ಸಿದ್ದರಾಮಯ್ಯ ವಿರುದ್ಧ ಮತ್ತೊಂದು ದೂರು : ಭೈರತಿ ಸುರೇಶ್, ಲೋಕಾಯುಕ್ತ ಎಸ್ಪಿ ವಿರುದ್ಧವೂ ದೂರು ದಾಖಲಿಸಿದ ಸ್ನೇಹಮಯಿ ಕೃಷ್ಣ

Update: 2024-10-06 14:56 GMT

ಸ್ನೇಹಮಯಿ ಕೃಷ್ಣ/ಸಿದ್ದರಾಮಯ್ಯ/ಭೈರತಿ ಸುರೇಶ್

ಬೆಂಗಳೂರು: ಬಹಿರಂಗವಾಗಿ ಪ್ರಚೋದನೆ ನೀಡುವ ಮೂಲಕ ತಮಗೆ ಹಾಗೂ ತಮ್ಮ ಕುಟುಂಬಕ್ಕೆ ಹಾನಿ ಮಾಡುವ ಪ್ರಯತ್ನ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಬಂಧಿಸುವಂತೆ ಲೋಕಾಯುಕ್ತ ಪೊಲೀಸರಿಗೆ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ದೂರು ನೀಡಿದ್ದು, ಜತೆಗೆ ಸಚಿವ ಭೈರತಿ ಸುರೇಶ್ ಮತ್ತು ಹಿಂದಿನ ಲೋಕಾಯುಕ್ತ ಎಸ್ಪಿ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೂ ದೂರು ಸಲ್ಲಿಸಿದ್ದಾರೆ.

ಮೈಸೂರಿನ ಲೋಕಾಯುಕ್ತ ಎಸ್ಪಿ ಉದೇಶ್ ಅವರಿಗೆ ವಾಟ್ಸಪ್ ಮೂಲಕ ದೂರು ನೀಡಿರುವ ಸ್ನೇಹಮಯಿ ಕೃಷ್ಣ, ಲೋಕಾಯುಕ್ತದ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಮೊದಲನೇ ಆರೋಪಿಯಾಗಿರುವ ಸಿದ್ದರಾಮಯ್ಯ ಅವರು ರಾಜ್ಯದ ಜನರಿಗೆ ಬಹಿರಂಗವಾಗಿ ಪ್ರಚೋದನೆ ನೀಡುತ್ತಿದ್ದಾರೆ. ಇಂತಹ ಪ್ರಚೋದನೆಯಿಂದ ನನ್ನ ಹಾಗೂ ನನ್ನ ಕುಟುಂಬಕ್ಕೆ ತೊಂದರೆಯಾಗುವ ಮತ್ತು ಸಮಾಜದ ಸ್ವಾಸ್ಥ್ಯಕ್ಕೆ ಹಾನಿಯಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಕೂಡಲೇ ಸಿದ್ದರಾಮಯ್ಯ ಅವರನ್ನು ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.

ಮುಂದುವರೆದು, ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ದೂರು ನೀಡಿರುವ ಸ್ನೇಹಮಯಿ ಕೃಷ್ಣ, ತಮಗೆ ದೊರೆತಿರುವ ಮಾಹಿತಿಯ ಪ್ರಕಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಇತರ ಪ್ರಭಾವಿ ವ್ಯಕ್ತಿಗಳು ಅಧಿಕಾರದ ಪ್ರಭಾವವನ್ನು ಬಳಸಿಕೊಂಡು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಅಕ್ರಮವಾಗಿ ನಿವೇಶನಗಳನ್ನು ಪಡೆದುಕೊಂಡಿದ್ದಾರೆ.

ಈ ಬಗ್ಗೆ ಮೈಸೂರು ಲೋಕಾಯುಕ್ತದ ಅಧಿಕಾರಿಗಳು ಕರ್ನಾಟಕ ಲೋಕಾಯುಕ್ತರಿಗೆ ದಾಖಲೆಗಳೊಂದಿಗೆ ಸಮಗ್ರ ವರದಿ ನೀಡಿ, ಸರ್ಚ್ ವಾರೆಂಟ್ ಪಡೆದುಕೊಂಡು ಜು.26ರಂದು ಶೋಧ ಕಾರ್ಯಾಚರಣೆ ಮೂಲಕ ದಾಖಲೆಗಳನ್ನು ವಶಪಡಿಸಿಕೊಳ್ಳಲು ತಯಾರಾಗಿದ್ದರು. ಆ ಸಮಯದಲ್ಲಿ ಲೋಕಾಯುಕ್ತ ಪೊಲೀಸ್ ಇನ್‍ಸ್ಪೆಕ್ಟರ್ ಆಗಿದ್ದ ಸುಜಿತ್ ಅವರು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಅವರಿಗೆ ಮಾಹಿತಿ ನೀಡಿದ್ದರು.

ಕೂಡಲೇ ಭೈರತಿ ಸುರೇಶ್ ಹೆಲಿಕಾಪ್ಟರ್‌ ನಲ್ಲಿ ಬಂದು ಕೆಲವು ಪ್ರಮುಖ ಕಡತಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಅವುಗಳನ್ನು ಆಧರಿಸಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪತ್ರಿಕಾಗೋಷ್ಠಿ ನಡೆಸಿ ವಿವರಣೆ ನೀಡಿದ್ದಾರೆ. ನಂತರ ಸುಜಿತ್ ಅವರನ್ನು ಬೆಂಗಳೂರಿನ ಆಯಕಟ್ಟಿನ ಜಾಗಕ್ಕೆ ವರ್ಗಾವಣೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News