ಅಧಿವೇಶನ ಆರಂಭವಾಗಿ ವಾರ ಎರಡಾದರೂ ವಿಪಕ್ಷ ನಾಯಕನಿಲ್ಲ !

Update: 2023-07-20 13:41 GMT

 ಶೆಟ್ಟರ್ |  Photo : PTI

- ಆರ್. ಜೀವಿ

ರಾಜ್ಯ ಬಿಜೆಪಿಗೆ, ಅದರಲ್ಲೂ ವಿಧಾನಸಭೆಯೊಳಗೆ ಪ್ರತಿಪಕ್ಷವಾಗಿರೋ ಬಿಜೆಪಿಗೆ ಯಾರು ನಾಯಕ ? ಈ ಪ್ರಶ್ನೆ ಬೇರೆಯವರನ್ನು ಮಾ​​ತ್ರವಲ್ಲ, ಸ್ವತಃ ಬಿಜೆಪಿಯನ್ನೇ ಕಾಡ್ತಾ ಇರೋ ಹಾಗಿದೆ. ವಿಧಾನಸಭೆ ಚುನಾವಣೆ ಫಲಿತಾಂಶ ಬಂದೇ ಎರಡು ತಿಂಗಳಾಯಿತು. ಹೊಸ ಸರ್ಕಾರ ರಚನೆಯಾಗಿ ಎರಡು ತಿಂಗಳಾಗುತ್ತಾ ಬಂತು. ವಿಧಾನಸಭಾ ಅಧಿವೇಶನವೂ ಶುರುವಾಗಿ ಎರಡನೇ ವಾರ ಮುಗಿದರೂ ಅಧಿಕೃತ ವಿರೋಧಪಕ್ಷದ ಸ್ಥಾನದಲ್ಲಿರೋ ಬಿಜೆಪಿಗೆ ನಾಯಕನೇ ಇಲ್ಲ. ತಮ್ಮ ಪಕ್ಷವನ್ನು ಸದನದಲ್ಲಿ ಮುನ್ನಡೆಸೋ ಹೊಣೆಗಾರಿಕೆ ಯಾರ ಹೆಗಲೇರುತ್ತದೆ ಎಂಬುದು ಬಿಜೆಪಿಯವರಿಗೂ ಗೊತ್ತಿಲ್ಲ.

ಇವತ್ತು ನಾಳೆ ಎಂದೇ ತಳ್ಳಿಕೊಂಡು ಬರುತ್ತಿರೋ ಅದು, ದೆಹಲಿಯ ಕಡೆಗೆ ನೋಡುತ್ತಲೇ ಇದೆ. ಅಲ್ಲಿಂದಲೂ ಕೃಪೆ ಆಗುತ್ತಿಲ್ಲ.

ಅಧಿವೇಶನ ಶುರುವಾಗುವವರೆಗೂ " ಈಗೇನು ಅರ್ಜೆಂಟ್ , ಅಧಿವೇಶನಕ್ಕೆ ಬೇಕಾಗಿರೋದು ವಿಪಕ್ಷ ನಾಯಕ ... ಅಲ್ಲೇ ಘೋಷಣೆ ಮಾಡ್ತೀವಿ" ಅಂದ್ರು ಬಿಜೆಪಿಯವರು. ಈಗ ನೋಡಿದ್ರೆ ಅಧಿವೇಶನ ಎರಡು ವಾರ ನಡೆದುಹೋಗಿದೆ. ಆದರೆ ವಿಪಕ್ಷ ನಾಯಕನೇ ಇಲ್ಲ.

ಪ್ರತಿಪಕ್ಷ ನಾಯಕನಿಲ್ಲದೆ ಅಧಿವೇಶನ ನಡೆಯುತ್ತಿದೆ. ಸಿದ್ದರಾಮಯ್ಯ ಅವರೇ ಹೇಳ್ತಿರೋ ಹಾಗೆ, ರಾಜ್ಯದ ಇತಿಹಾಸದಲ್ಲೇ ಯಾವತ್ತೂ ಹೀಗೆ ಆಗಿರಲಿಲ್ಲ. ರಾಜ್ಯಕ್ಕೆ ಅಕ್ಕಿ ಕೊಡದ ಬಿಜೆಪಿ ವರಿಷ್ಠರು ಈಗ ವಿಪಕ್ಷ ನಾಯಕನನ್ನೂ ಕೊಡದೆ ತಮ್ಮನ್ನು ಸೋಲಿಸಿದ ಕನ್ನಡಿಗರನ್ನು ಸತಾಯಿಸುತ್ತಿದ್ದಾರೆ ಎಂಬ ವ್ಯಂಗ್ಯದ ಮಾತು ಎಲ್ಲೆಡೆ ಕೇಳಿ ಬರುತ್ತಿದೆ.

