ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾಸ್ಟರ್ ಪ್ಲಾನ್ ರೂಪಿಸಲು ಸೂಚನೆ : ಸಿಎಂ ಸಿದ್ದರಾಮಯ್ಯ

Update: 2024-09-03 14:11 GMT

ಮೈಸೂರು: ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಆಗಬೇಕಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾಸ್ಟರ್ ಪ್ಲಾನ್ ರೂಪಿಸುವಂತೆ ಸೂಚನೆ ನೀಡಲಾಗಿದೆ. ಚಾಮುಂಡಿ ಬೆಟ್ಟದ ಮೇಲೆ ಧೂಮಪಾನ, ಮದ್ಯಪಾನ, ಗುಟ್ಕಾ ಪಾನ್ ಗಳನ್ನು ಸಂಪೂರ್ಣ ನಿಷೇಧಿಸಲಾಗಿದೆ. ಬೆಟ್ಟದ ಪ್ರದೇಶವನ್ನು ಪ್ಲಾಸ್ಟಿಕ್ ಮುಕ್ತ ಮಾಡಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಚಾಮುಂಡಿ ಬೆಟ್ಟದಲ್ಲಿ ಮಂಗಳವಾರ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಪ್ರಥಮ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಚಾಮುಂಡೇಶ್ವರಿ ಪ್ರಾಧಿಕಾರವನ್ನು ಸರಕಾರ ರಚಿಸಿದ್ದು, ಹಿಂದೆ ಅಪರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮಿತಿಯಡಿ ಕಾರ್ಯನಿರ್ವಾಹಕ ಅಧಿಕಾರಿಗಳು ದೇವಸ್ಥಾನದ ಅಭಿವೃದ್ಧಿ ಮತ್ತು ಭಕ್ತಾದಿಗಳಿಗೆ ಸೌಲಭ್ಯಗಳನ್ನು ಒದಗಿಸುವ ಕಾರ್ಯ ಮಾಡುತ್ತಿದ್ದರು. ಮಹದೇಶ್ವರ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರವೂ ರಚನೆಯಾಗಿದೆ. ಹುಲಿಗೆಮ್ಮ ದೇವಸ್ಥಾನ, ಮಹದೇಶ್ವರ ದೇವಸ್ಥಾನ, ಸವದತ್ತಿಯ ಎಲ್ಲಮ್ಮ, ಘಾಟಿ ಸುಬ್ಮಣ್ಯ ದೇವಸ್ಥಾನಕ್ಕೂ ಪ್ರಾಧಿಕಾರವನ್ನು ಸರಕಾರ ರಚಿಸಿದೆ. ವಿಶ್ವವಿಖ್ಯಾತ ದಸರಾ ಹಬ್ಬದ ಜೊತೆಗೆ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಸಾವಿರಾರು ಜನ ಭಕ್ತಾದಿಗಳು ಶುಕ್ತವಾರ, ಶನಿವಾರ ರವಿವಾರಗಳಂದು ಭೇಟಿ ನೀಡುತ್ತಾರೆ. ಶ್ರೀಕ್ಷೇತ್ರದಲ್ಲಿ ಬಹಳಷ್ಟು ಅಭಿವೃದ್ಧಿ ಕಾರ್ಯಗಳಾಗಿವೆ. ಅವುಗಳ ಪೈಕಿ ಕೆಲವು ಪೂರ್ಣಗೊಂಡಿದ್ದರೆ ಕೆಲವು ಪೂರ್ಣಗೊಂಡಿಲ್ಲ ಎಂದರು.

ಚಾಮುಂಡಿ ಕ್ಷೇತ್ರ ಮತ್ತು ಬೆಟ್ಟಕ್ಕೆ ಸೇರಿದ 23 ದೇವಾಲಯಗಳ ಅಭಿವೃದ್ದಿ:

