ಸಿಎಂ ಸಿದ್ದರಾಮಯ್ಯ ಭಾಗವಹಿಸಿದ ಕೆ.ಡಿ.ಪಿ ಸಭೆಗೆ ಮುತ್ತಿಗೆ ಹಾಕಲು ಯತ್ನಿಸಿದ ಬಿಜೆಪಿ ಕಾರ್ಯಕರ್ತರು ವಶಕ್ಕೆ
ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಜಿ.ಪಂ. ನಲ್ಲಿ ನಡೆಯಲಿರುವ ಕೆ.ಡಿ.ಪಿ. ಸಭೆಗೆ ಮುತ್ತಿಗೆ ಹಾಕಲು ಯತ್ನಿಸಿದ ಬಿಜೆಪಿ ಕಾರ್ಯಕರ್ತರು ಮತ್ತು ಮುಖಂಡರುಗಳನ್ನು ಪೊಲೀಸರು ವಶಕ್ಕೆ ಪಡೆದರು.
ನಗರದ ಜಿ.ಪಂಕಚೇರಿಯಲ್ಲಿ ಶುಕ್ರವಾರ ಕೆ.ಡಿ.ಪಿ. ಸಭೆ ಆಯೋಜನೆ ಮಾಡಲಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ಕೆ.ಡಿ.ಪಿ. ಸಭೆಗೆ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ಪೊಲೀಸರು ಅವರನ್ನು ವಶಕ್ಕೆ ಪಡೆದು ಸಿಎಆರ್ ಮೈದಾನಕ್ಕೆ ಕರೆದೊಯ್ದರು.
ಇದಕ್ಕೂ ಮೊದಲು ಬಿಜೆಪಿ ಮುಖಂಡರುಗಳು ಕಾರ್ಯಕರ್ತರು ವಿಷ್ಣುವರ್ಧನ್ ರಸ್ತೆಯಲ್ಲಿರುವ ಬಿಜೆಪಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು. ಈ ವೇಳೆ ಮಾತನಾಡಿದ ಶಾಸಕ ಟಿ.ಎಸ್.ಶ್ರೀವತ್ಸ, "ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಪತ್ನಿ ಹೆಸರಿನಲ್ಲಿ 14 ಸೈಟ್ ನುಂಗಿದ್ದಾರೆ. ದಲಿತರ ಜಮೀನನ್ನು ಮೋಸ ಮಾಡಿ ಕಬಳಿಸಿದ್ದಾರಣ್ಣ, ವಾಲ್ಮೀಕಿ ನಿಗಮದಲ್ಲಿ 189 ಕೋಟಿ ನುಂಗಿದರಣ್ಣ" ಎಂದು ಹಾಡು ಹೇಳಿ ಪ್ರತಿಭಟಿಸಿದರು.
ನಂತರ ಜಿ.ಪಂ. ಕಚೇರಿಯತ್ತ ತೆರಳಲು ಮುಂದಾದಾಗ ಪೊಲೀಸರು ಬ್ಯಾರಿಕೇಡ್ ಹಾಕಿ ತಡೆದರು. ಈ ವೇಳೆ ಬಿಜೆಪಿ ಕಾರ್ಯಕರ್ತರು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಪರಿಸ್ಥಿತಿ ಮಿತಿಮೀರುವುದನ್ನು ಅರಿತ ಪೊಲೀಸರು ಎಲ್ಲರನ್ನು ಬಂಧಿಸಿದರು.
ಕೇಂದ್ರ ಮಾಜಿ ಸಚಿವ ಭಗವಂತ ಖೂಬಾ, ಶಾಸಕ ಟಿ.ಎಸ್.ಶ್ರೀವತ್ಸ, ಬಿಜೆಪಿ ನಗರಾಧ್ಯಕ್ಷ ಎಲ್.ನಾಗೇಂದ್ರ, ಜಿಲ್ಲಾಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ, ಜೋಗಿ ಮಂಜು ಸೇರಿದಂತೆ ಹಲವರನ್ನು ಬಂಧಿಸಿ ಪೊಲೀಸರು ಕರೆದೊಯ್ದರು.