ಮೈಸೂರು| ದಲಿತರಿಗೆ ಸೇರಿದ 10 ಎಕರೆ ಜಮೀನನ್ನು ಲಪಟಾಯಿಸಲು ಪ್ರಭಾವಿ ವ್ಯಕ್ತಿಗಳಿಂದ ಕಿರುಕುಳ: ಅರೋಪ

Update: 2024-09-22 17:42 GMT

ಮೈಸೂರು: ನಗರದ ವಿಜಯನಗರ ಬಡಾವಣೆಯಲ್ಲಿರುವ ನಮಗೆ ಸೇರಿದ ಕೋಟ್ಯಾಂತರ ಬೆಲೆ ಬಾಳುವ 10 ಎಕರೆ ಜಮೀನನ್ನು ನಗರಪಾಲಿಕೆ ಅಧಿಕಾರಿಗಳು ಪೌತಿ ಖಾತೆ ಮಾಡಿಕೊಟ್ಟಿದ್ದರು. ಕೆಲವು ಪ್ರಭಾವಿ ವ್ಯಕ್ತಿಗಳು ಈ ಜಾಗವನ್ನು ಲಪಟಾಯಿಸಬೇಕೆಂಬ ಉದ್ದೇಶದಿಂದ ತಮ್ಮ‌ಪ್ರಭಾವ ಬಳಸಿ ಖಾತೆಯನ್ನು ತಾತ್ಕಾಲಿಕವಾಗಿ ತಡೆಹಿಡಿಸಿ ದಲಿತ ಸಮುದಾಯದವರಾದ ನಮಗೆ ಕಿರುಕುಳ ನೀಡುತ್ತಿದ್ದಾರೆ ತೊಳಸಮ್ಮ ಕುಟುಂಬ ಅಲವತ್ತುಕೊಂಡಿತು.

ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ರವಿವಾರ ಸುದ್ದಿಗೋಷ್ಠಿ ನಡೆಸಿದ ತೊಳಸಮ್ಮ ಕುಟುಂಬ ತಮಗೆ ಆಗುತ್ತಿರುವ ಅನ್ಯಾಯದ ಕುರಿತು ನ್ಯಾಯ ದೊರಕಿಸಿಕೊಡುವಂತೆ ಮನವಿ ಮಾಡಿದರು.

