ಮುಡಾ ನಿವೇಶನ ಹಂಚಿಕೆ : ಶಾಸಕ ಟಿ.ಎಸ್ ಶ್ರೀವತ್ಸ ಪತ್ರಕ್ಕೆ ಸಿಎಂ ಸಿದ್ದರಾಮಯ್ಯ ಸ್ಪಂದನೆ
ಮೈಸೂರು: ಮೈಸೂರು ಮುಡಾದಲ್ಲಿ ನಡೆದಿದೆ ಎನ್ನಲಾದ ಅಕ್ರಮ ನಿವೇಶನ ಹಂಚಿಕೆ ಈಗಾಗಲೇ ರಾಜ್ಯಾದ್ಯಂತ ದೊಡ್ಡ ಸದ್ದು ಮಾಡಿದೆ. ಈ ನಡುವೆ 50:50 ಅನುಪಾತದಲ್ಲಿ ಹಂಚಿಕೆಯಾಗಿದ್ದ ಎಲ್ಲಾ ನಿವೇಶನಗಳನ್ನು ರದ್ದು ಮಾಡುವಂತೆ ಶಾಸಕ ಶ್ರೀವತ್ಸ ಬರೆದಿದ್ದ ಪತ್ರಕ್ಕೆ ಸಿಎಂ ಸಿದ್ದರಾಮಯ್ಯ ಸ್ಪಂದಿಸಿದ್ದಾರೆ.
ಮೈಸೂರು ಮುಡಾದಲ್ಲಿ 50:50 ಅನುಪಾತದಲ್ಲಿ ಹಂಚಿಕೆಯಾಗಿರುವ ನಿವೇಶನ ವಿಚಾರ ಭಾರಿ ಸಂಚಲವನ್ನು ಸೃಷ್ಟಿ ಮಾಡಿದೆ. ಅದರಲ್ಲೂ ಸಿಎಂ ಸಿದ್ದರಾಮಯ್ಯ ಪತ್ನಿ 14 ನಿವೇಶನಗಳನ್ನು ಈಗಾಗಲೇ ವಾಪಸ್ ಮಾಡಿದ್ದಾರೆ. ಈ ಸಂಬಂಧ 50:50 ಅನುಪಾತದಲ್ಲಿ ಹಂಚಿಕೆಯಾಗಿರುವ ಎಲ್ಲಾ ನಿವೇಶನಗಳನ್ನು ರದ್ದು ಮಾಡುವಂತೆ ಸಿಎಂ ಸಿದ್ದರಾಮಯ್ಯಗೆ ಕಳೆದ 15 ದಿನಗಳ ಹಿಂದೆ ಬಿಜೆಪಿ ಶಾಸಕ ಶ್ರೀವತ್ಸ ಮನವಿ ಪತ್ರ ನೀಡಿದ್ದರು.
ಇದೀಗ ಆ ಮನವಿ ಪತ್ರಕ್ಕೆ ಸ್ಪಂದನೆ ಸಿಕ್ಕಿದೆ. ಎಲ್ಲಾ ನಿವೇಶನಗಳನ್ನು ವಾಪಸ್ಸು ಪಡೆಯಿರಿ ಎಂಬ ಶಾಸಕರ ಪತ್ರಕ್ಕೆ ಸಿಎಂ ಸಿದ್ದರಾಮಯ್ಯ, ಲಿಖಿತ ರೂಪದಲ್ಲಿ ಸರಕಾರದ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗೆ ಸೂಚನೆ ಕೊಟ್ಟಿದ್ದು, ಪತ್ರದ ವಿಚಾರವಾಗಿ ಅಗತ್ಯ ಕ್ರಮ ಕೈಗೊಳ್ಳಿ ಎಂದು ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಶಾಸಕ ಶ್ರೀವತ್ಸ, ʼಸಿಎಂ ಸಿದ್ದರಾಮಯ್ಯ ಅವರು ನನ್ನ ಪತ್ರಕ್ಕೆ ಧನಾತ್ಮಕವಾಗಿ ಸ್ಪಂದಿಸಿದ್ದಾರೆ. ಮುಡಾವನ್ನು ಸ್ವಚ್ಚಗೊಳಿಸಬೇಕು ಎಂದು ಅವರಿಗೆ ಅನಿಸಿರಬೇಕು. ಎಲ್ಲಾ 50:50 ನಿವೇಶಗಳನ್ನು ರದ್ದು ಮಾಡುವಂತೆ ಮನವಿ ಮಾಡಿದ್ದೆ. ಎಲ್ಲವನ್ನೂ ರದ್ದು ಮಾಡಿ, ತದನಂತರ ಅರ್ಹರಿಗೆ ಕೊಡಲಿ ಎಂಬುದು ನನ್ನ ಉದ್ದೇಶ. ನಿವೇಶನ ಪಡೆದವರಲ್ಲಿ ಬಹುತೇಕರು ಅನರ್ಹರಿದ್ದಾರೆʼ ಎಂದು ತಿಳಿಸಿದರು.