ಇಂಥ ಸ್ಥಿತಿ ಬಿಜೆಪಿಯ ದುರವಸ್ಥೆ ಮಾತ್ರವಲ್ಲ, ಅದರ ಹೊಣೆಗೇಡಿತನವೂ ಹೌದು. ಸರ್ಕಾರವಾಗಿದ್ದ ಹೊತ್ತಲ್ಲಿಯೂ ಜನರಿಗೆ ದ್ರೋಹ ಬಗೆದ, ಹಸಿ ಹಸಿ ಸುಳ್ಳುಗಳನ್ನೇ ಹೆಣೆದು, ಜನರನ್ನು ವಿಭಜಿಸಿ ರಾಜ್ಯವಾಳಲು ನೋಡಿದ ಬಿಜೆಪಿ, ಈಗ ಪ್ರತಿಪಕ್ಷ ಸ್ಥಾನದಲ್ಲಿ ಕೂತಾಗಲೂ ತನಗಿರುವ ಹೊಣೆ ನಿಭಾಯಿಸಲಾರದೆ ದಿನ ತಳ್ಳುತ್ತಿರೋದು ನಿಜಕ್ಕೂ ಭಂಡತನ.

ಪ್ರತಿಪಕ್ಷ ನಾಯಕನ ರೇಸ್ನಲ್ಲಿರೋ ಎಲ್ಲರೂ ತಾವೇ ಪ್ರತಿಪಕ್ಷ ನಾಯಕರೆಂಬ ರೀತಿಯಲ್ಲಿ ಮಾತನಾಡುತ್ತಿರೋದು, ಅದಕ್ಕೆ ಆಡಳಿತ ಪಕ್ಷದವರಿಂದ ಗೇಲಿಗೊಳಗಾಗುವುದು ಎಲ್ಲವೂ ನಡೀತಾ ಇದೆ. ಆದರೆ ಬಿಜೆಪಿ ಪಾಲಿಗೆ ಮಾತ್ರ ನಿಜವಾದ ನಾಯಕ ಕಾಣಿಸ್ತಾನೇ ಇಲ್ಲ. ಆ ಕಡೆ ಸದನದಲ್ಲೂ ನಾಯಕನಿಲ್ಲ, ಈ ಕಡೆ ಪಕ್ಷಕ್ಕೂ ಹೊಸ ರಾಜ್ಯಾಧ್ಯಕ್ಷ ನೇಮಕ ಆಗ್ತಾ ಇಲ್ಲ.

ಒಳ್ಳೆಯ ಅಥವಾ ಸಮರ್ಥ ವಿರೋಧ ಪಕ್ಷವೆಂಬುದು ಸರ್ಕಾರವನ್ನು ಜನಕಲ್ಯಾಣದ ದಾರಿಯಲ್ಲಿ ಕರೆದುಕೊಂಡು ಹೋಗಲು, ಅದು ದಾರಿ ತಪ್ಪದಂತಿರಲು ಇರುವ ಮಾರ್ಗದರ್ಶಿ ಎಂದುಕೊಳ್ಳಲಾಗುತ್ತಿದ್ದ ಕಾಲವೇನೂ ಈಗ ಇಲ್ಲ. ಆದರೂ ಪ್ರತಿಪಕ್ಷವೆಂಬುದು ಹಾಗೆಯೇ ಇರಬೇಕು. ಮತ್ತು ಸರ್ಕಾರಕ್ಕೆ ಅದರ ಒಳ್ಳೆಯ ಕೆಲಸಗಳಲ್ಲಿ ಜೊತೆಯಾಗಿ ನಿಲ್ಲುವ ಮತ್ತು ತಪ್ಪಿದಾಗ ರಚನಾತ್ಮಕ ಟೀಕೆಯ ಮೂಲಕ ತರಾಟೆಗೆ ತೆಗೆದುಕೊಂಡು ಪ್ರಜಾಪ್ರಭುತ್ವದ ಹಿತ ಕಾಯಬಲ್ಲ ಸೂತ್ರವಾಗಿ ಅದರ ಜವಾಬ್ದಾರಿ ದೊಡ್ಡದು.

