ಆದಿವಾಸಿಗಳ ಅಭಿವೃದ್ಧಿ ನಿಗಮ ಸ್ಥಾಪನೆ ಕುರಿತಾಗಿ ಸದ್ಯದಲ್ಲೇ ಸೂಕ್ತ ಕ್ರಮ : ಸಿದ್ದರಾಮಯ್ಯ

Update: 2024-11-12 18:07 GMT

ಮೈಸೂರು : ಆದಿವಾಸಿ/ಅರಣ್ಯವಾಸಿಗಳ ಅಭಿವೃದ್ಧಿ ನಿಗಮ ಸ್ಥಾಪನೆ ಕುರಿತಾಗಿ ಸದ್ಯದಲ್ಲೇ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ವನ್ಯ ಜೀವಿ ಮಂಡಳಿ ಸಭೆ ಕರೆದು ಅರಣ್ಯಾಧಿಕಾರಿಗಳಿಂದ ಅರಣ್ಯವಾಸಿಗಳಿಗೆ ಆಗುತ್ತಿರುವ ಸಮಸ್ಯೆಗಳ ಕುರಿತಾಗಿ ಚರ್ಚಿಸಿ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರವಸೆ ನೀಡಿದರು.

ಕೆರೆಹಾಡಿಗೆ ಭೇಟಿ ನೀಡಿ ಅರಣ್ಯವಾಸಿಗಳ ಸಮಸ್ಯೆಗಳನ್ನು ಆಲಿಸಿ, ಸ್ಥಳದಲ್ಲಿದ್ದ ಅಧಿಕಾರಿಗಳಿಂದಲೂ ಮಾಹಿತಿ ಪಡೆದು ಕೆಲವು ಸಮಸ್ಯೆಗೆ ಸ್ಥಳದಲ್ಲೇ ಪರಿಹಾರ ಸೂಚಿಸಿ, ಸಂಕೀರ್ಣವಾಗಿದ್ದ ಸಮಸ್ಯೆಗಳ ಕುರಿತಾಗಿ ವನ್ಯ ಜೀವಿ ಮಂಡಳಿಯಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.

ತಕ್ಷಣ ಕರೆಂಟು-ನೀರು ಒದಗಿಸಿ :

ಹಲವು ದಶಕಗಳಿಂದ ಕೆರೆಹಾಡಿ ಸೇರಿದಂತೆ ಒಂಬತ್ತು ಹಾಡಿಗಳಿಗೆ ಕರೆಂಟಿಲ್ಲ, ಕುಡಿಯುವ ನೀರಿಗೆ ಸಮಸ್ಯೆ ಇದೆ ಎನ್ನುವ ಆದಿವಾಸಿಗಳ ಮಾತು ಕೇಳಿ ಗರಂ‌ ಆದ ಸಿಎಂ, ಯಾವ ಅರಣ್ಯ ಕಾಯ್ದೆ ಕೂಡ ಅರಣ್ಯವಾಸಿಗಳಿಗೆ ಕರೆಂಟು, ನೀರು ಕೊಡಬೇಡಿ ಎಂದು ಹೇಳುವುದಿಲ್ಲ. ಅರಣ್ಯಾಧಿಕಾರಗಳು ಅನಗತ್ಯ ಕಿರುಕುಳ ತೊಂದರೆ ಕೊಡಬೇಡಿ ಎಂದು ಸೂಚನೆ ನೀಡಿದರು.

ಒಂದು ತಿಂಗಳಲ್ಲಿ ಕರೆಂಟು ನೀರು :

ಆದಿವಾಸಿ ಗಣೇಶ, ರಮೇಶ ಎನ್ನುವವರ ಹಟ್ಟಿಯಲ್ಲೇ ನೆಲದ ಮೇಲೆ ಕುಳಿತು ಆದಿವಾಸಿಗಳ ಸಮ್ಮುಖದಲ್ಲೇ ಮುಖ್ಯಮಂತ್ರಿಗಳು ಸಮಸ್ಯೆ ಆಲಿಸಿ, ಅರಣ್ಯಾಧಿಕಾರಿಗಳು ಮತ್ತು ಸಂಬಂಧಪಟ್ಟ ಇತರೆ ಇಲಾಖೆಗಳ ಮುಖ್ಯಸ್ಥರ ಜೊತೆ ಚರ್ಚಿಸಿದರು. ಕೊನೆಗೆ ಜಿಲ್ಲಾಧಿಕಾರಿ ಲಕ್ಷ್ಮೀಕಾಂತ್ ರೆಡ್ಡಿಯವರು, "ಎಲ್ಲಾ ಅಡೆತಡೆಗಳನ್ನು ನಿವಾರಿಸಿ ಒಂದು ತಿಂಗಳಲ್ಲಿ ಕೆರೆಹಾಡಿ ಮತ್ತು ಇತರೆ ಎಂಟು ಹಾಡಿಗಳ ಕುಡಿಯುವ ನೀರು ಮತ್ತು ವಿದ್ಯುತ್ ಸಂಪರ್ಕದ ಸಮಸ್ಯೆ ಬಗೆಹರಿಸುತ್ತೇನೆ" ಎಂದು ಮುಖ್ಯಮಂತ್ರಿಗಳಿಗೆ ತಿಳಿಸಿದರು.

