ಕೇಂದ್ರ ಸರ್ಕಾರ ರಾಜಭವನ ದುರ್ಬಳಕೆ ಮಾಡುತ್ತಿರುವ ಬಗ್ಗೆ ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗಬೇಕು: ಸಿಎಂ ಸಿದ್ಧರಾಮಯ್ಯ

Update: 2024-09-27 14:53 GMT

ಮೈಸೂರು: ಕೇಂದ್ರ ಸರ್ಕಾರ ಬಿಜೆಪಿ ಆಡಳಿತ ಇಲ್ಲದ ರಾಜ್ಯಗಳಲ್ಲಿ ರಾಜಭವನವನ್ನು ದುರ್ಬಳಕೆ ಮಾಡಿಕೊಂಡು ಆಯಾ ಸರ್ಕಾರಗಳನ್ನು ಅಸ್ಥಿರಗೊಳಿಸುವ ಪ್ರಯತ್ನ ಮಾಡುತ್ತಿದೆ. ಈ ಬಗ್ಗೆ ರಾಷ್ಟ್ರಾದ್ಯಂತ ಚರ್ಚೆಯಾಗಬೇಕು ಎಂದು ಆಗ್ರಹಿಸಿದರು.

ಇಂದಿನಿಂದ ಮೂರು ದಿನ ಮೈಸೂರು ಪ್ರವಾಸ ಹಮ್ಮಿಕೊಂಡಿರುವ ಸಿಎಂ, ಶುಕ್ರವಾರ ಮಂಡಕಳ್ಳಿ ವಿಮಾನ‌ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.

ಸಂವಿಧಾನದಿಂದ ಆಯ್ಕೆಯಾದ ರಾಜ್ಯಪಾಲರು ರಾಜ್ಯದ ಆಡಳಿತದಲ್ಲಿ ಹಸ್ತಕ್ಷೇಪ ಮಾಡುವುದು ಸರಿಯಲ್ಲ. ದೇಶದಲ್ಲಿ ಎಲ್ಲೆಲ್ಲಿ ವಿರೋಧಪಕ್ಷಗಳ ಸರ್ಕಾರವಿದೆಯೋ, ಅಲ್ಲಿ ಕೇಂದ್ರ ಸರ್ಕಾರ ಈಡಿ, ಸಿಬಿಐ ಹಾಗೂ ರಾಜಭವನದ ಕಚೇರಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಇದರ ಬಗ್ಗೆ ರಾಷ್ಟ್ರಾದ್ಯಂತ ಚರ್ಚೆಯಾಗಬೇಕು ಎಂದು ಹೇಳಿದರು.

ಆಡಳಿತದಲ್ಲಿ ರಾಜ್ಯಪಾಲರು ತಲೆ ಹಾಕಬಾರದು. ರಾಜ್ಯಪಾಲರು ಸಂವಿಧಾನದ ಪ್ರಕಾರ ನೇಮಕ ಆಗಿರುವವರು, ನಾವು ಜನರಿಂದ ಆಯ್ಕೆಯಾಗಿರುವವರು, ಜನಪ್ರತಿಧಿಗಳಾದ ನಾವೇ ರಾಜ್ಯದಲ್ಲಿ ಪ್ರಮುಖರು.‌ ಈ ಸಂದರ್ಭದಲ್ಲಿ ರಾಜ್ಯಪಾಲರು ಹಸ್ತಕ್ಷೇಪ ಮಾಡುವುದು ಸರಿಯಲ್ಲ ಎಂದು ಹೇಳಿದರು.

ನನ್ನ ರಾಜಕೀಯ ಜೀವನದಲ್ಲಿ ರಾಜಕೀಯ ಪ್ರೇರಿತವಾಗಿ ಕೇಸ್ ಹಾಕಿರುವುದು ಇದೇ ಮೊದಲ ಬಾರಿ. ರಾಜಕೀಯವಾಗಿ ನನ್ನ ದುರ್ಬಲಗೊಳಿಸಿ ಸರ್ಕಾರ ಅಸ್ಥಿರಗೊಳಿಸಬೇಕು ಎಂದು ಬಿಜೆಪಿಯವರು ಪ್ರಯತ್ನಿಸುತ್ತಿದ್ದಾರೆ. ಅದಕ್ಕೆಲ್ಲಾ ಹೆದರುವವನು ನಾನಲ್ಲ, ಕಾನೂನಾತ್ಮಕವಾಗಿ ನಾನು ಹೋರಾಟ ಮಾಡುತ್ತೇನೆ. ಈ ಸಂಬಂಧ ನಮ್ಮ ವಕೀಲರು ನೋಡಿಕೊಳ್ಳುತ್ತಾರೆ ಎಂದು ಹೇಳಿದರು.

