ಮೈಸೂರು | 154 ಕೆ.ಜಿ. ಗಾಂಜಾ ಸಂಗ್ರಹಿಸಿದ್ದ ಇಬ್ಬರ ಬಂಧನ
ಮೈಸೂರು : ಇಲ್ಲಿನ ಉದಯಗಿರಿ ಠಾಣೆಯ ಪೊಲೀಸರು ಅಕ್ರಮವಾಗಿ ಗಾಂಜಾ ಸಂಗ್ರಹಿಸಿದ್ದ ಮನೆಯ ಮೇಲೆ ದಾಳಿ ನಡೆಸಿ, ಒಟ್ಟು 154 ಕೆ.ಜಿ 450 ಗ್ರಾಂ ಗಾಂಜಾ ವಶಕ್ಕೆ ಪಡೆದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಮೈಸೂರು ನಗರದ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ ಕಲ್ಯಾಣಗಿರಿ. ಕೆ.ಎಚ್.ಬಿ ಕಾಲೋನಿಯ ಮನೆಯೊಂದರಲ್ಲಿ ಮಾದಕ ವಸ್ತುವಾದ ಗಾಂಜಾವನ್ನು ಅಕ್ರಮವಾಗಿ ಸಂಗ್ರಹಿಸಿಟ್ಟುಕೊಂಡಿರುವ ಬಗ್ಗೆ ಪೊಲೀಸರಿಗೆ ಮಂಗಳವಾರ ಮಾಹಿತಿ ಸಿಕ್ಕಿದ್ದು, ಖಚಿತ ಮಾಹಿತಿಯ ಮೇರೆಗೆ ಪೊಲೀಸರು ಮನೆಯ ಮೇಲೆ ಬುಧವಾರ ಬೆಳಿಗ್ಗೆ ದಾಳಿ ಮಾಡಿದ್ದಾರೆ.
ಈ ವೇಳೆ 8 ಪ್ಲಾಸ್ಟಿಕ್ ಚೀಲದಲ್ಲಿ ಹಲವು ಪೊಟ್ಟಣ್ಣಗಳನ್ನಾಗಿಟ್ಟಿದ್ದ ಒಟ್ಟು 154 ಕೆ.ಜಿ 450ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡು ಇಬ್ಬರು ಆರೋಪಿಗಳನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ.
ಈ ಸಂಬಂಧ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಎನ್.ಡಿ.ಪಿ.ಎಸ್. ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಆರೋಪಿಗಳ ವಿಚಾರಣೆ ವೇಳೆ ಮತ್ತೊಬ್ಬ ಪ್ರಮುಖ ಆರೋಪಿಯ ಬಗ್ಗೆ ಮಾಹಿತಿ ನೀಡಿದ್ದು, ಸದರಿ ಆರೋಪಿಯ ಪತ್ತೆ ಕಾರ್ಯ ಮುಂದುವರೆದಿದ ಎಂದು ತಿಳಿದು ಬಂದಿದೆ.