ಪ್ರತ್ಯೇಕ ಆದಿವಾಸಿ ನಿಗಮ :

ನಾವು ಅಲೆ ಮಾರಿಗಳಲ್ಲ. ಊರ ನಾಯಕರೂ ಅಲ್ಲ. ನಾವು ಕಾಡಲ್ಲೇ ಒಂದೇ ಕಡೆ ನೆಲೆಸಿರುವ ಆದಿವಾಸಿಗಳು. ಆದ್ದರಿಂದ ಅಲೆಮಾರಿ ಅಭಿವೃದ್ಧಿ ನಿಗಮದಲ್ಲಿ ನಮ್ಮನ್ನು ಸೇರಿಸಬೇಡಿ. ನಮಗೆ ಪ್ರತ್ಯೇಕವಾದ ಆದಿವಾಸಿ ಅಭಿವೃದ್ಧಿ ನಿಗಮ ಸ್ಥಾಪಿಸಿ ಎನ್ನುವ ಬೇಡಿಕೆಗೆ ಪ್ರತಿಕ್ರಿಯಿಸಿದ ಸಿಎಂ, ಪ್ರತ್ಯೇಕ ಆದಿವಾಸಿ ನಿಗಮ‌ ಸ್ಥಾಪನೆ ಬಗ್ಗೆ ಕ್ರಮ ವಹಿಸುವುದಾಗಿ ಭರವಸೆ ನೀಡಿದರು.

ಮೊದಲ ಮುಖ್ಯಮಂತ್ರಿ ನೀವು :

ಆರೇಳು ತಲೆ ಮಾರುಗಳಿಂದ ನಾವಿಲ್ಲೇ ನೆಲೆಸಿದ್ದೇವೆ. ಆದಿವಾಸಿಗಳ ಹಾಡಿಗೆ ಬಂದ ಮೊದಲ ಮುಖ್ಯಮಂತ್ರಿ ನೀವೇ ಎಂದು ಆದಿವಾಸಿಗಳು ಕುಣಿದು ಸಂಭ್ರಮಿಸಿದರು.

ಬಣ್ಣ ಹಚ್ಚಿ ಕುಣ್ಕೊತಾ ಇರ್ಬೇಡಿ. ಚೆನ್ನಾಗಿ ಓದಿ :

ಆದಿವಾಸಿ ಮಕ್ಕಳೊಂದಿಗೆ ಸಂವಾದ ನಡೆಸಿದ ಮುಖ್ಯಮಂತ್ರಿಗಳು, ನಮ್ಮಪ್ಪ ಕೂಡ ಜನಪದ ಡ್ಯಾನ್ಸ್ ಕಲಿಯೋಕೆ ನನ್ನನ್ನು ಹಾಕ್ಬಿಟ್ಟಿದ್ರು. ನಾನು ಹಠತೊಟ್ಟು ಕಾನೂನು ಪದವಿ ಮಾಡಿದ್ದಕ್ಕೆ ಇಂದು ಮುಖ್ಯಮಂತ್ರಿ ಆಗುವ ಮಟ್ಟಕ್ಕೆ ಬೆಳೆದೆ. ನೀವೂ ಕೂಡ ಅರ್ಧಕ್ಕೇ ಶಾಲೆ ನಿಲ್ಲಿಸದೆ ಶಿಕ್ಷಣ ಪಡೆಯಬೇಕು. ಆಗ ಮಾತ್ರ ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತದೆ ಎಂದರು.

ಪಿಯುಸಿವರೆಗೂ ಆಶ್ರಮ ಶಾಲೆ :

ಮೊದಲು ನಾಲ್ಕನೇ ತರಗತಿವರೆಗೂ ಮಾತ್ರ ಆಶ್ರಮ ಶಾಲೆಗಳಿದ್ದವು. ನೀವು ಅದನ್ನು ಎಂಟನೇ ತರಗತಿವರೆಗೂ ವಿಸ್ತರಿಸಿದ್ದೀರಿ. ಇದನ್ನು ಪಿಯುಸಿ ವರೆಗೂ ವಿಸ್ತರಿಸಿ ಎನ್ನುವುದು ಆದಿವಾಸಿಗಳು ಬೇಡಿಕೆ ಮುಂದಿಟ್ಟರು. ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ, ಪರಿಶೀಲನೆ ನಡೆಸುವುದಾಗಿ ತಿಳಿಸಿದರು.

ಸಾಂಪ್ರದಾಯಿಕ ಹಾಡಿಗೆ ಧ್ವನಿಯಾಗಿ, ನೃತ್ಯಕ್ಕೆ ಹೆಜ್ಜೆ ಹಾಕಿದ ಸಿಎಂ

ಹಾಡಿಗೆ ಮುಖ್ಯಮಂತ್ರಿಗಳ ಪ್ರವೇಶ ಆಗುತ್ತಿದ್ದಂತೆ ತಮ್ಮ ಸಾಂಪ್ರದಾಯಿಕ ವೇಷದಲ್ಲಿ , ಸಾಂಪ್ರದಾಯಿಕ ಹಾಡು ನೃತ್ಯಗಳ ಮೂಲಕ ಸ್ವಾಗತಿಸಿದರು. ಉಲ್ಲಾಸಗೊಂಡ ಮುಖ್ಯಮಂತ್ರಿಗಳು ಅವರ ಜೊತೆಗೆ ತಾವೂ ನೃತ್ಯ ಮಾಡಿಖುಷಿಪಟ್ಟರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News