮತ್ತು ಆಪ್ ನಡುವೆ ದೊಡ್ಡ ಜಟಾಪಟಿಯೇ ನಡೆಯಿತು. ಕೇಂದ್ರ ಸರ್ಕಾರ ದಿಲ್ಲಿಯ ಆಡಳಿತಾತ್ಮಕ ಸೇವೆಗಳ ಮೇಲೆ ನಿಯಂತ್ರಣ ಸಾಧಿಸಲಿಕ್ಕಾಗಿ ಹೊರಡಿಸಲು ಉದ್ದೇಶಿಸಿರುವ ಸುಗ್ರೀವಾಜ್ಞೆಯನ್ನು ಕಾಂಗ್ರೆಸ್ ಸಾರ್ವಜನಿಕವಾಗಿ ವಿರೋಧಿಸಬೇಕೆಂಬುದು ಆಪ್ ಒತ್ತಾಯ. ಈಗ ಇದಕ್ಕೆ ಕಾಂಗ್ರೆಸ್ ಸಮ್ಮತಿಸಿರುವ ಸುದ್ದಿಯಿದೆ.

ಇನ್ನೊಂದೆಡೆ ಕಾಂಗ್ರೆಸ್ ಮತ್ತು ಆಪ್ ನಡುವೆ ಯಾವತ್ತೂ ಸಮನ್ಯಯ ಸಾಧ್ಯವಾಗಿಯೇ ಇಲ್ಲ. ಕಾಂಗ್ರೆಸ್ ಜೊತೆಗೆ ಸೇರುವ ವಿಚಾರದಲ್ಲಿ ಅಸಮ್ಮತಿ ಮತ್ತು ಅಸಹನೆಯನ್ನು ಕೇಜ್ರಿವಾಲ್ ಮತ್ತೆ ಮತ್ತೆ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಸಮಾನ ಮನಸ್ಕ ಪಕ್ಷಗಳು ಎಂದು ಹೊರಗಡೆ ಹೇಳಿಕೊಳ್ಳುವ ಪ್ರತಿಪಕ್ಷಗಳ ನಡುವಿನ ಈ ಭಿನ್ನ ನಿಲುವುಗಳೇ ತೊಡಕಾಗುವುದನ್ನು ಮೊದಲ ಹಂತದಲ್ಲಿಯೇ ಬಗೆಹರಿಸಿಕೊಳ್ಳುವುದು ಸುಲಭವೆ?

ಪ್ರತಿಪಕ್ಷಗಳ ಮೊದಲ ಸಭೆಯಲ್ಲಿ 15 ಪಕ್ಷಗಳು ಮಾತ್ರವೇ ಪಾಲ್ಗೊಂಡಿದ್ದವೆಂದು ವರದಿಯಾಗಿತ್ತು. ಎರಡನೇ ಸಭೆಗೆ ಇನ್ನೂ ಎಂಟು ಹೊಸ ಪಕ್ಷಗಳಿಗೆ ಆಹ್ವಾನ ನೀಡಲಾಗಿದೆ. ಪಾಟ್ನಾ ಸಭೆಯಲ್ಲಿ ಕಾಂಗ್ರೆಸ್, ಜೆಡಿಯು, ಆರ್ಜೆಡಿ, ಟಿಎಂಸಿ, ಎನ್ ಸಿ ಪಿ , ಡಿಎಂಕೆ, ಸಿಪಿಎಂ, ಸಮಾಜವಾದಿ ಪಕ್ಷ , ಶಿವಸೇನೆ ಉದ್ಧವ್ ಠಾಕ್ರೆ ಬಣ, ಜೆಎಂಎಂ, ಆಮ್ ಆದ್ಮಿ, ಪಿಡಿಪಿ, ನ್ಯಾಷನಲ್ ಕಾನ್ಫರೆನ್ಸ್, ಸಿಪಿಐ, ಸಿಪಿಐ ಎಂಎಲ್ ನಾಯಕರು ಭಾಗವಹಿಸಿದ್ದರು. ಆ ಸಭೆಗೆ ಬಿಎಸ್ಪಿ ನಾಯಕಿ ಮಾಯಾವತಿ ಅವರನ್ನು ಆಹ್ವಾನಿಸಿರಲಿಲ್ಲ.

ಈಗ ಬೆಂಗಳೂರಿನ ಸಭೆಯಲ್ಲಿ ತಮಿಳುನಾಡಿನ ಮರುಮಲರಚಿ ದ್ರಾವಿಡ ಮುನ್ನೇತ್ರ ಕಳಗಂ (ಎಂಡಿಎಂಕೆ), ಕೊಂಗು ದೇಸ ಮಕ್ಕಳ್ ಕಚ್ಚಿ (ಕೆಡಿಎಂಕೆ) , ವಿಡುತಲೈ ಚಿರುತೈಗಳ್ ಕಚ್ಚಿ (ವಿಸಿಕೆ), ಕ್ರಾಂತಿಕಾರಿ ಸಮಾಜವಾದಿ ಪಕ್ಷ (ಆರ್‌ಎಸ್‌ಪಿ), ಆಲ್ ಇಂಡಿಯಾ ಫಾರ್ವರ್ಡ್ ಬ್ಲಾಕ್, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್), ಕೇರಳ ಕಾಂಗ್ರೆಸ್ (ಜೋಸೆಫ್) ಮತ್ತು ಕೇರಳ ಕಾಂಗ್ರೆಸ್ (ಮಣಿ) ಇವು ಹೊಸದಾಗಿ ಭಾಗವಹಿಸಲಿವೆ.

