ಮುಡಾ ಹಗರಣ : ಸಿಎಂ ಸಿದ್ದರಾಮಯ್ಯ ಪತ್ನಿ ವಿರುದ್ಧ ಮತ್ತೊಂದು ಸಿವಿಲ್​ ಕೇಸ್​

Update: 2024-11-27 17:54 GMT

ಮೈಸೂರು : ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಪತ್ನಿ ಪಾರ್ವತಿ ಅವರು ಪಡೆದುಕೊಂಡಿದ್ದ ಮುಡಾ ನಿವೇಶನ ವಿಚಾರ ಹೊಸ ತಿರುವು ಪಡೆದುಕೊಂಡಿದ್ದು, ಜಮೀನಿನ ಮೂಲ ಮಾಲೀಕ ಮೈಲಾರಯ್ಯ ಅವರ ಪುತ್ರಿ ಜಮುನಾ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ, ಚಿಕ್ಕಪ್ಪ ದೇವರಾಜು ಸೇರಿದಂತೆ ಹಲವರ ವಿರುದ್ಧ ಸಿವಿಲ್ ಮೊಕದ್ದಮೆ ಹೂಡಿದ್ದಾರೆ.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು ಮೈಸೂರಿನ ಕೆಸರೆ ಗ್ರಾಮದಲ್ಲಿ ಪಾರ್ವತಿ ಅವರಿಂದ ಸ್ವಾಧೀನಪಡಿಸಿಕೊಂಡಿರುವ ಜಮೀನಿಗೆ ಬದಲಾಗಿ 14 ನಿವೇಶನಗಳನ್ನು ಸಿಎಂ ಪತ್ನಿಗೆ ಮಂಜೂರು ಮಾಡಿತ್ತು. ಆದರೆ ನಿವೇಶನ ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿಬಂದ ನಂತರ ಪಾರ್ವತಿ ಅವರು 14 ನಿವೇಶನಗಳನ್ನು ಮುಡಾಗೆ ವಾಪಸ್ ನೀಡಿದ್ದಾರೆ.

ಕೆಸರೆ ಭೂಮಿಯನ್ನು ಪಾರ್ವತಿ ಅವರಿಗೆ ಅವರ ಸಹೋದರ ಮಲ್ಲಿಕಾರ್ಜುನಸ್ವಾಮಿ ಉಡುಗೊರೆಯಾಗಿ ನೀಡಿದ್ದರು. ಈ ಭೂಮಿಯನ್ನು ಮಲ್ಲಿಕಾರ್ಜುನಸ್ವಾಮಿ ಅವರು ದೇವರಾಜು ಎಂಬುವರಿಂದ ಖರೀದಿಸಿದ್ದರು. ಇದೀಗ ದೇವರಾಜು ಅವರ ಅಣ್ಣ ಮೈಲಾರಯ್ಯ ಅವರ ಮಗಳು ಜಮುನಾ ಮೈಸೂರಿನ ಜೆಎಂಎಫ್​ಸಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿಯವರ ಹೆಸರಿನಲ್ಲಿರುವ ಜಮೀನು ದೇವರಾಜು ಅವರದ್ದು ಅಲ್ಲ, ಬದಲಿಗೆ ನಮ್ಮ ತಂದೆ ಮೈಲಾರಯ್ಯ ಅವರಿಗೆ ಸೇರಿದ್ದು ಎಂದು ಜಮುನಾ ದಾವೆ ಹೂಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಪಾರ್ವತಿ ಸೇರಿದಂತೆ 12 ಜನರ ವಿರುದ್ಧ ಸಿವಿಲ್ ಕೇಸ್ ದಾಖಲಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News