ತೊಳಸಮ್ಮ ಪುತ್ರ ಸುರೇಶ್ ಮಾತನಾಡಿ, ಪರಿಶಿಷ್ಟ ಜಾತಿಗೆ ಸೇರಿದ ನಮ್ಮ‌ ತಂದೆ ದಿವಂಗತ ಜಿ.ರಾಮಯ್ಯ ಮತ್ತು ಅವರ ಸಹೋದರ ಸಂಬಂಧಿ ಪಿ.ತಿಮ್ಮಯ್ಯ ಅವರು ಕೃಷಿ ಉದ್ದೇಶಕ್ಕಾಗಿ ತಲಾ 10 ಎಕರೆ ಜಮೀನು ನೀಡುವಂತೆ ಅರ್ಜಿ ಸಲ್ಲಿಸಿದ್ದರು. ಅದರಂತೆ ಅಂದಿನ ತಹಶೀಲ್ದಾರ್ ಅವರು ನಮ್ಮ ತಂದೆ ಜಿ.ರಾಮಯ್ಯ ಮತ್ತು ಪಿ.ತಿಮ್ಮಯ್ಯ ಅವರ ಹೆಸರಿಗೆ 1963 ರಲ್ಲಿ ತಲಾ 10 ಎಕರೆ ಜಮೀನನ್ನು ಮೈಸೂರು ತಾಲ್ಲೂಕು ಕಸಬಾ ಹೋಬಳಿ ಹಿನಕಲ್ ಗ್ರಾಮದ ಸರ್ವೆ ನಂ. 155 ರಲ್ಲಿ ದರಕಾಸ್ತು ಮೂಲಕ ಗ್ರ್ಯಾಂಟ್ ಮಾಡಿಕೊಟ್ಟಿರುತ್ತಾರೆ. ನಂತರ ಇದನ್ನು ಭೂಪರಿವರ್ತನೆ ಮಾಡಲಾಯಿತು. ಕಸಬಾ ಹೋಬಳಿಗೆ ಸೇರಿದ ಈ ಜಾಗ ನಗರಪಾಲಿಕೆ ವ್ಯಾಪ್ತಿಗೆ ಒಳಪಟ್ಟಿತು. ಆಗ ನಮ್ಮ‌ತಂದೆ ಜಿ.ರಾಮಯ್ಯ ಅವರು ನಗರಪಾಲಿಕೆಯಲ್ಲಿ ಖಾತೆ ಮಾಡಿಸಿಕೊಂಡು ನಮ್ಮ ಜಮೀನನ್ನು ಹಾಗೆ ಖಾಲಿ ಬಿಟ್ಟಿದ್ದರು. ಅವರು 2000 ಇಸವಿಯಲ್ಲಿ ನಿಧನರಾದರು. ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ ನಮಗೆ ಇದನ್ನು ಅಭಿವೃದ್ಧಿಪಡಿಸಲು ಸಾಧ್ಯವಾಗದೆ ಹಾಗೆ ಬಿಟ್ಟಿದ್ದೆವು. 2007 ರಿಂದ ಮಕ್ಕಳಾದ ನಮ್ಮ ಹೆಸರಿಗೆ ಪೌತಿ ಖಾತೆ ಮಾಡಿಕೊಡುವಂತೆ ನಗರಪಾಲಿಕೆಗೆ ಅಲೆದು ಸಾಕಾಗಿ ಈಗ ನಗರಪಾಲಿಕೆ ಅಧಿಕಾರಿಗಳು ಖಾತೆ ಮಾಡಿಕೊಟ್ಟಿರುತ್ತಾರೆ. ಈ ಜಾಗದ ಮೇಲೆ ಕಣ್ಣಿಟ್ಟಿರುವ ಕೆಲವು ರಾಜಕೀಯ ದುರುದ್ದೇಶ ಹೊಂದಿರುವ ವ್ಯಕ್ತಿಗಳು ಪರಿಶಿಷ್ಟ ಜಾತಿಗೆ ಸೇರಿದ ನಮ್ಮ ಜಮೀನನ್ನು ಲಪಟಾಯಿಸಲು ಹೊಂಚು ಹಾಕಿ ನಮಗೆ ಕಿರುಕುಳ ನೀಡುತ್ತಿದ್ದಾರೆ ಎಂದು ನೊಂದು ನುಡಿದರು.

ನಗರಪಾಲಿಕೆ ಅಧಿಕಾರಿಗಳು ಖಾತೆ ಮಾಡಿಕೊಟ್ಟರು. ಕೆಲವರು ದೂರವಾಣಿ ಮೂಲಕ ನಮಗೆ ಕರೆ ಮಾಡಿ ಈ ಜಾಗ ಖಾತೆ ಮಾಡಿಸಿಕೊಂಡರೆ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ, ಇದರಿಂದ ನಿಮಗೆ ತೊಂದರೆ ಆಗಲಿದೆ. ಸುಮ್ಮನಿದ್ದು ಬಿಟ್ಟರೆ ನಿಮಗೆ ಒಳ್ಳಯದು ಎಂದು ಬೆದರಿಕೆ ಹಾಕುತ್ತಿದ್ದಾರೆ. ಬಡವರಾದ ನಮಗೆ ನ್ಯಾಯ ದೊರಕಿಸಿ ನಮ್ಮ ಜಮೀನು ನಮ್ಮ ಕೈ ಸೇರುವಂತೆ ಮಾಡಿ ಎಂದು ಬೇಡಿಕೊಂಡರು.

ಸುದ್ದಿಗೋಷ್ಠಿಯಲ್ಲಿ ಜಿ.ರಾಮಯ್ಯ ಪತ್ನಿ ತೊಳಸಮ್ಮ, ಅವರ ಕುಟುಂಬದ ಎಲ್ಲಾ ಸದಸ್ಯರು, ವಕೀಲರಾದ ಶ್ಯಾಮ್ ಭಟ್, ಯೋಗೇಶ್, ಪಿ.ತಿಮ್ಮಯ್ಯ, ರೈತ ಮುಖಂಡ ಸರಗೂರು ನಟರಾಜ್, ದಲಿತ ವಾಯ್ಸ್ ಸಂಘಟನೆಯ ಎಸ್.ರಾಜೇಶ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News