ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ವಿರುದ್ಧ ಲೋಕಾಯುಕ್ತಕ್ಕೆ ಎಂ.ಲಕ್ಷ್ಮಣ್ ದೂರು

Update: 2024-10-16 13:39 GMT

ಮೈಸೂರು : ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ವಿರುದ್ಧ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಲೋಕಾಯುಕ್ತಕ್ಕೆ ದೂರು ಸಲ್ಲಿಕೆ ಮಾಡಿದ್ದಾರೆ.

ಮುಡಾ ಹಗರಣ ಸಂಬಂಧ ಇತ್ತೀಚೆಗೆ ಮಾತನಾಡಿದ್ದ ದೂರುದಾರ ಸ್ನೇಹಮಯಿ ಕೃಷ್ಣ, ʼಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಪದೇ ಪದೇ ಲೋಕಾಯುಕ್ತ ಕಚೇರಿಗೆ ಭೇಟಿ ನೀಡುತ್ತಿದ್ದು, ತನಿಖಾಧಿಕಾರಿಗಳ ಮೇಲೆ ಪ್ರಭಾವ ಬೀರುತ್ತಿದ್ದಾರೆʼ ಎಂದು ಆರೋಪಿಸಿದ್ದರು.

ಈ ನಡುವೆ ಬುಧವಾರ ಸ್ನೇಹಮಯಿ ಕೃಷ್ಣ ವಿರುದ್ದ ಎಂ.ಲಕ್ಷ್ಮಣ್ ಮೈಸೂರಿನ ಲೋಕಾಯುಕ್ತ ಕಚೇರಿಯಲ್ಲಿ ದೂರು ಸಲ್ಲಿಕೆ ಮಾಡಿದ್ದಾರೆ. ಎಂ.ಲಕ್ಷ್ಮಣ್‌ಗೆ ಕಾಂಗ್ರೆಸ್ ಮುಖಂಡರು ಸಾಥ್ ನೀಡಿದ್ದಾರೆ.

ಬಳಿಕ ಮಾತನಾಡಿದ ಎಂ.ಲಕ್ಷ್ಮಣ್, ʼನಾನು ಲೋಕಾಯುಕ್ತ ಅಧಿಕಾರಿಯ ಮುಖವನ್ನೇ ನೋಡಿಲ್ಲ. ಲೋಕಾಯುಕ್ತ ಅಧಿಕಾರಿಗೂ ನಮಗೂ ಸಂಬಂಧವಿಲ್ಲ. ಹೀಗಿದ್ದರೂ ಲಕ್ಷ್ಮಣ್ ಲೋಕಾಯುಕ್ತ ಅಧಿಕಾರಿ ಮೇಲೆ ಒತ್ತಡ ಹಾಕ್ತಿದ್ದಾರೆ ಎಂದು ದೂರು ನೀಡಲಾಗಿದೆ. ಸ್ನೇಹಮಯಿ ಕೃಷ್ಣ ವಿರುದ್ಧ ನಾವು ಕೂಡ ದೂರು ಕೊಟ್ಟಿದ್ದೇವೆ. ಸ್ನೇಹಮಯಿ ಕೃಷ್ಣ ವಿರುದ್ಧ ಪೊಲೀಸ್ ಠಾಣೆಯಲ್ಲಿ ಅನೇಕ ಪ್ರಕರಣಗಳಿವೆ. ಮುಡಾ ಅಕ್ರಮ ಬಗ್ಗೆ ತನಿಖೆ ನಡೆಯುತ್ತಿದೆ. ಈಗ ನಾವು ಸಾಕ್ಷಿ ನಾಶ ಮಾಡಲು ಸಾಧ್ಯವೇ?ʼ ಎಂದು ಪ್ರಶ್ನಿಸಿದರು.

ʼಸ್ನೇಹಮಯಿ ಕೃಷ್ಣ ದಿನ ಬೆಳಗ್ಗೆ ಮಾಧ್ಯಮಗಳ ಮುಂದೆ ಹೇಳಿಕೆ ನೀಡುತ್ತಿದ್ದಾರೆ. ಮುಡಾ ಸಂಪೂರ್ಣ ಸ್ವಚ್ಛ ಆಗಬೇಕು. ನಮಗಿರುವ ಮಾಹಿತಿ ಪ್ರಕಾರ ಸಿಎಂ ಒಳ್ಳೆಯ ಅಧಿಕಾರಿಯನ್ನು ನೇಮಕ ಮಾಡುತ್ತಾರೆ. ಮುಡಾ ಶುದ್ದಿಕರಣ ಮಾಡುವ ಕೆಲಸ ಆಗುತ್ತದೆʼ ಎಂದರು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News