ಸಿದ್ದರಾಮಯ್ಯ ವಿರುದ್ಧ ಈ.ಡಿ ಪ್ರಕರಣ ದಾಖಲಿಸಿರುವ ಹಿಂದೆ ಕುಮಾರಸ್ವಾಮಿ ಕೈವಾಡ : ಎಂ.ಲಕ್ಷ್ಮಣ್ ಆರೋಪ
ಮೈಸೂರು: "ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ಧ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡಿರುವ ಜಾರಿ ನಿರ್ದೇಶನಾಲಯ (ಈ.ಡಿ)ದ ಹಿಂದೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಕೈವಾಡ ಇದೆ" ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ವಾಗ್ದಾಳಿ ನಡೆಸಿದರು.
ಬುಧವಾರ ನಗರದ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ʼಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಹೇಗಾದರೂ ಮಾಡಿ ಸಿಎಂ ಸ್ಥಾನದಿಂದ ಕೆಳಗಿಳಿಸಬೇಕು ಎಂದು ಬಿಜೆಪಿ-ಜೆಡಿಎಸ್ ಇನ್ನಿಲ್ಲದ ಆರೋಪಗಳನ್ನು ಮಾಡುತ್ತಿದೆ. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಯವರು ಮುಡಾಗೆ ಸಂಬಂಧಿಸಿದಂತೆ ಸೆ.29ರಂದು ಕೇಂದ್ರ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದರು. ಅವರ ಪತ್ರದ ಆಧಾರದ ಮೇಲೆ ಅಮಿತ್ ಶಾ ಸೂಚನೆ ಮೇರೆಗೆ ಈ.ಡಿ ಪಿಎಂಎಲ್ ಕಾಯ್ದೆಯಡಿ ಇಸಿಐಆರ್ ದಾಖಲಿಸಿಕೊಂಡಿದೆ. ಅದೇ ದಿನ ಸ್ನೇಹಮಯಿ ಕೃಷ್ಣ ಕೂಡ ಕುಮಾರಸ್ವಾಮಿ ಪತ್ರದ ಮಾದರಿಯಲ್ಲೇ ಈ.ಡಿಗೆ ಇಮೇಲ್ ಮೂಲಕ ದೂರು ಸಲ್ಲಿಸಿದ್ದಾರೆʼ ಎಂದು ತಿಳಿದರು.
ʼಸಿದ್ಧರಾಮಯ್ಯ ಸಿಎಂ ಆದ ದಿನದಿಂದಲೇ ಬಿಜೆಪಿ-ಜೆಡಿಎಸ್ ನಾಯಕರು ಸಿಎಂ ಸ್ಥಾನದಿಂದ ಕೆಳಗಿಳಿಸಬೇಕು ಎಂಬ ಸಂಚನ್ನು ರೂಪಿಸುತ್ತಲೇ ಬಂದಿದ್ದರು. ಮುಡಾ ಪ್ರಕರಣವನ್ನು ಮುಂದಿಟ್ಟುಕೊಂಡು ಸ್ನೇಹಮಯಿ ಕೃಷ್ಣ ಅವರನ್ನು ಸಹ ಕಲಾವಿದರಾಗಿ ಬಳಸಿಕೊಂಡು, ಪ್ರಹ್ಲಾದ್ ಜೋಶಿ, ಅಶೋಕ್ ಹಾಗೂ ವಿಜಯೇಂದ್ರ ನಿರ್ಮಾಪಕರಾಗಿ, ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆʼ ಎಂದು ಟೀಕಿಸಿದರು.
ʼಹಣದ ವ್ಯವಹಾರ ನಡೆಯದಿದ್ದರೂ ಸಿದ್ದರಾಮಯ್ಯ ವಿರುದ್ಧ 'ಹಣದ ಅಕ್ರಮ ವರ್ಗಾವಣೆ ತಡೆ ಕಾಯ್ದೆ'ಯಡಿ ಪ್ರಕರಣ ದಾಖಲಿಸಲಾಗಿದೆ. ನ್ಯಾಯಾಲಯದ ಆದೇಶದ ಪ್ರಕಾರ, ಲೋಕಾಯುಕ್ತ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ನಡುವೆಯೇ ಈ.ಡಿ. ಪ್ರವೇಶಿಸಿರುವ ಆತುರವನ್ನು ಜನರು ಅರ್ಥ ಮಾಡಿಕೊಳ್ಳಬೇಕು' ಎಂದರು.
ʼಬಿಜೆಪಿ-ಜೆಡಿಎಸ್‌ನವರು ಎಷ್ಟೇ ಸಂಚು ಮಾಡಿದರೂ ಸಿದ್ಧರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ. ಇಡೀ ಕಾಂಗ್ರೆಸ್ ಪಕ್ಷ ಹಿಂದೆಂದೂ ಕಾಣದಷ್ಟು ಒಗ್ಗಟ್ಟಾಗಿದೆ. ಅವರ ಹಿಂದೆ ನಾವೆಲ್ಲರೂ ಇದ್ದೇವೆʼ ಎಂದು ಹೇಳಿದರು.
ʼಕೇಂದ್ರದಲ್ಲಿ ಸಚಿವರಾಗಿರುವ 27 ಮಂದಿ ಮೇಲೆ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಅಮಿತ್ ಶಾ, ಶೋಭಾ ಕರಂದ್ಲಾಜೆ, ಎಚ್.ಡಿ.ಕುಮಾರಸ್ವಾಮಿ ಅವರ ಮೇಲೂ ಪ್ರಕರಣಗಳಿವೆ. ಅವರು ಏಕೆ ರಾಜೀನಾಮೆ ಕೊಡುತ್ತಿಲ್ಲʼ ಎಂದು ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಸದಸ್ಯ ಎನ್.ಭಾಸ್ಕರ್, ಜಿ.ಪಂ.ಮಾಜಿ ಅಧ್ಯಕ್ಷ ಬಿ.ಎಂ.ರಾಮು, ಕಾಂಗ್ರೆಸ್ ಪಕ್ಷದ ನಗರ ಕಾರ್ಯದರ್ಶಿ ಶಿವಣ್ಣ, ಗಿರೀಶ್ ಉಪಸ್ಥಿತರಿದ್ದರು.