ವಕ್ಫ್ ಬೋರ್ಡ್‌ಗೆ ಸೇರಿದ ಜಮೀನು ಜಿನ್ನಾ ಕೊಟ್ಟ ಭೂಮಿಯೇ?: ಪ್ರತಾಪ್ ಸಿಂಹ
ಮೈಸೂರು : ವಿಜಯಪುರದಲ್ಲಿ ರೈತರಿಗೆ ಸೇರಿದ ಜಮೀನು ತನ್ನದೆಂದು ವಕ್ಫ್ ಬೋರ್ಡ್ ಹೇಳಿದೆ. ಈ ವಕ್ಫ್ ಎಂದರೆ ಏನು? ಇವರಿಗೆ ಜಮೀನು ಬಳುವಳಿಯಾಗಿ ಕೊಟ್ಟಿದ್ದು ಯಾರು? ಇದೇನು ಜಿನ್ನಾ ಕೊಟ್ಟ ಭೂಮಿಯೇ? ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಪ್ರಶ್ನಿಸಿದ್ದಾರೆ.
ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ʼಕೇವಲ ವಿಜಯಪುರ ಮಾತ್ರವಲ್ಲ ಅಲ್ಲ. ಹುಣಸೂರಿನ ಗಣೇಶ ದೇವಸ್ಥಾನ, ಚಿಕ್ಕಮಗಳೂರಿನಲ್ಲಿ ಖಾಸಗಿ ಆಸ್ತಿಯನ್ನು ವಕ್ಫ್ ಆಸ್ತಿ ಎಂದು ಹೇಳಿ ಕಬಳಿಸುವ ಪ್ರಯತ್ನ ನಡೆದಿದೆ. ರಾಜ್ಯದಲ್ಲಿನ 1.25 ಲಕ್ಷ ಎಕರೆ ಜಮೀನು ತಮಗೆ ಸೇರಿದ್ದು ಎಂದು ವಕ್ಫ್ ಮಂಡಳಿ ವಾದಿಸುತ್ತಿದೆ. ಆದರೆ ಯಾವ ಮುಸಲ್ಮಾನರಿಗೂ ಕೃಷಿಗೆ ಜಮೀನು ಬಿಟ್ಟುಕೊಟ್ಟಿಲ್ಲ. ಬದಲಾಗಿ ರಿಯಲ್ ಎಸ್ಟೇಟ್ ಧಂದೆ ನಡೆಯುತ್ತಿದೆ. ಕೇಂದ್ರ ಸರಕಾರ ಕೂಡಲೇ ವಕ್ಫ್ ಕಾಯ್ದೆಯನ್ನು ವಜಾ ಮಾಡಬೇಕು ಎಂದು ಆಗ್ರಹಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮುಡಾ ಪ್ರಕರಣದ ನಂತರ ಚಾಮುಂಡೇಶ್ವರಿ, ಹಾಸನಾಂಬೆ ಸೇರಿದಂತೆ ಹಿಂದೂ ದೇವತೆಗಳ ಮೇಲೆ ನಂಬಿಕೆ ಬಂದಿದೆ. ಹೀಗಾಗಿ ವಿಜಯಪುರ ವಿಚಾರದಲ್ಲಿ ಹಿಂದೂಗಳ ಪರ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಹೇಳಿದರು.