ಬಿಜೆಪಿಯಿಂದ ಕಾಂಗ್ರೆಸ್‌ನ 50 ಶಾಸಕರಿಗೆ ತಲಾ 50 ಕೋಟಿ ರೂ. ಆಫರ್ : ಸಿಎಂ ಸಿದ್ದರಾಮಯ್ಯ ಗಂಭೀರ ಆರೋಪ
ಮೈಸೂರು : "ಈ ಬಾರಿ ಹೇಗಾದರೂ ಸಿದ್ಧರಾಮಯ್ಯ ಸರಕಾರವನ್ನು ಕಿತ್ತುಹಾಕಬೇಕು ಎಂದು ಬಿಜೆಪಿಯವರು ಕಾಂಗ್ರೆಸ್‌ನ 50 ಶಾಸಕರಿಗೆ ತಲಾ 50 ಕೋಟಿ ರೂ. ಆಫರ್ ನೀಡಿದ್ದರು. ಆದರೆ, ಅದಾಗಲಿಲ್ಲ ಎಂದು ನನ್ನ ಮೇಲೆ ಸುಳ್ಳು ಆರೋಪ ಹೊರಿಸಿ ಕಪ್ಪು ಮಸಿ ಬಳಿಯಲು ಯತ್ನಿಸುತ್ತಿದ್ದಾರೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದರು.
ಮೈಸೂರು ಜಿಲ್ಲೆ ಟಿ.ನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿ ಬುಧವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಸವಲತ್ತು ವಿತರಣೆ ಮಾಡಿ ಅವರು ಮಾತನಾಡಿದರು.
ʼಬಿಜೆಪಿ ಎಂದೂ ಸ್ವಂತ ಬಲದ ಮೇಲೆ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿಲ್ಲ, ಸಾಕಷ್ಟು ಭ್ರಷ್ಟಾಚಾರ ಮಾಡಿ ಲಂಚದಿಂದ ಕೋಟಿಗಟ್ಟಲೆ ಹಣ ಸಂಪಾದನೆ ಮಾಡಿದ್ದಾರೆ. ಆ ಹಣದಿಂದ ನಮ್ಮ 50 ಶಾಸಕರನ್ನು ತಲಾ 50 ಕೋಟಿ ರೂ. ಕೊಟ್ಟು ಖರೀದಿ ಮಾಡಲು ಯತ್ನಿಸಿದ್ದರು. ಅವರು ಯಾರೂ ಹೋಗಲಿಲ್ಲ. ಹಾಗಾಗಿ ನನ್ನ ಮೇಲೆ ಮುಡಾ ಪ್ರಕರಣ ಎಂದು ಸುಳ್ಳು ಆರೋಪ ಮಾಡಿ ಕಪ್ಪು ಮಸಿ ಬಳಿಯಲು ಯತ್ನಿಸುತ್ತಿದ್ದಾರೆʼ ಎಂದು ವಾಗ್ದಾಳಿ ನಡೆಸಿದರು.
ʼಒಬ್ಬೊಬ್ಬ ಶಾಸಕರಿಗೆ 50 ಕೋಟಿ ರೂ.ಹಣ ಕೊಟ್ಟು ಖರೀದಿಸಲು ಯಡಿಯೂರಪ್ಪ ಏನು ಪ್ರಿಂಟ್ ಮಾಡಿದ್ದರಾ? ಬೊಮ್ಮಾಯಿ, ಅಶೋಕ್, ವಿಜಯೇಂದ್ರ ಹಣ ಪ್ರಿಂಟ್ ಮಾಡಿದ್ದಾರಾ? ಎಲ್ಲವೂ ಭ್ರಷ್ಟಾಚಾರ ಲಂಚದಿಂದ ಸಂಪಾದನೆ ಮಾಡಿರುವ ಹಣʼ ಎಂದು ಆಕ್ರೋಶ ವ್ಯಕ್ತಪಡಿಸಿದರು.
ʼಕೇಂದ್ರದ ಸರಕಾರ ಬಿಜೆಪಿ ಆಧಿಕಾರದಲ್ಲಿ ಇಲ್ಲದ ರಾಜ್ಯಗಳ ಮುಖ್ಯಮಂತ್ರಿಗಳ ಮೇಲೆ ಈ.ಡಿ, ಐ.ಟಿ, ಸಿಬಿಐ ಬಳಸಿಕೊಂಡು ತೊಂದರೆ ಕೊಡುತ್ತಿದೆ. ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮೇಲೂ ಸುಳ್ಳು ಪ್ರಕರಣ ಹಾಕಿ ತೊಂದರೆ ಕೊಟ್ಟರು. ಈಗ ನನ್ನ ಮೇಲೂ ಸುಳ್ಳು ಪ್ರಕರಣ ದಾಖಲಿಸಿ ತೊಂದರೆ ಕೊಡುತ್ತಿದ್ದಾರೆʼ ಎಂದು ಹೇಳಿದರು.
ʼಬಿಜೆಪಿ-ಜೆಡಿಎಸ್‌ನವರು ಸಿದ್ಧರಾಮಯ್ಯ, ಪತ್ನಿ ಪಾರ್ವತಿ ಅಕ್ರಮವಾಗಿ 14 ಸೈಟ್ ಪಡೆದಿದ್ದಾರೆ ಎಂದು ಆರೋಪ ಮಾಡುತ್ತಿದ್ದಾರೆ. ನನ್ನ 40 ವರ್ಷ ರಾಜಕಾರಣದಲ್ಲಿ ಎಂದೂ ಕಳಂಕ ಹೊಂದಿಲ್ಲ. ನಾನು 1985ನೇ ಇಸವಿಯಲ್ಲೇ ಮೊದಲ ಬಾರಿಗೆ ಸಚಿವನಾಗಿದ್ದವನು. ಎರಡು ಬಾರಿ ಉಪಮುಖ್ಯಮಂತ್ರಿ, ಎರಡು ಬಾರಿ ವಿರೋಧ ಪಕ್ಷದ ನಾಯಕ ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಕೆಲಸ ಮಾಡುತ್ತಿದ್ದೇನೆ. 14 ಸೈಟ್ ಪಡೆಯಲು ನಾನು ಇಷ್ಟು ವರ್ಷ ರಾಜಕಾರಣ ಮಾಡಬೇಕಿತ್ತಾʼ ಎಂದು ಪ್ರಶ್ನಿಸಿದರು.