ಕನ್ನಡದ ಅಸ್ಮಿತೆಯನ್ನು ಕಟ್ಟುವಂತಹ ಕೆಲಸ ಪ್ರತಿಯೊಬ್ಬರಿಂದಲೂ ಆಗಬೇಕು: ಸಚಿವ ಡಾ.ಎಚ್.ಸಿ.ಮಹದೇವಪ್ಪ
ಮೈಸೂರು, ನ.1: ಕನ್ನಡ ಭಾಷೆಗೆ ಸುಮಾರು 2 ಸಾವಿರಕ್ಕೂ ಹೆಚ್ಚು ವರ್ಷಗಳ ಇತಿಹಾಸವಿದ್ದು, ಭಾಷೆ, ಬದುಕು, ಸಾಹಿತ್ಯ, ಸಂಸ್ಕೃತಿ ಬೆಳವಣಿಗೆಯಲ್ಲಿ ಕನ್ನಡ ಭಾಷೆಯು ತನ್ನದೇ ಅಸ್ಮಿತೆಯನ್ನು ಒಳಗೊಂಡಿದೆ. ಪ್ರಾಚೀನ ಕಾಲದಿಂದಲೂ ಶಾಸನಗಳಲ್ಲಿ ಕನ್ನಡ ಭಾಷೆ ಬಳಕೆಯಾಗಿರುವುದು ಕಂಡುಬರುತ್ತದೆ. ಕನ್ನಡ ಭಾಷೆ ಮಾತನಾಡುವವರು ಕಾವೇರಿಯಿಂದ ಗೋದಾವರಿಯವರೆಗೆ ಇರುವುದನ್ನು ಕಾಣುತ್ತೇವೆ ಎಂದು ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.
ಜಿಲ್ಲಾಡಳಿತದ ವತಿಯಿಂದ ಓವಲ್ ಮೈದಾನದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ 69ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದು ಕರ್ನಾಟಕ ಏಕೀಕರಣಗೊಂಡ ದಿನ. ಇದು ಕನ್ನಡಿಗರಾದ ನಮ್ಮೆಲ್ಲರಿಗೂ ಬಹಳ ವಿಶೇಷವಾದ ದಿನ. ಕನ್ನಡದ ಕಾರಣಕ್ಕೆ ಒಗ್ಗೂಡಿರುವ ಜನ ನಾವು. ಸ್ವಾತಂತ್ರ್ಯ ಪೂರ್ವದಲ್ಲಿ ಹಲವು ಪ್ರಾಂತ್ಯಗಳಲ್ಲಿ ಹರಿದು ಹಂಚಿಹೋಗಿದ್ದ ಕನ್ನಡಿಗರ ಹಲವು ಪ್ರದೇಶಗಳನ್ನು ಒಂದುಗೂಡಿಸಿ, 1956ರ ನವೆಂಬರ್ 1 ರಂದು ಕರ್ನಾಟಕ ಏಕೀಕರಣ ಮಾಡಲಾಯಿತು. ಅಂದಿನಿoದ ಪ್ರತಿ ವರ್ಷ ನವೆಂಬರ್ 1ರಂದು ನಾವು ಕನ್ನಡ ರಾಜ್ಯೋತ್ಸವವನ್ನು ಆಚರಿಸಿಕೊಂಡು ಬಂದಿದ್ದೇವೆ ಎಂದು ತಿಳಿಸಿದರು.
