ಲೋಕಸಭೆಯ 306 ಸಂಸದರು ಕ್ರಿಮಿನಲ್ ಆರೋಪಿಗಳು: ಎಡಿಆರ್ ಅಧ್ಯಯನ ವರದಿ
ಹೊಸದಿಲ್ಲಿ : ಲೋಕಸಭೆ ಹಾಗೂ ರಾಜ್ಯಸಭೆಯ ಒಟ್ಟು 763 ಸದಸ್ಯರ ಪೈಕಿ ಕನಿಷ್ಠ 306 ಮಂದಿ ವಿರುದ್ಧ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆಯೆಂದು ಪ್ರಜಾತಾಂತ್ರಿಕ ಸುಧಾರಣೆಗಳ ಸಂಘ (ಎಡಿಆರ್) ಮಂಗಳವಾರ ಬಿಡುಗಡೆಗೊಳಿಸಿದ ವರದಿ ತಿಳಿಸಿದೆ. ಇದರ ಜೊತೆಗೆ 194 ಹಾಲಿ ಸಂಸದರು ತಾವು ಗಂಭೀರವಾದ ಕ್ರಿಮಿನಲ್ ಪ್ರಕರಣಗಳನ್ನು ಹೊಂದಿರುವುದಾಗಿ ಸ್ವಯಂಘೋಷಿತ ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ.
ಈ ಸಂಸತ್ ಸದಸ್ಯರು ಕಳೆದ ಚುನಾವಣೆಗಳಲ್ಲಿ ಅಥವಾ ಬಳಿಕ ನಡೆದ ಉಪಚುನಾವಣೆಗಳಲ್ಲಿ ಸ್ಪರ್ಧಿಸಿದ ಸಂದರ್ಭ ಸಲ್ಲಿಸಿದ ಅಫಿಡವಿಟ್‌ಗಳನ್ನು ಅಧ್ಯಯನ ನಡೆಸುವ ಮೂಲಕ ಎಡಿಆರ್ ಈ ವಿಶ್ಲೇಷಣೆಯನ್ನು ನಡೆಸಿದೆ. ದೇಶಾದ್ಯಂತ ಲೋಕಸಭೆ ಹಾಗೂ ರಾಜ್ಯಸಭೆಯ ಒಟ್ಟು 776 ಸ್ಥಾನಗಳಿಗೆ ಸ್ಪರ್ಧಿಸಿದವರ ಅಫಿಡವಿಟ್‌ಗಳ ಪರಿಶೀಲನೆಯಿಂದ ಈ ವಿವರಗಳು ಬೆಳಕಿಗೆ ಬಂದಿವೆ.
ಹಾಲಿ 763 ಸಂಸದರ ಪೈಕಿ 306 ಸಂಸದರು ತಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣಗಳು ದಾಖಲಾಗಿರುವುದಾಗಿ ಘೋಷಿಸಿದ್ದಾರೆ. ಇವರ ಪೈಕಿ 194 ಸಂಸದರು, ತಮ್ಮ ವಿರುದ್ಧ ಕೊಲೆ ಯತ್ನ ಹಾಗೂ ಕೊಲೆ ಮತ್ತು ಮಹಿಳೆಯರ ವಿರುದ್ಧ ಅಪರಾಧ ಇತ್ಯಾದಿ ಪ್ರಕರಣಗಳು ದಾಖಲಾಗಿರುವುದಾಗಿ ತಿಳಿಸಿದ್ದಾರೆ.
ಲಕ್ಷದ್ವೀಪದ ಏಕೈಕ ಲೋಕಸಭಾ ಸದಸ್ಯ ತಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣಗಳು (ಶೇ.100) ದಾಖಲಾಗಿರುವುದನ್ನು ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ. ಕೇರಳದಲ್ಲಿ 29 ಸಂಸದರ ಪೈಕಿ 23 ಮಂದಿ (ಶೇ.79) ಇದೇ ರೀತಿಯ ಘೋಷಣೆಗಳನ್ನು ಮಾಡಿದ್ದಾರೆ. ಬಿಹಾರದಲ್ಲಿ 56 ಸಂಸದರ (ಶೇ.73) ಪೈಕಿ 41 ಮಂದಿ ತಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣಗಳು ದಾಖಲಾಗಿರುವುದಾಗಿ ತಿಳಿಸಿದ್ದಾರೆ. ಮಹಾರಾಷ್ಟ್ರದ 65 ಸಂಸದರ ಪೈಕಿ 37 ಮಂದಿ (ಶೇ.57) ಇಂತಹದೇ ಘೋಷಣೆಗಳನ್ನು ಮಾಡಿದ್ದಾರೆ. ತೆಲಂಗಾಣದಲ್ಲಿ 24 ಸಂಸದರ ಪೈಕಿ ಶೇ.13 ಮದಿ, ದಿಲ್ಲಿಯಲ್ಲಿ 10 ಸಂಸದರ ಪೈಕಿ 5 ಮಂದಿ (ಶೇ.50) ತಮ್ಮ ಅಫಿಡವಿಟ್‌ಗಳಲ್ಲಿ ತಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣಗಳು ದಾಖಲಾಗಿರುವುದನ್ನು ಬಹಿರಂಗಪಡಿಸಿದ್ದಾರೆ.
