ಬಿಜೆಪಿಯ ದೊಡ್ಡ ದೊಡ್ಡ ನಾಯಕರಿಗಿಂತ ನಾನು ಪಾರ್ಟಿಗೆ ಸೀನಿಯರ್ : ಪ್ರತಾಪ್ ಸಿಂಹ

Update: 2024-08-14 13:24 GMT

PC : x/@mepratap

ಮೈಸೂರು : "ನಾನು ಪಕ್ಷಕ್ಕೆ ಬ್ಯಾನರ್, ಬಂಟಿಂಗ್ಸ್‌ ಕಟ್ಟಿಲ್ಲದೆ ಇರಬಹುದು. ಯುವ ಸಮೂಹವನ್ನು ಪಕ್ಷಕ್ಕೆ ಸೆಳೆಯುವಲ್ಲಿ ಯಶಸ್ವಿಯಾಗಿದ್ದೇನೆ. ಬಿ.ಎಸ್.ಯಡಿಯೂರಪ್ಪನಂತವರು ನೇಪಥ್ಯಕ್ಕೆ ಸರಿಯುತ್ತಿರುವ ಕಾರಣ ನನ್ನಂಥ ಯುವಕರು ಮುಂದೆ ಬರಬೇಕಿದೆ. ಹೀಗಾಗಿ ನನ್ನನ್ನು ರಾಜ್ಯದಲ್ಲೇ ಉಳಿಸಿದ್ದಾರೆ" ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದರು.

ಮೈಸೂರಿನಲ್ಲಿ ಮಾಧ್ಯಮದವರೊಂದಿದಗೆ ಮಾತನಾಡಿದ ಅವರು,"ನಾನು ಪಕ್ಷದ ವಿರುದ್ದ ರೆಬೆಲ್ ಅಲ್ಲ. ಬಿಜೆಪಿಯ ದೊಡ್ಡ ದೊಡ್ಡ ನಾಯಕರಿಗಿಂತ ನಾನು ಪಾರ್ಟಿಗೆ ಸೀನಿಯರ್. ಯಾಕೆಂದರೆ ನನ್ನ ತಂದೆ ಆರೆಸ್ಸೆಸ್‌ನಲ್ಲಿದ್ದರು. ನಾನು ಯಾರನ್ನು ಓಲೈಸಲು‌, ಮೆಚ್ಚಿಸಲು ರಾಜಕಾರಣ ಮಾಡಲ್ಲ. ನನಗೆ ಟಿಕೆಟ್ ಕೊಟ್ಟಿದ್ದು ರಾಷ್ಟ್ರೀಯ ಸ್ವಯಂ ಸೇವಾ ಸಂಘ, ಬಿಜೆಪಿ ಅಲ್ಲ. ಕ್ಷೇತ್ರ-ಜಾತಿಯ ಆಚೆಗೆ ಜನಪ್ರಿಯತೆ ಇರುವ ಬಸವನಗೌಡ ಯತ್ನಾಳ್ ಅಂಥವರಲ್ಲಿ ನಾನು ಕೂಡ ಒಬ್ಬ" ಎಂದರು.

ಸೆ.17ಕ್ಕೆ ಪಾದಯಾತ್ರೆಗೆ ನಿರ್ಧಾರ :

ವಾಲ್ಮೀಕಿ ಹಗರಣ ವಿಚಾರದಲ್ಲಿ ಸೆ.17ಕ್ಕೆ ಪಾದಯಾತ್ರೆ ಮಾಡಲು ನಿರ್ಧಾರವಾಗಿದೆ. ಬೆಳಗಾವಿಯಲ್ಲಿ ನಡೆದದ್ದು ಬಿಜೆಪಿ ಅತೃಪ್ತರ ಸಭೆಯಲ್ಲ, ಬದಲಾಗಿ ಬಸವಗೌಡ ಪಾಟೀಲ್ ಯತ್ನಾಳ್ ನೇತೃತ್ವದಲ್ಲಿ ನಡೆದ ಸಭೆ ಅದಾಗಿದೆ. ನಾವು ಮೈಸೂರು ಚಲೋ ಪಾದಯಾತ್ರೆ ಅನುಭವ ಹಂಚಿಕೊಂಡಿದ್ದೇವೆ. ವಾಲ್ಮೀಕಿ ಹಗರಣದ ವಿರುದ್ದ ಸರಿಯಾದ ಹೋರಾಟ ನಡೆದರೆ ಸಿಎಂ ಕುರ್ಚಿ ಅಲ್ಲಾಡುತ್ತೆ. ಯತ್ನಾಳ್ ಅವರು ಕರೆದ ಕಾರಣ ನಾನು ಸಭೆಗೆ ಹೋಗಿದ್ದೆ. ಈ ಪಾದಯಾತ್ರೆ ಯಾರ ಮೇಲಾಟದ ಕಾರ್ಯಕ್ರಮವಲ್ಲ. ಯಾರ ನಾಯಕತ್ವ ಪ್ರದರ್ಶನವೂ ಅಲ್ಲ. ಪಾದಯಾತ್ರೆಗೆ ಹೈಕಮಾಂಡ್ ಅನುಮತಿ ಕೊಡುತ್ತೆ. ವರಿಷ್ಠರ ಅನುಮತಿಯೊಂದಿಗೆ ಪಾದಯಾತ್ರೆ ಮಾಡುತ್ತೇವೆ ಎಂದು ಪ್ರತಾಪ್ ಸಿಂಹ ನುಡಿದರು.

ಗೌರಿ ಲಂಕೇಶ್ ಹತ್ಯೆ ಆರೋಪಿಯನ್ನು ಭೇಟಿಯಾದ ವಿಚಾರ :

ಗೌರಿ ಲಂಕೇಶ್ ಹತ್ಯೆ ಆರೋಪಿಯ ಭೇಟಿಯಾದ ವಿಚಾರ ಕುರಿತು ಸಚಿವ ದಿನೇಶ್ ಗುಂಡೂರಾವ್ ಟ್ವೀಟ್ ಗೆ ತಿರುಗೇಟು ಕೊಟ್ಟ ಮಾಜಿ ಸಂಸದ ಪ್ರತಾಪ್ ಸಿಂಹ, "ರಾಜಕಾರಣಿಗಳ ಮಕ್ಕಳಿಗೆ ಅಪ್ಪಂದಿರ ಪ್ರತಿಭೆ ವರ್ಗಾವಣೆ ಆಗಲ್ಲ. ದಿನೇಶ್ ಗುಂಡೂರಾವ್ ವಿಚಾರದಲ್ಲೂ ಅದೇ ಆಗಿದೆ. ಪ್ರಕರಣದ ಆರೋಪಿಯನ್ನು ಮಾತನಾಡಿಸುವುದೇ ತಪ್ಪಾ? ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಹಗರಣದ ವಿಚಾರದಲ್ಲಿ ಸೋನಿಯಾ ಗಾಂಧಿ-ರಾಹುಲ್ ಗಾಂಧಿ ಇಬ್ಬರು ಆರೋಪಿಗಳು. ಕಾಂಗ್ರೆಸ್ ನಾಯಕರು ಯಾಕೆ ಹೋಗಿ ಅವರ ಕಾಲಿಗೆ ಬೀಳುತ್ತಾರೆ? ಅಧಿನಾಯಕ, ಅಧಿನಾಯಕಿ ಎಂದು ಕರೆಯುವ ಸೋನಿಯಾ, ರಾಹುಲ್ ಆರೋಪಿ ಸ್ಥಾನದಲ್ಲಿ ಇಲ್ಲವೇ?” ಎಂದು ಪ್ರಶ್ನಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News