ಚಾಮುಂಡಿ ಬೆಟ್ಟ ಅಭಿವೃದ್ಧಿ ಪ್ರಾಧಿಕಾರ ವಾಪಸ್ ಪಡೆಯುವ ಪ್ರಶ್ನೆಯೇ ಇಲ್ಲ : ಎಂ.ಲಕ್ಷ್ಮಣ್
ಮೈಸೂರು : ಚಾಮುಂಡಿ ಬೆಟ್ಟದ ಅಭಿವೃದ್ಧಿಗೆ ಯೋಜನೆ ರೂಪಿಸಿರುವ ಚಾಮುಂಡಿ ಬೆಟ್ಟ ಅಭಿವೃದ್ಧಿ ಪ್ರಾಧಿಕಾರ ವಾಪಸ್ ಪಡೆಯುವ ಪ್ರಶ್ನೆಯೇ ಇಲ್ಲ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಅವರು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರಿಗೆ ತಿರುಗೇಟು ನೀಡಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ಚಾಮುಂಡಿ ಬೆಟ್ಟದ ಸರ್ವಾಂಗೀಣ ಅಭಿವೃದ್ಧಿಗಾಗಿ ಮತ್ತು ಚಾಮುಂಡಿ ಬೆಟ್ಟವನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುವ ದೃಷ್ಟಿಯಿಂದ ಚಾಮುಂಡಿ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಲಾಯಿತು. ಇದಕ್ಕೆ ವಿರುದ್ಧವಾಗಿ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಹೈಕೋರ್ಟ್ ನಲ್ಲಿ ತಡೆಯಾಜ್ಞೆ ತಂದಿದ್ದಾರೆ. ಆದರೆ ಈ ತಡೆಯಾಜ್ಞೆಯನ್ನು ಸೋಮವಾರ ತೆರವುಗೊಳಿಸುತ್ತೇವೆ ಎಂದು ಹೇಳಿದರು.
ಚಾಮುಂಡಿ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿದರೆ ಅದು ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಆಸ್ತಿಯಾಗುವುದಿಲ್ಲ, ಪ್ರಾಧಿಕಾರದಲ್ಲಿ ಮುಖ್ಯಮಂತ್ರಿ ಗಳು ಅಧ್ಯಕ್ಷರಾಗಿರುತ್ತಾರೆ. ಧಾರ್ಮಿಕ ದತ್ತಿ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವ, ಪ್ರವಾಸೋಧ್ಯಮ ಸಚಿವರು ಉಪಾಧ್ಯಕ್ಷರಾಗಿರುತ್ತಾರೆ. ರಾಜವಂಶಸ್ಥರಲ್ಲಿ ಒಬ್ಬರು ಶಾಶ್ವತ ಸದಸ್ಯರಾಗಿರುತ್ತಾರೆ. ಹೀಗಿದ್ದ ಮೇಲೆ ಏಕೆ ನಿಮ್ಮ ತಕರಾರು ಎಂದು ಪ್ರಶ್ನಿಸಿದರು.
ಚಾಮುಂಡಿ ಬೆಟ್ಟ ಯಾರ ಆಸ್ತಿಯೂ ಅಲ್ಲ, ಅದು ಸರ್ಕಾರದ ಆಸ್ತಿ. ಚಾಮುಂಡಿ ಬೆಟ್ಟದ ಪ್ರದೇಶ, ಅರಣ್ಯ ಇಲಾಖೆ, ಕಂದಾಯ ಇಲಾಖೆ, ಸ್ಥಳೀಯ ಗ್ರಾ.ಪಂ ವ್ಯಾಪ್ತಿಗೆ ಒಳಪಡುತ್ತದೆ. ಹೇಗೆ ರಾಜರ ಆಸ್ತಿಯಾಗುತ್ತದೆ. 1950ರಲ್ಲಿ ವಿಲೀನ ಗೊಂಡಾಗಿನಿಂದಲೂ ಚಾಮುಂಡಿ ಬೆಟ್ಟ ನಿರ್ವಹಣೆ ಮಾಡದೆ ಇವರು ಏನು ಮಾಡುತ್ತಿದ್ದರು ಎಂದು ಕೇಳಿದರು.
