ಮೆಡಿಕಲ್ ಶಾಪ್ ಗಳಲ್ಲಿ ಡ್ರಗ್ಸ್ ಸಿಕ್ಕರೆ ಲೈಸನ್ಸ್ ರದ್ದು ಮಾಡಲು ಸೂಕ್ತ ಕ್ರಮ: ಡಾ.ಜಿ.ಪರಮೇಶ್ವರ್

Update: 2024-11-18 09:20 GMT

ಮೈಸೂರು,ನ.17: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಗೆ ಕರಿಯ ಎಂದು ಕರೆದು ವಿವಾದಕ್ಕೆ ಕಾರಣವಾಗಿರುವ ಸಚಿವ ಝಮೀರ್ ಅಹ್ಮದ್ ಖಾನ್ ವಿರುದ್ದ ಕಾಂಗ್ರೆಸ್ ಪಕ್ಷದಲ್ಲಿ ಶಿಸ್ತು ಕ್ರಮ ಕೈಗೊಳ್ಳುವ ವಿಚಾರ ಕುರಿತು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪರೋಕ್ಷ ಹೇಳಿಕೆ ನೀಡಿದ್ದಾರೆ.

ಈ ಕುರಿತು ಸೋಮವಾರ ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಗೃಹ ಸಚಿವ ಪರಮೇಶ್ವರ್, ಝಮೀರ್ ಹೇಳಿಕೆ ಪಕ್ಷಕ್ಕೆ ಹೊರೆಯಾಗಿದೆ ಎಂದು ಖುದ್ದು ಕೆಪಿಸಿಸಿ ಅಧ್ಯಕ್ಷರೇ ಹೇಳಿದ್ದಾರೆ. ಕೆ.ಪಿ.ಸಿ.ಸಿ.ಅಧ್ಯಕ್ಷರು ಬೇಕಾದರೆ ಪಕ್ಷದ ಶಿಸ್ತು ಪಾಲನ ಸಮಿತಿಗೆ ವರದಿ ಕೊಟ್ಟರೆ ಶಿಸ್ತುಪಾಲನಾ ಅಧ್ಯಕ್ಷ ರಹೀಂ ಖಾನ್ ಕ್ರಮ ಕೈಗೊಳ್ಳಬಹುದು. ನಾನು ಈ ಹಿಂದೆ ಎಐಸಿಸಿ ಶಿಸ್ತು ಪಾಲನಾ ಸಮಿತಿ ಸದಸ್ಯನಾಗಿದ್ದೆ. ಆಗ ಪಕ್ಷಕ್ಕೆ ಹಾನಿಯಾಗುವ ಹೇಳಿಕೆ ಕೊಡುವ ನಾಯಕರನ್ನ ಅವರು ಎಷ್ಟೇ ದೊಡ್ಡವರಿದ್ದರೂ ನೋಟಿಸ್ ಕೊಟ್ಟು ಕರೆಸುತ್ತಿದ್ದೆವು. ಅಗತ್ಯವಿದ್ದರೆ ಸಸ್ಪೆಂಡ್ ಕೂಡ ಮಾಡುತ್ತಿದ್ದೆವು‌. ಈಗಲು ಕೆ‌ಪಿಸಿಸಿ ಅಧ್ಯಕ್ಷರು ಶಿಸ್ತು ಪಾಲನಾ ಸಮಿತಿ ಗಮನಕ್ಕೆ ಈ ವಿಚಾರ ತರಬಹುದು. ಝಮೀರ್ ಹೇಳಿಕೆಯಿಂದ ಚುನಾವಣೆಯಲ್ಲಿ ಸ್ವಲ್ಪ ಪರಿಣಾಮ ಬೀರುತ್ತಿದೆ ಎಂದ ಪಕ್ಷದ ನಾಯಕರೇ ಹೇಳಿದ್ದಾರೆ ಎಂದರು.

