ಸಂಕಲೆಗಳಲ್ಲಿ ಬಂಧಿಸಿ 11 ಕಾರ್ಮಿಕರಿಂದ ಬಾವಿ ತೋಡಿಸುತ್ತಿದ್ದ ಕಂಟ್ರಾಕ್ಟರ್

Update: 2023-06-26 17:54 GMT

Photo credit : hindustantimes.com

ಹೊಸದಿಲ್ಲಿ: ಮಹಾರಾಷ್ಟ್ರದ ಉಸ್ಮಾನಾಬಾದ್ ಜಿಲ್ಲೆಯಲ್ಲಿ ಕಂಟ್ರಾಕ್ಟರ್ ಒಬ್ಬಾತ ಬಾವಿಗಳನ್ನು ತೋಡಲು 11 ಕಾರ್ಮಿಕರನ್ನು ಸಂಕಲೆಗಳಿಂದ ಬಂಧಿಸಿ ದುಡಿಸುತ್ತಿದ್ದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

ಈ ಬಗ್ಗೆ ಮಹಾರಾಷ್ಟ್ರ ಸರಕಾರ ಹಾಗೂ ರಾಜ್ಯ ಪೊಲೀಸ್ ವರಿಷ್ಠರಿಗೆ ರಾಷ್ಟ್ರೀಯ ಮಾನವಹಕ್ಕುಗಳ ಆಯೋಗವು ಸೋಮವಾರ ನೋಟಿಸ್ ಜಾರಿಗೊಳಿಸಿದೆ.

‘‘ಕಾನೂನಿನ ಭಯವಿಲ್ಲದ ಕಂಟ್ರಾಕ್ಟರ್ ಗಳು ಎಸಗುವ ಕ್ರೌರ್ಯದಿಂದ ಕಾರ್ಮಿಕರನ್ನು ರಕ್ಷಿಸಲು ಸ್ಥಳೀಯಾಡಳಿತ ವಿಫಲವಾಗಿರುವುದನ್ನು ಈ ಕೃತ್ಯವು ಸ್ಪಷ್ಟವಾಗಿ ತೋರಿಸಿಕೊಟ್ಟಿದೆ’’ ಎಂದು ಆಯೋಗವು ಹೇಳಿಕೆಯೊಂದರಲ್ಲಿ ತಿಳಿಸಿದೆ.

ಈ ಪ್ರಕರಣದಲ್ಲಿ ಕಂಟ್ರಾಕ್ಟರ್ ನಿಂದ ಜೀತಕಾರ್ಮಿಕ ಪದ್ದತಿ (ರದ್ದು) ಕಾಯ್ದೆಯ ಸಂಪೂರ್ಣ ಉಲ್ಲಂಘನೆಯಾಗಿದೆಯೆಂದು ಅದು ಹೇಳಿದೆ.

ಇಂತಹ ಕೃತ್ಯಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಕರ್ತವ್ಯ ನಿರ್ವಹಿಸಲು ವಿಫಲರಾದ ಅಧಿಕಾರಿಗಳ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದೆಂದು ಅವರು ತಿಳಿಸಿದರು.

ಮಾಧ್ಯಮಗಳಲ್ಲಿ ಪ್ರಕಟವಾದ ಈ ವರದಿಯು ಒಂದು ವೇಳೆ ಸತ್ಯವೇ ಆಗಿದ್ದಲ್ಲಿ, ಅದು ಕಾರ್ಮಿಕರ ಮಾನವಹಕ್ಕುಗಳ ಘೋರ ಉಲ್ಲಂಘನೆಯಾಗಿದೆ ಎಂದು ಆಯೋಗ ತಿಳಿಸಿದೆ.

ಈ 11 ಮಂದಿ ಕಾರ್ಮಿಕರಿಗೆ ಬಾವಿಗಳನ್ನು ತೋಡುವುದಕ್ಕಾಗಿ ದಿನದಲ್ಲಿ 12 ಗಂಟೆ ದುಡಿಸಲಾಗುತ್ತಿತ್ತು ಹಾಗೂ ಅವರಿಗೆ ಯಾವುದೇ ವೇತನವನ್ನು ನೀಡುತ್ತಿರಲಿಲ್ಲ. ಅಲ್ಲದೆ ಅವರು ಓಡಿಹೋಗದಂತೆ ತಡೆಯಲು ಅವರಿಗೆ ಸಂಕಲೆ ತೊಡಿಸಿ, ಬಾವಿಯೊಳಗಡೆಯೇ ಬಂಧಿಸಿಡಲಾಗುತ್ತಿತ್ತು.

ದಿನದಲ್ಲಿ ಕೇವಲ ಒಮ್ಮೆ ಮಾತ್ರ ಅವರಿಗೆ ಆಹಾರವನ್ನು ನೀಡಲಾಗುತ್ತಿತ್ತು ಹಾಗೂ ಬಾವಿಯೊಳಗೆಯೇ ಬಹಿರ್ದೆಶೆ ಮಾಡಬೇಕಾಗಿತ್ತೆಂದು ವರದಿ ಹೇಳಿದೆ.

ಈ ಜೀತದಾಳುಗಳಲ್ಲಿ ಒಬ್ಬಾತ ಜೂನ್ 17ರಂದು ತಪ್ಪಿಸಿಕೊಳ್ಳುವಲ್ಲಿ ಸಫಲನಾಗಿದ್ದು, ಆತನ ಹಿಂಗೋಳಿ ಜಿಲ್ಲೆಯಲ್ಲಿರುವ ತನ್ನ ಗ್ರಾಮವನ್ನು ತಲುಪಿದ್ದ. ಆತ ಈ ದೌರ್ಜನ್ಯದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಆನಂತರ ಕಾರ್ಯಪ್ರವೃತ್ತರಾದ ಪೊಲೀಸರು ಉಳಿದ ಜೀತಕಾರ್ಮಿಕರನ್ನು ರಕ್ಷಿಸಿದರೆಂದು ವರದಿಯಾಗಿದೆ.

ಈ ಪ್ರಕರಣದಲ್ಲಿ ಸಂತ್ರಸ್ತರ ರಕ್ಷಣೆ ಹಾಗೂ ಕೆಲವೇ ಮಂದಿಯ ಬಂಧನದಿಂದ ಈ ಪ್ರಕರಣದ ಉದ್ದೇಶವು ಈಡೇರಿದಂತಾಗುವುದಿಲ್ಲ ಎಂದು ಎನ್ಎಚ್ಆರ್ಸಿ ಅಭಿಪ್ರಾಯಿಸಿದೆ. ಈ ಹಿನ್ನೆಲೆ ಮಹಾರಾಷ್ಟ್ರ ಸರಕಾರದ ಪ್ರಧಾನ ಕಾರ್ಯದರ್ಶಿ ಹಾಗೂ ಪೊಲೀಸ್ ಮಹಾನಿರ್ದೇಶಕರಿಗೆ ಎನ್ಎಚ್ಆರ್ಸಿ ನೋಟಿಸ್ ಜಾರಿಗೊಳಿಸಿದ್ದು ನಾಲ್ಕು ವಾರಗಳೊಳಗೆ ಉತ್ತರಿಸುವಂತೆ ಸೂಚಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News