ಮೈಸೂರು | ಡಿವೈಡರ್‌ಗೆ ಡಿಕ್ಕಿ ಹೊಡೆದು ಶಾಲಾ ಮಕ್ಕಳ ಬಸ್ ಪಲ್ಟಿ
ಮೈಸೂರು : ಪ್ರವಾಸಕ್ಕೆ ಬಂದಿದ್ದ ಶಾಲಾ ಮಕ್ಕಳ ಬಸ್ ಚಾಲಕನ ಅಜಾಗರೂಕತೆಯಿಂದ ಬಸ್ ರಸ್ತೆ ಡಿವೈಡರ್ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿರುವ ಘಟನೆ ಮೈಸೂರು-ಬೆಂಗಳೂರು ರಸ್ತೆಯ ಫೌಂಟೆನ್ ವೃತ್ತದ ಬಳಿ ಮಂಗಳವಾರ ರಾತ್ರಿ ಸುಮಾರು 8 ಗಂಟೆಗೆ ನಡೆದಿದೆ.
ಅಪಘಾತದಲ್ಲಿ ಸುಮಾರು 11ಕ್ಕೂ ಹೆಚ್ಚು ಮಕ್ಕಳಿಗೆ ಗಾಯಗಳಾಗಿದ್ದು, ಉಳಿದ ಮಕ್ಕಳು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಬೆಳಗಾವಿ ಜಿಲ್ಲೆ ಖಾನಾಪುರದ ಶಾಂತಿನಿಕೇತನ ಶಾಲೆಯ ಮಕ್ಕಳು ಗಾಯಗೊಂಡವರಾಗಿದ್ದು, ಸಮೀಪದ ಆಸ್ಪತ್ರೆಯಲ್ಲಿ ಮಕ್ಕಳನ್ನು ಚಿಕಿತ್ಸೆಗೆ ದಾಖಲಿಸಲಾಗಿದೆ.
ಸೋಮವಾರ ರಾತ್ರಿ ಶಾಂತಿನಿಕೇತನ ಶಾಲೆಯ ಮಕ್ಕಳು ಶಿಕ್ಷಕರೊಂದಿಗೆ ಎರಡು ಸರಕಾರಿ ಬಸ್ಸಿನಲ್ಲಿ ಮೈಸೂರು ಪ್ರವಾಸಕ್ಕೆ ಬಂದಿದ್ದರು. ಮಂಗಳವಾರ ಬೆಳಗ್ಗೆ ಮೈಸೂರು ತಲುಪಿ ಇಲ್ಲಿನ ಕೆಲವು ಪ್ರವಾಸಿ ಸ್ಥಳಗಳನ್ನು ವೀಕ್ಷಿಸಿ ತಾವು ತಂಗಿದ್ದ ಹೋಟೆಲ್ಗೆ ತೆರಳುವಾಗ ರಾತ್ರಿ ಸುಮಾರು 8 ಗಂಟೆಗೆ ಒಂದು ಬಸ್ ಫೌಂಟೆನ್ ವೃತ್ತದ ಬಳಿ ಸರಕಾರಿ ಐಟಿಐ ಕಾಲೇಜು ಮುಂಭಾಗ ಡಿವೈಡರ್ಗೆ ಡಿಕ್ಕಿ ಹೊಡೆದು ಪಕ್ಕದ ರಸ್ತೆಯಲ್ಲಿ ಉರುಳಿಬಿದ್ದಿತು ಎನ್ನಲಾಗಿದೆ. ಅಪಘಾತದ ರಭಸಕ್ಕೆ ಬಸ್ಸಿನ ಮುಂಭಾಗದ ಚಕ್ರಗಳು ಕಳಚಿ ಬಿದ್ದಿವೆ. ಅಲ್ಲದೇ ರಸ್ತೆ ಮಧ್ಯದಲ್ಲಿದ್ದ ವಿದ್ಯುತ್ ಕಂಬಕ್ಕೂ ಬಸ್ ಡಿಕ್ಕಿ ಹೊಡೆದ ಪರಿಣಾಮ ವಿದ್ಯುತ್ ಕಂಬವೂ ಉರುಳಿ ಬಿದ್ದಿದೆ. ಈ ವೇಳೆ ಚಾಲಕ ಪಾನಮತ್ತನಾಗಿದ್ದ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಬಸ್ ಪಲ್ಟಿಯಾದ ವೇಳೆ ಯಾವುದೇ ವಾಹನ ಬರದಿದ್ದರಿಂದ ಬಸ್ಸಿನಲ್ಲಿದ್ದ ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ. ಮಕ್ಕಳ ಕಿರುಚಾಟ ಕಂಡು ಸ್ಥಳೀಯರು ಕೂಡಲೇ ಧಾವಿಸಿ ಮಕ್ಕಳನ್ನು ಬಸ್ಸಿನಿಂದ ಹೊರಗೆ ತೆಗೆದು ರಕ್ಷಿಸಿದ್ದಾರೆ.
ಆಸ್ಪತ್ರೆಗೆ ಶಾಸಕ ತನ್ವೀರ್ ಸೇಠ್ ಭೇಟಿ :
ಶಾಲಾ ಮಕ್ಕಳ ಬಸ್ ಪಲ್ಟಿಯಾಗಿ ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿದ್ಯಾರ್ಥಿಗಳನ್ನು ಬುಧವಾರ ಶಾಸಕ ತನ್ವೀರ್ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.
ಗಾಯಗೊಂಡಿರುವ ಮಕ್ಕಳ ಚಿಕಿತ್ಸಾ ವೆಚ್ಚವನ್ನು ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳೇ ಬರಿಸುವಂತೆ ಸೂಚಿಸಿದರು. ಮಕ್ಕಳು ಮತ್ತು ಶಿಕ್ಷಕರು ವಾಪಸ್ ಅವರ ಸ್ಥಳಕ್ಕೆ ತೆರಳಲು ಸಹಕಾರ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು. ಪಾನಮತ್ತ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಸಂಚಾರಿ ಪೋಲಿಸರಿಗೆ ಸೂಚಿಸಿದರು.