ಪೊಕ್ಸೋ ಕೇಸ್‌ನಲ್ಲಿ ಸಿಲುಕಿರುವ ಯಡಿಯೂರಪ್ಪರಿಗೆ ನನ್ನ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ : ಸಿಎಂ ಸಿದ್ದರಾಮಯ್ಯ
ಮೈಸೂರು: ಹೆಣ್ಣು ಮಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಪೊಕ್ಸೋ ಕೇಸ್ ನಲ್ಲಿ ಸಿಕ್ಕಿ ಹಾಕಿಕೊಂಡಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರಿಗೆ ನನ್ನ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದರು.
ನಗರದ ರಾಮಕೃಷ್ಣ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "82 ವಯಸ್ಸಿನಲ್ಲಿ ಯಡಿಯೂರಪ್ಪ ಹೆಣ್ಣು ಮಗಳ ಮೇಲೆ ದೌರ್ಜನ್ಯ ನಡೆಸಿ ಪೊಕ್ಸೋ ಕೇಸ್ ನಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ. ಇವರ ಮೇಲೆ ಚಾರ್ಜ್ ಶೀಟ್ ಕೂಡ ಆಗಿದೆ. ಕೋರ್ಟ್ ದಯೆಯಿಂದ ಬಚಾವ್ ಆಗಿದ್ದಾರೆ. ಇವರಿಗೆ ಯಾವ ನೈತಿಕತೆ ಇದೆ. ಈ ವಯಸ್ಸಿನಲ್ಲಿ ಪೊಕ್ಸೊ ಕೇಸ್ ನಲ್ಲಿ ಸಿಕ್ಕಿಹಾಕಿಕೊಂಡಿರುವ ಇವರು ಸಾರ್ವಜನಿಕ ಜೀವನದಿಂದ ನಿವೃತ್ತಿಯಾಗಬೇಕು" ಎಂದು ವಾಗ್ದಾಳಿ ನಡೆಸಿದರು.
ಯಡಿಯೂರಪ್ಪರ ಪ್ರಕರಣ ಬೇರೆ, ನನ್ನ ಮೇಲಿನ ಆರೋಪ ಪ್ರಕರಣವೇ ಬೇರೆ. ಅವರು ಚೆಕ್ ಮೂಲಕ ಹಣ ಪಡೆದಿರುವ ದಾಖಲೆ ಇತ್ತು. ಡೀನೋಟಿಫೈ ಮಾಡಿದ್ದರು. ಅವರು ತಪ್ಪು ಮಾಡಿದ್ದರಿಂದ ಪ್ರಕರಣ ದಾಖಲಾಗಿತ್ತು. ಅವರ ಮೇಲೆ ಹದಿನೈದು ಪ್ರಕರಣಗಳಿವೆ. ಎಲ್ಲವನ್ನು ಸಮಾವೇಶದಲ್ಲಿ ಬಹಿರಂಗಪಡಿಸುವೆ ಎಂದು ಸಿದ್ದರಾಮಯ್ಯ ಹೇಳಿದರು.