ಹುಬ್ಬಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠ್ ಹತ್ಯೆ ಖಂಡಿಸಿ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿ ಪ್ರತಿಭಟನೆ
ಮೈಸೂರು: ಮಹಿಳೆಯರ ಮೇಲಿನ ದೌರ್ಜನ್ಯ, ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠ್ ಹತ್ಯೆ ಖಂಡಿಸಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.
ನಗರದ ಗಾಂಧಿ ಚೌಕದಲ್ಲಿ ಜಮಾಯಿಸಿದ ನೂರಾರು ಪ್ರತಿಭಟನಕಾರರು, 'ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡಿಸಿದೆ, ಲವ್ ಜಿಹಾದ್ ಗೆ ಕಡಿವಾಣ ಹಾಕದ ಸರ್ಕಾರ' ಎಂದು ಆಕ್ರೋಶ ವ್ಯಕ್ತಪಡಿಸಿದರು. ಭಿತ್ತಿ ಫಲಕ ಹಿಡಿದು ಧಿಕ್ಕಾರ ಕೂಗಿದರು.
ವಿಜಯೇಂದ್ರ ಮಾತನಾಡಿ, 'ಕಳೆದ ಮೂರು ದಿನದಿಂದ ರಾಜ್ಯದಲ್ಲಿ 8 ಹತ್ಯೆಗಳು ನಡೆದಿದ್ದರೂ ಕಾಂಗ್ರೆಸ್ ಸರ್ಕಾರ ಕಣ್ಮುಚ್ಚಿ ಕುಳಿತಿದೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಸರ್ಕಾರ ಬಂದಾಗಿನಿಂದಲೂ ರಾಜ್ಯಕ್ಕೆ ದರಿದ್ರ ಅಂಟಿಕೊಂಡಿದೆ. ಹೀಗಾಗಿಯೇ ಬರ ಬಂದಿದೆ, ಅಲ್ಪಸಂಖ್ಯಾತರ ತುಷ್ಟೀಕರಣ ನೀತಿ ಅನುಸರಿಸಿದೆ. ಹೆಣ್ಣು ಮಕ್ಕಳಿಗೆ ಅಭದ್ರತೆ ಕಾಡುತ್ತಿದೆ' ಎಂದು ದೂರಿದರು.
ಪ್ರತಿಭಟನೆಯಲ್ಲಿ ಶಾಸಕ ಟಿ.ಎಸ್.ಶ್ರೀವತ್ಸ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂ.ರಾಜೇಂದ್ರ, ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ರಘು ಆರ್.ಕೌಟಿಲ್ಯ, ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಅನಿಲ್ ಥಾಮಸ್, ನಗರ ಘಟಕ ಅಧ್ಯಕ್ಷ ಎಲ್.ನಾಗೇಂದ್ರ , ಮಾಜಿ ಮೇಯರ್ ಶಿವಕುಮಾರ್, ಗ್ರಾಮಾಂತರ ಘಟಕದ ಅಧ್ಯಕ್ಷ ಎಲ್. ಆರ್.ಮಹಾದೇವಸ್ವಾಮಿ, ಮುಖಂಡರಾದ ಎಸ್.ಎ. ರಾಮದಾಸ್, ಮೈ.ವಿ.ರವಿಶಂಕರ, ಎಂ.ಜಿ.ರೂಪಾ, ಎಂ.ಸತೀಶ್, ಬಿ.ವಿ.ಮಂಜುನಾಥ್, ಎಸ್.ಸಂದೇಶ್ ಸ್ವಾಮಿ ಸೇರಿದಂತೆ ಹಲವರು ಭಾಗವಹಿಸಿದ್ದರು.