ಅಂಥ ಪ್ರತಿಪಕ್ಷಕ್ಕೆ ನಾಯಕನಾದವನ ಹೊಣೆಯೂ ಅಷ್ಟೇ ದೊಡ್ಡದಿರುತ್ತದೆ. ರಾಜಕೀಯ ಹಿತಾಸಕ್ತಿಗಳ ಹೊರತಾಗಿಯೂ ಇರುವ ನೈತಿಕ ದಿಟ್ಟತನವೊಂದು ಪ್ರತಿಪಕ್ಷ ನಾಯಕನ ಘನತೆಯನ್ನು ಹೆಚ್ಚಿಸುತ್ತದೆ. ಅಂಥ ಘನತೆಯ ಸ್ಥಾನ ಪ್ರತಿಪಕ್ಷ ಸ್ಥಾನದಲ್ಲಿ ಕುಳಿತಿರೋ ಬಿಜೆಪಿಯಲ್ಲಿ ಇನ್ನೂ ಖಾಲಿಯೇ ಇದೆ.

ಬೊಮ್ಮಾಯಿಯವರಿಗೇ ಪ್ರತಿಪಕ್ಷ ನಾಯಕನ ಸ್ಥಾನ ಸಿಗಲಿ ಅಂತ ಸಿಎಂ ಸಿದ್ದರಾಮಯ್ಯ ಸದನದಲ್ಲಿ ಬಯಸಿದ್ದೇನೊ ಹೌದು. ಆದರೆ ಅವರೇ ಇನ್ನೂ ನೇಮಕವಾಗದಿರೋದು ಯಾಕೆ, ನಿಮ್ಮ ಮೇಲೆ ವಿಶ್ವಾಸವಿಲ್ಲವೊ ಅಥವಾ ಬೇರೆ ಯಾರನ್ನಾದರೂ ತರುತ್ತಾರೊ ಎಂದೂ ಕೆಣಕಿದ್ದಾರೆ. ದೆಹಲಿಯಿಂದ ವೀಕ್ಷಕರು ಬಂದು ಆಯ್ಕೆ ಮಾಡುತ್ತಾರೆ ಎಂಬಲ್ಲಿಯವರೆಗೂ ಹೋಯಿತು. ಈ ತಿಂಗಳ ಮೊದಲ ವಾರದಲ್ಲೇ ಯಡಿಯೂರಪ್ಪನವರು ಇನ್ನೇನು ಆಯ್ಕೆ ಆಗಿಬಿಡುತ್ತದೆ ಎಂದು ಹೇಳಿಕೆ ಕೊಟ್ಟಿದ್ದರು. ಆದರೆ ಏನೂ ಆಗಲಿಲ್ಲ.

ಯಾಕೆ ಹೀಗಾಗುತ್ತಿದೆ ಬಿಜೆಪಿಯೊಳಗೆ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.

ಕಾಂಗ್ರೆಸ್ನಲ್ಲಿ ಮುಖ್ಯಮಂತ್ರಿ ನೇಮಕ ಕೊಂಚ ತಡವಾದಾಗ ಇದೇ ಬಿಜೆಪಿಯವರು ಆಕಾಶ ಬಿದ್ದವರ ಹಾಗೆ ಆಡಿದ್ದರು. ಆದರೆ ಅವರಿಗೇ ಈಗ ಪ್ರತಿಪಕ್ಷ ಸ್ಥಾನದಲ್ಲಿರುವ ತಮ್ಮ ನಾಯಕನನ್ನು ಆರಿಸಿಕೊಳ್ಳುವುದೇ ಕಗ್ಗಂಟಾಗಿ ಅಣಕಿಸ್ತಾ ಇದೆ. ಬೊಮ್ಮಾಯಿ, ಯತ್ನಾಳ್, ಆರ್ ಅಶೋಕ್, ಅಶ್ವತ್ಥನಾರಾಯಣ್, ಸುನೀಲ್ ಕುಮಾರ್, ಸುರೇಶ್ ಕುಮಾರ್, ಆರಗ ಮೊದಲಾದವರ ಹೆಸರುಗಳೆಲ್ಲ ಕೇಳಿಬರುತ್ತಿವೆ. ಆದರೆ ಆಯ್ಕೆ ಮಾತ್ರ ಆಗಿಲ್ಲ.

