ಪಕ್ಷದ ಸಿದ್ಧಾಂತ, ಸಂವಿಧಾನದ ಮೌಲ್ಯ ಒಪ್ಪಿ ಬರುವ ಎಲ್ಲರಿಗೂ ಕಾಂಗ್ರೆಸ್ಸಿಗೆ ಸ್ವಾಗತ: ಸಿದ್ದರಾಮಯ್ಯ

Update: 2024-10-22 06:56 GMT

ಮೈಸೂರು, ಅ.22: , ಕಾಂಗ್ರೆಸ್ಸಿನ ಸಿದ್ಧಾಂತ ಮತ್ತು ಸಂವಿಧಾನದ ಮೌಲ್ಯಗಳನ್ನು ಒಪ್ಪಿ ಬರುವ ಎಲ್ಲರಿಗೂ ಪಕ್ಷಕ್ಕೆ ಸ್ವಾಗತ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮೈಸೂರಿನ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ಚನ್ನಪಟ್ಟಣ ಮಾಜಿ ಶಾಸಕ ಸಿ.ಪಿ.ಯೋಗೀಶ್ವರ್ ಕಾಂಗ್ರೆಸ್ಸಿಗೆ ಸೇರಲು ಉತ್ಸುಕರಾಗಿರುವ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಈ ರೀತಿ ಪ್ರತಿಕ್ರಿಯಿಸಿದರು.

ಸಂಡೂರು ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಂಸದರಾದ ಈ.ತುಕಾರಾಂ ಅವರ ಪತ್ನಿ ಅವರಿಗೆ ಟಿಕೆಟ್ ನೀಡಲಾಗುವುದು. ಚನ್ನಪಟ್ಟಣದಲ್ಲಿ ಸೂಕ್ತ ಅಭ್ಯರ್ಥಿಗೆ ಟಿಕೆಟ್ ನೀಡಬೇಕು ಎನ್ನುವ ಚರ್ಚೆ ಆಗಿದೆ. ಡಿ.ಕೆ.ಸುರೇಶ್ ಕೂಡ ಪ್ರಬಲ ಅಭ್ಯರ್ಥಿ ಆಗಿದ್ದಾರೆ. ಒಂದೆರಡು ದಿನಗಳಲ್ಲಿ ಚನ್ನಪಟ್ಟಣ ಮತ್ತು ಶಿಗ್ಗಾಂವಿ ಕ್ಷೇತ್ರದಲ್ಲಿ ಯಾರಿಗೆ ಟಿಕೆಟ್ ಎನ್ನುವುದು ಸ್ಪಷ್ಟವಾಗಲಿದೆ ಎಂದರು.

ಮಳೆ ಅನಾಹುತ ವರದಿ ತರಿಸಿಕೊಂಡಿದ್ದು, ಪರಿಹಾರಕ್ಕೆ ಸಿದ್ಧತೆ

ಪ್ರಕೃತಿ ವಿಕೋಪದಿಂದ ಬಿದ್ದಿರುವ ಮಳೆ ಕಾರಣದಿಂದ ಆಗಿರುವ ಅನಾಹುತಗಳಿಗೆ ಪರಿಹಾರ ನೀಡುತ್ತೇವೆ. ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಮಳೆ ಅನಾಹುತಗಳ ಕುರಿತು ನಿಗಾ ವಹಿಸಿದ್ದೇವೆ. ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಸ್ಥಳ ಸಮೀಕ್ಷೆ ಕೂಡ ನಡೆಯುತ್ತಿದೆ. ಪರಿಹಾರ ನೀಡುತ್ತೇವೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News