ವಿಶ್ವ ಪ್ರವಾಸೋದ್ಯಮ ವೆಬ್ ಸೈಟ್ ಗೆ ಸಿಎಂ‌ ಸಿದ್ದರಾಮಯ್ಯ ಚಾಲನೆ

Update: 2024-09-27 16:18 GMT

ಮೈಸೂರು: ಅರಮನೆ ಎದುರು ನಿಂತ ಆನೆಗಳು, ಜಾನಪದ ಕಲಾತಂಡಗಳು, ಸಾಂಪ್ರದಾಯಿಕ ಧಿರಿಸಿನಲ್ಲಿ ಹೆಜ್ಜೆ ಹಾಕಿದ ನಾಗರಿಕರು ‘ಪ್ರವಾಸೋದ್ಯಮ ದಿನಾಚರಣೆ’ಯನ್ನು ಕಳೆಗಟ್ಟಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರು ಪ್ರವಾಸೋದ್ಯಮ ವೆಬ್‌ಸೈಟ್‌ಗೆ (mysurutourism.in) ಚಾಲನೆ ನೀಡಿದರು.

ಜಿಲ್ಲಾಡಳಿತ, ‍ಪ್ರವಾಸೋದ್ಯಮ ಇಲಾಖೆ, ಅರಮನೆ ಮಂಡಳಿ, ಮೈಸೂರು ಟ್ರಾವೆಲ್ಸ್‌ ಅಸೋಸಿಯೇಷನ್ ಹಾಗೂ ಮೈಸೂರು ಹೋಟೆಲ್‌ ಮಾಲೀಕರ ಸಂಘವು ‘ವಿಶ್ವ ಪ್ರವಾಸೋದ್ಯಮ ದಿನ’ದ ಪ್ರಯುಕ್ತ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮ ದಸರೆಯ ಜಂಬೂಸವಾರಿಯನ್ನು ನೆನಪಿಸಿತು.

ದಸರಾ ಆನೆಗಳಾದ ‘ಧನಂಜಯ’, ‘ಗೋಪಿ’, ‘ಮಹೇಂದ್ರ’, ‘ವರಲಕ್ಷ್ಮಿ’, ‘ಕಂಜನ್‌’, ‘ರೋಹಿತ್‌’, ‘ಏಕಲವ್ಯ’, ‘ಸುಗ್ರೀವ’, ‘ಭೀಮ’, ‘ದೊಡ್ಡಹರವೆ ಲಕ್ಷ್ಮಿ’, ‘ಪ್ರಶಾಂತ’ ಸೊಂಡಿಲೆತ್ತಿ ನಮಸ್ಕರಿಸಿದವು. ‘ಹಿರಣ್ಯ’, ‘ಲಕ್ಷ್ಮಿ’ ಜೊತೆ ಬಂದ ಅಂಬಾರಿ ಆನೆ ‘ಅಭಿಮನ್ಯು’ ಗೌರವ ವಂದನೆ ಸಲ್ಲಿಸಿದನು.

ಗಜಪಡೆ ಜೊತೆಗೆ ಅಶ್ವದಳ, ಟಾಂಗಾ ಸವಾರಿ, ಜಾನಪದ ಕಲಾತಂಡಗಳು, ಆಕರ್ಷಿಸಿದವು. ಜಾನಪದ ಕಲಾತಂಡಗಳ ಮೆರವಣಿಗೆಯು ದಸರೆಯ ಜಂಬೂ ಸವಾರಿಯನ್ನು ನೆನಪಿಸಿತು. ಬೀಸು ಕಂಸಾಳೆ, ಚಂಡೆ ಮೇಳ, ವೀರಭದ್ರ ಕುಣಿತ, ಗಾರುಡಿಗೊಂಬೆ ಕಲಾವಿದರು ಮೆರುಗು ತಂದರು.

ಕೊಡವರು, ಟಿಬೆಟನ್ನರು ಸಾಂಪ್ರಾದಾಯಿಕ ಧಿರಿಸಿನಲ್ಲಿ ನಡೆದು ಕಳೆಗಟ್ಟಿಸಿದರು. ದಿವಾನ್ ಉಡುಪು ಧರಿಸಿದ ಸೇಂಟ್‌ ಫಿಲೊಮಿನಾಸ್‌, ವಿದ್ಯಾವಿಕಾಸ ಪ್ರವಾಸೋದ್ಯಮ ಮತ್ತು ಆತಿಥ್ಯ ನಿರ್ವಹಣಾ ಕಾಲೇಜು, ಮಹಾಜನ ಸ್ನಾತಕೋತ್ತರ ಕೇಂದ್ರ ವಿದ್ಯಾರ್ಥಿಗಳು ಎಲ್ಲರ ಗಮನ ಸೆಳೆದರು.

ಸರ್ವಧರ್ಮ ಸಮನ್ವಯ ಸಾರಲು ಪ್ರಜಾಪಿರ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು, ಹಿಂದೂ ಕೇರಳ ಸಮಾಜ, ಕ್ರಿಶ್ಚಿಯನ್ನರು, ಮುಸ್ಲಿಮರು, ಪದ್ಮಶ್ರೀ ಜೈನ ಮಹಿಳಾ ಸಮಾಜದವರು ಹೆಜ್ಜೆ ಹಾಕಿದರು.

