ಪ್ರಕ್ಷುಬ್ಧ ಸಿರಿಯಾದಿಂದ 75 ಮಂದಿ ಭಾರತೀಯರ ರಕ್ಷಣೆ

Update: 2024-12-11 03:49 GMT

PC | ANI

ಹೊಸದಿಲ್ಲಿ: ಸಿರಿಯಾದಲ್ಲಿ ಬಂಡುಕೋರ ಸಶಸ್ತ್ರ ಪಡೆಗಳು ಅಧ್ಯಕ್ಷ ಬಶರ್ ಅಸಾದ್ ಸರ್ವಾಧಿಕಾರಿ ಸರ್ಕಾರವನ್ನು ಪದಚ್ಯುತಗೊಳಿಸಿದ ಬೆನ್ನಲ್ಲೇ ದೇಶದಲ್ಲಿ ಅರಾಜಕತೆ ತಾಂಡವವಾಡುತ್ತಿದ್ದು, ಪ್ರಕ್ಷುಬ್ಧ ಪರಿಸ್ಥಿತಿ ತಲೆದೋರಿದೆ. ಸಂಘರ್ಷಪೀಡಿತ ದೇಶದಲ್ಲಿ ಸಿಲುಕಿಕೊಂಡಿದ್ದ 75 ಮಂದಿ ಭಾರತೀಯರನ್ನು ಮಂಗಳವಾರ ರಕ್ಷಿಸಲಾಗಿದೆ.

ದಮಾಸ್ಕಸ್ ಮತ್ತು ಬೀರೂಟ್‍ನಲ್ಲಿರುವ ಭಾರತೀಯ ರಾಯಭಾರ ಕಚೇರಿಗಳ ಸಂಘಟಿತ ಶ್ರಮದಿಂದ ಭದ್ರತಾ ಸ್ಥಿತಿಯನ್ನು ಅವಲೋಕಿಸಿ, ಅಲ್ಲಿ ಸಿಕ್ಕಿಹಾಕಿಕೊಂಡಿದ್ದ ಭಾರತೀಯರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪ್ರಕಟಿಸಿದೆ. ರಕ್ಷಿಸಲ್ಪಟ್ಟ ಎಲ್ಲ 75 ಮಂದಿ ಸುರಕ್ಷಿತವಾಗಿ ಲೆಬನಾನ್ ಗಡಿ ದಾಟಿದ್ದು, ಲಭ್ಯವಿರುವ ವಾಣಿಜ್ಯ ವಿಮಾನಗಳ ಮೂಲಕ ಭಾರತ ತಲುಪಲಿದ್ದಾರೆ ಎಂದು ಸಚಿವಾಲಯ ತಡರಾತ್ರಿ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ವಿವರಿಸಿದೆ.

ಸ್ಥಳಾಂತರಗೊಂಡವರಲ್ಲಿ 44 ಮಂದಿ ಜಮ್ಮು ಮತ್ತು ಕಾಶ್ಮೀರದವರಾಗಿದ್ದಾರೆ. ಇವರು ಸಾಯಿದಾ ಝೈನಾಬ್‍ನಲ್ಲಿ ಸಿಲುಕಿಕೊಂಡಿದ್ದರು. ಎಲ್ಲ ಭಾರತೀಯರು ಸುರಕ್ಷಿತವಾಗಿ ಲೆಬಬಾನ್ ತಲುಪಿದ್ದು, ಲಭ್ಯ ವಾಣಿಜ್ಯ ವಿಮಾನಗಳ ಮೂಲಕ ಭಾರತಕ್ಕೆ ವಾಪಸ್ಸಾಗುವರು" ಎಂದು ಎಂಇಎ ಹೇಳಿದೆ.

ವಿದೇಶಗಳಲ್ಲಿರುವ ಭಾರತೀಯರ ಸುರಕ್ಷೆ ಮತ್ತು ಭದ್ರತೆ ಭಾರತ ಸರ್ಕಾರದ ಆದ್ಯತೆ ಎಂದು ಹೇಳಿದೆ. ಸಿರಿಯಾದಲ್ಲಿರುವ ಭಾರತೀಯರು ದಮಾಸ್ಕಸ್‍ನಲ್ಲಿರುವ ರಾಯಭಾರ ಕಚೇರಿ ಜತೆ ಸಂಪರ್ಕದಲ್ಲಿರುವಂತೆ ಸಲಹೆ ಮಾಡಿದೆ. ಪರಿಸ್ಥಿತಿಯ ಮೇಲೆ ಭಾರತ ಸರ್ಕಾರ ನಿಗಾ ಇಡಲಿದೆ ಎಂದು ಸ್ಪಷ್ಟಪಡಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News