ಸಿದ್ದರಾಮಯ್ಯ ಕುರಿತು ಅವಹೇಳನಕಾರಿ ಹೇಳಿಕೆ: ಅನಂತಕುಮಾರ್ ಹೆಗಡೆ ವಿರುದ್ಧ ಪೊಲೀಸ್ ಕಮಿಷನರ್‌ಗೆ ದೂರು

Update: 2024-01-14 17:49 GMT

ಮೈಸೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ವಿರುದ್ಧ ಏಕವಚನದಲ್ಲಿ ಮಾತನಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಕೋಮು ಸಂಘರ್ಷಕ್ಕೆ ಪ್ರಚೋದನೆ ನೀಡುತ್ತಿರುವ ಉತ್ತರ ಕನ್ನಡ ಸಂಸದ ಅನಂತಕುಮಾರ್ ಹೆಗಡೆ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಮತ್ತು ಲೋಕಸಭಾ ಚುನಾವಣೆ ಮುಗಿಯುವವರಗೆ ಬಂಧಿಸಬೇಕು ಎಂದು ನಗರ ಮತ್ತು ಜಿಲ್ಲಾ ಕಾಂಗ್ರೆಸ್ ವತಿಯಿಂದ ಮೈಸೂರು ನಗರ ಪೊಲೀಸ್ ಕಮೀಷನರ್ ಅವರಿಗೆ ದೂರು ಸಲ್ಲಿಸಲಾಯಿತು.

ನಗರದ ಪೊಲೀಸ್ ಆಯುಕ್ತರ ಕಚೇರಿಗೆ ರವಿವಾರ ತೆರಳಿದ ಕಾಂಗ್ರೆಸ್ ಮುಖಂಡರುಗಳು ಸಂಸದ ಅನಂತ ಕುಮಾರ್ ಹೆಗಡೆ ವಿರುದ್ಧ ಪ್ರಕರಣ ದಾಖಲಿಸುವಂತೆ ಮತ್ತು ಅವರನ್ನು ಬಂಧಿಸುವಂತೆ ಉಪ ಪೊಲೀಸ್ ಆಯುಕ್ತ ಮುತ್ತುರಾಜ್ ಅವರಿಗೆ ಮನವಿ ಸಲ್ಲಿಸಿದರು.

ಸಂಸದ ಅನಂತಕುಮಾರ್ ಕುಮುಟಾ ದಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುವಾಗ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಏಕವಚನದಲ್ಲಿ ನಿಂದಿಸಿರುವುದಲ್ಲದೇ ಪ್ರಚೋದಿಸುವ ಭಾಷಣ ಮಾಡಿದ್ದಾರೆ. ಹಿಂದೂ ಸಮಾಜವನ್ನು ಜಾತಿ, ಧರ್ಮ, ಭಾಷೆ ಹೆಸರಿನಲ್ಲಿ ಮುರುಕು ರಾಮಯ್ಯ ಅಂತವರು ಒಡೆಯುತ್ತಿದ್ದಾರೆ ಎಂದು ಆಧಾರ ರಹಿತ ಆರೋಪ ಮಾಡಿರುವುದಲ್ಲದೇ, ನಮ್ಮ ವಿರೋಧಿ ಸಿದ್ಧರಾಮಯ್ಯ ಹೊರತು ಕಾಂಗ್ರೆಸ್ ಅಲ್ಲ. ಅಲ್ಪ ಸಂಖ್ಯಾತರ ‌ಮತಗಳಿಗಾಗಿ ಗತಿಗೆಟ್ಟ ಮಾನಸಿಕತೆಗೆ ನಮ್ಮ ವಿರೋಧವಿದೆ ಎಂದು ಹೇಳಿಕೆ ನೀಡಿದ್ದಾರೆ.

ಇದಲ್ಲದೆ ಭಟ್ಕಳದ ಚಿನ್ನದಪಳ್ಳಿ ಮಸೀದಿ ಧ್ವಂಸ ಮಾಡುವುದಾಗಿ ಹೇಳಿಕೆ ನೀಡಿದ್ದಾರೆ. ಜೊತೆಗೆ ಸಿದ್ಧರಾಮಯ್ಯ ನೀ ಬರ್ಲಿ ಬಿಡಲಿ ರಾಮಮಂದಿರ ನಿಲ್ಲಲ್ಲ ಮಗನೇ ಎಂದು ನಿಂದಿಸಿದ್ದಾರೆ. ಇವರು ನಿರಂತರವಾಗಿ ಸಿದ್ಧರಾಮಯ್ಯ ಅವರನ್ನು ನಿಂದಿಸುತ್ತಿದ್ದಾರೆ. ಈ ಲೋಕಸಭಾ ಚುನಾವಣೆ ಸಮೀಪಿಸುತ್ತಿರುವುದರಿಂದ ರಾಜ್ಯದಲ್ಲಿ ಕೋಮು ಸಂಘರ್ಷಕ್ಕೆ ಪ್ರಚೋದಿಸುತ್ತಿದ್ದಾರೆ. ರಾಜ್ಯದಲ್ಲಿ ಸಮುದಾಯಗಳ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಈ ಹಿಂದೆ ಬಿಜೆಪಿ ಬಂದಿರುವುದೇ ಸಂವಿಧಾನ ಬದಲಾವಣೆ ಮಾಡಲಿಕ್ಕೆ ಎಂದು ಹೇಳಿದ್ದರು.

ಆದ್ದರಿಂದ ಕೂಡಲೇ ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಇವರನ್ನು ಲೋಕಸಭಾ ಚುನಾವಣೆ ಮುಗಿಯುವವರೆಗೆ ಬಂಧಿಸಬೇಕು ಎಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.

ಈ ವೇಳೆ ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್, ನಗರ ಕಾಂಗ್ರೆಸ್ ಕಾರ್ಯದರ್ಶಿ ಶಿವಣ್ಣ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News