ಆಯ್ಕೆ ಆಗಲಿದೆ ಎಂದು ಹೇಳಿ ಹೇಳಿ ತಪ್ಪಿಸಿಕೊಂಡು ಸಾಕಾಗಿರೋ ಬಿಜೆಪಿಯ ನಾಯಕರು, ಅಚ್ಚರಿಯ ನಾಯಕರೊಬ್ಬರು ಪ್ರತಿಪಕ್ಷ ನಾಯಕ ಸ್ಥಾನಕ್ಕೆ ಆಯ್ಕೆಯಾಗಲಿದ್ದಾರೆ ಎಂದು ಹೇಳಿ ಇನ್ನಷ್ಟು ಗೊಂದಲ ಮೂಡಿಸೋದು ನಡೀತಿದೆ. ಈ ನಡುವೆ, ಯತ್ನಾಳ್ ಆಗೀಗ ಸದನದೊಳಗೆ ಎದ್ದೂ ಬಿದ್ದೂ ಎಗರಾಡೋದಕ್ಕೆ ವ್ಯಂಗ್ಯವಾಡಿರೋ ಸಿಎಂ ಸಿದ್ದರಾಮಯ್ಯ, " ನಿಮ್ಮನ್ನೇನೂ ಅಪೊಜಿಷನ್ ಲೀಡರ್ ಮಾಡಲ್ಲ ಬಿಡ್ರಿ" ಎಂದಿದ್ದೂ ಇದೆ.

ಇದೆಲ್ಲದರ ನಡುವೆ ಬಿಜೆಪಿಯವರಿಗಿಂತಲೂ ಭೀಕರವಾಗಿ ಕಾಂಗ್ರೆಸ್ ಮೇಲೆ ಮುಗಿಬೀಳುವ ಕುಮಾರಸ್ವಾಮಿಯವರನ್ನೇ ಬಿಜೆಪಿ ವಿರೋಧ ಪಕ್ಷ ನಾಯಕನ ಸ್ಥಾನಕ್ಕೆ ನೇಮಿಸಬಹುದು ಎಂದು ಸವದಿ ವ್ಯಂಗ್ಯವಾಡಿದ್ದೂ ಆಗಿದೆ. ಕುಮಾರಸ್ವಾಮಿ ಮಾತಿಗೆ ಸದನದಲ್ಲಿ ಎದ್ದುನಿಂತು ಬಿಜೆಪಿಯವರು ಬೆಂಬಲಿಸಿದಾಗ, ನಿಮಗಂತೂ ಯಾರೂ ನಾಯಕರಿಲ್ಲ, ಕುಮಾರಸ್ವಾಮಿಯವರನ್ನೇ ನಾಯಕ ಅಂತ ಮಾಡಿಕೊಳ್ಳಿ ಎಂದು ಕಾಂಗ್ರೆಸ್ನವರು ಕುಟುಕಿದ್ದೂ ಆಗಿದೆ.

ಇನ್ನೊಂದೆಡೆ, ವಿರೋಧ ಪಕ್ಷದ ನಾಯಕರು ಬೇಕಾಗಿದ್ದಾರೆ ಎಂದು ಖಾಲಿ ಕುರ್ಚಿಯ ಚಿತ್ರದೊಂದಿಗೆ ಟ್ವೀಟ್ನಲ್ಲಿ ಕುಟುಕಿದ್ದ ಕಾಂಗ್ರೆಸ್, ಈಗ ಮತ್ತೆ ಟ್ವೀಟ್ ಮಾಡಿ, ನಮ್ಮ ಪ್ರಕಟಣೆಗೆ ಇನ್ನೂ ಸ್ಪಂದನೆ ಸಿಕ್ಕಿಲ್ಲ. ನಿಮ್ಮ ಹೈಕಮಾಂಡ್ ವರಿಷ್ಠರಿಗೆ ಇನ್ನೂ ಸೂಕ್ತ ಸಂದರ್ಭ, ಸೂಕ್ತ ಸಮಯ, ಸೂಕ್ತ ಮುಹೂರ್ತ ಕೂಡಿಬಂದಿಲ್ಲವೆ ಎಂದು ಕೇಳಿದೆ.

