ದಾವಣಗೆರೆ ಯುವಕನ ಸಾವು ಲಾಕಪ್ ಡೆತ್ ಅಲ್ಲ : ಸಿಎಂ ಸಿದ್ದರಾಮಯ್ಯ

Update: 2024-05-25 11:46 GMT

ಮೈಸೂರು : ದಾವಣಗೆರೆಯಲ್ಲಿ ಲಾಕಪ್ ಡೆತ್ ನಿಂದ ವ್ಯಕ್ತಿ ಸಾವಿಗೀಡಾಗಿಲ್ಲ, ಅಲ್ಲದೆ ಎಫ್‌ಐಆರ್ ಹಾಕದೆ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿದ್ದು ತಪ್ಪು. ಹಾಗಾಗಿ ಇನ್ಸ್ ಪೆಕ್ಟರ್ ಮತ್ತು ಡಿವೈಎಸ್ಪಿ ಅವರನ್ನು ಅಮಾನತು ಮಾಡುವಂತೆ ಸೂಚಿಸಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ತಿಳಿಸಿದರು.

ನಗರದ ರಾಮಕೃಷ್ಣ ನಗರದಲ್ಲಿರುವ ಅವರ ನಿವಾಸದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ವ್ಯಕ್ತಿಯನ್ನು ಪೊಲೀಸರು ಠಾಣೆಗೆ ಕರೆದುಕೊಂಡು ಬಂದಿದ್ದಾರೆ. ಆತನಿಗೆ ಫಿಡ್ಸ್ ಬಂದು ಕುಸಿದು ಬಿದ್ದಿದ್ದಾನೆ. ತಕ್ಷಣ ಆತನನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಆತ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ವ್ಯಕ್ತಿಯನ್ನು ಎಫ್.ಐ.ಆರ್ ಹಾಕದೆ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿದ್ದು ತಪ್ಪು. ಈ ಸಂಬಂಧ ತನಿಖೆಗೆ ಸೂಚಿಸಿದ್ದೇನೆ ಎಂದು ಹೇಳಿದರು.

ಪ್ರಜ್ವಲ್ ರೇವಣ್ಣ ಪಾಸ್ ಪೋರ್ಟ್ ರದ್ದು ಮಾಡಲಿ:

ವಿದೇಶಾಂಗ ಸಚಿವ ಜಯಶಂಕರ್ ಮೇ.21 ರಂದು ನಮಗೆ ಪತ್ರ ತಲುಪಿದೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಎಂ ಸಿದ್ಧರಾಮಯ್ಯ, ʼಪಜ್ವಲ್ ರೇವಣ್ಣ ಪಾಸ್ ಪೋರ್ಟ್‌ ರದ್ದುಗೊಳಿಸುವಂತೆ ಹದಿನೈದು ದಿನಗಳ ಹಿಂದಿಯೇ ಪತ್ರ ಬರೆದಿದ್ದೇನೆ. ಈಗ ಎರಡನೇ ಪತ್ರವನ್ನು ಬರೆದಿದ್ದೇನೆ. ನಮ್ಮ ಪೊಲೀಸರು ಮತ್ತು ಎಸ್.ಐ.ಟಿ ಅವರು ಪತ್ರ ಬರೆದಿದ್ದಾರೆ. ಇನ್ನು ಏನು ಬರಿಯಬೇಕಿತ್ತು?. ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡಬಾರದು. ಒಂದು ವೇಳೆ ಪತ್ರ ತಲುಪಿರುವುದು ಲೇಟ್ ಆಗಿತ್ತು ಅಂದುಕೊಳ್ಳೋಣ, ಈಗ ಪಾಸ್ ಪೋರ್ಟ್‌ ರದ್ದು ಮಾಡಲಿ ಎಂದು ಆಗ್ರಹಿಸಿದರು.

ರಾಕೇಶ್ ಸತ್ತು ಎಂಟು ವರ್ಷ ಆಯಿತು:

ರಾಕೇಶ್ ಸಿದ್ಧರಾಮಯ್ಯ ಸಾವಿನ ವಿಚಾರ ಪ್ರಸ್ತಾಪಿಸಿರುವ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಗರಂ ಆದ ಸಿದ್ಧರಾಮಯ್ಯ, ರಾಕೇಶ್ ಸತ್ತು ಎಂಟು ವರ್ಷ ಆಯಿತು ಈಗ ಆ ವಿಚಾರ ಪ್ರಸ್ತಾಪ ಮಾಡುವುದು ಮೂರ್ಖತನ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಕೇಶ್ 2016 ರಲ್ಲಿ ನಿಧನರಾಗಿರುವುದು, ರಾಜಕೀಯಕ್ಕಾಗಿ ಹೀಗೆ ಮಾತನಾಡಬಾರದು. ರಾಕೇಶ್ ಸಾವಿಗೂ ಪ್ರಜ್ವಲ್ ರೇವಣ್ಣ ಲೈಂಗಿಕ ಪ್ರಕರಣಕ್ಕೂ ಏನು ಸಂಬಂಧ?. ಇವರ ಅಣ್ಣನ ಮಗ ರೇಪ್ ಮಾಡಿದ್ದಾನೆ ಎಂದು ಪ್ರಕರಣ ದಾಖಲಾಗಿರುವುದು ಎಂದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News