ಲೋಕಾಯುಕ್ತದಿಂದ ʼಮುಡಾʼದ ತನಿಖೆ ಸರಿಯಾಗಿ ನಡೆಯುತ್ತಿಲ್ಲ : ಎಚ್.ವಿಶ್ವನಾಥ್ ಆರೋಪ

Update: 2024-10-28 15:15 GMT

 ಎಚ್.ವಿಶ್ವನಾಥ್

ಮೈಸೂರು : "ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದ ಅಕ್ರಮ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತದಿಂದ ತನಿಖೆ ಸರಿಯಾಗಿ ನಡೆಯುತ್ತಿಲ್ಲ.‌ ಹಾಗಾಗಿ ಈಡಿ ಹಾಗೂ ಸಿಬಿಐ ಸಮರ್ಪಕವಾಗಿ ತನಿಖೆ ನಡೆಸಿ, ಸತ್ಯಾಂಶ ಹೊರತರಬೇಕು" ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಒತ್ತಾಯಿಸಿದರು.

ಸೋಮವಾರ ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ʼಸಿದ್ಧರಾಮಯ್ಯನವರ ಕಾಲ ವಿಜಯನಗರ ಸಾಮ್ರಾಜ್ಯದಂತೆ ಆಗಿದೆ. ಒಂದು-ಒಂದೂವರೆ ಕೋಟಿ ರೂ. ಬೆಲೆಬಾಳುವ ನಿವೇಶನವನ್ನು ಒಂದು ಸಾವಿರ, ಎರಡು ಸಾವಿರ ರೂ.ಗಳಿಗೆ ಕೊಡಲಾಗಿದೆ. ಸಿದ್ಧರಾಮಯ್ಯ ಅವರ ಪತ್ನಿಗೂ ಹೀಗೆ ನಿವೇಶನ ಹಂಚಿಕೆ ಮಾಡಲಾಗಿದೆ ಎಂದು ಆರೋಪಿಸಿದರು.

ರಾಜ್ಯದಲ್ಲಿ ಮೂರು ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತಿದೆ. ಕಾಂಗ್ರೆಸ್ ಮೇಲೆ ಮುಡಾ, ವಾಲ್ಮೀಕಿ‌‌ ನಿಗಮ ಹಗರಣಗಳ ಕಾರ್ಮೋಡ ಕವಿದಿದೆ‌. ಚನ್ನಪಟ್ಟಣದಲ್ಲಿ ಜೆಡಿಎಸ್‌ಗೆ ಪೂರಕ ವಾತಾವರಣವಿದೆ. ಕಾಂಗ್ರೆಸ್ ಅಭ್ಯರ್ಥಿ ಯೋಗೇಶ್ವರ್ ಬ್ರಹ್ಮಾಂಡ ಭ್ರಷ್ಟಾಚಾರ ಮಾಡಿದ್ದಾರೆ. ಮೆಗಾಸಿಟಿ ಹೆಸರಿನಲ್ಲಿ ಕೋಟ್ಯಾಂತರ ರೂ. ವಂಚನೆ ಮಾಡಿದ್ದಾರೆ. ವಂಚನೆಗೊಳಗಾದ ಕೆಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಾಗಾಗಿ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಗೆಲುವು ಸಾಧಿಸಲಿದ್ದಾರೆ. ಉಪಚುನಾವಣೆಯಲ್ಲಿ ಕಾಂಗ್ರೆಸ್ ಧೂಳಿಪಟವಾಗಲಿದೆ ಎಂದು ಭವಿಷ್ಯ ನುಡಿದರು.

ಭೈರತಿ ಸುರೇಶ್ ಸಂಸ್ಕಾರ ಇಲ್ಲದ ಮನುಷ್ಯ:

ಇದೇ ವೇಳೆ ಸಚಿವ ಭೈರತಿ ಸುರೇಶ್ ವಿರುದ್ದ ವಾಗ್ದಾಳಿ ನಡೆಸಿದ ಎಚ್.ವಿಶ್ವನಾಥ್, "ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಬಗ್ಗೆ ಸುರೇಶ್ ಕೀಳಾಗಿ ಮಾತನಾಡಿದ್ದಾನೆ. ಈತ ಒಬ್ಬ ಅಯೋಗ್ಯ, ಸಂಸ್ಕೃತಿ, ಸಂಸ್ಕಾರ ಇಲ್ಲದ ಮನುಷ್ಯ. ಶೋಭಾ ಕರಂದ್ಲಾಜೆ ಸುಸಂಸ್ಕೃತ ಹೆಣ್ಣು ಮಗಳು. ಕೇಂದ್ರ, ರಾಜ್ಯದಲ್ಲಿ ಸಚಿವೆಯಾಗಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಇಂತವರಿಂದ ಸಿದ್ದರಾಮಯ್ಯ ಅವರ ಘನತೆ ಹಾಳಾಗುತ್ತಿದೆ. ರಾಜ್ಯದಲ್ಲಿ ಯಾರು ಏನು ಬೇಕಾದರೂ ಮಾಡಿಕೊಳ್ಳಲಿ ಎಂದು ಬಿಟ್ಟು ಬಿಟ್ಟಿದ್ದಾರೆ. ನನ್ನ ಬಗ್ಗೆಯೂ ಭೈರತಿ ಸುರೇಶ್ ಕೇವಲವಾಗಿ ಮಾತ‌ನಾಡಿದ್ದಾನೆ. ಇವನನ್ನು ಒದ್ದು ಒಳಗೆ ಹಾಕಬೇಕಿತ್ತು. ಸಿದ್ದರಾಮಯ್ಯ ಬೆಂಬಲದಿಂದ ಎಗರಾಡುತ್ತಿದ್ದಾನೆ" ಎಂದು ಏಕವಚನದಲ್ಲೇ  ಹರಿಹಾಯ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News