ನಾವು ಸಂಘರ್ಷ ಮಾಡಿಯೇ ಪಕ್ಷ, ದೇಶ ಕಟ್ಟಿರುವುದು: ಸಂಸದ ಪ್ರತಾಪ್ ಸಿಂಹ
ಮೈಸೂರು: ಸಂಘರ್ಷ ಮಾಡಿಯೇ ನಾವು ಪಕ್ಷ, ದೇಶ ಕಟ್ಟಿರುವುದು, ಸಂಘರ್ಷ ಮಾಡಿಯೇ ಮಹಿಷ ದಸರಾ ಆಚರಣೆ ಮಾಡಲು ಬರುವವರನ್ನು ತುಳಿದು ಹಾಕುತ್ತೇವೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಸೋಮವಾರ ಅಕ್ಟೋಬರ್ 13 ರಂದು ಮಹಿಷ ದಸರಾ ವಿರೋಧಿಸಿ ಹಮ್ಮಿಕೊಂಡಿರುವ ಚಾಮುಂಡಿ ಚಲೋ ಪೋಸ್ಟರ್ ಬಿಡುಗಡೆಗೊಳಿಸಿ ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ಮಹಿಷ ದಸರಾ ಆಚರಣೆ ಮಾಡುವ ಮೂಲಕ ಹಿಂದೂ ಭಾವನೆಗಳಿಗೆ ನೋವುಂಟು ಮಾಡುತ್ತಿದ್ದಾರೆ. ನಾಲ್ಕು ಜನ ಸಂಘ ಕಟ್ಟಿಕೊಂಡು ದೆವ್ವ ನ ದೇವರು ಮಾಡಿ ದೇವರನ್ನು ದೆವ್ವ ಎಂದು ಹೇಳುತ್ತಿದ್ದಾರೆ. ಇವರನ್ನು ಈಗಲೇ ಮಟ್ಟ ಹಾಕದಿದ್ದರೆ ಮುಂದೊಂದು ದಿನ ಮಲೈ ಮಹದೇಶ್ವರ ಬೆಟ್ಟಕ್ಕೆ ಹೋಗಿ ವೀರಪ್ಪನ್ ರಾಜ. ಮೂಲನಿವಾಸಿಗಳ ನಾಯಕ ಎಂದು ಮಲೈ ಮಹದೇಶ್ವರಿನಿಗೂ ಅವಮಾನ ಮಾಡುತ್ತಾರೆ. ಹಾಗಾಗಿ ಇವರನ್ನು ಈಗಲೇ ಹೊಸಕಿ ಹಾಕಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾವು ಸಂಘರ್ಷಕ್ಕೆ ಸಿದ್ಧರಾಗಿಯೇ ಅವರು ನಿಗದಿ ಪಡಿಸಿರುವ ಸಮಯಕ್ಕೆ ಚಾಮುಂಡಿ ಬೆಟ್ಟ ಚಲೋಗೆ ಕರೆ ಕೊಟ್ಟಿರುವುದು. ನಾವು ತಾವರೆ ಕಟ್ಟೆ ಬಳಿ ಜಮಾವಣೆಗೊಂಡು ನಂತರ ಚಾಮುಂಡಿ ಬೆಟ್ಟಕ್ಕೆ ತೆರಳಿ ಮಹಿಷನ ಸುತ್ತಾ ಪಾರವಾಗಿ ಕುಳಿತುಕೊಳ್ಳುತ್ತೇವೆ. ಅವರು ಬರಲಿ ನಾವು ಸಂರ್ಘ ಮಾಡಿಯೇ ಮಾಡುತ್ತೇವೆ ಎಂದು ತಿಳಿಸಿದರು.
ಮಹಿಷ ದಸರಾಗೆ 50 ವರ್ಷಗಳ ಇತಿಹಾಸ ಇದೆ ಎಂದು ಇತಿಹಾಸವನ್ನೇ ತಿರುಚುವ ಕೆಲಸವನ್ನು ಮಾಡುತ್ತಿದ್ದಾರೆ. ಇವರು ಬರೀ ಸುಳ್ಳುಗಳನ್ನು ಹೇಳಿಕೊಂಡು ಹಿಂದೂ ಭಾವನೆಗೆ ಮತ್ತು ಮೈಸೂರಿನ ಜನರಿಗೆ ಅವಮಾನ ಮಾಡುತ್ತಿದ್ದಾರೆ. ಈ ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳಾಗಿದ್ದಾಗ 2016 ರಲ್ಲಿ ಮೊದಲ ಬಾರಿಗೆ ಮಹಿಷ ದಸರಾ ಆಚರಣೆ ಮಾಡಿದರು. ಈಗ 50 ವರ್ಷ ಇತಿಹಾಸ ಇದೆ ಎಂದು ಸುಳ್ಳು ಹೇಳುತ್ತಿದ್ದಾರೆ.