ಲಕ್ಷದ್ವೀಪ ಏಕೈಕ ಲೋಕಸಭಾ ಸದಸ್ಯನ ವಿರುದ್ಧ ಗಂಭೀರವಾದ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ, ಬಿಹಾರದ 56 ಸಂಸದರ ಪೈಕಿ 28 ಮಂದಿ (ಶೇ.50) ಗಂಭೀರವಾದ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ತೆಲಂಗಾಣದಲ್ಲಿ 24 ಮಂದಿ ಸಂಸದರ ಪೈಕಿ 9 ಮಂದಿ, ಕೇರಳದ 29 ಸಂಸದರ ಪೈಕಿ 10 ಮಂದಿ (ಶೇ.34) ಗಂಭೀರವಾದ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಮಹಾರಾಷ್ಟ್ರದ 65 ಸಂಸದರ ಪೈಕಿ 22 ಮಂದಿ (ಶೇ.34) , ಉತ್ತರಪ್ರದೇಶದ 108 ಸಂಸದರ ಪೈಕಿ 37 ಮಂದಿ (ಶೇ.34) ತಮ್ಮ ವಿರುದ್ಧ ಗಂಭೀರ ರೂಪದ ಕ್ರಿಮಿನಲ್ ಪ್ರಕರಣಗಳು ದಾಖಲಾಗಿರುವುದನ್ನು ಅಫಿಡವಿಟ್‌ನಲ್ಲಿ ಹೇಳಿಕೊಂಡಿದ್ದಾರೆ.
ವಿಶೇಷವೆಂದರೆ ಕೇಂದ್ರದ ಆಡಳಿತಾರೂಢ ಬಿಜೆಪಿ ಸಂಸದರ ವಿರುದ್ಧ ಗರಿಷ್ಠ ಸಂಖ್ಯೆಯ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ.
ಬಿಜೆಪಿಯ 385 ಸಂಸದರ ಪೈಕಿ 98 ಮಂದಿ (ಶೇ.25) ಮಂದಿ ತಮ್ಮ ವಿರುದ್ದ ಗಂಭೀರ ಸ್ವರೂಪದ ಕ್ರಿಮಿನಲ್ ಪ್ರಕರಣಗಳು ದಾಖಲಾಗಿರುವ ಬಗ್ಗೆ ಅಫಿಡವಿಟ್‌ನಲ್ಲಿ ಘೋಷಿಸಿದ್ದಾರೆ. ಕಾಂಗ್ರೆಸ್ ಪಕ್ಷದ 81 ಸಂಸದರ ಪೈಕಿ 26 ಮಂದಿ (ಶೇ.32) ಇದೇ ರೀತಿಯ ಘೋಷಣೆಗಳನ್ನು ಮಾಡಿದ್ದಾರೆ. ತೃಣಮೂಲ ಕಾಂಗ್ರೆಸ್‌ನ 36 ಸಂಸದರಲ್ಲಿ 7 ಮಂದಿ (ಶೇ.19), ಆರ್‌ಜೆಡಿಯ 6 ಎಂಪಿಗಳಲ್ಲಿ 3 ಮಂದಿ (ಶೇ.19), ಸಿಪಿಎಂನ 8 ಸಂಸದರಲ್ಲಿ ಇಬ್ಬರು (ಶೇ.25) ಇಂತಹ ಘೋಷಣೆಗಳನ್ನು ಮಾಡಿದ್ದಾರೆ. ಆಮ್ ಆದ್ಮಿ ಪಕ್ಷದ 11 ಸಂಸದರಲ್ಲಿ ಒಬ್ಬರು (ಶೇ.9) ಕ್ರಿಮಿನಲ್ ಆರೋಪ ಎದುರಿಸುತ್ತಿರುವ ಬಗ್ಗೆ ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ.
ಕ್ರಿಮಿನಲ್ ಸಂಸದರು
► ಕೊಲೆ ಆರೋಪ ಎದುರಿಸುತ್ತಿರುವ ಸಂಸದರ ಸಂಖ್ಯೆ 11 (ಭಾರತೀಯ ದಂಡಸಂಹಿತೆಯ 302 ಸೆಕ್ಷನ್‌ನಡಿ ಪ್ರಕರಣ ದಾಖಲು).
► 32 ಹಾಲಿ ಸಂಸದರು ಕೊಲೆ ಯತ್ನದ ಆರೋಪ ಹೊತ್ತಿದ್ದಾರೆ (ಐಪಿಸಿ-307ಸೆಕ್ಷನ್),
► 21 ಸಂಸದರು ಮಹಿಳೆಯರ ವಿರುದ್ಧದ ಅಪರಾಧವೆಸಗಿದ ಆರೋಪ ಹೊಂದಿದ್ದಾರೆ. ಇವರಲ್ಲಿ ನಾಲ್ವರು ಅತ್ಯಾಚಾರದ ಆರೋಪಕ್ಕೆ ಸಂಬಂಧಿಸಿದ ಪ್ರಕರಣಗಳು ತಮ್ಮ ವಿರುದ್ಧ ದಾಖಲಾಗಿರುವುದಾಗಿ ತಿಳಿಸಿದ್ದಾರೆ.
► ಕ್ರಿಮಿನಲ್ ಆರೋಪ ಎದುರಿಸುತ್ತಿರುವವರ ಪೈಕಿ ಬಿಜೆಪಿ ಸಂಸದರು ಅತ್ಯಧಿಕ.