1974ರಲ್ಲಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ನಿರ್ವಹಣೆ ಮಾಡಲು ಸಾಧ್ಯವಿಲ್ಲ, ಸರ್ಕಾರವೇ ನಿರ್ವಹಣೆ ಮಾಡಿ ಎಂದು ಪತ್ರ ಬರೆದ ಮೇಲೆ ಅದು ಸರ್ಕಾರದ ಸ್ವಾಮ್ಯಕ್ಕೆ ಒಳಪಡಲಿದೆ. ಅದನ್ನು ಈಗ ಬಿಟ್ಟುಬಿಡಿ ಎಂದರೆ ಹೇಗೆ ಬಿಡುಗಡೆ ಮಾಡಲು ಸಾಧ್ಯ?. ಕೇಂದ್ರ ಸರ್ಕಾರದ ಪ್ರಸಾದ್ ಯೋಜನೆಯಡಿಯಲ್ಲಿ 40 ಕೋಟಿ ರೂ. ಚಾಮುಂಡಿ ಬೆಟ್ಟದ ಅಭಿವೃದ್ಧಿಗೆ ಬಿಡುಗಡೆ ಮಾಡಲಾಗಿದೆ. ಇದು ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುವುದರಿಂದ ಹಣ ಬಿಡುಗಡೆ ಮಾಡಿರುವುದು ಎಂದು ಹೇಳಿದರು.
ಚಾಮುಂಡಿ ಬೆಟ್ಟವನ್ನು 10ನೇ ಶತಮಾನದಲ್ಲಿ ಗಂಗಾ ಸಂಸ್ಥಾನದವರು ಕಟ್ಟಿಸಿದರು. ನಂತರ ಮೈಸೂರು ರಾಜರು ಸ್ವಲ್ಪ ಅಭಿವೃದ್ಧಿ ಪಡಿಸಿದ್ದಾರೆ. ಅಷ್ಟು ಮಾತ್ರಕ್ಕೆ ನಮ್ಮದೇ ದೇವಸ್ಥಾನ ಎನ್ನಲು ಸಾಧ್ಯವೇ?. ಚಾಮುಂಡಿ ಬೆಟ್ಟದಲ್ಲಿರುವ ಹೋಟೆಲ್ ಮಾತ್ರ ರಾಜವಂಶಸ್ಥರಿಗೆ ಸೇರಿರುವುದು ಎಂದು ಹೇಳಿದರು.
ಪ್ರಾಧಿಕಾರ ಬೇಕು ಎಂದವರೇ ವಿರೋಧ ಮಾಡುತ್ತಿರುವುದು ದುರದೃಷ್ಟಕರ:
ಚಾಮುಂಡಿ ಬೆಟ್ಟ ಪ್ರಾಧಿಕಾರ ರಚನೆಯಾಗಬೇಕು ಎಂದು ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಅವರೇ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ಪ್ರಮೋದಾದೇವಿ ವಿರೋಧ ವ್ಯಕ್ತಪಡಿಸುತ್ತಿದ್ದಂತೆ ಜಿ.ಟಿ.ದೇವೇಗೌಡ ಯುಟರ್ನ್ ಹೊಡೆದಿರುವುದು ದುರದೃಷ್ಟಕರ ಎಂದು ಎಂ.ಲಕ್ಷ್ಮಣ್ ವಾಗ್ದಾಳಿ ನಡೆಸಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ನಗರಾಧ್ಯಕ್ಷ ಆರ್.ಮೂರ್ತಿ, ಮಾಜಿ ಜಿ.ಪಂ.ಸದಸ್ಯ ಬಿ.ಎಂ.ರಾಮು, ಕೆಪಿಸಿಸಿ ಸಂಯೋಜಕ ಎನ್.ಭಾಸ್ಕರ್, ಕಾಂಗ್ರೆಸ್ ಮುಖಂಡ ಎಂ.ಶಿವಣ್ಣ, ಮಾಧ್ಯಮ ವಕ್ತಾರ ಮಹೇಶ್, ಗಿರೀಶ್ ಉಪಸ್ಥಿತರಿದ್ದರು.