ಎಲ್ಲರ ಬಳಿಯೂ ಗೌತಮ ಬುದ್ಧ, ಪೈಗಂಬರ್, ಬಸವಣ್ಣ, ವಚನಕಾರರು, ತತ್ವಪದಕಾರರ ಸಾಲುಗಳ ಭಿತ್ತಿಪತ್ರಗಳನ್ನು ಹಿಡಿದು ನಾವೆಲ್ಲರೂ ಒಂದೇ ಎಂದು ಸಾರಿದರು. ಅವರೊಂದಿಗೆ ಪ್ರವಾಸಿ ಗೈಡ್‌ ಹಾಗೂ ಪ್ರವಾಸಿ ಮಿತ್ರ ಪೊಲೀಸರು ಸಾಗಿದರು.

ಜಂಬೂಸವಾರಿ ಸಾಗುವ ಸಯ್ಯಾಜಿರಾವ್‌ ರಸ್ತೆಯಲ್ಲಿನ ಹೈವೇ ವೃತ್ತದವರೆಗೂ ನಡೆದ ಮೆರವಣಿಗೆಯಲ್ಲಿ ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು.

ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ, ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್, ಅರಣ್ಯ ವಸತಿ ಮತ್ತು ವಿಹಾರ ಧಾಮ ನಿಗಮದ ಅಧ್ಯಕ್ಷ ಅನಿಲ್‌ ಚಿಕ್ಕಮಾದು, ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಪುಷ್ಪಾ ಅಮರನಾಥ್, ಶಾಸಕರಾದ ತನ್ವೀರ್‌ ಸೇಠ್‌, ಜಿ.ಟಿ.ದೇವೇಗೌಡ, ಕೆ.ಹರೀಶ್‌ಗೌಡ, ಡಿ.ರವಿಶಂಕರ್‌, ವಿಧಾನ ಪರಿಷತ್ ಸದಸ್ಯರಾದ ಡಾ.ಡಿ.ತಿಮ್ಮಯ್ಯ, ಡಾ.ಯತೀಂದ್ರ ಸಿದ್ದರಾಮಯ್ಯ, ಕೆ.ವಿವೇಕಾನಂದ, ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್‌ಖಾನ್, ಪ್ರವಾಸೋದ್ಯಮ ಇಲಾಖೆ ಜಂಟಿ ನಿರ್ದೇಶಕಿ ಎಂ.ಕೆ.ಸವಿತಾ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಾಲತಿಪ್ರಿಯಾ, ಡಿಸಿಎಫ್‌ ಐ.ಬಿ.ಪ್ರಭುಗೌಡ, ಅರಮನೆ ಮಂಡಳಿ ಉಪನಿರ್ದೇಶಕ ಟಿ.ಎಸ್‌.ಸುಬ್ರಹ್ಮಣ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್‌.ಮಲ್ಲಿಕಾರ್ಜುನಸ್ವಾಮಿ, ಸಹಾಯಕ ನಿರ್ದೇಶಕ ಎಂ.ಡಿ.ಸುದರ್ಶನ್ ಹಾಜರಿದ್ದರು.

ಪ್ರವಾಸಿ ಮಾರ್ಗದರ್ಶಿ ಬಿಡುಗಡೆ

ಮೈಸೂರು ಜಿಲ್ಲೆಯ ಪ್ರವಾಸಿ ತಾಣಗಳು, ಉತ್ಪನ್ನಗಳು, ಆಹಾರ ತಿನಿಸುಗಳು ಸೇರಿದಂತೆ ಜಿಲ್ಲೆಯ ವಿಶೇಷಗಳ ಮಾಹಿತಿ ನೀಡುವ ಪ್ರವಾಸಿ ಮಾರ್ಗದರ್ಶಿ ‘ಮೆಗ್ನಿಫಿಸೆಂಟ್‌ ಮೈಸೂರು’ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಬಿಡುಗಡೆ ಮಾಡಿದರು.

ಅಂಬಾವಿಲಾಸ ಅರಮನೆ, ಮೃಗಾಲಯ, ಚಾಮುಂಡೇಶ್ವರಿ ದೇವಾಲಯ, ಬೃಂದಾವನ, ಫಿಲೊಮಿನಾ ಚರ್ಚ್, ಸೋಮನಾಥಪುರ ಚನ್ನಕೇಶವ ದೇಗುಲ, ರೈಲ್ವೆ ವಸ್ತು ಸಂಗ್ರಹಾಲಯ, ಕಬಿನಿ ಹಿನ್ನೀರು ಅರಣ್ಯ ಸಫಾರಿ, ಬೈಲುಕುಪ್ಪೆ, ಚುಂಚನಕಟ್ಟೆ ಜಲಪಾತ, ನಂಜನಗೂಡು, ಗೊಮ್ಮಟಗಿರಿ ಸ್ಥಳಗಳ ಮಾಹಿತಿ ಇದೆ.

ಸಿದ್ದರಾಮಯ್ಯ ಮಾತನಾಡಿ, ‘ವಿಶ್ವಸಂಸ್ಥೆೆಯು 1980ರ ಸೆ.27ರಂದು ಸೆ.27ರಂದು ವಿಶ್ವ ಪ್ರವಾಸೋದ್ಯಮ ದಿನವೆಂಧು ಘೋಷಿಸಿತು. ಅಂದಿನಿಂದಲೂ ರಾಜ್ಯದಲ್ಲಿ ಪ್ರತಿವರ್ಷ ಆಚರಿಸಲಾಗುತ್ತಿದೆ. ರಾಜ್ಯವು ಪ್ರವಾಸೋದ್ಯಮದಲ್ಲಿ ತನ್ನದೇ ಛಾಪು ಹೊಂದಿದೆ. ಅಭಿವೃದ್ಧಿಯಲ್ಲಿ ಹಲವು ಮೈಲಿಗಲ್ಲು ದಾಟಿದೆ’ ಎಂದರು.






 


 


Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News