ದೇಶದಲ್ಲಿ ಮೆದುಳಿನ ಉರಿಯೂತಕ್ಕೆ 2 ತಿಂಗಳಲ್ಲಿ 59 ಮಕ್ಕಳು ಬಲಿ
ಹೊಸದಿಲ್ಲಿ: ದೇಶದಲ್ಲಿ ಕಳೆದ ಎತರಡು ತಿಂಗಳ ಅವಧಿಯಲ್ಲಿ ಅಕ್ಯೂಟ್ ಎನ್ಸೆಫಲಿಟೀಸ್ ಸಿಂಡ್ರೋಮ್ (ಎಇಎಸ್) ಅಥವಾ ಮೆದುಳಿನ ಉರಿಯೂತ ಸೋಂಕಿನಿಂದ 59 ಮಕ್ಕಳು ಮೃತಪಟ್ಟಿರುವುದನ್ನು ಸರ್ಕಾರ ದೃಢಪಡಿಸಿದೆ. ಮೃತಪಟ್ಟ ಎಲ್ಲರೂ 15 ವರ್ಷಕ್ಕಿಂತ ಕಡಿಮೆ ವಯಸ್ಸಿನವರು.
ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ, ಜೂನ್ ಆರಂಭದಿಂದ ಇದುವರೆಗೆ 148 ಎಇಎಸ್ ಪ್ರಕರಣಗಳು ವರದಿಯಾಗಿದ್ದು, ಗುಜರಾತ್ ನ 24 ಜಿಲ್ಲೆಗಳಿಂದ 140, ಮಧ್ಯಪ್ರದೇಶದಿಂದ ನಾಲ್ಕು, ರಾಜಸ್ಥಾನದಿಂದ ಮೂರು ಮತ್ತು ಮಹಾರಾಷ್ಟ್ರದಿಂದ ಒಂದು ಪ್ರಕರಣಗಳು ವರದಿಯಾಗಿವೆ.
ವರದಿಯಾದ ಒಟ್ಟು ಪ್ರಕರಣಗಳಲ್ಲಿ 59 ಮಂದಿ ಮೃತಪಟ್ಟಿದ್ದು, ಚಂಡಿಪುರ ವೈರಸ್ 51 ಪ್ರಕರಣಗಳಲ್ಲಿ ದೃಢಪಟ್ಟಿದೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ. ಎಇಎಸ್ ಮತ್ತು ಸಿಎಚ್ ಪಿವಿ ಪ್ರಕರಣಗಳ ಪರಿಶೀಲನೆಗಾಗಿ ಗುರುವಾರ ಆರೋಗ್ಯಸೇವೆಗಳ ಮಹಾನಿರ್ದೇಶಕರು ಮತ್ತು ನಿರ್ದೇಶಕರು, ಎನ್ ಸಿಡಿಸಿ ಮತ್ತು ಐಸಿಎಂಆರ್ ಮಹಾನಿರ್ದೇಶಕರು ಜಂಟಿ ಸಭೆ ನಡೆಸಿದ್ದಾರೆ ಎಂದು ಮೂಲಗಳು ಹೇಳಿವೆ.
ರಾಷ್ಟ್ರೀ ಯ ಜಂಟಿ ಸಾಂಕ್ರಾಮಿಕ ಸ್ಪಂದನೆ ತಂಡವನ್ನು ಗುಜರಾತ್ ಗೆ ಕಳುಹಿಸಲಾಗಿದ್ದು, ಸಾರ್ವಜನಿಕ ಆರೋಗ್ಯ ಕ್ರಮಗಳಲ್ಲಿ ಗುಜರಾತ್ ಸರ್ಕಾರದ ಜತೆ ಇದು ಸಹಕರಿಸಲಿದೆ ಹಾಗೂ ಸಾಂಕ್ರಾಮಿಕತೆ ಬಗ್ಗೆ ವಿವರವಾದ ತನಿಖೆಗಳನ್ನು ನಡೆಸಲಿದೆ ಎಂದು ತಿಳಿದು ಬಂದಿದೆ.