ಹೀನಾಯ ಸೋಲಿನ ಬಳಿಕ ಕರ್ನಾಟಕ ಬಿಜೆಪಿಯನ್ನು ದೆಹಲಿ ನಾಯಕರು ಕಾಲ ಕೆಳಗಿನ ಕಸದಂತೆ ಕಾಣುತ್ತಿದ್ದಾರೆಯೆ ಅಥವಾ ಆಂತರಿಕ ಕಲಹ ಇನ್ನೂ ಮುಗಿದಿಲ್ಲವೆ ಎಂದೂ ಅದು ಕೆಣಕಿ ಕೇಳಿದೆ. ಬಿಜೆಪಿಯೊಳಗೆ ಒಬ್ಬರ ಮುಖ ಕಂಡರೆ ಒಬ್ಬರಿಗೆ ಆಗುತ್ತಿಲ್ಲ ಎಂಬ ಮಾತುಗಳೂ ಕೇಳಿಬರುತ್ತಿವೆ. ಬೊಮ್ಮಾಯಿ ಪ್ರತಿಪಕ್ಷ ನಾಯಕನಾಗೋದು ಹಲವರಿಗೆ ಇಷ್ಟವಿಲ್ಲ ಎನ್ನಲಾಗ್ತಿದೆ.

ಮೋದಿ ಹಲವು ಬಾರಿ ಅಲೆಯಲೆಯಾಗಿ ರಾಜ್ಯಕ್ಕೆ ಬಂದರೂ ಗೆಲ್ಲಿಸಲಾಗದ, ಶಾ ಬಂದು ಜನರನ್ನು ಬೆದರಿಸಿ ನೋಡಿದರೂ ವೋಟು ಸಿಗದೆ ಹೀನಾಯವಾಗಿ ಸೋತ ರಾಜ್ಯ ಬಿಜೆಪಿ ಬಗ್ಗೆ ನಿಜವಾಗಿಯೂ ದೆಹಲಿಯ ಬಿಜೆಪಿ ಮಂದಿ ಆಸಕ್ತಿ ಕಳೆದುಕೊಂಡಿದ್ದಾರೆಯೆ? ನೆಟ್ಟಗೆ ನಾಲ್ಕು ವೋಟು ತರಲಾಗದೆ ಸೋತಿರೋರನ್ನು ಇನ್ನೂ ಸ್ವಲ್ಪ ಸತಾಯಿಸೋಣ, ಕಾಯಿಸೋಣ ಎಂದುಕೊಂಡಿರೋ ದೆಹಲಿ ನಾಯಕರು ಹೀಗೆ ಆಟವಾಡುತ್ತಿರಬಹುದೆ?

ಇದೇ ಹೌದಾದರೆ, ಇಂಥ ರಾಜಕೀಯ ಆಟದಲ್ಲಿ ಅದು ಹೊಣೆಗಾರಿಕೆ ಮರೆಯುತ್ತಿದೆಯೆ? ದ್ವೇಷ, ಸುಳ್ಳು, ದ್ರೋಹಗಳನ್ನೇ ಮೈತುಂಬ ಹೊದ್ದುಕೊಂಡು ಕೇಂದ್ರದಲ್ಲಿಯೇ ಒಂಭತ್ತು ವರ್ಷಗಳನ್ನು ತಳ್ಳಿದವರಿಗೆ, ತಮ್ಮ ಅಧಿಕಾರ ಹೋಗಿರುವ ರಾಜ್ಯದಲ್ಲಿ ಹೊಣೆಗಾರಿಕೆಯಿಂದ ನಡೆದುಕೊಳ್ಳುವ ಮನಸ್ಸಾಗುವುದಾದರೂ ಹೇಗೆ? ಆದರೆ ವಿಷಯ ಇಷ್ಟೇ.... ಬಿಜೆಪಿಗೆ ಇಂಥ ದುರವಸ್ಥೆ ಬರಬಾರದಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News

ಮನದರಿವು