ಕ್ರಿ.ಶ.450 ರ ಕನ್ನಡ ಭಾಷೆಯ ಮೊಟ್ಟ ಮೊದಲ ಹಲ್ಮಿಡಿ ಶಾಸನದಲ್ಲಿ ಕನ್ನಡದ ಪದಗಳಿವೆ. ಕ್ರಿ.ಶ. 850 ರ ಕನ್ನಡದ ಮೊಟ್ಟ ಮೊದಲ ಗ್ರಂಥ ಕವಿರಾಜ ಮಾರ್ಗದಲ್ಲಿ ಕನ್ನಡ ನಾಡಿನ ವಿಸ್ತಾರದ ಬಗ್ಗೆ ಉಲ್ಲೇಖವಿದೆ. 21 ನೇ ಶತಮಾನದ ಈ ಹೊತ್ತಿನಲ್ಲಿ ಕನ್ನಡ ಭಾಷೆ ಆಧುನೀಕತೆಯೊಂದಿಗೆ ತನ್ನದೇ ಅಸ್ಮಿತೆಯನ್ನು ಉಳಿಸಿಕೊಂಡಿದೆ. ಈ ಮಣ್ಣಿಗೊಂದು, ಈ ನುಡಿಗೊಂದು ಸೊಗಸಿದೆ, ಸೌಂದರ್ಯವಿದೆ, ಬೆಡಗಿದೆ, ಆದ್ದರಿಂದ ಪ್ರಾದೇಶಿಕ ಸಂಸ್ಕೃತಿಯನ್ನು ಎತ್ತಿಹಿಡಿಯುವ ಕಾರ್ಯವನ್ನು ನಾವು ಮಾಡಬೇಕಿದೆ ಎಂದರು.
ಇಂದು ಹೆಮ್ಮೆಯಿಂದ ಆಚರಿಸುತ್ತಿರುವ ಕನ್ನಡ ರಾಜ್ಯೋತ್ಸವದ ಹಿಂದೆ ನಾಡಿನ ಏಕೀಕರಣಕ್ಕಾಗಿ ಶ್ರಮಿಸಿದ ಮಹನೀಯರ ಹೋರಾಟವಿದೆ. ಸಹಸ್ರಾರು ಜನ ಕನ್ನಡಿಗರು ಆಡಳಿತಾತ್ಮಕ ಹಾಗೂ ಭಾವನಾತ್ಮಕ ಐಕ್ಯತೆಗಾಗಿ ಹಗಲಿರುಳು ದುಡಿದಿದ್ದಾರೆ. ಆ ಮಹಾನ್ ಚೇತನಗಳನ್ನೆಲ್ಲಾ ಇಂದು ಕೃತಜ್ಞತೆಯಿಂದ ಸ್ಮರಿಸುತ್ತೇನೆ ಎಂದರು.
ಕನ್ನಡವು ಯಾವುದೋ ಮತ ಪಂಥದ ಭಾಷೆಯಲ್ಲ. ಅದು ಈ ನಾಡಿನ, ಈ ಮಣ್ಣಿನ ಭಾಷೆ. ಈ ಭಾಷೆಯಲ್ಲೇ ನಮ್ಮ ಸಂಸ್ಕೃತಿ ಇದೆ. ನಮ್ಮ ಸಂಸ್ಕಾರ ಇದೆ. ನಮ್ಮ ಸಂಬoಧಗಳು ಇವೆ. ನಮ್ಮ ನಾಗರೀಕತೆ ಇದೆ. ಈ ಭಾಷೆಯ ಶ್ರೀಮಂತಿಕೆಗೆ ಹಲವಾರು ಮಹನೀಯರು ಶ್ರಮಿಸಿದ್ದಾರೆ. ಮುಂದಿನ ತಲೆಮಾರಿಗೆ ಈ ಭಾಷೆಯನ್ನು ಕೊಂಡೊಯ್ಯುವ ಜವಾಬ್ದಾರಿ ನಮ್ಮ ಮೇಲೆ ಇದೆ. ಕೇವಲ ಭೌಗೋಳಿಕವಾಗಿ, ಆಡಳಿತಾತ್ಮಕವಾಗಿ ಏಕೀಕರಣವಾದರೆ ಸಾಲದು. ಕನ್ನಡದ ಮನಸ್ಸುಗಳು ಏಕೀಕರಣವಾಗಬೇಕು ಎಂಬ ಆಶಯವನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಶಾಸಕ ತನ್ವೀರ್ ಸೇಠ್, ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ದಸರಾ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್, ಜಿಲ್ಲಾಧಿಕಾರಿ ಜಿ.ಲಕ್ಷ್ಮಿಕಾಂತ ರೆಡ್ಡಿ, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಂ.ಗಾಯಿತ್ರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಉಪ ವಿಭಾಗಾಧಿಕಾರಿ ರಕ್ಷಿತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಸುದರ್ಶನ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಟಿ. ಕೆ.ಹರೀಶ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.