ಬೆಂಗಳೂರಿನಲ್ಲಿ ಚಾಕಲೇಟ್ ರೂಪದಲ್ಲಿ ಡ್ರಗ್ಸ್ ಸಿಗುತ್ತಿರುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಡಾ.ಜಿ.ಪರಮೇಶ್ವರ್, ಡ್ರಗ್ಸ್ ವಿರುದ್ಧ ಸರ್ಕಾರ ಸಮರ ಸಾರಿದೆ. ಎಲ್ಲ ಕಡೆ ಕಡಿವಾಣ ಹಾಕಲು ತೀರ್ಮಾನ ಮಾಡಿದ್ದೇವೆ. ಆನೇಕಲ್ ಕಡೆ ಮಾರಾಟ ಆಗ್ತಿದೆ ಎಂಬ ಮಾಹಿತಿ ಸಿಕ್ಕಿತು. ಎಲ್ಲ ಕಡೆ ಕೂಡ ಡ್ರಗ್ಸ್ ತಡೆಯುವಲ್ಲಿ ಪ್ರಯತ್ನ ನಡೀತಿದೆ. ಸ್ಕೂಲ್ ಕಾಲೇಜು ಹುಡುಗರಿಗೆ ಸಪ್ಲೈ ಆಗ್ತಿದೆ ಎಂಬ ಆರೋಪವಿದೆ ಮೆಡಿಕಲ್ ಶಾಪ್ ಗಳಲ್ಲಿ ಸಿಕ್ಕರೆ ಲೈಸನ್ಸ್ ರದ್ದು ಮಾಡಲು ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.

ಕೋವಿಡ್ ಹಗರಣದ ಬಗ್ಗೆ ತನಿಖೆ ನಡೆಯುತ್ತಿದೆ. ಕೋಟಿಗಟ್ಟಲೇ ಹಗರಣ ಆಗಿದೆ. ಮೆಡಿಸಿನ್ ಡ್ರಗ್ಸ್ ಖರೀದಿಯಲ್ಲಿ ಅಕ್ರಮ ಆಗಿದೆ. ಇದೆಲ್ಲದರ ರಿಪೋರ್ಟ್ ಬಂದ ಬಳಿಕ ಕ್ರಮ ಆಗತ್ತೆ ಎಂದು ಪರಮೇಶ್ವರ್ ತಿಳಿಸಿದರು.

ಬಿಜೆಪಿ ವಿರುದ್ಧ 40% ಕಮೀಷನ್ ಆರೋಪಕ್ಕೆ ಸಂಬಂಧಿಸಿದಂತೆ ದಾಖಲೆ ಇಲ್ಲ ಎಂಬ ಲೋಕಾಯುಕ್ತ ಉಲ್ಲೇಖಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಲೋಕಾಯುಕ್ತರು ಯಾವ ಆಧಾರದ ಮೆಲೆ ಸಾಕ್ಷಿ ಇಲ್ಲ ಎಂದಿದ್ದಾರೆ ಎಂಬುದನ್ನು ನೋಡಬೇಕಿದೆ. ಅಗತ್ಯಬಿದ್ದರೆ ಮರು ತನಿಖೆಗೆ ಸಿದ್ಧರಿದ್ದೇವೆ ಎಂದು ಹೇಳಿದರು.

ಶಾಸಕರ ಖರೀದಿಗೆ ಈಗಲೂ ಬಿಜೆಪಿ ಪ್ರಯತ್ನಿಸುತ್ತಿದೆ. ಈ ವಿಚಾರವಾಗಿ ದಾಖಲೆ ಸಿಕ್ಕರೆ ಅದರ ಬಗ್ಗೆಯೂ ತನಿಖೆ ಮಾಡುತ್ತೇವೆ ಎಂದು ಹೇಳಿದರು.

ಸಿಎಂ ಬದಲಾವಣೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಪರಮೇಶ್ವರ್, ಈ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ ಬಿಜೆಪಿ ಜೆಡಿಎಸ್ ಸುಮ್ಮನೆ ಸಿಎಂ ಬದಲಾವಣೆ ಬಗ್ಗೆ ಹೇಳುತ್ತಾರೆ ನಮ್ಮಲ್ಲಿ ಆ ಬಗ್ಗೆ ಚರ್ಚೆ ಆಗಿಲ್ಲ ಎಂದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News