ಪುಣೆ: ಪ್ರಧಾನಿ ಭೇಟಿ ವಿರೋಧಿಸಿ ನಗರದಾದ್ಯಂತ “ಗೋ ಬ್ಯಾಕ್‌ ಮಿ. ಕ್ರೈಂ ಮಿನಿಸ್ಟರ್” ಪೋಸ್ಟರ್‌ ಅಂಟಿಸಿದ ಯುವ ಕಾಂಗ್ರೆಸ್‌ ಕಾರ್ಯಕರ್ತರು

Update: 2023-07-31 09:21 GMT

ಪುಣೆ: ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಪುಣೆಗೆ ಭೇಟಿ ನೀಡುವ ಹಿನ್ನೆಲೆಯಲ್ಲಿ ತಮ್ಮ ಪ್ರತಿಭಟನೆ ಸೂಚಿಸಲು ಯುವ ಕಾಂಗ್ರೆಸ್‌ ಕಾರ್ಯಕರ್ತರು ನಗರದಾದ್ಯಂತ “ಗೋ ಬ್ಯಾಕ್‌ ಮೋದಿ” ಪೋಸ್ಟರ್‌ಗಳನ್ನು ಅಂಟಿಸಿದ್ದಾರೆ. ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರ ಹಾಗೂ ದೌರ್ಜನ್ಯಗಳು ಹಾಗೂ ಈ ಕುರಿತು ಪ್ರಧಾನಿಯ ಮೌನವನ್ನು ಖಂಡಿಸಿ ಈ ಪೋಸ್ಟರ್‌ಗಳನ್ನು ಅಳವಡಿಸಲಾಗಿದೆ.

“ಗೋ ಬ್ಯಾಕ್‌ ಮಿ. ಕ್ರೈಂ ಮಿನಿಸ್ಟರ್”‌ ಎಂದು ಒಂದು ಪೋಸ್ಟರ್‌ನಲ್ಲಿ ಬರೆಯಲಾಗಿದ್ದರೆ ಇನ್ನೊಂದು ಪೋಸ್ಟರ್‌ನಲ್ಲಿ “ಮಿ. ಪ್ರೈಮ್‌ ಮಿನಿಸ್ಟರ್‌ ಗೋ ಟು ಮಣಿಪುರ್‌, ಫೇಸ್‌ ದಿ ಪಾರ್ಲಿಮೆಂಟ್”‌ (ಪ್ರಧಾನಿಗಳೇ ಮಣಿಪುರಕ್ಕೆ ಹೋಗಿ, ಸಂಸತ್ತನ್ನು ಎದುರಿಸಿ) ಎಂದು ಬರೆಯಲಾಗಿದೆ.

ಈ ಅನಧಿಕೃತ ಪೋಸ್ಟರ್‌ಗಳನ್ನು ತೆರವುಗೊಳಿಸುವ ನಿಟ್ಟಿನಲ್ಲಿ ಪುಣೆ ಮುನಿಸಿಪಲ್‌ ಕಾರ್ಪೊರೇಷನ್‌ ಜೊತೆ ಸಂಪರ್ಕದಲ್ಲಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಧಾನಿ ಮೋದಿ ಮಂಗಳವಾರ ಪುಣೆಯಲ್ಲಿ ದಗ್ದುಶೇಠ್‌ ಮಂದಿರದಲ್ಲಿ ಪೂಜೆ ಸಲ್ಲಿಸಲಿದ್ದಾರೆ. ಪ್ರಧಾನಿಗೆ ತಿಲಕ್‌ ಸ್ಮಾರಕ್‌ ಮಂದಿರ್‌ ಟ್ರಸ್ಟ್‌ ನೀಡುವ ಲೋಕಮಾನ್ಯ ತಿಲಕ್‌ ರಾಷ್ಟ್ರೀಯ ಪ್ರಶಸ್ತಿಯನ್ನೂ ಪುಣೆ ಭೇಟಿ ಸಂದರ್ಭ ಪ್ರದಾನ ಮಾಡಲಾಗುವುದು. ಪ್ರಧಾನಿ ವಿವಿಧ ಅಭಿವೃದ್ಧಿ ಯೋಜನೆಗಳಿಗೂ ಚಾಲನೆ ನೀಡಲಿದ್ದಾರೆ. ಪ್ರತಿ ವರ್ಷ ತಿಲಕ್‌ ಅವರ ಪುಣ್ಯತಿಥಿಯಾದ ಆಗಸ್ಟ್‌ 1ರಂದು ಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ಪುಣೆಯಲ್ಲಿ ಪ್ರಧಾನಿ ಮೆಟ್ರೋ ರೈಲುಗಳಿಗೆ ಹಸಿರು ನಿಶಾನೆ ಕೂಡ ತೋರಿಸಲಿದ್ದಾರೆ. ನಂತರ ಅವರು ವೇಸ್ಟ್‌ ಟು ಎನರ್ಜಿ ಪ್ಲಾಂಟ್‌ ಅನ್ನು ಪಿಂಪ್ರಿ ಚಿಂಚ್ವಾಡ್‌ ಮುನಿಸಿಪಲ್‌ ಕಾರ್ಪೊರೇಷನ್ನಿನಲ್ಲಿ ಉದ್ಘಾಟಿಸಲಿದ್ದಾರೆ.

ಆದರೆ ಪ್ರಧಾನಿ ಭೇಟಿಯನ್ನು ವಿರೋಧಿಸಿ ವಿಪಕ್ಷಗಳ ಮೈತ್ರಿ ಕೂಟ ಇಂಡಿಯಾ ಪ್ರತಿಭಟನೆ ನಡೆಸುವ ಉದ್ದೇಶ ಹೊಂದಿದೆ. ಪ್ರಧಾನಿಗೆ ವಿದೇಶಗಳಿಗೆ ಹೋಗಲು ಸಮಯವಿದೆ ಆದರೆ ಮೇ ತಿಂಗಳಿನಿಂದ ಸಂಘರ್ಷಮಯ ಸ್ಥಿತಿಯಲ್ಲಿರುವ ಮಣಿಪುರಕ್ಕೆ ಭೇಟಿ ನೀಡಲು ಸಮಯವಿಲ್ಲ ಎಂದು ವಿಪಕ್ಷಗಳು ಟೀಕಿಸಿವೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News