ಚಾಮುಂಡೇಶ್ವರಿ ಕ್ಷೇತ್ರ ಮತ್ತು ಬೆಟ್ಟಕ್ಕೆ ಸೇರಿದ 23 ದೇವಾಲಯಗಳ ಅಭಿವೃದ್ಧಿ ಹಾಗೂ ಭಕ್ತಾದಿಗಳಿಗೆ ಸೌಲಭ್ಯಗಳನ್ನು ಒದಗಿಸಿಕೊಡಬೇಕು ಎಂಬ ಉದ್ದೇಶದಿಂದ ಪ್ರಾಧಿಕಾರ ರಚನೆಯಾಗಿದೆ. ಹಿಂದೆ ಬಸ್ ನಿಲ್ದಾಣ, ವಾಹನ ನಿಲುಗಡೆ ಮತ್ತು ಮಳಿಗೆಗಳ ನಿರ್ಮಾಣವಾಗಿದೆ. ಹಿಂದೆ ಕೈಗೆತ್ತಿಕೊಂಡಿರುವ ಕಾರ್ಯಕ್ರಮಗಳನ್ನು ಕೂಡಲೇ ಪೂಣಗೊಳಿಸಲು ಸೂಚನೆ ನೀಡಲಾಗಿದೆ. 2018 ರಲ್ಲಿ ಕುಡಿಯುವ ನೀರಿನ ಕಾಮಗಾರಿ ಮಂಜೂರಾಗಿದ್ದರೂ ಇನ್ನೂ ಪೂರ್ಣವಾಗಿಲ್ಲ. ಅದನ್ನು ಕೂಡಲೇ ಪೂರ್ಣಗೊಳಿಸಲು ನಗರಾಭಿವೃದ್ಧಿ ಪ್ರಾಧಿಕಾರದವರಿಗೆ ಸೂಚನೆ ನೀಡಲಾಗಿದೆ. ಕಸ ವಿಲೇವಾರಿ ಕಾಮಗಾರಿಯ ಸಿವಿಲ್ ಕಾಮಗಾರಿಗಳು ಪೂರ್ಣವಾಗಿದ್ದು, ಈ ತಿಂಗಳೊಳಗೆ ವಿದ್ಯುದ್ದೀಕರಣಗೊಳಿಸಿ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಬೇಕು ಎಂದರು.

ವಸ್ತ್ರ ಸಂಹಿತೆ ಇಲ್ಲ:

ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡುವವರಿಗೆ ಯಾವುದೇ ವಸ್ತ್ರ ಸಂಹಿತೆಯನ್ನು ಜಾರಿ ಮಾಡಿಲ್ಲ. ಎಲ್ಲಾ ಜಾತಿ , ಧರ್ಮದವರು ದೇವಸ್ಥಾನಕ್ಕೆ ಬರಬಹುದು ಎಂದರು.

ಅಪರಾಧ ತಡೆಗೆ ಟಾಸ್ಕ್ ಫೋರ್ಸ್ ರಚನೆ:

ದೇವಾಲಯಗಳಲ್ಲಿ ಅಗತ್ಯವಿರುವೆಡೆ ಸಿಸಿಟಿವಿ ಅಳವಡಿಸಬೇಕೆಂದು ತೀರ್ಮಾನಿಸಿ, ಯೂನಿಯನ್ ಬ್ಯಾಂಕ್ ನವರು ಸಿಎಸ್ ಆರ್ ನಿಧಿಯಿಂದ ಸಿಸಿಟಿವಿಗಳನ್ನು ಅಳವಡಿಕೆಗೆ ಸಹಕಾರ ನೀಡಲಿದ್ದಾರೆ. ದೇವಸ್ಥಾನದ ಸುತ್ತಮುತ್ತಲಿನ ದೀಪದ ವ್ಯವಸ್ಥೆಗೊಳಿಸುವ ಜೊತೆಗೆ ಈ ಪ್ರದೇಶದಲ್ಲಿ ಅಪರಾಧಗಳನ್ನು ನಿಗ್ರಹಿಸಲು ಒಂದು ಟಾಸ್ಕ್ ಫೋರ್ಸ್ ನ್ನು ರಚನೆ ಮಾಡಲಾಗುವುದು ಎಂದರು.

ದೇವಸ್ಥಾನದ ಆಸ್ತಿಗಳ ಸರ್ವೆ:

ದೇವಸ್ಥಾನದ ಆಸ್ತಿಯಾಗಿರುವ ಭೂಮಿ ಒತ್ತುವರಿಯಾಗಿರುವ ಸಾಧ್ಯತೆಯಿರುವುದರಿಂದ, ಅವುಗಳ ಸರ್ವೇ ಮಾಡಲು ತಿಳಿಸಲಾಗಿದ್ದು, ಸರ್ವೆ ನಡೆಸಿದ ವರದಿಯನ್ನು ಪ್ರಾಧಿಕಾರದ ಮುಂದಿನ ಸಭೆಯಲ್ಲಿ ಮಂಡಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಚಿವರುಗಳಾದ ಡಾ.ಎಚ್.ಸಿ.ಮಹದೇವಪ್ಪ, ಎಚ್‌.ಕೆ.ಪಾಟೀಲ್, ಕೆ.ವೆಂಕಟೇಶ್, ಶಾಸಕ ಜಿ.ಟಿ.ದೇವೇಗೌಡ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News