ಈ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿ ಬಿಜೆಪಿ ಮಾಡಿರುವ ನಂಬಿಕೆ ದ್ರೋಹ, ಜನ ದ್ರೋಹಕ್ಕೆ ಪಾಠ ಕಲಿಸಿ: ಸಿಎಂ ಸಿದ್ದರಾಮಯ್ಯ

Update: 2024-04-03 11:18 GMT

Photo: x@siddaramaiah

ಮೈಸೂರು : ಈ ಲೋಕಸಭಾ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿ ಬಿಜೆಪಿ ಮಾಡಿರುವ ನಂಬಿಕೆ ದ್ರೋಹಕ್ಕೆ, ಜನ ದ್ರೋಹಕ್ಕೆ ಪಾಠ ಕಲಿಸಿ ಎಂದು ಸಿಎಂ ಸಿದ್ದರಾಮಯ್ಯ ಕರೆ ನೀಡಿದರು.

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಎಂ.ಲಕ್ಷ್ಮಣ್ ಅವರ ನಾಮಪತ್ರ ಸಲ್ಲಿಸಿದ ಬಳಿಕ ನಡೆದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಜನರನ್ನು ಕೇವಲ ಭಾವನಾತ್ಮಕವಾಗಿ ಕೆರಳಿಸಿ ಅವರ ಬದುಕಿಗೆ ಬೆಂಕಿ ಇಡುವ ಕೆಲಸವನ್ನು ನಾವು ಮಾಡುವುದಿಲ್ಲ. ನಾವು ಜನರ ಭಾವನೆಗಳನ್ನು ಕೆರಳಿಸುವಿದಿಲ್ಲ. ಬದಲಿಗೆ ಭಾವನೆಗಳನ್ನು ಗೌರವಿಸುತ್ತಲೇ ಜನರ ಬದುಕನ್ನು ಸುಧಾರಿಸಲು ಕಾರ್ಯಕ್ರಮ ರೂಪಿಸುತ್ತೇವೆ ಎಂದರು.

ಜನರಿಗೆ ಬದುಕು ಮುಖ್ಯ. ಬೆಲೆ ಏರಿಕೆ ಈ ಕಾರಣಕ್ಕೇ ಮೊದಲ ಬಾರಿ ಮುಖ್ಯಮಂತ್ರಿಯಾಗಿ ಹಲವು ಭಾಗ್ಯಗಳ ಕಾರ್ಯಕ್ರಮ ಜಾರಿ ಮಾಡಿದೆವು. ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಎಂಟು ತಿಂಗಳಲ್ಲಿ ಐದೂ ಗ್ಯಾರಂಟಿಗಳನ್ನು ಜಾರಿ ಮಾಡಿ ಪ್ರತೀ ಫಲಾನುಭವಿ ಕುಟುಂಬಗಳಿಗೆ ತಿಂಗಳಿಗೆ 4-5 ಸಾವಿರ ಉಳಿತಾಯ ಆಗುತ್ತಿದೆ. ಇದರಿಂದ ಜನರ ಬದುಕಿನ ಸಂಕಷ್ಟ ಕಡಿಮೆಯಾಗುತ್ತಿದೆ ಎಂದರು.

ಸೋಲಿನ ಭಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ್ ವಿರುದ್ಧ ಅಪಪ್ರಚಾರ ನಡೆಯುತ್ತಿದೆ. ಲಕ್ಷ್ಮಣ್ ಒಕ್ಕಲಿಗರೇ ಅಲ್ಲ ಎನ್ನುವ ಸುಳ್ಳು ಹರಡಿಸಿದ್ದಾರೆ. ಎಂ.ಲಕ್ಷ್ಮಣ್ ಅವರು ಒಕ್ಕಲಿಗರಾಗಿ ಹುಟ್ಟಿ ವಿಶ್ವ ಮಾನವರಾಗುವ ಹಾದಿಯಲ್ಲಿ ನಡೆಯುತ್ತಾ ಕುವೆಂಪು ಆಶಯವನ್ನು ಪಾಲಿಸುತ್ತಿದ್ದಾರೆ ಎಂದರು.

ಅಮಿತ್ ಶಾ ಚುನಾವಣಾ ಪ್ರಚಾರಕ್ಕೆ ಬಂದು ಸುಳ್ಳಿನ ಮೇಲೆ ಸುಳ್ಳುಗಳನ್ನು ಹೇಳುತ್ತಿದ್ದಾರೆ. ಕೇಂದ್ರ ತಂಡವೇ ಬರಗಾಲದ ವರದಿ ನೀಡಿ ಐದು ತಿಂಗಳಾಯಿತು. ಇವತ್ತಿನವರೆಗೂ ಕನ್ನಡಿಗರ ಪಾಲಿನ ಒಂದೇ ಒಂದು ರೂಪಾಯಿಯನ್ನೂ ಬಿಡುಗಡೆ ಮಾಡಿಲ್ಲ. ನೀವು ಹೇಳಿದ ಸುಳ್ಳನ್ನು ಸತ್ಯ ಎಂದು ಸಾಬೀತುಪಡಿಸಿದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೀನಿ. ಇಲ್ಲದಿದ್ದರೆ ನೀವೇನು ಮಾಡ್ತೀರಿ, ನಿರ್ಧರಿಸಿ ಎಂದು ಸವಾಲು ಹಾಕಿದರು.

ಭರ್ಜರಿ ಲೀಡ್ ಕೊಟ್ಟು ನನ್ನ ಶಕ್ತಿ ಹೆಚ್ಚಿಸಿ

ಇಲ್ಲಿ ಬಂದಿರುವ ನೀವುಗಳೇ ಲೋಕಸಭಾ ಅಭ್ಯರ್ಥಿಗಳು. ಇಲ್ಲಿ ಲಕ್ಷ್ಮಣ್ ಗೆದ್ದರೆ ನಾನು ಗೆದ್ದಂತೆ. ಕಾಂಗ್ರೆಸ್ ಗೆದ್ದರೆ ಸತ್ಯ ಗೆದ್ದಂತೆ.  ಈ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿ ಬಿಜೆಪಿ ಮಾಡಿರುವ ನಂಬಿಕೆ ದ್ರೋಹ, ಜನ ದ್ರೋಹಕ್ಕೆ ಪಾಠ ಕಲಿಸಿ ಎಂದರು.

ಕೆಪಿಸಿಸಿ ಅಧ್ಯಕ್ಷರಾದ ಡಿಸಿಎಂ ಶಿವಕುಮಾರ್, ಸಚಿವರಾದ ಕೆ. ವೆಂಕಟೇಶ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ತನ್ವೀರ್ ಸೇಠ್, ಆಶ್ರಯ ಸಮಿತಿ ಅಧ್ಯಕ್ಷರಾದ ಡಾ.ಯತೀಂದ್ರ ಸಿದ್ದರಾಮಯ್ಯ ಮತ್ತು ಅಭ್ಯರ್ಥಿ ಎಂ.ಲಕ್ಷ್ಮಣ್ ಅವರು ಉಪಸ್ಥಿತರಿದ್ದು ಕಾಂಗ್ರೆಸ್ ಗೆಲ್ಲಿಸಿ ದೇಶದ ಆರ್ಥಿಕತೆ ಉಳಿಸಿ, ಪ್ರಜಾತಂತ್ರವನ್ನು ರಕ್ಷಿಸುವಂತೆ ಕರೆ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News