ನಾನು ತಪ್ಪೇ ಮಾಡಿಲ್ಲ, ನಾನ್ಯಾಕೆ ರಾಜೀನಾಮೆ ನೀಡಲಿ? ನಾನು ರಾಜಿನಾಮೆ ನೀಡುವ ಪ್ರಶ್ನೆಯೇ ಇಲ್ಲ. ಹಾಗಿದ್ದರೆ ಕುಮಾರಸ್ವಾಮಿ ಅವರು ಜಾಮೀನಿನ ಮೇಲೆ ಓಡಾಡುತ್ತಿರುವುದು, ಅವರು ರಾಜೀನಾಮೆ ನೀಡುತ್ತಾರೆಯೇ? ಗೋದ್ರಾ ಹತ್ಯಾಕಾಂಡ ಪ್ರಕರಣದಲ್ಲಿ ನರೇಂದ್ರ ಮೋದಿ ಅವರು ರಾಜೀನಾಮೆ ನೀಡಿದರೇ ಎಂದು ಪ್ರಶ್ನಿಸಿದರು.

ಲೋಕಾಯುಕ್ತ ಮತ್ತೆ ಬಂದಿರುವ ಬಗ್ಗೆ ಕುಮಾರಸ್ವಾಮಿ ಟ್ವೀಟ್ ಮಾಡಿರುವ ಪ್ರಶ್ನೆಗೆ ಉತ್ತರಿಸಿದ ಸಿದ್ಧರಾಮಯ್ಯ, ಲೋಕಾಯುಕ್ತವನ್ನು ಮುಚ್ಚಲಾಗಿರಲಿಲ್ಲ, ಬಿಜೆಪಿ ಆಡಳಿತ ಇರುವ ರಾಜ್ಯಗಳಲ್ಲಿ ಎಸಿಬಿ ಅಸ್ಥಿತ್ದಲ್ಲಿದಿಯಲ್ಲ? ಬಿಜೆಪಿಯವರಿಗೆ ಏಕೆ ಈ ಧೋರಣೆ, ಬಿಜೆಪಿಯಲ್ಲಿ ಭ್ರಷ್ಟಾಚಾರ ಮಾಡದಿರುವ ಒಬ್ಬರೆ ಒಬ್ಬರು ಇಲ್ಲ. ಭ್ರಷ್ಟಾಚಾರ ಮಾಡಿಲ್ಲದವರನ್ನು ತೋರಿಸಿದರೆ ಅವರಿಗೆ ಸನ್ಮಾನ ಮಾಡುತ್ತೇನೆ ಎಂದು ಹೇಳಿದರು.

ಮೋದಿಯವರು ತಮ್ಮ ರಾಜಕೀಯ ಭಾಷಣದಲ್ಲಿ ಕರ್ನಾಟಕ ಹಾಗೂ ತೆಲಂಗಾಣ ಸರ್ಕಾರಗಳ ವಿರುದ್ಧ ದೂರುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ನಮ್ಮಸರ್ಕಾರವನ್ನು ಟೀಕಿಸಲು ಬಿಜೆಪಿಯವರಿಗೆ ಯಾವ ನೈತಿಕತೆಯೂ ಇಲ್ಲ. ಆಪರೇಷನ್ ಕಮಲ ಮಾಡಿ, ಸರ್ಕಾರವನ್ನು ಅಸ್ಥಿರಗೊಳಿಸುವ ಅವರ ಪ್ರಯತ್ನ ವಿಫಲವಾಗಿದೆ ಎಂದು ಹೇಳಿದರು.

ನನ್ನ ರಾಜೀನಾಮೆ ಕೇಳುವ ಯಾವುದೇ ನೈತಿಕತೆ ಬಿಜೆಪಿಯವರಿಗೆ ಇಲ್ಲ, ನಾನು ಕಾನೂನು ವಿರುದ್ಧವಾಗಿ ಯಾವುದೇ ಕೆಲಸಗಳನ್ನು ಹಿಂದೆಯೂ ಮಾಡಿರುವುದಿಲ್ಲ, ಮುಂದೆಯೂ ಮಾಡುವುದಿಲ್ಲ ಎಂದರು.

ಅನಿಶ್ಚಿತ ರಾಜಕೀಯ ಬೆಳವಣಿಗೆಯಿಂದ ಗ್ಯಾರಂಟಿಗಳು ನಿಲ್ಲಬಹುದೆಂಬ ಆತಂಕ ಜನರಲ್ಲಿ ಮನೆಮಾಡಿರುವ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ, ಯಾವುದೇ ಕಾರಣಕ್ಕೂ ಬಡವರ ಕಾರ್ಯಕ್ರಮಗಳನ್ನು ನಿಲ್ಲಿಸುವುದಿಲ್ಲ. ಇಂದಿನ ಕಾರ್ಯಕ್ರಮಕ್ಕೆ ಜನರು ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿ ಮುಖ್ಯಮಂತ್ರಿಗಳ ಪರ ತಮ್ಮ ಬೆಂಬಲವನ್ನು ಸೂಚಿಸಿದ್ದಾರೆ. 136 ಸ್ಥಾನಗಳನ್ನು ಕಾಂಗ್ರೆಸ್ ಗೆದ್ದಿದೆ. ಬಿಜೆಪಿಯವರು ಜನಾದೇಶ ಎಂದಿಗೂ ಪಡೆಯದೆ, ಕೇವಲ ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಜನರು ತಿರಸ್ಕರಿಸಿದ್ದಾರೆ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News