ಹಿಮಾಚಲಪ್ರದೇಶ: ಮಾನ್ಸೂನ್ ಮಳೆಗೆ ಮೃತಪಟ್ಟವರ ಸಂಖ್ಯೆ 70ಕ್ಕೇರಿಕೆ'; 10,000 ಕೋ.ರೂ. ಹಾನಿ
ಹೊಸದಿಲ್ಲಿ: ಹಿಮಾಚಲ ಪ್ರದೇಶದಲ್ಲಿ ಮಾನ್ಸೂನ್ ಮಳೆಯಿಂದ ಮೃತಪಟ್ಟವರ ಸಂಖ್ಯೆ ಗುರುವಾರ 74 ಕ್ಕೆ ಏರಿದೆ, ರಕ್ಷಣಾ ಕಾರ್ಯಕರ್ತರು ಶಿಮ್ಲಾದ ಶಿವ ದೇವಾಲಯದ ಅವಶೇಷಗಳಿಂದ ಮತ್ತೊಂದು ಮೃತದೇಹವನ್ನು ಹೊರತೆಗೆದರೆ, ಚಂಬಾದಲ್ಲಿ ಇನ್ನಿಬ್ಬರು ಸಾವನ್ನಪ್ಪಿದ್ದಾರೆ. ವಿಪರೀತ ಮಳೆಯಿಂದಾಗಿ ಹಿಮಾಚಲ ಪ್ರದೇಶದಾದ್ಯಂತ ಅಂದಾಜು 10,000 ಕೋಟಿ ರೂ. ಹಾನಿಯಾಗಿದೆ. ಇದು ಜನರು ಹಾಗೂ ವ್ಯವಹಾರಗಳ ಮೇಲೆ ವಿನಾಶಕಾರಿ ಪರಿಣಾಮವನ್ನು ಬೀರಿದೆ.
ಸಮ್ಮರ್ ಹಿಲ್ ನಲ್ಲಿರುವ ಶಿವ ದೇವಾಲಯದಲ್ಲಿ ಸಂಭವಿಸಿದ ಭೂಕುಸಿತ ಸೇರಿದಂತೆ ಶಿಮ್ಲಾದಲ್ಲಿ ಮೂರು ಪ್ರಮುಖ ಭೂಕುಸಿತಗಳಲ್ಲಿ 21 ಜನರು ಸಾವನ್ನಪ್ಪಿದ್ದಾರೆ.
ಮುಂಗಾರು ಆರಂಭವಾದ 55 ದಿನಗಳಲ್ಲಿ ರಾಜ್ಯದಲ್ಲಿ 113 ಭೂಕುಸಿತಗಳು ಸಂಭವಿಸಿದ್ದು, ಲೋಕೋಪಯೋಗಿ ಇಲಾಖೆಗೆ (ಪಿಡಬ್ಲ್ಯುಡಿ) 2,491 ಕೋಟಿ ರೂ. ಮತ್ತು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ (ಎನ್ಎಚ್ಎಐ) 1,000 ಕೋಟಿ ರೂ.ನಷ್ಟವಾಗಿದೆ.
ಶಿಮ್ಲಾದ ಸಮ್ಮರ್ ಹಿಲ್ ನಲ್ಲಿ ರೈಲ್ವೇ ಹಳಿಗಳ ಒಂದು ಭಾಗ ಕೊಚ್ಚಿ ಹೋಗಿದೆ.
ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಅವರು ಇತ್ತೀಚಿನ ಭೂಕುಸಿತದಿಂದ ಹಾನಿಗೊಳಗಾದ ಮೂಲಸೌಕರ್ಯವನ್ನು ಮರುನಿರ್ಮಾಣ ಮಾಡುವುದು "ಬೆಟ್ಟದಂತಹ ಸವಾಲು" ಎಂದು ಹೇಳಿದರು.
ಹಿಮಾಲಯದಲ್ಲಿ ಅವೈಜ್ಞಾನಿಕ ನಿರ್ಮಾಣ ಕಾಮಗಾರಿಗಳು, ಕ್ಷೀಣಿಸುತ್ತಿರುವ ಅರಣ್ಯ ಪ್ರದೇಶ ಮತ್ತು ನೀರಿನ ಹರಿವನ್ನು ತಡೆಯುವ ತೊರೆಗಳ ಬಳಿ ಕಟ್ಟಡ ನಿರ್ಮಾಣಗಳಿಂದ ಆಗಾಗ್ಗೆ ಭೂಕುಸಿತಗಳು ಉಂಟಾಗುತ್ತವೆ ಎಂದು ತಜ್ಞರು ಹೇಳುತ್ತಾರೆ.