ನನ್ನ ಬಗ್ಗೆ ಕೆಲವರು ಪತ್ರಿಕಾಗೋಷ್ಠಿ ನಡೆಸಿ ಏಕ ವಚನದಲ್ಲಿ ಮಾತನಾಡುತ್ತಿದ್ದಾರೆ. ನನಗೂ ಏಕವಚನದಲ್ಲಿ ಮಾತನಾಡುವುದು ಗೊತ್ತು. ನಾನು ನಿಮಗೆ ಅದೇ ಭಾಷೆಯಲ್ಲೇ ಉತ್ತರ ಕೊಡಬಲ್ಲೆ. ನನ್ನ ಬಗ್ಗೆ ಮಾತನಾಡಬೇಕಿದ್ದರೆ ಎಚ್ಚರಿಕೆಯಿಂದ ಮಾತನಾಡಿ ಎಂದು ಎಚ್ಚರಿಕೆ ನೀಡಿದರು.
ಚಾಮುಂಡಿ ಚಲೋಗೆ ಸಂಸದ ವಿ.ಶ್ರಿನಿವಾಸ ಪ್ರಸಾದ್ ಅವರು ಭಾಗವಹಿಸುತ್ತಾರೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಂಸದ ಪ್ರತಾಪ್ ಸಿಂಹ, ವಿ.ಶ್ರೀನಿವಾಸ ಪ್ರಸಾದ್ ನಮ್ಮ ನಾಯಕರು, ಅವರ ಮಾರ್ಗದರ್ಶನದಲ್ಲೇ ನಾವು ಹೋಗುತ್ತಿರುವುದು. ಅವರು ಬರುತ್ತಾರೆ, ಹಲವು ನಾಯಕರು ಧರ್ಮಾತೀತವಾಗಿ, ಜಾತ್ಯಾತೀತವಾಗಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಸಂಘರ್ಷ ಬೇಡ ಮಹಿಷ ದಸರಾ ಆಚರಣೆ ತಡೆಗೆ ಬೇಕಿದ್ದರೆ ನ್ಯಾಯಾಲಯಕ್ಕೆ ಹೋಗಲಿ ಎಂದು ಜ್ಞಾನಪ್ರಕಾಶ್ ಸ್ವಾಮೀಜಿ ಅವರು ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಸಂಸದ ಪ್ರತಾಪ್ ಸಿಂಹ, ಸ್ವಾಮೀಜಿ ಎಂಬ ವ್ಯಕ್ತಿಯೇ ಅಪ್ರಸ್ತುತ, ಇಂತಹ ಸ್ವಾಮೀಜಿಗಳನ್ನು ಬಹಳಷ್ಟು ನೋಡಿದ್ದೇನೆ. ಇವರು 2019 ರಲ್ಲಿಯೇ ನನ್ನ ಬಳಿಗೆ ಬಂದಿದ್ದರು. ಆಗ ಚಾಮುಂಡಿ ಬೆಟ್ಟದಲ್ಲಿ ಮಹಿಷನ ಪುಷ್ಪಾರ್ಚನೆಗೆ ಅವಕಾಶ ನೀಡುವುದಿಲ್ಲ, ನಿಮ್ಮ ಮನೆಯಲ್ಲೇ ಮಹಿಷನ ಫೋಟೋ ಇಟ್ಟುಕೊಂಡು ಪೂಜೆ ಮಾಡಿ ಮಹಿಷ ನಂತಹ ಮಗ ಹುಟ್ಟಲಿ ಎಂದು ಕೇಳಿಕೊಳ್ಳಿ ಎಂದು ಹೇಳಿ ಕಳುಹಿಸಿದ್ದೆ ಎಂದು ಸ್ವಾಮೀಜಿ ವಿರುದ್ಧ ಕಿಡಿಕಾರಿದರು.