ಚನ್ನಪಟ್ಟಣ ಟಿಕೆಟ್ ವಿಚಾರದಲ್ಲಿ ನನಗೂ ಕುಮಾರಸ್ವಾಮಿಗೂ ಮನಸ್ತಾಪ ಉಂಟಾಯಿತು : ಶಾಸಕ ಜಿ.ಟಿ.ದೇವೇಗೌಡ

Update: 2024-11-25 13:37 GMT

ಜಿ.ಟಿ.ದೇವೇಗೌಡ

ಮೈಸೂರು : ಚನ್ನಪಟ್ಟಣ ಉಪಚುನಾವಣೆಯಲ್ಲಿ ಯೋಗೇಶ್ವರ್, ನಿಖಿಲ್ ಯಾರಿಗಾದರೂ ಟಿಕೆಟ್ ಕೊಡಿ. ಆದರೆ ಯೋಗೇಶ್ವರ್‌ನ ಜೊತೆಯಲ್ಲೇ ಇಟ್ಟುಕೊಳ್ಳಿ ಎಂದಿದ್ದೆ. ನನ್ನ ಮಾತನ್ನು ಕುಮಾರಸ್ವಾಮಿ ಕೇಳಲಿಲ್ಲ ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದ್ದಾರೆ.

ತಮ್ಮ ಜನ್ಮದಿನ ಆಚರಿಸಿಕೊಂಡ ಬಳಿಕ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷಕ್ಕೆ ಹೋಗುವ ಕುರಿತು ಕ್ಷೇತ್ರದ ಜನ ನಿರ್ಧಾರ ಮಾಡುತ್ತಾರೆ. ಕಳೆದ ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷದಿಂದ ಆಫರ್ ಬಂದಿತ್ತು. ಸಿದ್ದರಾಮಯ್ಯ, ಕೆ.ಸಿ.ವೇಣುಗೋಪಾಲ್ ಮಂತ್ರಿ ಮಾಡುವುದಾಗಿ ಹೇಳಿದ್ದರು. ಖುದ್ದು ರಾಹುಲ್ ಗಾಂಧಿ ಮನೆಗೆ ಬರಲು ತಯಾರಿ ಮಾಡಿಕೊಂಡಿದ್ದರು. ಆದರೆ ತಂದೆ ಸ್ಥಾನದಲ್ಲಿರುವ ದೇವೇಗೌಡರ ಮಾತಿಗೆ ಮಣಿದು ಪಕ್ಷದಲ್ಲಿಯೇ ಉಳಿದೆ. ಮುಂದಿನ ಮೂರು ವರ್ಷ ಜೆಡಿಎಸ್ ಪಕ್ಷದಲ್ಲಿ ಇರ್ತೀನಿ. ಮುಂದೆ ಕಾಂಗ್ರೆಸ್ ಸೇರಬೇಕೋ ಬೇಡವೋ ಜನ ತೀರ್ಮಾನ ಮಾಡುತ್ತಾರೆ ಎಂದರು.

ಚನ್ನಪಟ್ಟಣದಲ್ಲಿ ನಿಖಿಲ್ ಸೋಲು ವಿಚಾರ ಕುರಿತು ಪ್ರತಿಕ್ರಿಯಿಸಿದ ಜಿ.ಟಿ ದೇವೇಗೌಡರು, ನನ್ನ ಮಾತು ಕುಮಾರಸ್ವಾಮಿ ಕೇಳಲಿಲ್ಲ. ಚನ್ನಪಟ್ಟಣ ಟಿಕೆಟ್ ವಿಚಾರದಲ್ಲಿ ನನ್ನ ಮಾತನ್ನು ಗಣನೆಗೆ ತೆಗೆದುಕೊಳ್ಳಲಿಲ್ಲ. ಸಿ.ಪಿ.ಯೋಗೇಶ್ವರ್ ಅವರನ್ನು ಒಗ್ಗೂಡಿಸಿದ್ದು ನಾನು. ಕೊನೆಗೆ ಅವರೇ ಸಂಸತ್ ಚುನಾವಣೆಯಲ್ಲಿ ಒಂದಾಗಿದ್ದರು. ಬಳಿಕ ಚನ್ನಪಟ್ಟಣ ಉಪಚುನಾವಣೆ ಟಿಕೆಟ್ ವಿಚಾರದಲ್ಲಿ ಗೊಂದಲಕ್ಕೆ ಒಳಗಾದರು ಎಂದು ತಿಳಿಸಿದರು.

ಚನ್ನಪಟ್ಟಣ ಸೋಲುವ ಕ್ಷೇತ್ರವಲ್ಲ. ನನಗೆ ಕುಮಾರಸ್ವಾಮಿ ಮೇಲೆ ಮುನಿಸಿರುವುದು ಸತ್ಯ. ಸಾ.ರಾ.ಮಹೇಶ್ ವಿಚಾರದಲ್ಲಿ ಬೇಸರವಿದೆ. ಸಿದ್ದರಾಮಯ್ಯಗೆ ಜಿ.ಟಿ.ದೇವೇಗೌಡನ ಬಗ್ಗೆ ಗೊತ್ತು. ನೇರವಾಗಿ ಸತ್ಯ ಹೇಳುತ್ತೇನೆ ಎಂದು ಗೊತ್ತು. ಈವರೆಗೆ ಯಾವುದೇ ಸಣ್ಣ ಕೆಲಸಕ್ಕೂ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಬಳಿ ಹೋಗಿಲ್ಲ. ಆದರೆ ಇನ್ಮುಂದೆ ಹೋಗುತ್ತೇನೆ ಎಂದು ಜಿ.ಟಿ ದೇವೇಗೌಡ ತಿಳಿಸಿದರು.

ಮುಡಾದಲ್ಲಿ ತಮ್ಮ ಅಕ್ಕನ ಮಗನ ಸೈಟು ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಜಿ.ಟಿ ದೇವೇಗೌಡ, ನನಗೆ ನಾಲ್ಕೈದು ಜನ ಅಕ್ಕ ತಂಗಿಯರು ಇದ್ದಾರೆ. ಯಾರು ಯಾರು ಏನು ಮಾಡುತ್ತಿದ್ದಾರೆ ಗೊತ್ತಿಲ್ಲ. ಮಹೇಂದ್ರ ಮನೆಗೆ ಕೊಟ್ಟಿರುವ ಸೈಟು ಬಗ್ಗೆ ಕೇಳಿದ್ದೇನೆ. ಅದು ಅಕ್ರಮವಾಗಿಲ್ಲ. ಪಿತ್ರಾರ್ಜಿತಾ ಆಸ್ತಿ. ಮುಡಾದವರು ಜಮೀನು ಬದಲು ಸೈಟು ಕೊಟ್ಟಿದ್ದಾರೆ. ಸಿದ್ದರಾಮಯ್ಯ ಪತ್ನಿ ಪ್ರಕರಣ ನಮ್ಮ ಅಕ್ಕನ ಮಗನ ಪ್ರಕರಣ ಬೇರೆ ಬೇರೆ. ಒಂದು ವೇಳೆ ಅಕ್ರಮ ಆಗಿದ್ದರೆ ಕ್ರಮ ತೆಗೆದುಕೊಂಡು ಸೈಟ್ ಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಿ ಎಂದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News