ಇವುಗಳಲ್ಲಿ ಎಂಡಿಎಂಕೆ ಮತ್ತು ಕೆಡಿಎಂಕೆ 2014ರ ಲೋಕಸಭೆ ಚುನಾವಣೆಯಲ್ಲಿ ಮೋದಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಬಿಜೆಪಿ ಜೊತೆ ಮೈತ್ರಿ ಹೊಂದಿದ್ದವು ಎಂಬುದನ್ನು ನೆನಪಿಡಬೇಕು. ಪ್ರತಿಪಕ್ಷಗಳ ಒಗ್ಗೂಡುವಿಕೆಗೆ ಇರುವ ಮತ್ತೊಂದು ಸವಾಲು, ಪ್ರಾಂತ್ಯವಾರು ಜಾತಿ ಸಮೀಕರಣವನ್ನು ಲೆಕ್ಕಹಾಕುತ್ತಿರುವ ಬಿಜೆಪಿ, ಹಲವು ಸಣ್ಣ ಪುಟ್ಟ ಪಕ್ಷಗಳನ್ನು ಎನ್ಡಿಎ ಮೈತ್ರಿಕೂಟಕ್ಕೆ ಸೆಳೆಯುತ್ತಿರುವುದು.

ಈಗಾಗಲೇ ಎನ್‌ಡಿಎ ಮೈತ್ರಿಕೂಟ ವಿಸ್ತರಣೆ ನಡೆಯುತ್ತಿದ್ದು, ಬಿಜೆಪಿ ನಾಯಕರ ಸಮ್ಮುಖದಲ್ಲಿ ಹಲವು ಸಣ್ಣ ಪುಟ್ಟ ಪಕ್ಷಗಳು ಎನ್‌ಡಿಎ ಸೇರುತ್ತಿವೆ. ಈ ರಾಜಕೀಯ ಬೆಳವಣಿಗೆ ಪ್ರತಿಪಕ್ಷಗಳ ಒಕ್ಕೂಟಕ್ಕೆ ಅಲ್ಪಮಟ್ಟಿನ ಹಿನ್ನಡೆ ಎಂದೇ ರಾಜಕೀಯ ವಲಯದಲ್ಲಿ ಹೇಳಲಾಗುತ್ತಿದೆ. ಕರ್ನಾಟಕದಲ್ಲಿ ಜೆಡಿಎಸ್ ಅನ್ನು ಎನ್‌ಡಿಎ ಕೂಟಕ್ಕೆ ಸೇರ್ಪಡೆ ಮಾಡಿಕೊಳ್ಳುವ ಚರ್ಚೆ ನಡೆದಿರುವುದು ಇದೇ ಹಿನ್ನೆಲೆಯಲ್ಲಿ. ಈಗಾಗಲೇ ಇದಕ್ಕೆ ರಾಷ್ಟ್ರೀಯ ನಾಯಕರು ತಾತ್ವಿಕ ಸಮ್ಮತಿ ನೀಡಿದ್ದಾರೆ ಎನ್ನಲಾಗಿದೆ. ಬೆಂಗಳೂರಿನ ವಿಪಕ್ಷಗಳ ಸಭೆಗೆ ಜೆಡಿಎಸ್ ಭಾಗವಹಿಸುತ್ತಿಲ್ಲ.

ಅಧಿಕೃತ ಆಹ್ವಾನ ಬಂದರೆ ನಾಳಿನ ಎನ್ಡಿಎ ಸಭೆಯಲ್ಲಿ ಕುಮಾರಸ್ವಾಮಿ ಪಾಲ್ಗೊಳ್ಳಲೂ ಬಹುದು ಎನ್ನಲಾಗುತ್ತಿದೆ.

ಇವೆಲ್ಲ ಬೆಳವಣಿಗೆಗಳು ಪ್ರತಿಪಕ್ಷಗಳ ಒಗ್ಗೂಡುವಿಕೆಗೆ ಹೊಡೆತ ಕೊಡುವ ಸಾಧ್ಯತೆ ಒಂದಾದರೆ, ಕಾಂಗ್ರೆಸ್ ಅನ್ನು ದುರ್ಬಲಗೊಳಿಸುವ ಬಿಜೆಪಿಯ ಏಕೈಕ ಉದ್ದೇಶವೂ ಇವೆಲ್ಲವುಗಳ ಮೂಲಕ ತೀವ್ರಗೊಳ್ಳುತ್ತಿದೆ ಎಂಬುದು ಸ್ಪಷ್ಟ. ಆದರೆ, ಒಗ್ಗೂಡಬೇಕಿರುವ ಪ್ರತಿಪಕ್ಷಗಳು ಕಚ್ಚಾಟದಲ್ಲಿಯೇ ಕಾಲ ಕಳೆಯುತ್ತಿದ್ದರೆ, ಪ್ರಜಾಪ್ರಭುತ್ವವನ್ನು ಬಲಪಡಿಸುವ ಉದ್ದೇಶದ ಒಗ್ಗಟ್ಟಿಗೆ ಬದ್ಧತೆ ತೋರುವಲ್ಲಿ ವಿಫಲವಾದರೆ, ಬಿಜೆಪಿ ವಿರೋಧಿ ಮತಗಳು ವಿಭಜನೆಯಾಗದಂತೆ ರಣತಂತ್ರ ರೂಪಿಸದಿದ್ದರೆ ಅದು ಅತ್ಯಂತ ಕಳವಳಕಾರಿ ಸ್ಥಿತಿಯನ್ನು ದೇಶದ ಸಂದರ್ಭದಲ್ಲಿ ತಂದಿಡಲಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಆರ್. ಜೀವಿ

contributor

Similar News